ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುವನಂತಪುರದ ಗೋಪಿಕಾಗೆ 11 ಚಿನ್ನದ ಪದಕ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಪ್ಪು ವರ್ಣದ ಗೌನ್‌ ಧರಿಸಿದ್ದ ವಿದ್ಯಾರ್ಥಿಗಳಲ್ಲಿ ವರ್ಷಗಳ ಪರಿಶ್ರಮಕ್ಕೆ ಫಲ ಸಿಕ್ಕ ಖುಷಿಯ ಛಾಯೆ ಇಣುಕುತ್ತಿತ್ತು. ಅತ್ಯುತ್ತಮ ಸಾಧನೆ ತೋರಿದವರ ಕೊರಳಿಗೇರಿದ ಚಿನ್ನದ ಪದಕಗಳ ಮಾಲೆಗಳು. ಮಕ್ಕಳ ಸಾಧನೆ ಕಂಡು ಹೆಮ್ಮೆ ಪಟ್ಟ ಪೋಷಕರು.

ಇವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಕಾನೂನು ಶಾಲೆಯ 24ನೇ ಘಟಿಕೋತ್ಸವ’ದಲ್ಲಿ ಕಂಡುಬಂದ ದೃಶ್ಯಗಳು.
ಬಿಎ, ಎಲ್‌ಎಲ್‌ಬಿ (ಆನರ್ಸ್‌) ಪದವಿಯಲ್ಲಿ ಕೇರಳದ ತಿರುವನಂತಪುರದ ಗೋಪಿಕಾ ಮೂರ್ತಿ 11 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಚಿನ್ನದ ಹುಡುಗಿ ಎಂಬ ಕೀರ್ತಿಗೆ ಭಾಜನರಾದರು.

‘ಕಾನೂನು ನನ್ನ ಅಚ್ಚುಮೆಚ್ಚಿನ ವಿಷಯಗಳಲ್ಲಿ ಒಂದು. ಎಂಜಿನಿಯರಿಂಗ್‌ಗೆ ಸೇರಿ ಎರಡು ವಾರಗಳಲ್ಲೇ ಬಿಟ್ಟು ಬಂದೆ. ಬಳಿಕ ಕಾನೂನು ಪದವಿ ಮಾಡಬೇಕೆಂದು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಿದೆ. ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪ್ರವೇಶ ಪಡೆದೆ. ತರಗತಿಗಳಲ್ಲಿ ಮಾಡಿದ ಪಾಠಗಳನ್ನು ಶ್ರದ್ಧೆಯಿಂದ ಆಲಿಸುತ್ತಿದ್ದೆ. ಹಾಸ್ಟೆಲ್‌ಗೆ ಬಂದು ಮತ್ತೆ ಓದುತ್ತಿದ್ದೆ’ ಎಂದು ಗೋಪಿಕಾ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಲಂಡನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿಗೆ ಪ್ರವೇಶ ಸಿಕ್ಕಿದೆ. ಇದಕ್ಕಾಗಿ ವಿದ್ಯಾರ್ಥಿ ವೇತನ ದೊರೆತಿದೆ. ವ್ಯವಹಾರ ಕಾನೂನು ವಿಷಯದಲ್ಲಿ ಹೆಚ್ಚಿನ ಆಸಕ್ತಿ ಇದೆ. ಜನರ ಸಮಸ್ಯೆಗಳಿಗೆ  ಪರಿಹಾರಗಳನ್ನು ಹುಡುಕುವ ಕಡೆಗೂ ಗಮನ ಕೇಂದ್ರೀಕರಿಸಿದ್ದೇನೆ’ ಎಂದರು.

ಗೋಪಿಕಾ ಸಾಧನೆಯ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಅವರ ತಂದೆ ಪಿ.ಆರ್‌.ಮೂರ್ತಿ, ತಾಯಿ ಎಸ್‌.ಲಕ್ಷ್ಮಿ, ಅಜ್ಜಿ ತಂಗಂ ಅವರ ಮೊಗದಲ್ಲಿ ಸಾರ್ಥಕದ ಭಾವ ಮನೆಮಾಡಿತ್ತು. ಪಿ.ಆರ್‌.ಮೂರ್ತಿ ಅವರು ತಿರುವನಂತಪುರದ ಬಿಎಸ್‌ಎನ್‌ಎಲ್‌ನ ಎಜಿಎಂ ಆಗಿದ್ದಾರೆ. ಎಸ್‌.ಲಕ್ಷ್ಮಿ ಅವರು ಆ್ಯಪ್‌ ಟೆಕ್‌ ಏವಿಯೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೂರು ಚಿನ್ನದ ಪದಕ ಪಡೆದ ಶ್ರೇಯಾ ಪ್ರಕಾಶ್‌ ಮಾತನಾಡಿ, ‘ಚಿಕ್ಕಂದಿನಿಂದಲೂ ವಕೀಲೆ ಆಗಬೇಕೆಂಬ ಕನಸಿತ್ತು. ಮನೆಯಲ್ಲಿ ಪೋಷಕರು ಕಾನೂನು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಇದು ನನಗೆ ತುಂಬ ಉಪಯೋಗಕ್ಕೆ ಬಂತು. ದೆಹಲಿಯ ಲೀಗಲ್‌ ಪಾಲಿಸಿ ಸೆಂಟರ್‌ನಲ್ಲಿ ಕೆಲಸ ಸಿಕ್ಕಿದೆ’ ಎಂದರು.
ಮೂರು ಚಿನ್ನದ ಪದಕ ಪಡೆದ ಮತ್ತೊಬ್ಬ ವಿದ್ಯಾರ್ಥಿನಿ ಚೆನ್ನೈನ ದೀಕ್ಷಿತಾ ಅವರು, ‘ಐದು ವರ್ಷಗಳ ಶ್ರಮಕ್ಕೆ ಸಿಕ್ಕ ಪ್ರತಿಫಲವಿದು. ತಂದೆ ತಾಯಿಗಳ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂಬೈನ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರುವ ಉದ್ದೇಶವಿದೆ’ ಎಂದು ಹೇಳಿದರು.

62 ವರ್ಷದ ಸುಬ್ರತೋ ಬಿಸ್ವಾಸ್‌ ಅವರು ದೂರಶಿಕ್ಷಣದ ಮೂಲಕ ವ್ಯವಹಾರ ಕಾನೂನಿನಲ್ಲಿ ಸ್ನಾತಕೊತ್ತರ ಪದವಿ (ಎಂಬಿಎಲ್‌) ಪಡೆದಿದ್ದಾರೆ. ಅಲ್ಲದೆ, ಅರ್ಥಶಾಸ್ತ್ರದಲ್ಲಿ ಎಂಎ, ಎಂಬಿಎ ಸೇರಿದಂತೆ ಹಲವು ಪದವಿ, ಡಿಪ್ಲೊಮಾ ಪದವಿಗಳನ್ನು ಪಡೆದಿದ್ದಾರೆ.
ಚಿನ್ನದ ಪದಕ ಪಡೆದವರು: ಅಶ್ವಿನಿ ವೈದ್ಯಲಿಂಗಂ ಐದು ಚಿನ್ನದ ಪದಕ, ಸೋನಾಕ್ಷಿ ಸಿನ್ಹಾ ಮೂರು, ರಿತಿಕಾ ಸಿನ್ಹಾ ಎರಡು, ರಘುವೀರ್‌ ಸಿಂಗ್‌ ಮೀನಾ ಎರಡು, ಕೌಸ್ತವ್‌ ಸಹಾ ಎರಡು ಚಿನ್ನದ ಪದಕ ಗಳಿಸಿದ್ದಾರೆ. 571 ವಿದ್ಯಾರ್ಥಿ ಗಳಿಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌ ಪದವಿ ಪ್ರದಾನ ಮಾಡಿದರು.

ಲಂಚ ನಿರಾಕರಿಸುವ ಧೈರ್ಯ ತೋರಲಿ

‘ಲಂಚ ನಿರಾಕರಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು’ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸಲಹೆ ನೀಡಿದರು.
ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಭ್ರಷ್ಟಾಚಾರ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ  ಕೆಲಸಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಬೇಕು. ಇದರಿಂದ ಸಮಾಜ ವಿರೋಧಿಗಳನ್ನು ಮಟ್ಟ ಹಾಕಬಹುದು’ ಎಂದರು.

‘2014ನೇ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಸರ್ಕಾರವನ್ನು ಜನರು ಆಯ್ಕೆ ಮಾಡಿದರು. ಇದು ನಮ್ಮ ದೇಶದ ಮತದಾರರು ಎಷ್ಟು ಪ್ರಜ್ಞಾವಂತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ಮತದಾನ ಮಾಡುವುದು ಎಷ್ಟು ಮುಖ್ಯವೋ, ಅದೇ ರೀತಿ ದೇಶದ ಎಲ್ಲಾ ವಿಚಾರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.

‘ನಮ್ಮ ದೇಶದ ನ್ಯಾಯಾಂಗವು ತುಂಬಾ ಬಲಿಷ್ಠವಾಗಿದೆ. ಹಾಗಾಗಿಯೇ ಜನಸಾಮಾನ್ಯರು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದಾರೆ.
ಅನ್ಯಾಯಕ್ಕೆ ಒಳಗಾದವರಿಗೆ  ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ. ದುರ್ಬಲರು, ಅನ್ಯಾಯಕ್ಕೆ ಒಳಗಾದವರು, ಸಂತ್ರಸ್ತರು ನ್ಯಾಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT