ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರದಲ್ಲಿ ಅರ್ಧ ಹಣ ನಮಗೆ ಕೊಡಿ

ರಾಜ್ಯ ಸರ್ಕಾರಕ್ಕೆ ಡಿವೈಎಸ್ಪಿ ಕಲ್ಲಪ್‍ಪ ಹಂಡಿಬಾಗ ತಂದೆ ಮನವಿ
Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಳಗಾವಿ:  ‘ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ ಅವರ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ ₹ 30 ಲಕ್ಷ ಪರಿಹಾರದ ಮೊತ್ತದಲ್ಲಿ ಅರ್ಧದಷ್ಟನ್ನು ನಮಗೆ ನೀಡಬೇಕು’ ಎಂದು ಅವರ ತಂದೆ ಬಸಪ್ಪ ಹಂಡಿಬಾಗ ಶನಿವಾರ ಇಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.

‘₹30 ಲಕ್ಷ ಪರಿಹಾರ ಹಾಗೂ ಕಲ್ಲಪ್ಪ ಪತ್ನಿ ವಿದ್ಯಾ ಅವರಿಗೆ ಸರ್ಕಾರಿ ಉದ್ಯೋಗ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ವಿದ್ಯಾ ಅವರಿಗೆ ನೌಕರಿ ಲಭಿಸುವುದರಿಂದ ಜೀವನ ಸಾಗಿಸಲು ಅವರಿಗೆ ಯಾವುದೇ ತೊಂದರೆಯಾಗದು. ಆದರೆ, ನಮ್ಮ ಆರ್ಥಿಕ ಸ್ಥಿತಿ ತೀರಾ ಹದೆಗೆಟ್ಟಿದೆ’ ಎಂದು ಅವರು ಸುದ್ದಿಗಾರರ ಎದುರು ಕಣ್ಣೀರು ಹಾಕಿದರು.

‘ಕೂಲಿ ಕೆಲಸ ಮಾಡಿ ಐದು ಮಕ್ಕಳನ್ನು ಬೆಳೆಸಿದ್ದೆ. ಜನತಾ ಮನೆಯಲ್ಲಿ ವಾಸಿಸುತ್ತಿರುವ ನಾವು ತುಂಬಾ ಬಡವರು. ಕುಟುಂಬದ ಆಶಾಕಿರಣವಾಗಿದ್ದ ಕಲ್ಲಪ್ಪ ನಮ್ಮನ್ನು ಬಿಟ್ಟುಹೋದ. ನಮ್ಮಲ್ಲಿ ಈಗ ದುಡಿಯುವ ಶಕ್ತಿ ಉಳಿದಿಲ್ಲ’ ಎಂದು ನುಡಿದರು.

‘ಸರ್ಕಾರದ ನಿಯಮಾವಳಿಗಳು ಹೇಗಿವೆ ಎನ್ನುವುದು ನಮಗೆ ತಿಳಿದಿಲ್ಲ. ಆದರೆ, ನಮ್ಮ ಸ್ಥಿತಿಯನ್ನು ನೋಡಿ ತೀರ್ಮಾನ ಕೈಗೊಳ್ಳುವುದು ಒಳ್ಳೆಯದು’ ಎಂದು ಮನವಿ ಮಾಡಿದರು.

₹ 4 ಲಕ್ಷ ನಗದು:  ರಾಜ್ಯ ಹಿಂದುಳಿದ ವರ್ಗಗಳ ಅಧಿಕಾರಿಗಳ ಸಂಘವು ಕಲ್ಲಪ್ಪ ಅವರ ಕುಟುಂಬಕ್ಕೆ ಶನಿವಾರ ಒಟ್ಟು ₹ 4 ಲಕ್ಷ ಸಹಾಯಧನ ನೀಡಿತು. ಬಸಪ್ಪ ಹಾಗೂ ಅವರ ಪತ್ನಿ ಬಸವ್ವ ಅವರನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ಸಂಘದ ಸದಸ್ಯರು ₹3 ಲಕ್ಷ ನಗದು ನೀಡಿದರು. ನಂತರ ಸವದತ್ತಿ ತಾಲ್ಲೂಕಿನ ಮುರಗೋಡದಲ್ಲಿರುವ ಕಲ್ಲಪ್ಪ ಅವರ ಪತ್ನಿ ವಿದ್ಯಾ ಅವರ ಮನೆಗೆ ತೆರಳಿ ₹1 ಲಕ್ಷ ನಗದು ನೀಡಿದರು.

ಸಂಘದ ಅಧ್ಯಕ್ಷ ಎಸ್‌.ಪುಟ್ಟಸ್ವಾಮಿ, ಉಪಾಧ್ಯಕ್ಷ ಡಾ.ಡಿ.ಎಸ್‌.ಅಶ್ವತ್ಥ್‌, ಪದಾಧಿಕಾರಿಗಳಾದ ಟಿ.ಬಿ. ಬಳಗಾವಿ, ಕೆ.ಸಿದ್ದಪ್ಪ, ಎಸ್‌.ವಿ. ಕಂಬಳಿ, ಎಸ್‌.ಎಸ್‌. ಪಡೋಲ್ಕರ ಅವರಿದ್ದ ತಂಡ ಸಹಾಯಧನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT