ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ತೆರವು: ಸಂತ್ರಸ್ತರಿಗೆ ಕಾನೂನು ನೆರವು

ತಪ್ಪಿತಸ್ಥ ಅಧಿಕಾರಿಗಳನ್ನು ಹೊಣೆ ಮಾಡಲು ‘ನಮ್ಮ ಬೆಂಗಳೂರು’ ಪ್ರತಿಷ್ಠಾನ ಒತ್ತಾಯ
Last Updated 27 ಆಗಸ್ಟ್ 2016, 20:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾಲುವೆ ಒತ್ತುವರಿಗೆ ಅಧಿಕಾರಿಗಳನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವುದಾಗಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಹೇಳಿದೆ. ಸಂತ್ರಸ್ತರು ಕಾನೂನು ಹೋರಾಟ ನಡೆಸುವುದಾದರೆ ನೆರವು ಒದಗಿಸಲು ಸಿದ್ಧ ಎಂದೂ ಘೋಷಿಸಿದೆ. 

‘ತಪ್ಪಿತಸ್ಥ ಅಧಿಕಾರಿಗಳಿಂದ ಹಾಗೂ ಒತ್ತುವರಿ ಮಾಡಿಕೊಂಡ ಬಿಲ್ಡರ್‌ಗಳಿಂದ ದಂಡ ವಸೂಲಿ ಮಾಡಿ, ತೆರವು ಕಾರ್ಯಾಚರಣೆಯಲ್ಲಿ ನೆಲೆ ಕಳೆದುಕೊಂಡವರಿಗೆ  ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇವೆ. ಸಂತ್ರಸ್ತರು ತಮ್ಮ ನೋವುಗಳನ್ನು ಇ–ಮೇಲ್‌ ಮೂಲಕವೂ (ವಿಳಾಸ: NBCC@namma-bengaluru.org ) ಕಳುಹಿಸಬಹುದು’ ಎಂದು ಪ್ರತಿಷ್ಠಾನವು ತಿಳಿಸಿದೆ.

ನೆಲೆ ಕಳೆದುಕೊಂಡ ಸಂತ್ರಸ್ತರು ನೋವು ಹಂಚಿಕೊಳ್ಳುವುದಕ್ಕೆ  ಪ್ರತಿಷ್ಠಾನವು ಶನಿವಾರ ಇಲ್ಲಿನ ಪುರಭವನದಲ್ಲಿ ಏರ್ಪಡಿಸಿದ್ದ  ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು’ ಕಾರ್ಯಕ್ರಮ ವೇದಿಕೆಯಾಯಿತು.  ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವ ಸಲುವಾಗಿ ಪ್ರತಿಷ್ಠಾನವು ಸಂತ್ರಸ್ತರ ಸಹಿ ಮತ್ತು ವಿವರಗಳನ್ನು ಸಂಗ್ರಹಿಸಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಭೂಕಬಳಿಕೆ ವಿರೋಧಿ ಕ್ರಿಯಾಸಮಿತಿಯ ಸಂಚಾಲಕ ಎ.ಟಿ.ರಾಮಸ್ವಾಮಿ , ‘ಭ್ರಷ್ಟಾಚಾರ ಮಾಡುತ್ತಿರುವವರೇ  ಅಧಿಕಾರದಲ್ಲಿದ್ದಾರೆ. ಮಾಫಿಯಾಗಳು ಆಡಳಿತವನ್ನು ನಿಯಂತ್ರಿಸುತ್ತಿವೆ. ಹಾಗಾಗಿ ರಾಜ್ಯದ ಆಡಳಿತ ವ್ಯವಸ್ಥೆಯು ಊಹಿಸಲೂ ಸಾಧ್ಯವಿಲ್ಲದಷ್ಟು ಪಾತಾಳಕ್ಕೆ ಕುಸಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಆಸ್ತಿ ಮುಟ್ಟುಗೋಲು ಹಾಕಿ: ‘ಕೆಲವರು ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಸಕ್ರಮಗೊಳಿಸಬಹುದು. ಸರ್ಕಾರದ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿರುವ ಬಲಾಢ್ಯರ ವಿರುದ್ಧ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಇಂತಹ ಅಕ್ರಮ ಆಸ್ತಿಯನ್ನು ಹಾಗೂ ಈ ಅಕ್ರಮಕ್ಕೆ ನೆರವಾದ ಅಧಿಕಾರಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು’ ಎಂದು ಒತ್ತಾಯಿಸಿದರು.

‘ಐಎಎಸ್‌ ಅಧಿಕಾರಿಯ ಮನೆಯಲ್ಲಿ ₹4.5 ಕೋಟಿ ಅಕ್ರಮ ಹಣ, ಭಾರಿ ಪ್ರಮಾಣದ ಚಿನ್ನ ಬೆಳ್ಳಿ ಪತ್ತೆಯಾಯಿತು. ಆ ಅಧಿಕಾರಿಯನ್ನು ಕೆಎಟಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇಂತಹ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು. ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಬಾಲಸುಬ್ರಮಣಿಯನ್‌ ಮಾತನಾಡಿ, ‘ಸಚಿವ ಸಂಪುಟದಲ್ಲೂ ರಿಯಲ್‌ ಎಸ್ಟೇಟ್‌ ಉದ್ಯಮಿಗಳು  ಇದ್ದಾರೆ. ಹಾಗಾಗಿ ಬಿಲ್ಡರ್‌ಗಳ ವಿರುದ್ಧ ಈ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ನೆಲೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಕೊಡುತ್ತದೆ ಎಂಬ ಭರವಸೆಯೂ ಇಲ್ಲ’ ಎಂದರು.

‘ಭೈರಸಂದ್ರ ಕೆರೆಯ  6 ಎಕರೆಗೂ ಹೆಚ್ಚು ಜಾಗವನ್ನು ಬಾಗ್ಮನೆ ಟೆಕ್‌ ಪಾರ್ಕ್‌  ಒತ್ತುವರಿ ಮಾಡಿಕೊಂಡಿತ್ತು. ಇದರ ತೆರವಿ ಅಡ್ಡಿಯಾಗಿದ್ದ ತಡೆಯಾಜ್ಞೆ ತೆರವುಗೊಂಡಿದೆ. ಆದರೂ ಸರ್ಕಾರ ಏಕೆ ಇದನ್ನು ವಶಕ್ಕೆ ಪಡೆಯುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಮುಖ್ಯ ಕಾರ್ಯದರ್ಶಿ ಅವರ 85 ವರ್ಷದ ತಾಯಿ ಕೃಷಿ ಭೂಮಿ ಖರೀದಿಸಿ ರಾಗಿ ಬೆಳೆಯುತ್ತಾರೆ ಎನ್ನುವುದು ಯಾರಾದರೂ ನಂಬುವಂತಹ ಮಾತೇ. ಮುನೀಶ್‌ ಮೌದ್ಗಿಲ್ ಎಂಬ ದಕ್ಷ ಅಧಿಕಾರಿಯಿಂದಾಗಿ ಈ ಹಗರಣ ಬಯಲಿಗೆ ಬಂತು. ಸರ್ಕಾರ ಅವರನ್ನೇ ಎತ್ತಂಗಡಿ ಮಾಡಿತು’ ಎಂದರು.

‘ಎಲ್ಲೆಲ್ಲಿ ರಾಜಕಾಲುವೆಗಳು ಹರಿಯುತ್ತಿವೆ ಎಂಬ ಬಗ್ಗೆ ಅಧ್ಯಯನ ನಡೆಸಿ ಬಿಬಿಎಂಪಿ ಸ್ಪಷ್ಟವಾದ ವರದಿಯನ್ನು ಹೈಕೋರ್ಟ್‌ಗೆ ಒಪ್ಪಿಸಿದೆ. ಅದರ ಪ್ರಕಾರವೇ ಈಗ ತೆರವು ಕಾರ್ಯಾಚರಣೆ ನಡೆಯುತ್ತಿದೆಯೇ ಹೊರತು 1902ರ ನಕ್ಷೆ ಆಧಾರದಲ್ಲಿ ಅಲ್ಲ. 1902 ನಕ್ಷೆ ಪ್ರಕಾರ ತೆರವು ನಡೆಯುತ್ತಿದೆ ಎಂಬ ವದಂತಿ ಹೇಗೆ ಹುಟ್ಟಿತೋ ತಿಳಿಯದು’ ಎಂದು ವಕೀಲ ಸಜನ್‌ ಪೂವಯ್ಯ ತಿಳಿಸಿದರು

‘ಲಾಂಗು ಹಿಡಿದು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕು’
‘ಸರ್ಕಾರ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಜನ ಲಾಂಗು ಹಿಡಿದುಕೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೆ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಹೆಣ ಬಿದ್ದರೂ ಸರಿ, ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ಕೆಚ್ಚೆದೆಯಿಂದ ಬಡವರು ಮುನ್ನುಗ್ಗಬೇಕು’ ಎಂದು ರಾಜಕಾರಣಿ ಕೆ.ಆರ್‌.ಪೇಟೆ ಕೃಷ್ಣ ಹೇಳಿದರು.

‘ಬಿಲ್ಡರ್‌ಗಳು ಹಾಗೂ ಅಧಿಕಾರಿಗಳು ಸೇರಿ ಸರ್ಕಾರಿ ಆಸ್ತಿಯನ್ನು ಕಬಳಿಸುತ್ತಿದ್ದಾರೆ. ದರೋಡೆಕೋರರ ರಾಜ್ಯದಲ್ಲಿರುವ ಗುಲಾಮರು ನಾವು. ದರೋಡೆಕೋರರನ್ನು ಧ್ವಂಸಮಾಡಲು ದಂಗೆಕೋರರ ಅಗತ್ಯವಿದೆ. ಜನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬೀದಿಗಿಳಿದರೆ ಮಾತ್ರ ನ್ಯಾಯ ಪಡೆಯಲು ಸಾಧ್ಯ’ ಎಂದು ಅವರು ಹೇಳಿದರು.

ಕ್ರೆಡಾಯ್‌ ವಿರುದ್ಧ ದೊರೆಸ್ವಾಮಿ ಕಿಡಿ
ಡೆವಲಪರ್‌ಗಳು ಯಾರೂ ಕಾಲುವೆ ಒತ್ತುವರಿ  ಮಾಡಿಕೊಂಡಿಲ್ಲ ಎಂದು ಹೇಳಿಕೆ ನೀಡಿರುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳ  ಒಕ್ಕೂಟದ  (ಕ್ರೆಡಾಯ್‌) ಪದಾಧಿಕಾರಿಗಳ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಕಿಡಿಕಾರಿದರು.

‘ನೀವು ದಾಖಲೆ ಸೃಷ್ಟಿ ಮಾಡಿಕೊಳ್ಳಲು ಎಷ್ಟು ಲಂಚ ನೀಡಿದ್ದೀರಿ. ಎಷ್ಟು ಅಧಿಕಾರಿಗಳನ್ನು ಕೊಂಡು ಕೊಂಡಿದ್ದೀರಿ? ಎಷ್ಟು ಗೂಂಡಾಗಳನ್ನು ಬಳಸಿದ್ದೀರಿ ಎಂಬುದನ್ನೂ ಸ್ಪಷ್ಟಪಡಿಸಿ’ ಎಂದರು.

‘ಕೆರೆಯ ಮೀಸಲು ಪ್ರದೇಶ (ಬಫರ್‌ ಝೋನ್‌) ನಿಗದಿ ಪಡಿಸಲು ಬಗ್ಗೆ ಹಸಿರು ನ್ಯಾಯ ಮಂಡಳಿಗೆ ಅಧಿಕಾರ ನೀಡಿದವರು ಯಾರು  ಎಂದು  ಕ್ರೆಡಾಯ್‌ ಪರ ವಕೀಲರು ಪ್ರಶ್ನೆ ಮಾಡಿದ್ದಾರೆ. ಅಕ್ರಮ ನಡೆಸುವವರ ಜೊತೆ ಸರ್ಕಾರ ಶಾಮೀಲಾದಾಗ ನ್ಯಾಯಾಲಯವೂ ಬಾಯಿ ಮುಚ್ಚಿಕೊಂಡಿರಬೇಕೇ?’ ಎಂದು ಅವರು ಪ್ರಶ್ನಿಸಿದರು.

‘ಕೋರ್ಟ್‌ ಮೊರೆ ಹೋದರೆ ಇಡೀ ಮನೆ ಒಡೆಯುತ್ತೇವೆ’
‘ನನ್ನ ಮನೆಯ ಒಂದು ಪಾರ್ಶ್ವವನ್ನು  ಬಿಬಿಎಂಪಿ ಅಧಿಕಾರಿಗಳು ಕೆಡವಿ ಹಾಕಿದ್ದಾರೆ. ಮನೆ ಕಟ್ಟಲು ಅನುಮೋದನೆ ಪಡೆದ ದಾಖಲೆಗಳನ್ನು ತೋರಿಸಿದರೂ ವಿನಾಯಿತಿ ನೀಡಲಿಲ್ಲ. ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದಾಗ, ಕೋರ್ಟ್‌ಗೆ ಹೋದರೆ ಇಡೀ ಮನೆಯನ್ನೇ ಒಡೆಯುತ್ತೇವೆ ಎಂದು ಬೆದರಿಕೆ ಒಡ್ಡಿದರು’ ಎಂದು ಅವನಿಶೃಂಗೇರಿ ನಗರದ ಶ್ರೀಕಾಂತ್‌ ಆರೋಪಿಸಿದರು.

‘ನನಗೆ ಬೇರೇನೂ ಬೇಡ. ನನಗಾದ ನಷ್ಟ ತುಂಬಿಕೊಡುವಷ್ಟು ಪರಿಹಾರ ಕೊಡಿಸಿ ಸಾಕು’ ಎಂದು ಅವರು ಒತ್ತಾಯಿಸಿದರು. ‘ನನ್ನ ಮನೆಗೆ ಖಾತಾ ಇದೆ. ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆಗೆ ತಂದಿಟ್ಟ ಸಾಮಾಗ್ರಿಗಳನ್ನೂ ತೆಗೆಯಲು ಬಿಡದೆ ಮನೆಯನ್ನು ಕೆಡವಿದರು. ನಾನು ಯಾಕಾದರೂ ಈ ಭೂಮಿಯಲ್ಲಿ ಬದುಕಿದ್ದೇನೆ ಎಂದೆನಿಸಿದೆ’ ಎಂದು ದೊಡ್ಡಬೊಮ್ಮಸಂದ್ರದ ಗೋವಿಂದರಾಜು ಕಣ್ಣೀರು ಸುರಿಸಿದರು.

ಯಾರು ಏನು ಹೇಳಿದರು
ತಪ್ಪೆಸಗಿದ 20 ಅಧಿಕಾರಿಗಳನ್ನು ಅಮಾ­ನತು ಮಾಡುವ ಬದಲು ನೇಣಿಗೆ ಹಾಕಬೇಕಿತ್ತು.
-ಕೆ.ಆರ್‌.ಪೇಟೆ ಕೃಷ್ಣ , ಹಿರಿಯ ರಾಜಕಾರಣಿ

***

ಲೇಔಟ್‌ ಎಂಬುದು  ಪದ್ಮಶ್ರೀ ಪದವಿಯಂತೆ ಬಳಕೆ ಆಗುತ್ತಿದೆ. ಲೇಔಟ್‌ ದುರ್ಯೋಧನಪ್ಪ, ಲೇಔಟ್‌ ಕಂಸಪ್ಪ, ಲೇಔಟ್‌ ರಾವಣಪ್ಪ ಎಂಬ ಹೆಸರುಗಳು  ಇತ್ತೀಚೆಗೆ ಸೃಷ್ಟಿಯಾಗಿವೆ.
-ವಿ.ಬಾಲಸುಬ್ರಮಣಿಯನ್‌ ,ನಿವೃತ್ತ  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

***

ಇಲಿ ಮೇಲೆ ಔಷಧಿ ಪ್ರಯೋಗ ಮಾಡುವಂತೆ ಸರ್ಕಾರ ಬಡವರ ಮನೆ ಕೆಡಹುವ ಮೂಲಕ  ಪ್ರಯೋಗಕ್ಕೆ ಇಳಿದಿದೆ. ನೆಲೆ ಕಳೆದುಕೊಂಡವರಿಗೆ ಮೊದಲು ಪರಿಹಾರ ನೀಡಿ.
-ಬಿ.ಎನ್‌.ವಿಜಯಕುಮಾರ್‌,ಶಾಸಕ

***

ಬಿಲ್ಡರ್‌ಗಳು ತಾವೇ ಸರ್ಕಾರ ಎಂದು ಭಾವಿಸಿದಂತಿದೆ. ಬಿಲ್ಡರ್‌ಗಳು ಅಕ್ರಮ ನಡೆಸದಂತೆ ಕ್ರೆಡಾಯ್‌ ನೋಡಿಕೊಂಡರೆ ಸಾಕು. ರಾಜಕಾಲುವೆ ಸಮಸ್ಯೆ ಬಗ್ಗೆ ಸರ್ಕಾರವೇ  ತೀರ್ಮಾನ ಕೈಗೊಳ್ಳುತ್ತದೆ
-ರಾಜೀವ ಚಂದ್ರಶೇಖರ್‌ ,ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT