ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಯೋಜನೆ ಸಮರ್ಪಕ ಜಾರಿಗೆ ಅಮಿತ್ ಷಾ ಸೂಚನೆ

Last Updated 27 ಆಗಸ್ಟ್ 2016, 20:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಸಾಧಿಸಿ ತೋರಿಸುವ ರಾಜಕೀಯ’ದ ಮಾರ್ಗವನ್ನು ಬಿಜೆಪಿ ತೋರಿಸಿದೆ ಎಂದು ಹೇಳಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ‘ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ಬಡವರ ಪರವಾಗಿ ಹಾಗೂ ಉತ್ತಮವಾಗಿ ಆಡಳಿತ ನೀಡುವ ಕೇಂದ್ರ ಸರ್ಕಾರದ ಅಜೆಂಡಾ ಜಾರಿಗೆ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.

ದೇಶದ ಶೇಕಡ 51ರಷ್ಟು ಭೂಪ್ರದೇಶ, ಶೇಕಡ 37ರಷ್ಟು ಜನಸಂಖ್ಯೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಇದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿದ 80 ಜನಕಲ್ಯಾಣ ಕಾರ್ಯಕ್ರಮಗಳ ಪೈಕಿ 65 ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತರುತ್ತಿವೆ. ಹಾಗಾಗಿ ಕೇಂದ್ರದ ಯೋಜನೆಗಳ ಯಶಸ್ಸಿನಲ್ಲಿ ರಾಜ್ಯಗಳ ಪಾತ್ರ ದೊಡ್ಡದು ಎಂದು ಷಾ ವಿವರಿಸಿದರು.

ಪಕ್ಷದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯ ಘಟಕಗಳ ಅಧ್ಯಕ್ಷರ ಒಂದು ದಿನದ ಸಭೆಯಲ್ಲಿ ಅವರು ಈ ಮಾತು ಹೇಳಿದರು.

ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ರಾಜ್ಯ ಘಟಕಗಳ ಪ್ರಮುಖರ ಸಮಿತಿ ಸಭೆ ನಡೆಸಿ, ‘ಬಡವರ ಪರ ಹಾಗೂ ಉತ್ತಮ ಆಡಳಿತದ’ ಅಜೆಂಡಾವನ್ನು ವಿವರಿಸಿದ ಮಾರನೆಯ ದಿನವೇ ಈ ಸಭೆ ನಡೆದಿದೆ.

‘ವಿವಿಧ ರಾಜ್ಯಗಳ ಬಿಜೆಪಿ ಸರ್ಕಾರಗಳು ಸಾಧನೆಯ ಆಧಾರದಲ್ಲಿ ಪುನರಾಯ್ಕೆ ಆಗಿವೆ. ಬಡವರ ಪರ ಇರುವ ವ್ಯವಸ್ಥೆ ರೂಪಿಸುವುದು, ಜನಸಾಮಾನ್ಯರ ಬದಕು ಬದಲಿಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜಂಟಿ ಹೊಣೆಗಾರಿಕೆ’ ಎಂದು ಷಾ ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಂತೆ ಷಾ ಅವರು ಸೂಚಿಸಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ಹೊರತುಪಡಿಸಿದರೆ ಬಿಜೆಪಿಯ ಉಳಿದೆಲ್ಲ ಮುಖ್ಯಮಂತ್ರಿಗಳೂ ಸಭೆಗೆ ಬಂದಿದ್ದರು. ರಾಜೆ ಪರವಾಗಿ ಹಿರಿಯ ಸಚಿವರೊಬ್ಬರು ಹಾಜರಾಗಿದ್ದರು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT