ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಕಟ್ಟಡಗಳ ನಿತ್ಯನೂತನ ನೆನಪುಗಳು

ನಾ ಕಂಡ ಬೆಂಗಳೂರು
Last Updated 29 ಆಗಸ್ಟ್ 2016, 6:00 IST
ಅಕ್ಷರ ಗಾತ್ರ

 ದಿನದಿಂದ ದಿನಕ್ಕೆ ಅಭಿವೃದ್ಧಿಯ ಹೆಸರಲ್ಲಿ ಬೆಳೆಯುತ್ತಿರುವ ಬೆಂಗಳೂರು ನನ್ನಲ್ಲಿ ಖುಷಿಗಿಂತ ಹೆಚ್ಚಾಗಿ ಖೇದವನ್ನೇ ಮೂಡಿಸುತ್ತಿದೆ. ಇಲ್ಲಿ ಎಷ್ಟು ಹಸಿರು ತುಂಬಿತ್ತು; ರಸ್ತೆಗಳು ಎಷ್ಟು ಚೆಂದವಾಗಿದ್ದವು; ಮನಸ್ಸಿಗೆ ಮುದ ನೀಡುವ ಅದೆಷ್ಟೋ ಪಾರಂಪರಿಕ ಕಟ್ಟಡಗಳಿದ್ದವು. ಅವೆಲ್ಲವನ್ನೂ ವಿನಾ ಕಾರಣ ಕೆಡವಿ ಬದಲಾವಣೆಯ ಹೆಸರು ಹೇಳುತ್ತಿರುವುದು ಕಸಿವಿಸಿ ಉಂಟು ಮಾಡಿದೆ.

ಐಎಎಸ್‌ ಮುಗಿಸಿದ ನಂತರ ನಾನು ಪ್ರೊಬೆಷ್‌ನರ್‌ ಆಗಿ ಬೆಂಗಳೂರಿಗೆ ಬಂದೆ. ಆಗ ಕೆ.ಆರ್‌.ವೃತ್ತದ ಬಳಿಯಿದ್ದ ಜನರಲ್‌ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಅದು 1970ರ ಸಮಯ. ಅಷ್ಟು ಚೆಂದದ ವೃತ್ತವನ್ನು ನಾನು ಬೇರೆಲ್ಲೂ ನೋಡಿರಲೇ ಇಲ್ಲ. ಆದರೆ ಇವತ್ತು ಈ ವೃತ್ತ, ಈ ರಸ್ತೆ ನೋಡಿದರೆ ವಾಹನಗಳಿಗಾಗಿಯೇ ನಿರ್ಮಾಣವಾದಂತಿದೆ. ಆಗ ಇಲ್ಲಿ ಹಸಿರು ಹೆಚ್ಚಿತ್ತು; ವಾಹನಗಳು ಕಡಿಮೆ ಇದ್ದವು. ಈಗೆಲ್ಲಾ ತದ್ವಿರುದ್ಧ.

ಕೆ.ಆರ್‌.ವೃತ್ತದ ಹಾಸ್ಟೆಲ್‌ನಿಂದ ಹಿಡಿದು ಬಹುಮಹಡಿ ಕಟ್ಟಡ (ಎಂಎಸ್‌ ಬಿಲ್ಡಿಂಗ್‌), ಖನಿಜ ಭವನ, ವಿಧಾನ ಸೌಧ, ವಾರ್ತಾ ಭವನದವರೆಗೂ ನನ್ನ ಅನುಭವದ, ನೆನಪಿನ ಬುತ್ತಿಯಿದೆ.

ಪ್ರತಿಭಾಲಯವಾಗಿದ್ದ ವಾರ್ತಾ ಭವನ
ವಾರ್ತಾಭವನ ನನಗೆ ತುಂಬಾ ಪ್ರಿಯವಾದ ಜಾಗವಾಗಿತ್ತು. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇರಲಿಲ್ಲ. ಎಲ್ಲ ಕೆಲಸಗಳು ವಾರ್ತಾ ಭವನದಲ್ಲಿಯೇ ನಡೆಯುತ್ತಿದ್ದವು. ಅದೊಂದು ರೀತಿಯಲ್ಲಿ ಪ್ರತಿಭಾಲಯವಾಗಿತ್ತು. ಸಿ.ಆರ್‌.ಸಿಂಹ, ಲೋಕೇಶ್‌, ಕಪ್ಪಣ್ಣ, ಶ್ರೀಕಾಂತ್‌ ಶೆಟ್ಟಿ, ಎಂ.ಬಿ.ರಾಜಶೇಖರ್‌, ನಾಗೇಶ್‌ ಮುಂತಾದವರು ವಾರ್ತಾಭವನದಲ್ಲಿ  ಅಧಿಕಾರಿಗಳಾಗಿದ್ದರು. ನಮ್ಮ ಇಲಾಖೆ ಒಂದು ರೀತಿಯಲ್ಲಿ ಪ್ರತಿಭೆಯ ಆಗರವಾಗಿತ್ತು. ಹೀಗಾಗಿ ನನಗೆ ಆ ಜಾಗ ತುಂಬಾ ಪ್ರಿಯವಾಗಿತ್ತು. ರಂಗಕರ್ಮಿಗಳೂ ಇದ್ದರು.  ಸಿಂಹ ಮುಂತಾದವರು ಸೇರಿ ಕಟ್ಟಿದ ‘ನಟರಂಗ’ ತಂಡ, ಮಾಸ್ತಿ ಅವರ ‘ಕಾಕನಕೋಟೆ’ ನಾಟಕವನ್ನು ಮಾಡಿತ್ತು. ಆ ತಂಡವನ್ನು ಚಂಡೀಗಡ, ಉತ್ತರ ಭಾರತದ ಕಡೆ  ಕರೆದುಕೊಂಡು ಹೋಗಿದ್ದೆ. ಇವೆಲ್ಲಾ ಜೀವಮಾನದ ಸುಂದರ ನೆನಪುಗಳು.

ಅಂದ ಹಾಗೆ ಈಗ ವಾರ್ತಾ ಭವನದ ಕಟ್ಟಡ ಬದಲಾಗಿದೆ. ನಾನು ಇದ್ದಾಗಿನ ಕಟ್ಟಡ ತೀರಾ ಸುಂದರವಾಗಿತ್ತು. 2003ರಲ್ಲಿ ಅದನ್ನು ಒಡೆದು ಬೇರೆ  ಕಟ್ಟಿಸಿದರು. ಅದೇನೂ ಶಿಥಿಲಾವಸ್ಥೆಯಲ್ಲಿ ಇರಲಿಲ್ಲ. ಚೆನ್ನಾಗಿಯೇ ಇತ್ತು. ಅದನ್ನು ಉಳಿಸಿಕೊಂಡು ಇನ್ನೊಂದು ಕಟ್ಟಡ ಕಟ್ಟಬಹುದಿತ್ತು. ಎಷ್ಟು ಸುಂದರವಾದ ಕಟ್ಟಡ ಅದಾಗಿತ್ತು. ನಾನು ಕುಳಿತುಕೊಳ್ಳುತ್ತಿದ್ದ ಚೇಂಬರ್‌ನಲ್ಲಿ ಪೀಟರ್‌ ಲೂಯಿಸ್‌ ಮಾಡಿದ ಉಬ್ಬುಚಿತ್ರ ಕೂಡ ಇತ್ತು. ಈಗ ಅವೆಲ್ಲವೂ ನೆನಪು ಮಾತ್ರ.

ಖನಿಜ ಭವನದ ಜ್ಞಾನ ದೇಗುಲ
ಈಗಿರುವ ಖನಿಜ ಭವನ ಕಟ್ಟಡ ಕೂಡ ಹೊಸದೇ. ಅಲ್ಲಿ ಕೂಡ ಹಿಂದೆ ಸುಂದರವಾದ ಕಟ್ಟಡವಿತ್ತು. ಅಲ್ಲಿ ನಡೆದು ಬರುವ ಹಾದಿಯ ಎರಡೂ ಬದಿಗೆ ಹಸಿರು ಮರಗಳು ಸ್ವಾಗತ ಕೋರುತ್ತಿದ್ದವು. ಅಲ್ಲಿಯ ಗ್ರಂಥಾಲಯದಲ್ಲಿಯೂ ಸಾಕಷ್ಟು ಹಳೆಯ ಪುಸ್ತಕಗಳಿವೆ. ನಾನು ಬಿಡುವಾದಾಗಲೆಲ್ಲಾ ಓದುತ್ತಿದ್ದೆ. ಈಗ ಗ್ರಂಥಾಲಯದಲ್ಲಿ ಯಾವುಯಾವುದೋ ಪುಸ್ತಕಗಳು ಎಲ್ಲೆಲ್ಲೋ ಬಿದ್ದಿವೆ. ನೋಡಿ ತುಂಬಾ ಬೇಸರವಾಯಿತು.

ಕಲೆ, ಸಂಸ್ಕೃತಿಯ ಬಗ್ಗೆಯೂ ಸಾಕಷ್ಟು ಒಲವಿದ್ದ ನಾನು ಸಾಹಿತ್ಯ ಓದುವ ಆಸೆಯಿಂದ ಕನ್ನಡವನ್ನೂ ಕಲಿತೆ. ಖನಿಜ ಭವನದಿಂದ ಭಾರತೀಯ ವಿದ್ಯಾಭವನ ಹತ್ತಿರ ಇದ್ದುದರಿಂದ ಅಲ್ಲಿ ನಡೆಯುತ್ತಿದ್ದ ಹೆಚ್ಚೂ–ಕಡಿಮೆ ಎಲ್ಲಾ ಸಾಹಿತ್ಯ ಸಾಂಸ್ಕೃತಿಕ, ಕಲಾ ಪ್ರದರ್ಶನಗಳಿಗೆ ಹಾಜರಿ ಹಾಕುತ್ತಿದ್ದೆ.

ಬಹುಮಹಡಿ ಕಟ್ಟಡದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ. ನನ್ನ ತಂದೆ ಕೂಡ ಕೃಷಿ ಇಲಾಖೆಯಲ್ಲಿ ಇದ್ದವರು. ಹಾಗಾಗಿ ಒಂಥರಾ ಖುಷಿ ಇತ್ತು ಆ ಕೆಲಸದಲ್ಲಿ. ಈಗ ವಿಕಾಸಸೌಧ ನಿರ್ಮಿಸಿದ್ದಾರಲ್ಲ, ಅಲ್ಲಿ ಒಂದು ಸರ್ಕಾರಿ ಪ್ರೆಸ್‌ ಇತ್ತು. ಅಲ್ಲೊಂದು ಕಮಾನು ಕೂಡ ಇತ್ತು. ಎಷ್ಟು ಸುಂದರವಾಗಿತ್ತು ಅದು ಗೊತ್ತಾ? ಕಾರಣವೇ ಇಲ್ಲದೆ ಅದನ್ನೂ ನೆಲಸಮ ಮಾಡಿದರು.

ನಗರದ ಸೌಂದರ್ಯಪ್ರಜ್ಞೆ ಇಲ್ಲಿ ಶೂನ್ಯ
ಬೆಂಗಳೂರಿಗೆ ಕಾಲಿಟ್ಟ ನನಗೆ ಇಲ್ಲಿನ ಪಾರಂಪರಿಕ ಕಟ್ಟಡಗಳು ತುಂಬಾ ಇಷ್ಟವಾಗಿದ್ದವು. ಮನಸ್ಸಿಗೆ ಮುದ ನೀಡುವ, ಕಣ್ಣುತಣಿಸುವ ಸೌಂದರ್ಯ ಹೊಂದಿದ್ದ ಅಂಥ ಕಟ್ಟಡಗಳು ಇಂದು ಕಣ್ಣಿಗೆ ಬೀಳುವುದೇ ಇಲ್ಲ.

ನನಗನಿಸುವ ಪ್ರಕಾರ ಇಲ್ಲಿನ ಸರ್ಕಾರಗಳು ಕಾಂಟ್ರಾಕ್ಟರ್‌ಗಳ ಪರವಾಗಿಯೇ ಎಲ್ಲ ಕೆಲಸಗಳನ್ನು ಮಾಡಿದಂತೆ ಕಾಣಿಸುತ್ತದೆ. ಸರ್ಕಾರಕ್ಕೆ ವಾಸ್ತು ಪರಂಪರೆಯ ಬಗ್ಗೆ ಇರುವ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತದೆ. ಇಲ್ಲವಾದಲ್ಲಿ ಸುಸ್ಥಿರಾವಸ್ಥೆಯಲ್ಲಿಯೇ ಇದ್ದ ಕಟ್ಟಡಗಳನ್ನು ಒಡೆದು ಹೊಸ ಕಟ್ಟಡಗಳು ತಲೆ ಎತ್ತುತ್ತಿರಲಿಲ್ಲ.

ಬೇರೆ ಬೇರೆ ದೇಶಗಳಲ್ಲಿಯೂ ನೆಲೆಸಿ ಬಂದಿದ್ದೇನೆ. ಅಲ್ಲೆಲ್ಲಾ ಮೂಲಸೌಕರ್ಯ ಸಾಮಾನ್ಯ ಜನರನ್ನು ಕೇಂದ್ರೀಕರಿಸಿವೆ ಹಾಗೂ ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ನಮ್ಮ ಬೆಂಗಳೂರು ಸುಸಂಸ್ಕೃತವಾಗಿತ್ತು. ಇಲ್ಲಿ ಪಬ್ಲಿಕ್‌ ಸ್ಪೇಸ್‌ ಹೆಚ್ಚಿತ್ತು. ಎಲ್ಲಾ ಕಡೆ ನಡೆದುಕೊಂಡೇ ಹೋಗಬಹುದಾಗಿತ್ತು. ಈಗ ಸೈಕಲ್‌ ಸವಾರರಿಗೆ, ಪಾದಚಾರಿಗಳಿಗಾಗಿ ಎಷ್ಟು ಜಾಗ ಮೀಸಲಿದೆ?
ಕಳೆದ 40–50 ವರ್ಷಗಳಿಂದ ವಾಹನಗಳ ದರ್ಬಾರೇ ಹೆಚ್ಚಾಗಿದೆ. ಇಲ್ಲಿಯ ಎಲ್ಲ ರಸ್ತೆಗಳು ಕೇವಲ ಕಾರು ಮುಂತಾದ ವಾಹನಗಳ ಓಡಾಟಕ್ಕೆ ಬೇಕಾದಂತೆ ಇವೆಯೇ ವಿನಾ, ಜನರ ಒಳಿತಿಗಾಗಿಯಾಗಲಿ, ನಗರದ ಸೌಂದರ್ಯದ ಬಗ್ಗೆಯಾಗಲಿ ಯಾವುದೇ ರೀತಿಯಲ್ಲಿ ಒತ್ತು ಕೊಟ್ಟಿಲ್ಲ ಎನಿಸುತ್ತದೆ.

ಷಾಪಿಂಗ್‌ ಎಂದರೆ ಪುಸ್ತಕ, ಸಂಗೀತ
ರಜೆ ಸಿಕ್ಕ ದಿನ ನಾನು ಮನೆಯಲ್ಲೇ ಇರುತ್ತಿದ್ದೆ. ಕುಟುಂಬದವರೊಂದಿಗೆ ಕಳೆಯಲು ಸಿಗುವುದು ಅದೊಂದೇ ದಿನವಾಗಿತ್ತು. ನನ್ನ ಮಕ್ಕಳು ಹೆಚ್ಚು ಇಷ್ಟಪಡುತ್ತಿದ್ದುದು ಬಾಲಭವನ. ನನ್ನ ಪತ್ನಿ ಅವರನ್ನು ಅಲ್ಲಿ ಕರೆದುಕೊಂಡು ಹೋಗುತ್ತಿದ್ದಳು. ಮೊದಲಿನಿಂದಲೂ ಪುಸ್ತಕದ ಬಗ್ಗೆ ಒಲವಿದ್ದ ನಾನು ಪ್ರೀಮಿಯರ್‌ ಬುಕ್‌ ಶಾಪ್‌, ಹಿಗ್ಗಿನ್‌ ಬಾಥಮ್ಸ್‌, ಗಂಗಾರಾಮ್‌ಗಳಲ್ಲಿ ಪುಸ್ತಕ ಖರೀದಿಸುತ್ತಿದ್ದೆ. ಬ್ರಿಗೇಡ್‌ ರಸ್ತೆಯಲ್ಲಿ ದೊಡ್ಡ ಎಚ್‌.ಎಂ.ವಿ. ಷೋರೂಂ ಇತ್ತು. ಸಂಗೀತಕ್ಕೆ ಸಂಬಂಧಿಸಿದ್ದೇನಾದರೂ ಬೇಕಿದ್ದರೆ ಅಲ್ಲಿ ಬರುತ್ತಿದ್ದೆ.

ಬೆಂಗಳೂರಿನಲ್ಲಿ ನಾನು ವಾಸವಾಗಿದ್ದ ಮೊದಲ ಬಾಡಿಗೆ ಮನೆ ಇದ್ದದ್ದು ಇಂಡಿಯಾ ಗ್ಯಾರೇಜ್‌ ಹಿಂಭಾಗದಲ್ಲಿ. ಎದುರುಗಡೆ ಇದ್ದ ಕೋಶಿಸ್‌ ರೆಸ್ಟೊರೆಂಟ್‌ನಲ್ಲಿ ರಾತ್ರಿ ಊಟ ಮಾಡುತ್ತಿದ್ದೆ.

ಪಕ್ಕದಲ್ಲಿ ಪಟ್ಟಾಭಿರಾಮ ರೆಡ್ಡಿ ಅವರ ಮನೆಯೂ ಇತ್ತು. ಅವರೊಂದಿಗೆ ಹರಟುವುದು ತುಂಬ ಖುಷಿ ಕೊಡುತ್ತಿತ್ತು. ಅಲ್ಲಿ ಅನಂತ್‌ನಾಗ್‌ ಮುಂತಾದವರು ಬರುತ್ತಿದ್ದರು. ನಂತರ ನಾನು ಇಂದಿರಾನಗರದಲ್ಲಿ ಮನೆ ಮಾಡಿದೆ. ಗೆಳೆಯರೆಲ್ಲಾ, ಆ ಕಾಡಿಗೆ ಯಾಕೆ ಹೋಗುತ್ತೀಯಾ ಎನ್ನುತ್ತಿದ್ದರು. ಅಲ್ಲಿ ಆವಾಗ ಒಂದು ಟೆಲಿಫೋನ್‌ ಲೈನ್‌ ಕೂಡ ಇರಲಿಲ್ಲ. ಈಗ ಗುರುತೇ ಸಿಗದಷ್ಟು ಬದಲಾಗಿದೆ ಇಂದಿರಾನಗರ.

ಚಿರಂಜೀವ್ ಸಿಂಗ್ ಕುರಿತು...
1969ರಲ್ಲಿ ಐಎಎಸ್‌ ಮುಗಿಸಿ ಕರ್ನಾಟಕಕ್ಕೆ ಬಂದ ಚಿರಂಜೀವ್‌ ಸಿಂಗ್‌ ರಾಜ್ಯದ ವಿವಿಧೆಡೆ ಕೆಲಸ ಮಾಡಿದ್ದಾರೆ. ಡಿ. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿ, 1975ರಲ್ಲಿ ವಾರ್ತಾ ಇಲಾಖೆಯಲ್ಲಿ ನಿರ್ದೇಶಕರಾಗಿ, ಎರಡು ಬಾರಿ ಅಲ್ಲಿಯೇ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

ಖನಿಜ ಭವನ, ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದ ಅವರು 2015ರಲ್ಲಿ ಫ್ರಾನ್ಸ್‌ ರಾಷ್ಟ್ರಪತಿ ನೀಡುವ ಶಿವಾಲಯೆ (knighthood) ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪ್ಯಾರಿಸ್‌ನಲ್ಲಿ ಯುನೆಸ್ಕೊ ರಾಯಭಾರಿಯಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿರುವ ಅವರು 2005ರಲ್ಲಿ ನಿವೃತ್ತರಾಗಿದ್ದಾರೆ. ಕರ್ನಾಟಕಕ್ಕೆ ಬಂದ ಮೇಲೆ ಕನ್ನಡ ಭಾಷೆ ಕಲಿತು  ಸಾಹಿತ್ಯವನ್ನೂ ಅಭ್ಯಸಿಸಿರುವ ಸಿಂಗ್‌ ಅವರು, ಕವಿ ದ.ರಾ. ಬೇಂದ್ರೆ ಕಾವ್ಯಗಳ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT