ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತ ಬಡ ಕುಟುಂಬಗಳಿಗೆ ಪರಿಹಾರ

ಸಿದ್ದರಾಮಯ್ಯ ಭರವಸೆ
Last Updated 27 ಆಗಸ್ಟ್ 2016, 19:58 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮನೆಗಳನ್ನು ಕಳೆದುಕೊಂಡಿರುವ ಬಡ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶನಿವಾರ ನಡೆದ ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಮನೆಗಳನ್ನು ಕಳೆದುಕೊಂಡಿರುವ ಬಡ ಕುಟುಂಬಗಳ ವಿವರ ಒದಗಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳ ಒತ್ತುವರಿ ತೆರವಿಗೆ ಆದ್ಯತೆ ನೀಡಬೇಕು. ಅತಿಕ್ರಮಣದಿಂದ ನೀರಿನ ಹರಿಯುವಿಕೆಗೆ ಆಗಿರುವ ಅಡಚಣೆಯನ್ನು ತೆರವು ಮಾಡುವುದು ಬಿಬಿಎಂಪಿಯ ಮೊದಲ ಆದ್ಯತೆ ಆಗಬೇಕು ಎಂದು ಸೂಚಿಸಿದರು.

ಮೂಲಸ್ವರೂಪ ಕಳೆದುಕೊಂಡಿರುವ ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವು ಸದ್ಯಕ್ಕೆ ಬೇಡ ಎಂದು ಅವರು ತಿಳಿಸಿದರು. ಆದರೆ ಬಿಲ್ಡರ್‌ಗಳು ಹಾಗೂ ಪ್ರಭಾವಿಗಳ ಕಟ್ಟಡಗಳನ್ನು ಕಾರ್ಯಾಚರಣೆಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

‘ಮಳೆಗಾಲದಲ್ಲಿ ಪ್ರವಾಹ ಸಮಸ್ಯೆ ಉಂಟಾಗಬಾರದು. ಪ್ರವಾಹ ಪರಿಸ್ಥಿತಿಯಿಂದ ಜನ ತೊಂದರೆಗೆ ಒಳಗಾಗಬಾರದು. ಪದೇ ಪದೇ ಅವರು ಸಂಕಷ್ಟಕ್ಕೆ ಗುರಿಯಾಗಬಾರದು ಎಂಬ ಉದ್ದೇಶದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದರು.

ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ‘ರಾಜಕಾಲುವೆ ಒತ್ತುವರಿ ಮಾಡಿರುವ 38 ಸ್ಥಳಗಳನ್ನು ಗುರುತಿಸಲಾಗಿದೆ. ಆದ್ಯತೆಯ ಮೇರೆಗೆ ಅಂತಹ ಒತ್ತುವರಿಯನ್ನು ಮಾತ್ರ ಮೊದಲ ಹಂತದಲ್ಲಿ ತೆರವು ಮಾಡಲಾಗುತ್ತದೆ’ ಎಂದರು.

ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ ಮಾತನಾಡಿ, ‘ಮಳೆಯಿಂದ ಪ್ರವಾಹ ಸ್ಥಿತಿ ಉಂಟಾಗಿದ್ದ ಬೊಮ್ಮನಹಳ್ಳಿ ಪ್ರದೇಶದಲ್ಲಿ ಆದ್ಯತೆ ಮೇರೆಗೆ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ. ನಿರ್ಜೀವ ಕಾಲುವೆಗಳ ಒತ್ತುವರಿ ತೆರವು ಮಾಡುವುದಿಲ್ಲ’ ಎಂದರು.

ಈಗ ಮನೆ ಕಳೆದುಕೊಂಡು ನಿರ್ಗತಿಕರಾಗಿರುವವರಿಗೆ ಪರಿಹಾರ ರೂಪದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಫ್ಲ್ಯಾಟ್‌ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.

ಐಡಿಯಲ್‌ ಹೋಮ್‌ ಬಡಾವಣೆಯ ಸರ್ವೆ ಕಾರ್ಯ ಇನ್ನೊಂದೆರಡು ದಿನ ವಿಳಂಬವಾಗಬಹುದು. ಸರ್ವೆ ವರದಿ ಬಂದ ಬಳಿಕ ಕ್ರಮ ನಿಶ್ಚಿತ ಎಂದರು.  ಸಚಿವ ರೋಷನ್‌ ಬೇಗ್‌, ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಇದ್ದರು.
*
ಬಿಬಿಎಂಪಿ ಬಡವರ ಮನೆಗಳನ್ನು ಮಾತ್ರ ಒಡೆಯುತ್ತಿದೆ ಎಂಬುದು ಸುಳ್ಳು. ಐದಾರು ಕೋಟಿ ವೆಚ್ಚದ ಮನೆಗಳನ್ನೂ ತೆರವು ಮಾಡಲಾಗಿದೆ. ಎಂತವರ ಕಟ್ಟಡವೇ ಆಗಿದ್ದರೂ ಮುಲಾಜಿಲ್ಲದೆ ತೆರವು ಮಾಡಲಾಗುತ್ತದೆ.
ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT