ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟ ಮನವರಿಕೆಗೆ ನಿರ್ಧಾರ

ತಮಿಳುನಾಡಿಗೆ ಕಾವೇರಿ ನೀರು ಬಿಡದಿರಲು ತೀರ್ಮಾನ
Last Updated 27 ಆಗಸ್ಟ್ 2016, 20:11 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ಕೊರತೆಯಿಂದ ಕಾವೇರಿ ಕಣಿವೆಯಲ್ಲಿ ಉಂಟಾಗಿರುವ ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆ ತೀರ್ಮಾನಿಸಿತು.

ಕಾವೇರಿ ಜಲಾಶಯಗಳಿಂದ ತಕ್ಷಣ 50 ಟಿಎಂಸಿ ಅಡಿ ನೀರು ಬಿಡಲು ಕರ್ನಾಟಕಕ್ಕೆ ನಿರ್ದೇಶಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸಲ್ಲಿಸಿರುವ ಅರ್ಜಿ ಸಂಬಂಧ ಕೈಗೊಳ್ಳಬೇಕಾದ ನಿಲುವು ಕುರಿತು ಚರ್ಚಿಸಲು ಶನಿವಾರ ಸರ್ವಪಕ್ಷ ಸಭೆ ಸೇರಿತ್ತು.

‘ಕಾವೇರಿ ಕಣಿವೆ ವಸ್ತುಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ವಿಷಯದಲ್ಲಿ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಬೆಂಬಲಿಸುವುದಾಗಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಭರವಸೆ ನೀಡಿವೆ‘ ಎಂದು ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕಾವೇರಿ ಕಣಿವೆಯ ಕೆಆರ್‌ಎಸ್‌, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಈಗ 51ಟಿಎಂಸಿ ಅಡಿ ನೀರು ಮಾತ್ರ ಇದೆ. ಬೆಂಗಳೂರು, ಮೈಸೂರು, ಮಂಡ್ಯ ಮತ್ತಿತರ ನಗರಗಳ ಕುಡಿಯುವ ನೀರಿಗೆ 40 ಟಿಎಂಸಿ ಅಡಿ ನೀರು ಅಗತ್ಯವಿದೆ ಎಂದರು.

‘ನಾವು ಸಂಕಷ್ಟದ ನಡುವೆಯೂ ನೆರೆಯ ರಾಜ್ಯಕ್ಕೆ ಇದುವರೆಗೆ 29 ಟಿಎಂಸಿ ಅಡಿ ನೀರು ಬಿಟ್ಟಿದ್ದೇವೆ. ಅವರ ಬಳಿ ಮೆಟ್ಟೂರು ಜಲಾಶಯದಲ್ಲಿ ಸದ್ಯ 34 ಟಿಎಂಸಿ ಅಡಿ ನೀರು ಸಂಗ್ರಹವಿದೆ’ ಎಂದೂ ಅವರು ಸ್ಪಷ್ಟಪಡಿಸಿದರು.

ಈ ವರ್ಷ ಮುಂಗಾರು ತೃಪ್ತಿಕರವಾಗಿಲ್ಲ. ಜಲಾಶಯಗಳ ಒಳಹರಿವು ಕಡಿಮೆ ಇದೆ. ವಾಡಿಕೆ ಮಳೆಯೂ ಬಂದಿಲ್ಲ. ಆದರೆ, ತಮಿಳುನಾಡು ದಕ್ಷಿಣ ಭಾರತದ ಮಳೆಯ ಸರಾಸರಿ ಆಧಾರದ ಮೇಲೆ ಕರ್ನಾಟಕದ ಒಟ್ಟಾರೆ ಮಳೆ ಪರಿಗಣಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದೆ ಎಂದು ಅವರು ನುಡಿದರು.

‘ಇತ್ತೀಚೆಗೆ ನನ್ನನ್ನು ಭೇಟಿ ಮಾಡಿದ್ದ ತಮಿಳುನಾಡು ರೈತ ನಿಯೋಗಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿದ್ದೇನೆ. ನಮ್ಮ ಬೆಳೆಗಳೇ ನೀರಿಲ್ಲದೆ ಒಣಗುತ್ತಿವೆ ಎಂಬ ಸಂಗತಿ ಮನವರಿಕೆ ಮಾಡಿದ್ದೇನೆ’ ಎಂದೂ ವಿವರಿಸಿದರು.

‘ಕಾವೇರಿ  ಸಂಕಷ್ಟದ ಪರಿಸ್ಥಿತಿಯನ್ನು ನಮ್ಮ ವಕೀಲರು ‘ಸುಪ್ರೀಂ’ಗೆ ಮನವರಿಕೆ ಮಾಡಿಕೊಡಲಿದ್ದಾರೆ’ ಎಂದರು.

ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ. ಸದಾನಂದಗೌಡ, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ವಿಧಾನಸಭೆ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಕಾವೇರಿ ಕಣಿವೆ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು. 

ಕರ್ನಾಟಕದ ವಕೀಲರ ತಂಡದ ಪ್ರಮುಖ ಸದಸ್ಯರಾದ ಮೋಹನ ಕಾತರಕಿ ಸಭೆಯಲ್ಲಿ ಪಾಲ್ಗೊಂಡಿದ್ದರು. ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಅಪ್ಪಾಜಿ ನಾಡಗೌಡ ಅವರೂ ಇದ್ದರು.
*
ನಾರಿಮನ್‌ ಸಲಹೆ ನೀಡಿಲ್ಲ
ತಮಿಳುನಾಡಿಗೆ 3ರಿಂದ 4 ಟಿಎಂಸಿ ಅಡಿ ನೀರು ಬಿಡುವಂತೆ ಹಿರಿಯ ವಕೀಲ ಎಫ್‌.ಎಸ್‌. ನಾರಿಮನ್‌ ಹೇಳಿಲ್ಲ ಎಂದು  ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ತಮಿಳುನಾಡಿಗೆ 3ರಿಂದ 4ಟಿಎಂಸಿ ಅಡಿ ನೀರು ಬಿಡುವಂತೆ ನಾರಿಮನ್‌ ಸಲಹೆ ಮಾಡಿದ್ದಾರೆಂದು ಪತ್ರಿಕೆಯೊಂದರಲ್ಲಿ ಬರೆಯಲಾಗಿದೆ. ಆದರೆ, ನಾರಿಮನ್‌ ಹಾಗೆ ಹೇಳಿಲ್ಲ ಎಂದೂ ಸಿದ್ದರಾಮಯ್ಯ  ಸ್ಪಷ್ಟಪಡಿಸಿದರು.

ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವ ಕುರಿತು ಏನನ್ನೂ ಹೇಳದೆ ಮುಖ್ಯಮಂತ್ರಿ ಜಾರಿಕೊಂಡರು.

ತಮಿಳುನಾಡಿಗೆ ನೀರು ಬಿಡಲಾಗುವುದೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ‘ಇದುವರೆಗೆ ಹೇಳಿದ್ದೇನು?’ ಎಂದು ಮರು ಪ್ರಶ್ನೆ ಹಾಕಿ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT