ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪತ್ರಿಕೆ ಕಾಗದ ಖರೀದಿ: ₹ 70 ಲಕ್ಷ ಅವ್ಯವಹಾರ

ಕೆಎಸ್‌ಒಯು: ಲೆಕ್ಕಪರಿಶೋಧನಾ ವರದಿಯಲ್ಲಿ ಬಹಿರಂಗ
Last Updated 27 ಆಗಸ್ಟ್ 2016, 19:41 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕೆಎಸ್‌ಒಯು) ಉತ್ತರಪತ್ರಿಕೆ ಕಾಗದ ಖರೀದಿಯಲ್ಲಿ ಟೆಂಡರ್‌ ನಿಯಮ ಉಲ್ಲಂಘಿಸಿ ₹ 70 ಲಕ್ಷ ಅವ್ಯವಹಾರ ಎಸಗಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ಬೆಳಕಿಗೆ ಬಂದಿದೆ.

ಅವ್ಯವಹಾರ ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮತ್ತು ಅವ್ಯವಹಾರದ ಮೊತ್ತವನ್ನು ಅವರಿಂದ ವಸೂಲು ಮಾಡಲು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಆದೇಶಿಸಿದ್ದಾರೆ. ಅದರಂತೆ, ಮೈಸೂರು ವಿ.ವಿ ಹಾಲಿ ಮತ್ತು ಕೆಎಸ್‌ಒಯು ಹಿಂದಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕೆಎಸ್‌ಒಯು ವಿಶ್ರಾಂತ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್‌ ಸೇರಿದಂತೆ 7 ಮಂದಿ ವಿರುದ್ಧ ವಿ.ವಿ ಹಣಕಾಸು ಅಧಿಕಾರಿ ಕೆ.ಖಾದರ್‌ ಪಾಷಾ ಅವರು ಜಯಲಕ್ಷ್ಮಿಪುರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ: ಉತ್ತರಪತ್ರಿಕೆ ಖರೀದಿಗೆ ಸಂಬಂಧಿಸಿದಂತೆ ಮುಂಬೈನ ಠಾಣೆಯ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್‌ ಅಂಡ್‌ ಮ್ಯಾನೇಜ್‌ಮೆಂಟ್‌ನೊಂದಿಗೆ (ಐಇಎಂ) ಮುಕ್ತ ವಿ.ವಿ ಒಪ್ಪಂದ ಮಾಡಿಕೊಂಡಿದೆ. ಒಂದು ಪತ್ರಿಕೆಗೆ ₹ 8 ನಿಗದಿಪಡಿಸಲಾಗಿತ್ತು.

ಪೂರೈಕೆಯಾಗಿದ್ದ 35.02 ಲಕ್ಷ ಉತ್ತರಪತ್ರಿಕೆಗಳಿಗೆ ಒಪ್ಪಂದದ ದರಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಪತ್ರಿಕೆಗೆ ₹ 2ರಂತೆ ಒಟ್ಟು ₹ 70.04 ಲಕ್ಷವನ್ನು 2014ರ ಮೇ 20ರಂದು ಸಂಸ್ಥೆಗೆ ಪಾವತಿಸಲಾಗಿದೆ. ಇಲ್ಲಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ.  ಹೆಚ್ಚುವರಿಯಾಗಿ ಪಾವತಿಸಿರುವ ಮೊತ್ತವನ್ನು ಸಂಸ್ಥೆಯಿಂದ ಇದುವರೆಗೂ ವಸೂಲಿ ಮಾಡಿಲ್ಲ ಎಂದು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಮೈಸೂರು ವಿಭಾಗದ ಪ್ರಾಂತೀಯ ಕಚೇರಿ ಹಿರಿಯ ಉಪನಿರ್ದೇಶಕರು ಲೆಕ್ಕ ಪರಿಶೋಧನೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಏಪ್ರಿಲ್‌ 5ರಂದು ಮುಕ್ತ ವಿ.ವಿ ಉಪಕುಲಸಚಿವರಿಗೆ 2012–13 ಮತ್ತು 2013–14ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯನ್ನು ಸಲ್ಲಿಸಿದ್ದಾರೆ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಕಡಿಮೆ ಗುಣಮಟ್ಟದ ಕಾಗದ ಪೂರೈಕೆ: ಇನ್ನೊಂದೆಡೆ, ಟೆಂಡರ್‌ ಪಡೆದ ಐಇಎಂ ಸಂಸ್ಥೆಯು ಕೆಎಸ್‌ಒಯುಗೆ ಪೂರೈಸಿರುವ ಒಟ್ಟು 94.76 ಲಕ್ಷ ಉತ್ತರ ಪತ್ರಿಕೆಗಳ ಕಾಗದ ಗುಣಮಟ್ಟ ಕಳಪೆಯಾಗಿದೆ. 2015ರ ಮಾರ್ಚ್‌ 31ರಂದು ಜರುಗಿದ ವಿ.ವಿ ಸಮಿತಿ ಸಭೆಯಲ್ಲಿ ಈ ಅಂಶ ಚರ್ಚೆಯಾಗಿದ್ದು, ಕಳಪೆ ಕಾಗದ ಪೂರೈಕೆಗೆ ಸಂಬಂಧಿಸಿ ಐಇಎಂ
ಸಂಸ್ಥೆಯಿಂದ ₹ 1.51 ಕೋಟಿ ವಸೂಲಿಗೆ ನಿರ್ಧರಿಸಲಾಗಿದೆ. ಈ ಪೈಕಿ ₹ 1 ಕೋಟಿ ಮಾತ್ರ ವಸೂಲಾಗಿದ್ದು, ಇನ್ನೂ ₹ 51 ಲಕ್ಷ ಬಾಕಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೆಎಸ್‌ಒಯುಗೆ ಸಾಫ್ಟ್‌ವೇರ್‌ ಸಿದ್ಧಪಡಿಸಿ, ಸೇವೆ ನಿರ್ವಹಣೆಗೆ ಸಂಬಂಧಿಸಿ ಐಇಎಂ ಸಂಸ್ಥೆಗೆ ₹1.95 ಕೋಟಿ ಮುಂಗಡ ಪಾವತಿಸಲಾಗಿದೆ. 2012ರ ಅಕ್ಟೋಬರ್‌ 31ರಂದು ಒಪ್ಪಂದ ಆದಾಗ ₹ 1 ಕೋಟಿ ಮೊಬಿಲೈಜೇಷನ್‌ ಮುಂಗಡ ನೀಡಲಾಗಿದೆ. ಮೂಲ ಒಪ್ಪಂದದ ಪ್ರಕಾರ ₹ 1 ಕೋಟಿ ಮಾತ್ರ ಪಾವತಿಸಲು ಅವಕಾಶ ಇದೆ. ಹೆಚ್ಚುವರಿಯಾಗಿ ₹ 95 ಲಕ್ಷ ಪಾವತಿಸಿರುವುದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ, ಕೆಎಸ್‌ಒಯು ಅಕ್ರಮಗಳ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ಕೆ.ಭಕ್ತವತ್ಸಲ ನೇತೃತ್ವದ ಏಕವ್ಯಕ್ತಿ ಸತ್ಯಶೋಧನಾ ಸಮಿತಿ ರಾಜ್ಯಪಾಲರಿಗೆ ವರದಿ ಸಲ್ಲಿಸಿತ್ತು. ಇದನ್ನು ಆಧರಿಸಿ 2015ರ ನವೆಂಬರ್ 3ರಂದು, ವಿಶ್ವವಿದ್ಯಾಲಯದ ಹಣಕಾಸು ವ್ಯವಹಾರ ಕುರಿತು ವಿಶೇಷ ಲೆಕ್ಕಪರಿಶೋಧನೆ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡಲು ರಾಜ್ಯಪಾಲರು ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT