ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿಗಳ ಜ್ಞಾನ, ಮನುಕುಲದ ಒಳಿತಿನ ಜ್ಞಾನ

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ಗೋದಾವರಿ ನದಿಯ ಉಗಮ ಸ್ಥಾನ ಅಮರಕಂಟಕದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ವಿ.ಕಟ್ಟಿಮನಿ ಅವರು ಕನ್ನಡಿಗರು. ಕೊಪ್ಪಳ ತಾಲ್ಲೂಕಿನವರಾದ ಕಟ್ಟಿಮನಿ ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದು ಅಲ್ಲಿಯೇ ಹಿಂದಿ ಮೇಷ್ಟ್ರಾಗಿದ್ದವರು. ನಂತರ ಹೈದರಾಬಾದಿನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. 2014ರಿಂದ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ಆಗಿರುವ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

* ಆದಿವಾಸಿಗಳಿಗೆ ನಾವು ಕಲಿಸುವುದಕ್ಕಿಂತ ಅವರಿಂದ ಕಲಿಯುವುದೇ ಹೆಚ್ಚು ಇದೆ ಎಂದು ನೀವು ಕೆಲವು ಕಡೆ ಹೇಳಿದ್ದೀರಿ. ಅವರಿಂದ ನಾವು ಕಲಿಯುವುದು ಏನಿದೆ?
ಈ ಪ್ರಶ್ನೆಗೆ ಒಂದು ಕತೆಯ ಮೂಲಕ ಉತ್ತರ ಕೊಡುತ್ತೇನೆ. ಇಂಗ್ಲಿಷ್ ಬಲ್ಲ ಆಧುನಿಕ ಮನುಷ್ಯನೊಬ್ಬ ಕಾಡಿನಲ್ಲಿ ಹೋಗುತ್ತಿದ್ದ. ಅಲ್ಲಿ ಅವನಿಗೆ ಒಬ್ಬ ಆದಿವಾಸಿ ಬಾಲಕ ಸಿಕ್ಕಿದ.

ಈ ಆಧುನಿಕ ಮನುಷ್ಯ ಆ ಬಾಲಕನನ್ನು ಪರಿಚಯ ಮಾಡಿಕೊಂಡ ನಂತರ ‘ನೀನು ಎಲ್ಲಿಯವರೆಗೆ ಓದಿದ್ದೀಯಾ?’ ಎಂದು ಕೇಳಿದ. ಅದಕ್ಕೆ ಬಾಲಕ ‘ನಾನು ಓದಿಲ್ಲ. ಬರೆಯಲು ಬರಲ್ಲ’ ಎಂದು ಉತ್ತರಿಸಿದ. ‘ಅಯ್ಯೋ ನಿನಗೆ ಓದು, ಬರಹ ಬರಲ್ಲವೇ ಹಾಗಾದರೆ ನಿನ್ನ ಜನ್ಮ ವ್ಯರ್ಥ’ ಎಂದು ಆಧುನಿಕ ಮನುಷ್ಯ ಹೇಳಿದ.

‘ಹೋಗಲಿ, ನಿನಗೆ ಇಂಗ್ಲಿಷ್ ಬರುತ್ತದಾ’ ಎಂದು ಕೇಳಿದ. ಬಾಲಕ ಇಲ್ಲ ಎಂದ. ಗಣಿತ ಬರುತ್ತದಾ ಎಂದಾಗಲೂ ಇಲ್ಲ ಎಂದ. ‘ಹಾಗಾದರೆ ನೀನು ಸತ್ತೇ ಹೋಗುತ್ತೀಯಾ’ ಎಂದ ಆಧುನಿಕ ಮನುಷ್ಯ. ಆಗ ಬಾಲಕ ಆತನಿಗೆ ‘ನಿನಗೆ ವೇಗವಾಗಿ ಮರ ಹತ್ತಲು ಬರುತ್ತದಾ’ ಎಂದು ಕೇಳಿದ. ಆಧುನಿಕ ಮನುಷ್ಯ ಇಲ್ಲ ಎಂದ. ‘ಹಾಗಾದರೆ ನಿನ್ನ ಜೀವ ಈಗಲೇ ವ್ಯರ್ಥವಾಗುತ್ತದೆ. ಯಾಕೆಂದರೆ ಹುಲಿ ಬರುತ್ತಿದೆ’ ಎಂದು ಹೇಳಿ ಲಗುಲಗುನೇ ಮರ ಹತ್ತಿ ಜೀವ ಉಳಿಸಿಕೊಂಡ. ಆಧುನಿಕ ಮನುಷ್ಯ ಹುಲಿಯ ಬಾಯಿಗೆ ಸಿಕ್ಕ. ಇದು ಆದಿವಾಸಿಗಳ ಜ್ಞಾನ. ಇಂತಹ ಹಲವಾರು ವಿಷಯಗಳನ್ನು ನಾವು ಅವರಿಂದ ಕಲಿಯಬೇಕಾಗಿದೆ.

* ಕತೆ ಚೆನ್ನಾಗಿದೆ. ಆದಿವಾಸಿಗಳಿಗೆ ಕಾಡಿನ ಜಾಣ್ಮೆ ಗೊತ್ತು. ಆದರೆ ನಾಡಿನ ಜಾಣ್ಮೆ ಗೊತ್ತಿಲ್ಲ. ಕಾಡಿನಲ್ಲಿ ಆಧುನಿಕ ಮನುಷ್ಯ ಹುಲಿಯ ಬಾಯಿಗೆ ಬಿದ್ದ ಹಾಗೇ ನಾಡಿಗೆ ಬರುವ ಆದಿವಾಸಿಗಳೂ ಬಲಿಯಾಗುತ್ತಾರೆ. ಇದಕ್ಕೇನು ಮಾಡುತ್ತೀರಿ?
ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಮೂಲ ಉದ್ದೇಶವೇ ಅದು. ಆದಿವಾಸಿಗಳಿಗೆ ಶಿಕ್ಷಣ ನೀಡುವುದು ಎಂದರೆ ಅವರನ್ನು ಆಧುನಿಕ ಮನುಷ್ಯರನ್ನಾಗಿ ಮಾಡುವುದಲ್ಲ. ಆದಿವಾಸಿಗಳು ತಮ್ಮ ಮುಖ್ಯವಾಹಿನಿಯ ಜ್ಞಾನವನ್ನು  ತಿಳಿದುಕೊಳ್ಳಲು ಸೌಲಭ್ಯವನ್ನು ಒದಗಿಸುವುದು. ಆಧುನಿಕ ಜಗತ್ತು ಯಾವ ಚಮತ್ಕಾರಿ ಭಾಷೆಯಲ್ಲಿ ಮಾತನಾಡುತ್ತಿದೆಯೋ ಆ ಭಾಷೆಯನ್ನು ಕಲಿಸುವುದು. ಆದರೆ ಅವರ ಮೂಲ ಜ್ಞಾನ, ಆಚರಣೆ, ಸಂಸ್ಕೃತಿ, ಸ್ವಭಾವವನ್ನು ಯಾವುದೇ ಕಾರಣಕ್ಕೂ ಇಂಗ್ಲೀಷೀಕರಣ, ಹಿಂದೀಕರಣ ಅಥವಾ ಕನ್ನಡೀಕರಣ ಆಗದಂತೆ ನೋಡಿಕೊಳ್ಳುವುದು.

* ಉದ್ದೇಶ ಒಳ್ಳೆಯದೆ. ಆದರೆ ಇದೆಲ್ಲಾ ಸಾಧ್ಯವೇ?
ಯಾಕಿಲ್ಲ. ಆದಿವಾಸಿಗಳಿಗೆ ಪ್ರಾಥಮಿಕ ಶಿಕ್ಷಣವನ್ನು ಅವರ ಭಾಷೆಯಲ್ಲಿ ನೀಡಬೇಕು. ಇರುಳಿಗರು, ಸೋಲಿಗರು, ಜೇನು ಕುರುಬರು ಎಲ್ಲರೂ ಕನ್ನಡಿಗರೆ. ಆದರೆ ಅವರ ಮಾತೃಭಾಷೆ ಬೇರೆ ಬೇರೆ. ಆರಂಭದಲ್ಲಿ ಅವರಿಗೆ ಅವರ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ಆ ಮೂಲಕ ಅವರಲ್ಲಿ ಇರುವ ಕೀಳರಿಮೆಯನ್ನು ಹೋಗಲಾಡಿಸಬೇಕು.ಇದಕ್ಕಾಗಿಯೇ ನಮ್ಮ ವಿಶ್ವವಿದ್ಯಾಲಯ ಯೋಜನೆಯೊಂದನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದೆ.

* ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ನಾವು ಆದಿವಾಸಿಗಳಿಂದ ಏನನ್ನು ಕಲಿಯಬೇಕು ಹೇಳಿ?
ಇದಕ್ಕೂ ಮತ್ತೊಂದು ಘಟನೆ ಹೇಳುತ್ತೇನೆ ಕೇಳಿ. ಮಧ್ಯಪ್ರದೇಶದಲ್ಲಿ ಶೇ 24ರಷ್ಟು ಆದಿವಾಸಿಗಳಿದ್ದಾರೆ. 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಆದಿವಾಸಿಗಳ ಜನಸಂಖ್ಯೆ ಇದೆ. ಗೊಂಡ, ಬೈಗಾ, ಪಣಿಯಾ, ಅಗರಿಯಾ, ಸಹರಿಯಾ ಮುಂತಾದ ಬುಡಕಟ್ಟು ಜನಾಂಗದವರಿದ್ದಾರೆ. ಗೊಂಡ ಮತ್ತು ಬೈಗಾ ಜನಾಂಗದವರ ಸಂಖ್ಯೆ ಹೆಚ್ಚು.

ನಾನು ಒಮ್ಮೆ ಬೈಗಾ ಜನಾಂಗದವರ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿಯೇ ಉಳಿದೆ. ರಾತ್ರಿ ಸಮಯದಲ್ಲಿ ‘ಅಡುಗೆ ಏನು ಮಾಡುತ್ತಿದ್ದೀರಿ?’ ಎಂದು ಕೇಳಿದೆ. ಅದಕ್ಕೆ ಅವರು ‘ಅಡುಗೆ ಮಾಡ್ತೀವಿ ಸಾಬ್’ ಎಂದು ಉತ್ತರಿಸಿದರು. ನಾನೇ ಎದ್ದು ಟಾರ್ಚ್ ಬಿಟ್ಟು ಪಾತ್ರೆಯನ್ನು ಅವಲೋಕಿಸಿದೆ. ಅದರಲ್ಲಿ ಒಂದಿಷ್ಟು ಸೊಪ್ಪು ಬೇಯುತ್ತಿತ್ತು. ‘ಇದನ್ನು ಯಾವುದಕ್ಕೆ ಹಾಕಿಕೊಂಡು ತಿನ್ನುತ್ತೀರಿ’ ಎಂದು ಕೇಳಿದೆ. ಅದನ್ನು ಅನ್ನಕ್ಕೋ, ರೊಟ್ಟಿಗೋ ನೆಂಚಿಕೊಂಡು ತಿನ್ನುತ್ತಾರೆ ಎಂದುಕೊಂಡಿದ್ದೆ. ಆದರೆ ಅದನ್ನು ಅವರು ಹಾಗೆಯೇ ಸೇವಿಸುತ್ತಾರೆ.

ಆ ನಂತರ ಅವರು ನೀರನ್ನೂ ಕುಡಿಯಲಿಲ್ಲ. ‘ನೀರು ಕುಡಿಯುವುದಿಲ್ಲವಾ’ ಎಂದು ಕೇಳಿದರೆ ‘ಇಲ್ಲ, ನಾವು ಮನೆಯಲ್ಲಿ ನೀರನ್ನು ಸಂಗ್ರಹಿಸುವುದಿಲ್ಲ. ನೀರು ಬೇಕು ಎಂದರೆ ಇಲ್ಲೇ ಕೆಳಗೆ ಒಂದು ಹಳ್ಳ ಇದೆ. ಅಲ್ಲಿಗೆ ಹೋಗಿ ಕುಡಿದು ಬರುತ್ತೇವೆ’ ಎಂದರು. ‘ನಡೀರಿ ಹೋಗೋಣ, ಆ ಹಳ್ಳ ನೋಡೋಣ’ ಎಂದು ಅವರ ಜೊತೆಗೆ ಹೋದರೆ ಅದು ಇರುವುದು ಒಂದೂವರೆ ಕಿ.ಮೀ ದೂರದಲ್ಲಿ. ನೀರು ಕುಡಿಯುವುದಕ್ಕಾಗಿ ಒಂದೂವರೆ ಕಿ.ಮೀ ಹೋಗಿ ಬರುತ್ತಾರೆ ಅವರು.

ಇದರ ಅರ್ಥ ಇಷ್ಟೆ. ಯಾವುದನ್ನೂ ಸಂಗ್ರಹಿಸಿ ಇಡುವುದು ಅವರ ಜಾಯಮಾನ ಅಲ್ಲ. ನಮ್ಮ ಧರ್ಮಗ್ರಂಥಗಳೂ ಇದನ್ನೇ ಹೇಳುತ್ತವೆ. ಯಾವುದನ್ನೂ ಸಂಗ್ರಹಿಸಬಾರದು ಎಂದು. ಸಂಗ್ರಹ ಮಾಡಬಾರದು ಎಂಬ ವಾಹಿನಿಯಲ್ಲಿರುವ ಜನರನ್ನು ಸಂಗ್ರಹಿಸುವ ಸಂಸ್ಕೃತಿಯ ಮುಖ್ಯವಾಹಿನಿಗೆ ತರುವ ವಿದ್ಯೆ ವಿದ್ಯೆಯೇ ಅಲ್ಲ.

ಇನ್ನೊಂದು ಉದಾಹರಣೆಯನ್ನು ಹೇಳುತ್ತೇನೆ. ನಮ್ಮ ವಿಶ್ವವಿದ್ಯಾಲಯಕ್ಕೆ 400 ಎಕರೆ ಭೂಮಿ ಕೊಟ್ಟಿದ್ದಾರಾದರೂ  ಅದೊಂದು ಬೋಳು ಭೂಮಿ. ಅಲ್ಲಿ ಮರಗಿಡಗಳನ್ನು ಬೆಳೆಸಬೇಕು ಎಂದು ನಾನು ನಿರ್ಧರಿಸಿದೆ. ಬೈಗಾ ಆದಿವಾಸಿಗಳಿಗೆ ಮರಗಿಡಗಳ ಜ್ಞಾನ ಹೆಚ್ಚು. ಅದಕ್ಕೆ ಅವರನ್ನೇ ಈ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಸೂಚಿಸಿದೆ.

ಅದರಂತೆ ಬೈಗಾ ಜನಾಂಗದ 25 ಮಂದಿಯನ್ನು ಈ ಕೆಲಸಕ್ಕೆ ನೇಮಿಸಿಕೊಂಡ ನಮ್ಮ ತೋಟಗಾರಿಕಾ ಎಂಜಿನಿಯರ್ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಕೆಲಸ ಮಾಡಬೇಕು ಎಂದು ಸೂಚಿಸಿದರು. ಮಾರನೇ ದಿನ ನಾನು ಬೆಳಿಗ್ಗೆ 6.30ಕ್ಕೆ ವಾಕಿಂಗ್ ಹೋಗುವಾಗ ನೋಡುತ್ತೇನೆ, ಆಗಲೇ ಆ ಆದಿವಾಸಿಗಳು ಕೆಲಸ ಶುರು ಮಾಡಿದ್ದರು.

ನಾನು ಅವರಿಗೆ ‘ಇಷ್ಟು ಬೇಗ ಯಾಕೆ ಕೆಲಸ ಶುರು ಮಾಡಿದಿರಿ’ ಎಂದು ಕೇಳಿದೆ. ಅದಕ್ಕೆ ಸುಕ್ಕೂಬಾಯಿ ಎಂಬಾಕೆ ‘ಕೆಲಸ ಆರಂಭಿಸುವುದು ಎಂದರೆ ಬೆಳಿಗ್ಗೆ 10ಕ್ಕೋ 11ಕ್ಕೋ ಅಲ್ಲ. ಸೂರ್ಯ ಹುಟ್ಟಿದ ತಕ್ಷಣ ಕೆಲಸ ಶುರು ಮಾಡಬೇಕು. ಸೂರ್ಯ ಮುಳುಗಿದಾಗ ಕೆಲಸ ನಿಲ್ಲಿಸಬೇಕು. ಇದು ನಮ್ಮ ನೀತಿ’ ಎಂದಳು. ಈಗ ಆ ಸುಕ್ಕೂಬಾಯಿ ನನ್ನ ಸಂಶೋಧನೆಯ ಮಾರ್ಗದರ್ಶಕಿ.

* ಆದಿವಾಸಿಗಳ ಔಷಧ ಜ್ಞಾನದ ಬಗ್ಗೆ ನೀವೇನೂ ಹೇಳಿಲ್ಲ.
ಹೌದು ಅದನ್ನು ನಾನು ಹೇಳಬೇಕು. ಬಹುತೇಕ ಆದಿವಾಸಿಗಳು ಅರಣ್ಯದಲ್ಲಿಯೇ ಇರುತ್ತಾರೆ. ಅರಣ್ಯದ ಉಪ ಉತ್ಪನ್ನಗಳಲ್ಲಿ  ತಮಗೆ ಬೇಕಾದಷ್ಟನ್ನು ಆಯ್ದುಕೊಂಡು ಬದುಕುತ್ತಾರೆ. ಅವರಲ್ಲಿ ದೇವರು ಎನ್ನುವ ಕಲ್ಪನೆಯೇ ಇಲ್ಲ. ಪ್ರಕೃತಿಯೇ ಅವರ ದೇವರು. ಗಿಡಮರಗಳನ್ನೇ ಅವರು ಪೂಜಿಸುತ್ತಾರೆ. ಅರಣ್ಯದ ಬಗ್ಗೆ ಅವರಿಗೆ ಅಪಾರ ಜ್ಞಾನ ಇದೆ. ಯಾವ ಗಿಡ, ಸಸ್ಯ, ಬೇರು ಯಾವ ರೋಗಕ್ಕೆ ಔಷಧಿ ಎನ್ನುವುದು ಅವರಿಗೆ ಗೊತ್ತಿದೆ. ಅವರಿಗೆ ಆ ಸಸ್ಯದ ವೈಜ್ಞಾನಿಕ ಹೆಸರು ಗೊತ್ತಿಲ್ಲದೇ ಇರಬಹುದು. ಆದರೆ ಔಷಧದ ಜ್ಞಾನ ಇದೆ. ಇದಕ್ಕೆ ಪೇಟೆಂಟ್ ಕೊಡಿಸುವ ಕೆಲಸವನ್ನು ನಮ್ಮ ವಿಶ್ವವಿದ್ಯಾಲಯ ಮಾಡುತ್ತಿದೆ.

* ಕೆಲವು ಆದಿವಾಸಿ ಸಮುದಾಯಗಳು ವಿನಾಶದ ಅಂಚಿನಲ್ಲಿವೆ. ಅವುಗಳನ್ನು ಉಳಿಸಲು ನಿಮ್ಮ ಪ್ರಯತ್ನ ಏನಾದರೂ ಇದೆಯೇ?
ಹೌದು, ಬೈಗಾ ಸಮುದಾಯ ಅಪಾಯದ ಅಂಚಿನಲ್ಲಿದೆ. ಅದೇ ರೀತಿ ಕರ್ನಾಟಕದಲ್ಲಿ ಇರುಳಿಗರು, ಸೋಲಿಗರು ಅಪಾಯದ ಅಂಚಿನಲ್ಲಿದ್ದಾರೆ. ಕೆಲವು ವಿಶಿಷ್ಟ ರೋಗಗಳು ಅವರನ್ನು ಕಾಡುತ್ತಿವೆ. ಈ ಬಗ್ಗೆ ನಮ್ಮ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಯುತ್ತಿದೆ. ನಾನು ಸ್ವೀಡನ್‌ಗೆ ಹೋದಾಗ ಅಲ್ಲಿನ ನೊಬೆಲ್ ಅಕಾಡೆಮಿಯಲ್ಲಿ ಈ ವಿಷಯ ಪ್ರಸ್ತಾಪಿಸಿದೆ.

ಅಲ್ಲಿನ ವಿಜ್ಞಾನಿಗಳು ತಾವು ಈಗಾಗಲೇ ಈ ವಿಷಯದ ಬಗ್ಗೆ ಅಧ್ಯಯನ ನಡೆಸುತ್ತಿರುವುದಾಗಿ ತಿಳಿಸಿದರು. ಸ್ವೀಡನ್ ನೊಬೆಲ್ ಅಕಾಡೆಮಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರ ಜೊತೆಗೆ ಆದಿವಾಸಿಗಳ ಆಹಾರ ಪದ್ಧತಿ ಉಳಿಸುವ ಕೆಲಸವನ್ನೂ ಮಾಡುತ್ತಿದ್ದೇವೆ. ಅವರು ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಸುತ್ತಾರೆ. ಆ ಧಾನ್ಯಗಳು 20 ವರ್ಷವಾದರೂ ಹಾಳಾಗದೆ ಉಳಿಯುತ್ತವೆ. ನನಗೆ ಒಬ್ಬ  ಆದಿವಾಸಿಯ ಮನೆಯಲ್ಲಿ 20 ವರ್ಷದ ಹಿಂದಿನ ಅಕ್ಕಿಯ ಅನ್ನವನ್ನೇ ಬಡಿಸಿದ್ದರು.

* ಇತ್ತೀಚೆಗಷ್ಟೆ ಒಲಿಂಪಿಕ್ಸ್ ಮುಗಿದಿದೆ. ಭಾರತಕ್ಕೆ ಕೇವಲ ಎರಡು ಪದಕಗಳು ಬಂದಿವೆ. ಆದಿವಾಸಿಗಳನ್ನು ಕ್ರೀಡಾಕ್ಷೇತ್ರದಲ್ಲಿ ಬಳಸಿಕೊಳ್ಳಲು ಸಾಧ್ಯವಿಲ್ಲವೇ?
ಖಂಡಿತಕ್ಕೂ ಸಾಧ್ಯವಿದೆ. ನಮ್ಮ ವಿಶ್ವವಿದ್ಯಾಲಯದ ವಾಲಿಬಾಲ್ ತಂಡ ಸರ್ವಶ್ರೇಷ್ಠವಾದ ತಂಡ. ಯಾಕೆಂದರೆ ಇದರಲ್ಲಿ ಎಲ್ಲರೂ ಆದಿವಾಸಿಗಳೇ ಇದ್ದಾರೆ. ಅವರು ಆಟಕ್ಕೆ ನಿಂತರೆ ಅವರ ಕೈ, ಕಾಲು, ತಲೆ, ಎದೆ, ಮುಖ, ಕೂದಲು ಎಲ್ಲವೂ ಆಟದಲ್ಲಿ ತಲ್ಲೀನವಾಗಿರುತ್ತವೆ. ಅವರಿಗೆ ಆಯಾಸ ಆಗುವುದೇ ಇಲ್ಲ. ದೈಹಿಕವಾಗಿ ಅವರು ಸಮರ್ಥರು.ಅದಕ್ಕೇ ಅವರಿಗೆ ತರಬೇತಿ ನೀಡಿದರೆ ಕ್ರೀಡಾ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರುತ್ತಾರೆ. ಈ ಬಗ್ಗೆ ಈಗಾಗಲೇ ನಾವು ಕೇಂದ್ರಕ್ಕೆ ವರದಿ ನೀಡಿದ್ದೇವೆ.

* ನೀವು ಕನ್ನಡಿಗರು. ಕರ್ನಾಟಕದ ಆದಿವಾಸಿಗಳಿಗೆ ನಿಮ್ಮ ವಿಶ್ವವಿದ್ಯಾಲಯದಿಂದ ಯಾವ ಲಾಭ ಇದೆ.
ಇದು ಮಹತ್ವದ ವಿಚಾರ. ನಮ್ಮ ವಿಶ್ವವಿದ್ಯಾಲಯದಲ್ಲಿ ಎಲ್ಲ ಕೋರ್ಸ್‌ಗಳಲ್ಲಿಯೂ ಆದಿವಾಸಿಗಳಿಗೆ ಶೇ 20ರಷ್ಟು ಮೀಸಲಾತಿ ಇದೆ. ನಮ್ಮದು ರಾಷ್ಟ್ರೀಯ ವಿಶ್ವವಿದ್ಯಾಲಯ.

ರಾಷ್ಟ್ರೀಯ ಪ್ರವೇಶ ಪರೀಕ್ಷೆ ನಡೆಯುತ್ತದೆ. ಅದರಲ್ಲಿ ಆದಿವಾಸಿಗಳು ಭಾಗಿಯಾಗಬಹುದು. ನಾನು ಈಗಾಗಲೇ ಬಿ.ಆರ್.ಹಿಲ್ಸ್‌ನ ಡಾ. ಸುದರ್ಶನ್ ಅವರನ್ನು ಭೇಟಿ ಮಾಡಿ ಸೋಲಿಗರನ್ನು ನಮ್ಮಲ್ಲಿಗೆ ಕಳಿಸುವಂತೆ ಹೇಳಿದ್ದೇನೆ. ಅದೇ ರೀತಿ ಕರ್ನಾಟಕದಲ್ಲಿ ಆದಿವಾಸಿಗಳ ಪರವಾಗಿ ಕೆಲಸ ಮಾಡುವ  ಇತರರನ್ನೂ ಸಂಪರ್ಕಿಸುತ್ತೇನೆ. ಆದರೆ ಆದಿವಾಸಿಗಳು ಅಷ್ಟೊಂದು ದೂರಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಬಯಸುವುದಿಲ್ಲ.

ಅದಕ್ಕಾಗಿಯೇ ನಮ್ಮ ವಿಶ್ವವಿದ್ಯಾಲಯಕ್ಕೆ ಆದಿವಾಸಿ ಮಾದರಿ ಶಾಲೆಯನ್ನು ತೆರೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ವರ್ಷದಿಂದ ಈ ಶಾಲೆ ಆರಂಭವಾಗುತ್ತದೆ. ಇದು ವಸತಿ ಶಾಲೆ. ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ ಇಲ್ಲಿ ಕಲಿಸಲಾಗುತ್ತದೆ. ಈ ಶಾಲೆಗೆ ಕರ್ನಾಟಕದ ಕೆಲವು ಮಕ್ಕಳನ್ನು ಸೇರಿಸುವ ಉದ್ದೇಶವಿದೆ.

* ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದರೂ ಕರ್ನಾಟಕದಲ್ಲಿ ಆದಿವಾಸಿಗಳಿಗೆ ಭೂಮಿ ಒಡೆತನ ಸಿಗುತ್ತಿಲ್ಲ. ಮಧ್ಯಪ್ರದೇಶದ ಸ್ಥಿತಿ ಹೇಗಿದೆ?
ಜಲ್, ಜಂಗಲ್, ಜಮೀನು ಹೋರಾಟ ಅಲ್ಲಿಯೂ ನಡೆಯುತ್ತಿದೆ. ಜಮೀನು ಕೊಟ್ಟರೂ ಅವರು ಅದರಲ್ಲಿ ದುಡಿಯುವುದು ಕಡಿಮೆ. ಇದಕ್ಕೆ ಪ್ರತ್ಯೇಕವಾದ ನೀತಿಯೇ ಬೇಕು.

*ಆಧುನಿಕ ಸಮಾಜ ಆದಿವಾಸಿಗಳಿಂದ ಕಲಿಯುವುದು ಬಹಳ ಇದೆ ಅಂತೀರಿ ಅಲ್ಲವೇ?
ಖಂಡಿತ. ಅವರ ಜ್ಞಾನವನ್ನು ಜ್ಞಾನವೇ ಅಲ್ಲ ಎನ್ನುವುದು ಅನಾಗರಿಕತನ. ಅಷ್ಟೇ ಅಲ್ಲ, ಅದು ಅನಾಹುತಕ್ಕೂ ಕಾರಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT