ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇದಾರ್‌ ಜಾಧವ್‌ ಅಬ್ಬರದ ಆಟ

ಚತುಷ್ಕೋನ ಏಕದಿನ ಕ್ರಿಕೆಟ್‌ ಸರಣಿ; ಭಾರತಕ್ಕೆ ಸುಲಭ ಜಯ;
Last Updated 27 ಆಗಸ್ಟ್ 2016, 19:43 IST
ಅಕ್ಷರ ಗಾತ್ರ

ಮ್ಯಾಕೆ, ಆಸ್ಟ್ರೇಲಿಯಾ (ಪಿಟಿಐ): ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌ (ಔಟಾಗದೆ 93; 83ಎ, 10ಬೌಂ) ಶನಿವಾರ ರೇ ಮಿಷೆಲ್‌ ಓವಲ್‌ ಹರಪ್‌ ಪಾರ್ಕ್‌ ಮೈದಾನದಲ್ಲಿ ಬೌಂಡರಿಗಳ ಚಿತ್ತಾರ ಬಿಡಿಸಿದರು.

ಜಾಧವ್‌ ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ಭಾರತ ‘ಎ’ ತಂಡ ಇಲ್ಲಿ ನಡೆಯುತ್ತಿರುವ ಚತುಷ್ಕೋನ ಏಕದಿನ ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ನ್ಯಾಷನಲ್‌ ಪರ್ಫಾ ರ್ಮೆನ್ಸ್‌ ಸ್ಕ್ವಾಡ್‌ (ಎನ್‌ಪಿಎಸ್‌) ತಂಡವನ್ನು ಮಣಿಸಿದೆ.

ಇದರೊಂದಿಗೆ ಕರ್ನಾಟಕದ ಮನೀಷ್‌ ಪಾಂಡೆ ಸಾರಥ್ಯದ ತಂಡ ಐದು ಪಂದ್ಯಗಳಿಂದ 16 ಪಾಯಿಂಟ್ಸ್‌ ಸಂಗ್ರಹಿಸಿ ಫೈನಲ್‌ ಹಾದಿಯನ್ನು ಸುಗಮ ಮಾಡಿಕೊಂಡಿದೆ.
ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ನ್ಯಾಷನಲ್‌ ಪರ್ಫಾರ್ಮೆನ್ಸ್‌ ಸ್ಕ್ವಾಡ್‌ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 207ರನ್‌ ಗಳಿಸಿತು.
ಸಾಧಾರಣ ಗುರಿಯನ್ನು ಭಾರತ ತಂಡ 38.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಆಘಾತ: ಬ್ಯಾಟಿಂಗ್‌ ಆರಂಭಿಸಿದ ಎನ್‌ಪಿಎಸ್‌ ತಂಡ ರನ್‌ ಖಾತೆ ತೆರೆ ಯುವ ಮುನ್ನವೇ ವಿಕೆಟ್‌ ಕಳೆದು ಕೊಂಡು ಸಂಕಷ್ಟ ಎದುರಿಸಿತು. ಇನಿಂಗ್ಸ್‌ನ ಎರಡನೇ ಓವರ್‌ ಬೌಲ್‌ ಮಾಡಿದ ವರುಣ್‌ ಆ್ಯರನ್‌ ಮೊದಲ ಎಸೆತದಲ್ಲಿ ಕ್ಯಾಲೆಬ್‌ ಜೆವೆಲ್‌ (0) ವಿಕೆಟ್‌ ಉರುಳಿಸಿ ಮನೀಷ್‌ ಪಡೆಗೆ ಮೇಲುಗೈ ತಂದಿತ್ತರು.

ಎರಡನೇ ವಿಕೆಟ್‌ಗೆ ಜೊತೆಯಾದ ಮ್ಯಾಟ್‌ ರೆನ್ಸಾವ್‌  (31; 52ಎ, 3ಬೌಂ) ಮತ್ತು ಸ್ಯಾಮ್‌ ಹಾರ್ಪರ್‌ (72; 80ಎ, 6ಬೌಂ) ಭಾರತದ ಬೌಲರ್‌ಗಳನ್ನು ಕಾಡಿದರು.
ಇವರು 93 ಎಸೆತಗಳಲ್ಲಿ 76ರನ್‌ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.   ಇವರಿಬ್ಬರು ಔಟಾದ ಬಳಿಕ ನಾಯಕ ಮ್ಯಾಥ್ಯೂ ಶಾರ್ಟ್‌ (30) ಮತ್ತು ಕ್ಲಿಂಟ್‌ ಹಿಂಚ್‌ ಲಿಫ್‌ (43) ದಿಟ್ಟ ಆಟ ಆಡಿ ತಂಡದ ರನ್‌ ಗಳಿಕೆಗೆ ವೇಗ ತುಂಬಿದರು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕೆಟ್‌ ಒಪ್ಪಿಸಿದರು.

ಆರಂಭಿಕ ಸಂಕಷ್ಟ: ಗುರಿ ಬೆನ್ನಟ್ಟಿದ ಭಾರತ ತಂಡ ಮನದೀಪ್‌ ಸಿಂಗ್‌್ (4) ಅವರ ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ಇದರ ಬೆನ್ನಲ್ಲೇ ಕರ್ನಾಟಕದ ಕರುಣ್‌ ನಾಯರ್‌ (14) ಕೂಡ ಪೆವಿಲಿಯನ್‌ ಸೇರಿಕೊಂಡರು. ನಾಯಕ ಮನೀಷ್‌ ಪಾಂಡೆಗೆ  (10) ಟಾಮ್‌ ಒ ಡೊನೆಲ್‌ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ. ಈ ಹಂತದಲ್ಲಿ ಒಂದಾದ ಶ್ರೇಯಸ್‌ ಅಯ್ಯರ್‌ (62; 93ಎ, 4ಬೌಂ) ಮತ್ತು ಕೇದಾರ್‌ ಜಾಧವ್‌ ಸುಂದರ ಇನಿಂಗ್ಸ್‌ ಕಟ್ಟಿದರು.

ಎನ್‌ಪಿಎಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ನಾಲ್ಕನೇ ವಿಕೆಟ್‌ಗೆ 23.1 ಓವರ್‌ಗಳಲ್ಲಿ 135ರನ್‌ ಕಲೆಹಾಕಿ ತಂಡದ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡವನ್ನು ದೂರ ಮಾಡಿತು. ಆ ನಂತರ ಜಾಧವ್‌ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯಾಷನಲ್‌ ಪರ್ಫಾ ರ್ಮೆನ್ಸ್‌ ಸ್ಕ್ವಾಡ್‌:  50 ಓವರ್‌ಗಳಲ್ಲಿ 8 ವಿಕೆಟ್‌ಗೆ 207 ( ಸ್ಯಾಮ್‌ ಹಾರ್ಪರ್‌ 72, ಮ್ಯಾಥ್ಯೂ ಶಾರ್ಟ್‌  30,   ಕ್ಲಿಂಟ್‌ ಹಿಂಚ್‌ ಲಿಫ್‌ 43; ವರುಣ್‌ ಆ್ಯರನ್‌ 58ಕ್ಕೆ3, ಹಾರ್ದಿಕ್‌ ಪಾಂಡ್ಯ 29ಕ್ಕೆ1, ಅಕ್ಷರ್‌ ಪಟೇಲ್‌ 32ಕ್ಕೆ1, ಜಯಂತ್‌ ಯಾದವ್‌ 34ಕ್ಕೆ1, ಶ್ರೇಯಸ್‌ ಅಯ್ಯರ್‌ 23ಕ್ಕೆ1).

ಭಾರತ ‘ಎ’: 38.2 ಓವರ್‌ಗಳಲ್ಲಿ 4 ವಿಕೆಟ್‌ಗೆ 208 (ಶ್ರೇಯಸ್‌ ಅಯ್ಯರ್‌ 62, ಮನೀಷ್‌ ಪಾಂಡೆ 10, ಕೇದಾರ್‌ ಜಾಧವ್‌ ಔಟಾಗದೆ 93, ಹಾರ್ದಿಕ್‌ ಪಾಂಡ್ಯ ಔಟಾಗದೆ 14; ಟಾಮ್‌ ಒ ಡೊನೆಲ್‌ 28ಕ್ಕೆ4). ಫಲಿತಾಂಶ: ಭಾರತ ‘ಎ’ ತಂಡಕ್ಕೆ 6 ವಿಕೆಟ್‌ ಜಯ ಹಾಗೂ 5 ಪಾಯಿಂಟ್ಸ್‌.
ಪಂದ್ಯ ಶ್ರೇಷ್ಠ: ಕೇದಾರ್‌ ಜಾಧವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT