ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಶತಕದ ಆಟ ವ್ಯರ್ಥ

ಟ್ವೆಂಟಿ–20 ಕ್ರಿಕೆಟ್: ಅಬ್ಬರಿಸಿದ ಲೂಯಿಸ್; ವೆಸ್ಟ್ ಇಂಡೀಸ್‌ಗೆ 1ರನ್‌ ಗೆಲುವು
Last Updated 27 ಆಗಸ್ಟ್ 2016, 19:55 IST
ಅಕ್ಷರ ಗಾತ್ರ

ಫೋರ್ಟ್ ಲಾಡೆರ್‌ ಡೆಲ್, ಅಮೆರಿಕ (ಪಿಟಿಐ): ಅಮೆರಿಕದ ಅಂಗಳದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಶತಕದ  ದಾಖಲೆ ಬರೆದರೂ ಭಾರತ ತಂಡವು ಗೆಲುವಿನ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. 

ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್ ಇತಿಹಾಸದಲ್ಲಿ 245 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿ ಗೆದ್ದು ದಾಖಲೆ ನಿರ್ಮಿಸುವ ಅವಕಾಶವನ್ನು ಮಹೇಂದ್ರಸಿಂಗ್ ದೋನಿ ಬಳಗವು ಕೇವಲ 1 ರನ್‌ನಿಂದ ಕಳೆದುಕೊಂಡಿತು. 

2015ರಲ್ಲಿ ವೆಸ್ಟ್ ಇಂಡೀಸ್ ತಂಡವು ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾದ ಎದುರು 236 ರನ್‌ಗಳ ಮೊತ್ತವನ್ನು ಬೆನ್ನತ್ತಿ ಗೆದ್ದಿತ್ತು. ಶನಿವಾರದ ಪಂದ್ಯದಲ್ಲಿ ವಿಂಡೀಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಇವಿನ್ ಲೂಯಿಸ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು   ಭಾರತಕ್ಕೆ 245 ರನ್‌ಗಳ ಬೃಹತ್ ಮೊತ್ತದ ಸವಾಲು ನೀಡಿತ್ತು.  ಕೆ.ಎಲ್. ರಾಹುಲ್ (ಔಟಾಗದೆ 110; 51ಎಸೆತ, 12ಬೌಂಡರಿ 5ಸಿಕ್ಸರ್) ಅವರ ದಿಟ್ಟ ಬ್ಯಾಟಿಂಗ್‌ನಿಂದಾಗಿ ಭಾರತವು ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತ್ತು.  19.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 244 ರನ್‌ ಗಳಿಸಿತ್ತು.

ಆದರೆ, ಪಂದ್ಯದ ಕೊನೆಯ ಎಸೆತ ದಲ್ಲಿ ‘ಬೆಸ್ಟ್ ಫಿನಿಷರ್’ ಮಹೇಂದ್ರಸಿಂಗ್ ದೋನಿ ಅವರ ಹೊಡೆತ  ಕೈಕೊಟ್ಟಿತು. ಡ್ವೇನ್ ಬ್ರಾವೊ ಹಾಕಿದ ನಿಧಾನಗತಿಯ ಎಸೆತವನ್ನು  ಆಫ್‌ಸೈಡ್‌ಗೆ ಡ್ರೈವ್ ಮಾಡಲು ಯತ್ನಿಸಿದ ದೋನಿಯ ಬ್ಯಾಟ್‌ನ ಅಂಚಿಗೆ ಬಡಿದ ಚೆಂಡು ಗಾಳಿಯಲ್ಲಿ ಮೇಲಕ್ಕೆದ್ದಿತು. ಮರ್ಲಾನ್ ಸ್ಯಾಮುಯೆಲ್ಸ್‌ ಕ್ಯಾಚ್ ಪಡೆದು ಸಂಭ್ರಮಿಸಿದರು. 

ದೋನಿ ತೀವ್ರ ನಿರಾಸೆಯಿಂದ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.  ಇದೇ ಓವರ್‌ನ ಮೊದಲ ಎಸೆತದಲ್ಲಿ ಸ್ಯಾಮುಯೆಲ್ಸ್‌ ಅವರು ದೋನಿಯ ಕ್ಯಾಚ್ ನೆಲಕ್ಕೆ ಚೆಲ್ಲಿದ್ದರು. ಆದರೆ, ಸೋಲಿನ ನಡುವೆಯೂ  ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದ ರಾಹುಲ್ ಆಟ ನೆನಪಿನಲ್ಲಿ ಉಳಿಯಿತು.  ಕೇವಲ 46 ಎಸೆತಗಳಲ್ಲಿ 100 ರ ಗಡಿ ದಾಟಿದರು. ಇದರೊಂದಿಗೆ  ಅವರು ಚುಟುಕು ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದವರ ಪಟ್ಟಿಯಲ್ಲಿ  ಮೂರನೇ ಸ್ಥಾನ  ಪಡೆದರು.

ಈ ಹಾದಿಯಲ್ಲಿ ಅವರು ಕ್ರಿಸ್ ಗೇಲ್ ಮತ್ತು ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ಅವರನ್ನು ಹಿಂದಿಕ್ಕಿದರು. ಇದೇ ಪಂದ್ಯ ದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ  ಇವಿನ್ ಲೂಯಿಸ್  48 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ತಪ್ಪಾದ ನಿರ್ಧಾರ: ಸೆಂಟ್ರಲ್ ಬ್ರೊ ವಾರ್ಡ್ ರೀಜನಲ್ ಪಾರ್ಕ್‌ ಕ್ರೀಡಾಂಗ ಣದಲ್ಲಿ  ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ತಪ್ಪಾಯಿತು.
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ  ಜಾನ್ಸನ್ ಚಾರ್ಲ್ಸ್ (79; 33ಎ, 6ಬೌಂ, 7ಸಿ) ಮತ್ತು ಇವಿನ್ ಲೂಯಿಸ್ (100; 49ಎ, 5ಬೌಂ, 9ಸಿ) ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ವಿಂಡೀಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 245 ರನ್ ಗಳಿಸಿತು. ಇದು ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ದಾಖಲಾದ ಮೂರನೇ ದೊಡ್ಡ ಮೊತ್ತ.  

ಲೂಯಿಸ್ ವೇಗದ ಶತಕ ಬಾರಿಸಿದ ಆರನೇ ಬ್ಯಾಟ್ಸ್‌ಮನ್ ಆಗಿ ದಾಖಲಾ ದರು.  ಅಲ್ಲದೇ ಈ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ  21 ಸಿಕ್ಸರ್‌ಗಳು  ದಾಖಲಾ ದವು.  2014ರಲ್ಲಿ ನೆದರ್ಲೆಂಡ್ ತಂಡವು ಐರ್ಲೆಂಡ್‌ ಎದುರು ಹೊಡೆ ದಿದ್ದ 14 ಸಿಕ್ಸರ್‌ಗಳು ಇದುವರೆಗಿನ ದಾಖಲೆಯಾಗಿತ್ತು.

ಚಾರ್ಲ್ಸ್ – ಲೂಯಿಸ್  ಜೊತೆಯಾಟ: ಮೊದಲ ಓವರ್‌ನಿಂದಲೇ ಭಾರತದ ಬೌಲರ್‌ಗಳ ಮೇಲೆ  ಚಾರ್ಲ್ಸ್‌ ಮತ್ತು ಲೂಯಿಸ್ ಜೋಡಿಯು  ಗದಾಪ್ರಹಾರ ನಡೆಸಿತು. ಜಸ್‌ಪ್ರಿತ್ ಬೂಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಅವರ ಅಸ್ತ್ರಗಳು ಬಲ ಕಳೆದು ಕೊಂಡವು. 

ಚಾರ್ಲ್ಸ್ ಮತ್ತು ಲೂಯಿಸ್ ತಲಾ 25 ಎಸೆತಗಳನ್ನು ಎದುರಿಸಿ ಅರ್ಧಶತಕ ಬಾರಿಸಿದರು. ವಿಂಡೀಸ್ ತಂಡವು  8 ಓವರ್‌ಗಳಲ್ಲಿ 100ರ ಗಡಿ ಮುಟ್ಟಿತು. ಮೊದಲ ವಿಕೆಟ್‌ನಲ್ಲಿ ಇವರು 56 ಎಸೆತ ಗಳಲ್ಲಿ 126 ರನ್‌ಗಳನ್ನು ಪೇರಿಸಿದ್ದರು.

ಹತ್ತನೇ ಓವರ್‌ ಬೌಲಿಂಗ್ ಮಾಡಿದ ಮಧ್ಯಮವೇಗಿ ಮೊಹಮ್ಮದ್ ಶಮಿ ಈ ಜೋಡಿಯನ್ನು ಮುರಿದರು. ಶಮಿ ಯಾರ್ಕರ್‌ಗೆ ಚಾರ್ಲ್ಸ್‌  ಬೌಲ್ಡ್‌ ಆದರು.
ಆದರೆ ಇನ್ನೊಂದೆಡೆ ಲೂಯಿಸ್ ಶತಕದತ್ತ ದಾಪುಗಾಲಿಟ್ಟರು. ತಾವೆದುರಿಸಿದ 48ನೇ ಎಸೆತದಲ್ಲಿ ಶತಕ  ಪೂರೈಸಿ ಸಂಭ್ರಮಿಸಿದರು.

ಅವರು ಆ್ಯಂಡ್ರೆ ರಸೆಲ್ ಜೊತೆಗೂಡಿ ಕೇವಲ 36 ಎಸೆತಗಳಲ್ಲಿ 78 ರನ್‌ಗಳನ್ನು ಸೂರೆ ಮಾಡಿದರು. ಅದರಲ್ಲಿ  ರಸೆಲ್ ಕಾಣಿಕೆ ಕೇವಲ 22 ಮಾತ್ರ. ಅವರನ್ನು ರವೀಂದ್ರ ಜಡೇಜ  16ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಅದೇ ಓವರ್‌ನಲ್ಲಿ ಲೂಯಿಸ್ ಕೂಡ ಅಶ್ವಿನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. 

ಆರಂಭದಲ್ಲಿ ಆತಂಕ:  ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಉತ್ಸಾಹದಿಂದ ಬ್ಯಾಟ್ ಬೀಸಿದರು. ಕೇವಲ ಮೂರು ಓವರ್‌ಗಳಲ್ಲಿ 31 ರನ್‌ಗಳು ಸೇರಿದವು.  ಆದರೆ,  ಆ್ಯಂಡ್ರೆ ರಸೆಲ್  ಹಾಕಿದೆ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಚಾರ್ಲ್ಸ್‌ಗೆ ಕ್ಯಾಚಿತ್ತ ರಹಾನೆ ನಿರ್ಗಮಿಸಿದರು.

ವಿರಾಟ್ ಕೊಹ್ಲಿ ಕೇವಲ 16 ರನ್ ಗಳಿಸಿ ಔಟಾದರು. ಆದರೆ ದಿಟ್ಟತನದಿಂದ ಆಡಿದ ರೋಹಿತ್ ಶರ್ಮಾ (62; 28ಎ, 4ಬೌಂ, 4ಸಿ) ಅರ್ಧಶತಕ ಗಳಿಸಿದರು.
ಅವರು ಕೆ.ಎಲ್. ರಾಹುಲ್ ಜೊತೆಗೂಡಿ ಮೂರನೇ ವಿಕೆಟ್‌ಗೆ 89 ರನ್ ಸೇರಿಸಿದರು. ರೋಹಿತ್ ಔಟಾದ ನಂತರ ರಾಹುಲ್ ಆಟ ರಂಗೇರಿತು. ನಾಯಕ ದೋನಿಯ ಜೊತೆಗೂಡಿದ ರಾಹುಲ್ ತಂಡದ ಹೋರಾಟಕ್ಕೆ ಬಲ ತುಂಬಿದರು.  ಚುಟುಕು ಕ್ರಿಕೆಟ್‌ನಲ್ಲಿ ರಾಹುಲ್‌ ಚೊಚ್ಚಲ ಶತಕ ದಾಖಲಿಸಿದರು.
*
ಸ್ಕೋರ್‌ಕಾರ್ಡ್‌
ವೆಸ್ಟ್ ಇಂಡೀಸ್   6 ಕ್ಕೆ 245   (20 ಓವರ್‌ಗಳಲ್ಲಿ)

ಜಾನ್ಸನ್ ಚಾರ್ಲ್ಸ್  ಬಿ ಮೊಹಮ್ಮದ್ ಶಮಿ  79
ಇವಿನ್ ಲೂಯಿಸ್  ಸಿ ಅಶ್ವಿನ್ ಬಿ ರವೀಂದ್ರ ಜಡೇಜ  100
ಆ್ಯಂಡ್ರೆ ರಸೆಲ್ ಎಲ್‌ಬಿಡಬ್ಲ್ಯು ಬಿ ರವೀಂದ್ರ ಜಡೇಜ  22
ಕೀರನ್ ಪೊಲಾರ್ಡ್ ಬಿ ಜಸ್‌ಪ್ರೀತ್ ಬೂಮ್ರಾ  22
ಕಾರ್ಲೋಸ್ ಬ್ರಾಥ್‌ವೈಟ್ ರನ್‌ಔಟ್ (ಬೂಮ್ರಾ)   14
ಡ್ವೇನ್ ಬ್ರಾವೊ ಔಟಾಗದೆ  01
ಲೆಂಡ್ಲ್ ಸಿಮನ್ಸ್ ಬಿ ಜಸ್‌ಪ್ರೀತ್ ಬೂಮ್ರಾ  00
ಮರ್ಲಾನ್ ಸ್ಯಾಮುಯೆಲ್ಸ್ ಔಟಾಗದೆ  01
ಇತರೆ: (ವೈಡ್ 4, ನೋಬಾಲ್ 2)  06

ವಿಕೆಟ್‌ ಪತನ: 1–126 (ಚಾರ್ಲ್ಸ್ ; 9.3), 2–204 (ರಸೆಲ್; 15.3), 3–205 (ಲೂಯಿಸ್; 15.5), 4–236 (ಬ್ರಾಥ್‌ವೈಟ್; 19.0), 5–244 (ಪೊಲಾರ್ಡ್; 19.4), 6–244 (ಸಿಮನ್ಸ್; 19.5).

ಬೌಲಿಂಗ್‌: ಮೊಹಮ್ಮದ್ ಶಮಿ 4–0–48–1 (ವೈಡ್ 2), ಭುವನೇಶ್ವರ್ ಕುಮಾರ್ 4–0–43–0 (ವೈಡ್ 1), ಜಸ್‌ಪ್ರೀತ್ ಬೂಮ್ರಾ 4–0–47–2 (ನೋಬಾಲ್ 2), ಆರ್. ಅಶ್ವಿನ್ 4–0–36–0, ರವೀಂದ್ರ ಜಡೇಜ 3–0–39–2, ಸ್ಟುವರ್ಟ್ ಬಿನ್ನಿ 1–0–32–0 (ವೈಡ್ 1).

ಭಾರತ  4 ಕ್ಕೆ 244   ( 20 ಓವರ್‌ಗಳಲ್ಲಿ)
ರೋಹಿತ್ ಶರ್ಮಾ ಸಿ ಚಾರ್ಲ್ಸ್‌ ಬಿ ಕೀರನ್‌ ಪೊಲಾರ್ಡ್‌  62
ಅಜಿಂಕ್ಯ ರಹಾನೆ ಸಿ ಡ್ವೇನ್ ಬ್ರಾವೊ ಬಿ ಆ್ಯಂಡ್ರೆ ರಸೆಲ್  07
ವಿರಾಟ್ ಕೊಹ್ಲಿ ಸಿ ಫ್ಲೆಚರ್ ಬಿ ಡ್ವೇನ್ ಬ್ರಾವೊ  16
ಕೆ.ಎಲ್. ರಾಹುಲ್ ಬ್ಯಾಟಿಂಗ್‌ 110
ಮಹೇಂದ್ರ ಸಿಂಗ್‌ ದೋನಿ  ಸಿ ಸ್ಯಾಮುಯೆಲ್ಸ್ ಬಿ ಬ್ರಾವೊ 43
ಇತರೆ: (ವೈಡ್ 4, ಲೆಗ್‌ ಬೈ  2)  06

ವಿಕೆಟ್‌ ಪತನ: 1–31 (ರಹಾನೆ; 2.6), 2–48 (ಕೊಹ್ಲಿ; 4.4) 3–137 (ರೋಹಿತ್‌; 11.5), 4-244 ( ದೋನಿ; 19.6).

ಬೌಲಿಂಗ್‌: ಆ್ಯಂಡ್ರೆ ರಸೆಲ್ 4–0–53–1(ವೈಡ್‌–2) , ಸ್ಯಾಮುಯೆಲ್ ಬದ್ರಿ 2–0–25–0, ಡ್ವೇನ್ ಬ್ರಾವೊ 4–0–37–2, ಸುನಿಲ್ ನಾರಾಯಣ 3–0–50–0 (ವೈಡ್ 1), ಕಾರ್ಲೋಸ್ ಬ್ರಾಥ್‌ವೈಟ್ 4–0–47–0 , ಕೀರನ್ ಪೊಲಾರ್ಡ್
3–0–30–1 (ವೈಡ್).

ಫಲಿತಾಂಶ: ವೆಸ್ಟ್‌ ಇಂಡೀಸ್‌ಗೆ 1 ರನ್‌ ಗೆಲುವು.

ಪಂದ್ಯಶ್ರೇಷ್ಠ:  ಇವಿನ್ ಲೂಯಿಸ್.
ಇಂದು ಎರಡನೇ ಪಂದ್ಯ
ಆರಂಭ: ರಾತ್ರಿ 7.30ಕ್ಕೆ.  ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT