ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಮ್ಮನ ನಿಲುವು ಮುಟ್ಟಿನ ಅಧ್ಯಾತ್ಮ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಶರಣ ಚಳವಳಿಯು ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದ ಚಳವಳಿ. ಜಾತಿ ತಾರತಮ್ಯವನ್ನಷ್ಟೇ ಅಲ್ಲದೇ ಲಿಂಗತಾರತಮ್ಯದ ವಿರುದ್ಧವಾಗಿಯೂ ಹೋರಾಡಿದ ನಡೆ ಅದರದು. ಬಹಳ ಜನ ವಚನಕಾರರಲ್ಲಿ ಸ್ತ್ರೀ ಪುರುಷರ ಭೇದವನ್ನು ಕುರಿತಂತೆ ಪ್ರತಿಕ್ರಿಯಾತ್ಮಕ ರಚನೆಗಳವೆ.

ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಿರಿಯ ವಚನಕಾರ ಜೇಡರ ದಾಸಿಮಯ್ಯ ರಚನೆ. ಮೊಲೆ ಮೂಡಿ ಬಂದಡೆ ಹೆಣ್ಣೆಂಬರು/ ಗಡ್ಡ ಮೀಸೆ ಬಂದಡೆ ಗಂಡೆಂಬರು/ ನಡುವೆ ಸುಳಿವ ಆತ್ಮನು/ ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ ರಾಮನಾಥ.

ದೇಹ ಪ್ರಕೃತಿಯ ಭಿನ್ನತೆಯ ನೆಲೆಯಲ್ಲಿ ಗಂಡು ಹೆಣ್ಣಿನ ವ್ಯತ್ಯಾಸವನ್ನು ಗುರುತಿಸುತ್ತ ದೇಹದೊಳಗಿನ ಜೀವ-ಮನಸ್ಸು-ಪ್ರಾಣ-ಆತ್ಮ ಈ ಬಗೆಯಲ್ಲಿ ಕರೆಯುವ ಚೇತನಕ್ಕೆ ಯಾವುದೇ ಬಗೆಯ ಭಿನ್ನತೆ ಇಲ್ಲ ಎಂದು ಹೇಳುತ್ತಿದ್ದಾನೆ ದಾಸಿಮಯ್ಯ.

ಈ ವಚನ ಲಿಂಗತಾರತಮ್ಯದ ವಿರುದ್ಧವಾಗಿ ಒಂದು ಗಟ್ಟಿ ನಿಲುವಿನ ತಾತ್ವಿಕತೆಯನ್ನು ಪ್ರತಿಪಾದಿಸುತ್ತಿದೆ. ಈ ತಾತ್ವಿಕತೆ ನಿಸರ್ಗ ಧರ್ಮದಲ್ಲಿ ಜೀವ ಸೃಷ್ಟಿಗೆ ಅಗತ್ಯವಾದ ಪುರುಷ-ಪ್ರಕೃತಿ ತತ್ವವನ್ನು ಹೇಳುವುದೇ ಆಗಿದೆ. ಪ್ರಕೃತಿ ಪುರುಷರ ಸಂಗದಲ್ಲಿ ಮಾತ್ರ ಸೃಷ್ಟಿ ಸಾಧ್ಯ: ಇದು ಜೀವ ಸೃಷ್ಟಿಗೆ ಕಾರಣ­ವಾಗುವ ಜೈವಿಕತೆಯ ಗುಣಧರ್ಮ.

ಭಿನ್ನತೆಯಲ್ಲಿ ಸಂಗಗೊಳ್ಳುವ ಅರ್ಥಾತ್ ಸಂಲಗ್ನಗೊಳ್ಳುವ ಈ ಬಗೆ ಜಂಗಮತ್ವಕ್ಕೆ ಪೂರಕವೂ ಪ್ರೇರಕವೂ ಆದ ಒಳಗೊಳ್ಳುವ ತಾತ್ವಿಕತೆಯನ್ನು ಹೇಳು­ತ್ತಿದೆ. ಹೀಗೆ ಒಳಗೊಳ್ಳುವುದೆಂದರೆ ದ್ವಯ-ಅದ್ವಯವಾಗುವ, ಅದ್ವಯ-ದ್ವಯವಾಗುವ ಕ್ರಿಯೆ. ಇದು ನಿಂತ ಸ್ಥಾವರದ ಇರುವಿಕೆಯಲ್ಲ, ನಿರಂತರ­ವಾದ ಜಂಗಮದ ಹರಿಯುವಿಕೆ.

ಆತ್ಮವಾದಿ ಅಂಶವನ್ನು ಒಪ್ಪಿಕೊಂಡ ಭಾವದ ಅಂದರೆ ಪುನರ್ಜನ್ಮ ಕರ್ಮ ಸಿದ್ಧಾಂತ ಇಂಥ ಅವಿಚಾರಿತ ಅಂಶ­ಗಳನ್ನು ಒಪ್ಪಿಕೊಂಡ ಭಾವದ ಆಲೋಚನೆ­ಯಲ್ಲ ಇದು. ಆತ್ಮದ ಸಂಬೋಧನೆ ಅಷ್ಟೆ. ಇದರ ಸ್ಪಷ್ಟ ಅರಿವಿಗೆ ವಚನಕಾರ್ತಿ ಅಕ್ಕಮ್ಮನ ವಚನ­ವೊಂದನ್ನು ಗಮನಿಸಬಹುದು...

ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ/ಗರ್ಭವೆಂಬುದು ತಲೆ­ದೂರಿದಲ್ಲಿಯೇ ಆತ್ಮಚೇತನನೆನಿಸಿವನ್ನಕ್ಕ/ ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು.
ನವಮಾಸ ತುಂಬಿ ಆಕೆಯ ಗರ್ಭದಿಂದ/ ಉಭಯಜಾತತ್ವವಾಗಲಾಗಿ ಚೇತನ ಬೇರಾದಲ್ಲಿ ಗುರು ಕರಜಾತನ ಮಾಡಬೇಕು.

ಗರ್ಭವೆಂಬುದು ತಲೆದೋರಿದ ಮೇಲೆ ಅಂಥ ಹೆಣ್ಣಿನ ಸಂಗ ಮಾಡುವಂತಿಲ್ಲ. ಏಕೆಂದರೆ ಪಿಂಡವೆಂಬುವುದು ಆತ್ಮಚೇತನವೆನಿಸುವನ್ನಕ್ಕ ಆ ಉದರ ನಿಹಿತಲಿಂಗದ ಗರ್ಭ.  ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯ ಜಾತತ್ವ­ವಾಗುವವರೆಗೆ ಅದು ಜೀವದೇವನ ನೆಲೆವಾಸ.

ಇದು ಪಿಂಡದ ನೆಲಗಂಡ ಕಾಯವನ್ನು ಪವಿತ್ರತರ ಭಾವದಲ್ಲಿ ಕಾಣುವ ಗೌರವಿಸುವ ದೃಷ್ಟಿ. ಇಲ್ಲಿ ಉಭಯಜಾತ ಎಂಬುದು ತಾಯಿ-ಮಗು ಇಬ್ಬರಿಗೂ ಅದು  ಹೊಸಹುಟ್ಟಿನ ಪರೀಕ್ಷೆಯೇ. ಒಡಲೊಳಗಿನ ಚೇತನ ಮೂಲ ಚೇತನವನ್ನು ಬಿಟ್ಟು ಬೇರಾದಾಗ ಚೇತನವನ್ನು ಗುರು­ಕರಜಾತವಾಗಿಸ­ಬೇಕು.

ಅಂದರೆ ಗುರುವಿನ ಕರ­ಸೋಂಕಿನಲ್ಲಿ ಹೊಸಹುಟ್ಟು ಪಡೆದ­ವನನ್ನಾಗಿಸ­ಬೇಕು. ಗುರುಕರಜಾತ ಎಂಬ ಆಚರಣೆಯೇ ಮುಟ್ಟಿನಿಂದ ಸ್ಪರ್ಶದಿಂದ ಪವಿತ್ರೀಕರಣ ಪ್ರಕ್ರಿಯೆಯನ್ನು ಹೇಳುತ್ತಿದೆ, ಇದು ಮುಟ್ಟಿನ ಅಧ್ಯಾತ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT