ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನವೇ ಮಾತಾದಾಗ!

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನಮ್ಮ ಸಂವಹನವೆಲ್ಲವೂ ಮಾತು ಕೇಂದ್ರಿತ, ಮೌನದ ಮಹತ್ತ್ವವನ್ನು ತಿಳಿಯ ಹೇಳಲೂ ಮಾತಿನ ಬಳಕೆಯನ್ನೇ ಮಾಡಬೇಕಾಗುತ್ತದೆ.

ಆದರೆ ನಿರಂತರದ ಮಾತು ಕೇಳಲೂ ಆಯಾಸ. ಅದಕ್ಕಾಗಿ ಮಾತಿನ ನಡುವೆ ಮೌನ ಇಣುಕು ಹಾಕಬೇಕಾಗುತ್ತದೆ. ಇಂಗ್ಲಿಷಿನಲ್ಲಿ ಇದಕ್ಕೆ ಪಾಸ್‌ (PAUSE)  ಎಂದು ಹೇಳಲಾಗುತ್ತದೆ. ಐದು ಅಕ್ಷರದ ಈ ಪದವನ್ನೇ ಆದ್ಯಕ್ಷರಪದ (acronym)  ಮಾಡಿ ಹೇಳಬಹುದಾದರೆ,

P= Pace check - (ವೇಗ ನಿಯಂತ್ರಣ)
A= assimilation (ಮೈಗೂಡಿಸಿಕೊಳ್ಳುವಿಕೆ)
U=Useful thinking  (ಉಪಯುಕ್ತ ಚಿಂತನೆ)
S= Stimules  (ಪ್ರಚೋದನೆ)
E= Experiencing  (ಅನುಭವಿಸುವಿಕೆ)

ಈಗ ಇದನ್ನು ವಿಸ್ತಾರವಾಗಿ ತಿಳಿಯೋಣ.
ವೇಗವು ಅಪಘಾತಕ್ಕೆ ಎಡೆ ಮಾಡಿಕೊಡುತ್ತದೆ.  ಅಪಘಾತ ತಗ್ಗಿಸಲು – ನಿಧಾನವಾಗಿ/ ನಿಯತವೇಗದಲ್ಲಿ ಸಾಗಲು ಸೂಚನೆ ನೀಡಲಾಗುತ್ತದೆ. ಇಲ್ಲವೆ ವೇಗ ನಿಯಂತ್ರಗಳನ್ನು (ರಸ್ತೆ ಉಬ್ಬುಗಳನ್ನು) ರಚಿಸಲಾಗುತ್ತದೆ. ಹಗಲಿನ ದುಡಿಮೆಯ ದಕ್ಷತೆ ಹೆಚ್ಚಿಸಲು ರಾತ್ರಿಯ ಬಿಡುವು ನಿಸರ್ಗವೇ ನೀಡಿರುವ ವರದಾನ. ಹೀಗಾಗಿ ರಾತ್ರಿಯ ಬಿಡುವು ಕಾಲಹರಣ ಆಗಲಾರದು. ಹಾಗೆಯೇ ಮಾತಿನ ಮಧ್ಯೆ ವಹಿಸುವ ಮೌನ ಹಿಂದಿನ ಮಾತುಗಳನ್ನು ಸ್ಪಷ್ಟ ಮಾಡಿಕೊಳ್ಳಲು ಮುಂದಿನ ಮಾತುಗಳಿಗೆ ಲಕ್ಷ್ಯ ವಹಿಸಲು ಮಾಡಿಕೊಳ್ಳುವ ಸಿದ್ಧತೆಗೆ ಸದವಕಾಶ.

ಬೋಧಕರು ಮಾತಿನ ನಿರರ್ಗಳತೆ ಪ್ರದರ್ಶಿಸ ಹೋದರೆ ಕೇಳುಗರು ತಮ್ಮ ಗ್ರಹಿಕೆಯ ವೇಗಕ್ಕೂ ಬೋಧಕರ ನಿರೂಪಣಾ ವೇಗಕ್ಕೂ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಹೆಣಗುತ್ತಿರುತ್ತಾರೆ. ಆದ್ದರಿಂದ ಆಗಿಂದಾಗ್ಗೆ ಕೊಂಚ ಬಿಡುವು ಈ ಸಮಸ್ಯೆಗೆ ಪರಿವಾರವಾದೀತು.
ಶಬ್ದಗಳನ್ನು ಹೇಳುವಾಗ, ಬರೆಯುವಾಗ ಅಕ್ಷರಗಳ ನಡುವೆ ಬಿಡುವು, ಪದಗಳ ನಡುವೆ ಬಿಡುವು, ವಾಕ್ಯ–ಕಂಡಿಕೆಗಳ ನಡುವೆ ಬಿಡುವು ಇರುವುದನ್ನು ಗಮನಿಸಿದರೆ ಮಾತಿನ ನಡುವೆ ಮೌನ ತೀರಾ ಸಹಜವಾದದ್ದು ಎನಿಸದೇ?

ಕೆಲವೊಮ್ಮೆ, ಮಾತಿನ ಕ್ರಮವಾಗಿ ರೂಢಿಯಿಂದ ವಹಿಸುವ ಮೌನವೇ ಅಲ್ಲದೆ, ಉದ್ದೇಶ ಪೂರ್ವಕ ಮೌನವಹಿಸುವುದೂ ಉಂಟು. ಆ ಮೌನವು ಪ್ರಶ್ನಾರ್ಥಕ ಚಿಹ್ನೆಯೋ, ಭಾವಸೂಚಕ ಚಿಹ್ನೆಯೋ, ಅಂಗಭಂಗಿಯನ್ನು ಗಮನಿಸಲು ಅವಕಾಶವನ್ನು ಕಲ್ಪಿಸುವುದೋ ಆಗಿರಬಹುದು.

ಊಟವನ್ನು ಗಮನಿಸಿ ಮೊದಲ ತುತ್ತು ಬಾಯಿಗೆ ಹೋದ ಮೇಲೆ ಕೈಗೆ ಕೊಂಚ ‘PAUSE’! ಏಕೆಂದರೆ ತಿಂದ ತುತ್ತನ್ನು ಚೆನ್ನಾಗಿ ಅಗಿದು ಚೂರು ಮಾಡಿ, ಅದಕ್ಕೆ ಜೊಲ್ಲು ಬೆರೆಸಿದಾಗಲೇ ಅದು ಸರಾಗವಾಗಿ ನುಂಗಲು ಮೈಗೂಡಿಸಿಕೊಳ್ಳಲು ಉಪಯುಕ್ತವಾಗಿದ್ದೀತು – ಇಲ್ಲವಾದರೆ ನೆತ್ತಿ ಹತ್ತುತ್ತದೆ. ಅಥವಾ ಗಬಗಬನೆ ನುಂಗಿದ ಪರಿಣಾಮವಾಗಿ ಅಜೀರ್ಣಕ್ಕೆ ಎಡೆ ಮಾಡಿಕೊಡುತ್ತದೆ.

ಮನೆ ಕಟ್ಟಲು ತಂದ ಇಟ್ಟಿಗೆಯನ್ನು ಗೋಡೆ ಕಟ್ಟುವವರೆಗೆ ಜೋಡಿಸಿಡ ಬೇಡವೆ? ಹಾಗೆ ಜೋಡಿಸಲು ಸಮಯ ಬೇಡವೇ? ಅಂತೆಯೇ ವಿದ್ಯುತ್‌ ಹಾಯಿಸಿ ಲೋಹಲೇಪನ ಬೇಗ ಆಗಲೆಂದು ಅಧಿಕ ಕರೆಂಟು ಹಾಯಿಸಿದರೆ ವಿದ್ಯುಲ್ಲೇಪನ ನಯವಾಗಿ ಆಗುವುದೇ ಇಲ್ಲ.

ನೀರಸ ವಾಕ್ಯವನ್ನು ಸ್ವಾರಸ್ಯಕರವಾಗಿಸಿಕೊಳ್ಳಲು ಇರುವ ಮಾರ್ಗವೆಂದರೆ ಸ್ವಾನುಭವದೊಂದಿಗೆ, ಈಗಾಗಲೇ ಕಲಿತಿರುವ ಮಾಹಿತಿಯೊಂದಿಗೆ ತಾಳೆ ನೋಡಿಕೊಳ್ಳಬೇಕಾದ ಅಗತ್ಯ ಇರುತ್ತದೆ. ಹಾಗೆ ತಾಳೆ ನೋಡುತ್ತಾ ಇರುವಾಗಲೇ ಉಪನ್ಯಾಸಕರು ತಮ್ಮ ನಿರೂಪಣೆಯಲ್ಲಿ ಮುಂದೆ ಸಾಗಿಬಿಟ್ಟರೆ ಸಂವಹನ ಅಲ್ಲಲ್ಲೇ ಕಡಿತಕ್ಕೊಳಗಾಗುತ್ತದೆ. ಅಥವಾ ಜೋಡಣೆಯ ಏರುಪೇರು ಗೋಜಲಿಗೆ ಎಡೆ ಮಾಡಿಕೊಡುತ್ತದೆ.

ಮೌನವು ಕಲಿತದ್ದನ್ನು ವ್ಯವಸ್ಥಿತವಾಗಿಕಲೆ ಹಾಕಲು ಹೇಗೆ ಉಪಯುಕ್ತವೋ ಹಾಗೆಯೇ ಆಲೋಚನೆಗೆ ಪ್ರಚೋದನೆ ಕೂಡ. ‘ನಿನ್ನದೇನಾದರೂ ಪ್ರತಿಕ್ರಿಯೆ ಉಂಟೇ’ ಎಂಬ ಪ್ರಶ್ನೆಯನ್ನು ಈ ಮೌನವೇ ಹಾಕುತ್ತದೆ!

ಸಂಗೀತದ ‘ಟೆಂಪೋ’ ಹೇಗೆ ಏರಿಳಿತವಾಗುತ್ತಾ ವಿವಿಧ ರಾಗ/ ಭಾವಗಳನ್ನು ಮೂಡಿಸಬಲ್ಲದೋ ಹಾಗೆಯೇ ನಿರೂಪಣೆಯ ಏರಿಳಿತಗಳು ಹೊಸದೊಂದು ಭಾವಾಭಿನಯವನ್ನೇ ಉಂಟು ಮಾಡಬಲ್ಲವು. ಕಾರ್ಟೂನ್‌ ಚಿತ್ರದಲ್ಲಿ ಚಲನೆಯೇ ಒಂದು ಭಾಷೆ/ ಅಭಿವ್ಯಕ್ತ. ಚಲನೆಯ ಏರುಪೇರು ಆ ಪಾತ್ರದ ಅಂತರಂಗದ ಅರಿವಿಗೆ ಕೀಲಿ ಕೈ ಕೂಡ!

ಆಗಿಂದಾಗ್ಗೆ ವಹಿಸುವ ಮೌನ  ಅರಿವಿನ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ಅತಿ ಮಾತು ಮನೆಯನ್ನೂ ಮನವನ್ನೂ ಕೆಡಿಸೀತು. ಆದರೆ ಮಾತಿನ ನಡುವಣ ಮೌನವು ಹಿತವನ್ನೂ, ಅರ್ಥ ಪೂರ್ಣತೆಯನ್ನೂ ಒದಗಿಸೀತು. ಮೌನವೆಂಬುದು ಮುಂದೇನು ಹೇಳಬೇಕೆಂಬುದು ತೋಚದೆ ಸುಮ್ಮನಾಗುವುದಲ್ಲ. ಬದಲಾಗಿ ಉದ್ದೇಶಪೂರ್ವಕವಾಗಿ ಆಯ್ದ ತಾಣಗಳಲ್ಲಿ ಸೂಚಿಸುವ ವಿಶ್ರಾಂತಿ ಧಾಮ! ಆದರೂ ಮೌನದ ಅವಧಿ ಅತಿ ಕಡಿಮೆ ಇಲ್ಲವೆ ಅತಿ ಹೆಚ್ಚು ಆದಾಗ ಮೂಲ ಉದ್ದೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲದು!

ಅನುಕೂಲಗಳು
1. ಮೌನವೂ ಒಂದು ಭಾಷೆ
2. ಮೌನವು ವೇಗದ ಕಡಿವಾಣ
3.ಕೇಳುಗರೊಂದಿಗೆ ಸಮತೋಲನ ಸಾಧಿಸಕೊಳ್ಳಲು ಸದವಕಾಶ.
4. ಸಂವಹನದ ದಕ್ಷತೆಯ ಹೆಚ್ಚಳ.

ತೊಂದರೆಗಳು
ಎ. ಕೇಳುಗರು ಇದನ್ನು ಉಪನ್ಯಾಸಕರ ದೌರ್ಬಲ್ಯ ಎಂದು ಭಾವಿಸಬಹುದು.
ಬಿ. ಲಕ್ಷ್ಯವು ಬೇರೆ ಕಡೆಗೆ ಹೋಗಲು ಮೌನ ಅನುವು ಮಾಡಿಕೊಡಬಹುದು.
ಸಿ. ಸಭಾಸದರು (ಕೇಳುಗರು)  ಪರಸ್ಪರ ಮಾತಿಗೆ ತೊಡಗಬಹುದು.

ತೊಂದರೆಯಿಲ್ಲದೆ ಕೇವಲ ಪ್ರಯೋಜನಕಾರಿಯಾದ ಯಾವುದೇ ನೀತಿಯಿರುವಂತೆ ತೋರುವುದಿಲ್ಲ. ವ್ಯವಸ್ಥಿತ ಮೌನವೂ ಇದಕ್ಕೆ ಹೊರತಲ್ಲ.

ತೊಂದರೆಯನ್ನು ಮುನ್ನೆಚ್ಚರಿಕೆಯೆಂದು ಭಾವಿಸಿ ಹಾಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಜಾಣತನ. ಹಾಗೆ ನೋಡಿದರೆ ತೊಂದರೆಗಳು ಉತ್ಪ್ರೇಕ್ಷಿತ. ನಿಮ್ಮ ಕೇಳುಗರು ಮೌನದ ಪರಿಭಾಷೆಗೆ ಒಗ್ಗಿಕೊಂಡಿರುವರಾದ ಕಾರಣ ನಿಮ್ಮ ವಿವೇಚನೆಯ, ಪೂರ್ವ ಲೆಕ್ಕಾಚಾರದ ಮೌನವನ್ನು ಬಹಳ ಮಂದಿ ಸದುಪಯೋಗ ಪಡಿಸಿಕೊಂಡಾರು. ಕೆಲವು ಅಪವಾದಗಳು ಇದ್ದದ್ದೇ.

ಒಟ್ಟಿನಲ್ಲಿ, ಮಾತಿನ ನಡುವಣ ಮೌನವು ಮುತ್ತಿನಹಾರದ ನಡುವಣ ಮಾಣಿಕ್ಯ. ಅದು ಆಕರ್ಷಕತೆ, ಮೌಲ್ಯವರ್ಧನೆ – ಎರಡನ್ನೂ ಸಾಧಿಸಬಲ್ಲದು.

ಕೇಳುಗರಿಗೆ ಆಯಾಸವಿಲ್ಲದ ನಿರಾಳ ಗ್ರಹಿಕೆ ಸಾಧಿಸಲು ಭಾಗವಹಿಸಿಕೆ ಅಧಿಕ ಗೊಳಿಸಿಕೊಳ್ಳಲು ಬೇರೆ ಉತ್ತಮ ಕ್ರಮ ಇಲ್ಲವಾದ ಕಾರಣ ಇದನ್ನೇ ಪಳಗಿಸಿಕೊಳ್ಳೋಣ. ದಕ್ಷಿಣಾಮೂರ್ತಿ ಸ್ತೋತ್ರದ ಈ ಸಾಲು ಮನನೀಯ ‘ಗುರುವಿನದು ಮೌನವ್ಯಾಖ್ಯಾನ; ಶಿಷ್ಯರೋ ಸಂಶಯ ಕಳೆದುಕೊಂಡವರು!’

‘ನುಡಿಯು ತಿಳುಹಲು ಬಲ್ಲುದೇನು ಮೌನ ನುಡಿದಾ ದುಗುಡವ’
ಕಣಿವೆಯ ಮುದುಕ (ಪು.ತಿ.ನ.)


(ಲೇಖಕರು ಶಿಕ್ಷಣತಜ್ಞ, ಸಂವಹನಕಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT