ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಪ್ರವಾಹ: ಮೃತರ ಸಂಖ್ಯೆ 153ಕ್ಕೆ

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಶನಿವಾರ ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ  ಮೃತರ ಸಂಖ್ಯೆ 153ಕ್ಕೇರಿದೆ.ಮೃತಪಟ್ಟಿರುವ ನಾಲ್ವರು ಭೋಜ್‌ಪುರ ಮತ್ತು ಬೇಗುಸರೈ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಮತ್ತೆ 12 ಪಂಚಾಯಿತಿ ಪ್ರದೇಶಗಳು ಜಲಾವೃತಗೊಂಡಿದ್ದು, 12  ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಒಳಗಾದವರ ಸಂಖ್ಯೆ 34.69 ಲಕ್ಷಕ್ಕೇರಿದೆ.

ಗಂಗಾ, ಸೋನ್‌, ಪುನ್‌ಪುನ್, ಬುರ್ಹಿ ಗಂಧಕ್‌, ಗಾಗ್ರಾ, ಕೋಸಿ ಮತ್ತು ಇತರ ನದಿಗಳಲ್ಲಿ ಉಂಟಾದ ಪ್ರವಾಹದಿಂದಾಗಿ 74 ಬ್ಲಾಕ್‌ಗಳ 565 ಪಂಚಾಯಿತಿ ಅಧೀನದ 2,037 ಗ್ರಾಮಗಳ 34.69 ಲಕ್ಷ ಜನರು  ತೊಂದರೆಗೆ ಒಳಗಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ನೆರೆ ಹಾವಳಿಗೆ ಒಳಗಾಗಿರುವ 12 ಜಿಲ್ಲೆಗಳ 4.97 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು 2,571 ದೋಣಿಗಳನ್ನು ಬಳಸಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

544 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, 2.66 ಲಕ್ಷ ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ. 328 ವೈದ್ಯಕೀಯ ಸೇವಾ ತಂಡಗಳನ್ನು ನಿಯೋಜಿಸಲಾಗಿದೆ.
151 ಶಿಬಿರಗಳನ್ನು ಜಾನುವಾರುಗಳಿಗಾಗಿ ತೆರೆಯಲಾಗಿದೆ.

ಉತ್ತರಪ್ರದೇಶದಲ್ಲಿ ಮತ್ತೆ ಮಳೆ( ಲಖನೌ ವರದಿ): ಉತ್ತರ ಪ್ರದೇಶದ ವಿವಿಧೆಡೆ ಶನಿವಾರ ಮತ್ತೆ ಭಾರಿ ಮಳೆ ಆರಂಭವಾಗಿದ್ದು ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗಂಗಾ ಮತ್ತು ಯಮುನಾ ನದಿಗಳ  ನೀರಿನ ಮಟ್ಟ ಸಹಜ ಸ್ಥಿತಿಗೆ ಮರಳುತ್ತಿದೆ ಆದರೂ ಕೆಲವು ನದಿಗಳು ಇನ್ನೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗದ ವರದಿ ತಿಳಿಸಿದೆ.

ಅಂಕಿನ್‌ಘಾಟ್‌, ಫಫಾಮಾವು, ಅಲಹಾಬಾದಿನ ಚತ್‌ನಾಗ್‌, ವಾರಣಾಸಿ ಮತ್ತು ಬಲ್ಲಿಯಾ ಪ್ರದೇಶದಲ್ಲಿ ಗಂಗಾ ನದಿಯ ನೀರಿನ ಮಟ್ಟ ಇಳಿಮುಖವಾಗಿದೆ. ಕಲ್ಪಿ, ಹಮೀರ್‌ಪುರ, ಆಗ್ರಾ ಮತ್ತಿತರೆಡೆ ಯಮುನಾ ನದಿ ಸಹಜ ಸ್ಥಿತಿಗೆ ಮರಳಿದೆ ಎಂದು ವರದಿ ತಿಳಿಸಿದೆ. ವಾರಣಾಸಿ, ಅಲಹಬಾದ್‌, ಗಾಝಿಪುರ ಮತ್ತು ಬಲ್ಲಿಯಾದ 987 ಗ್ರಾಮಗಳ ಸುಮಾರು 8.7ಲಕ್ಷ ಜನರು ಐಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT