ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ಕಥೆ, ಅದೇ ವ್ಯಥೆ

ಅಥ್ಲೆಟಿಕ್ಸ್‌
Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಅಥ್ಲೆಟಿಕ್ಸ್‌ನಲ್ಲಿ ಹಳೆಯ ಕಥೆ ಮುಂದುವರಿದಿದೆ. ವೈಫಲ್ಯ ಮತ್ತು ಇನ್ನಷ್ಟೂ ವೈಫಲ್ಯ. 35 ಕೋಟಿ ಜನಸಂಖ್ಯೆ ಇರುವ ದೊಡ್ಡ ದೇಶ ಭಾರತದ ವ್ಯಥೆ ಇದು. ಶಾಟ್‌ಪಟ್‌ನಲ್ಲಿ ರಹೀಮ್‌ ಫೈನಲ್‌ ತಲುಪಲಿಲ್ಲ. 10,000 ಮೀಟರ್ಸ್‌ ಓಟದಲ್ಲಿ ಸ್ವರ್ಧಿಸಿದ್ದ ರೋನಕ್‌ ಸಿಂಗ್‌ 5ಸಾವಿರ ಮೀಟರ್ಸ್‌ ದೂರವನ್ನು ಕ್ರಮಿಸುವಷ್ಟರಲ್ಲೇ ಬಳಲಿ ಓಟ ನಿಲ್ಲಿಸಿದ. 800 ಮೀಟರ್ಸ್‌ ಓಟದಲ್ಲಿ ಜೆ.ಪಿ.ಭಲ್ಲಾ ಫೈನಲ್‌ ತಲುಪಲಿಲ್ಲ.

ಮ್ಯಾರಥಾನ್‌ನಲ್ಲಿ ಸ್ವಾಮಿ 37ನೇ ಸ್ಥಾನ ಗಳಿಸಿದ. ಓಟ ಮುಗಿಸಿದ ಆತ ತಕ್ಷಣ ಅಸ್ವಸ್ಥನಾಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಯಿತು. ಎರಡು ದಿನ ಹಾಸಿಗೆ ಹಿಡಿದಿದ್ದ. ಮುಂದಿನ ಒಲಿಂಪಿಕ್ಸ್‌ ಟೋಕಿಯೊದಲ್ಲಿ ನಡೆಯಲಿದೆ. ಅಲ್ಲಾದರೂ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಪದಕ ಬರಬಹುದೇ...’

‘ದಿ ಸ್ಟೇಟ್ಸ್‌ಮನ್‌’ ಪತ್ರಿಕೆಯ 1936ರ ಆಗಸ್ಟ್‌ 13ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವರದಿ ಇದು. ಜರ್ಮನಿಯ ಬರ್ಲಿನ್‌ ನಗರದಲ್ಲಿ ಆಗ ನಡೆದಿದ್ದ ಒಲಿಂಪಿಕ್ಸ್‌ ಮುಗಿದ ಮೇಲೆ ಪ್ರಕಟವಾಗಿದ್ದು. ಎರಡನೇ ಮಹಾಯುದ್ದದಿಂದಾಗಿ 1940ರಲ್ಲಿ ಟೋಕಿಯೊ ಒಲಿಂಪಿಕ್ಸ್‌ ನಡೆಯಲಿಲ್ಲ. ಈ ವರದಿ ಪ್ರಕಟಗೊಂಡು ಸರಿಯಾಗಿ 80 ವರ್ಷಗಳ ನಂತರ ಇದೀಗ ರಿಯೊ ಡಿ ಜನೈರೊ ಒಲಿಂಪಿಕ್ಸ್‌ ಮುಗಿದಿದೆ. ಭಾರತದ ಬಹುತೇಕ ಪತ್ರಿಕೆಗಳಲ್ಲಿ ಅದೇ ರೀತಿಯ ವರದಿಗಳು ಪ್ರಕಟಗೊಂಡಿವೆ. ಜನಸಂಖ್ಯೆಯಲ್ಲಷ್ಟೇ ವ್ಯತ್ಯಾಸ. ಆಗ 35 ಕೋಟಿ ಇದ್ದದ್ದು, ಈಗ 131 ಕೋಟಿಗೆ ಏರಿದೆ. ಕಳೆದ ಎಂಟು ದಶಕಗಳಲ್ಲಿ ಭಾರತ ಅಥ್ಲೆಟಿಕ್ಸ್‌ನಲ್ಲಿ  ಒಂದೇ ಒಂದು ಪದಕ ಗೆದ್ದಿಲ್ಲ !

ನಾವು ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್‌ ಪದಕವನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಎರಡನೇ ಒಲಿಂಪಿಕ್ಸ್‌ನಲ್ಲಿ ನಾರ್ಮನ್‌ ಪ್ರಿಚರ್ಡ್‌ ಎಂಬಾತ ಗಳಿಸಿದ 2 ಪದಕಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂದೇನಿಲ್ಲ. ಆತ 200 ಮೀಟರ್ಸ್‌ ಓಟ ಮತ್ತು 200 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಎರಡನೇಯವನಾಗಿ ಗುರಿ ಮುಟ್ಟಿದ್ದ ಎನ್ನುತ್ತಾರೆ. ಆದರೆ ಅದಕ್ಕೆ ಆತ ತೆಗೆದುಕೊಂಡಿದ್ದ ಕಾಲದ ಕುರಿತು ನಿಖರ ಮಾಹಿತಿಗಳೂ ಇಲ್ಲ. ಆತ ಕೋಲ್ಕತ್ತದಲ್ಲಿ ಜನಿಸಿದ ಬ್ರಿಟಿಷ್‌ ಪ್ರಜೆ. ಆತ ಪ್ಯಾರಿಸ್‌ಗೆ ಹೋಗಿದ್ದೂ ಆಕಸ್ಮಿಕ, ಸ್ವರ್ಧೆಯಲ್ಲಿ ಪಾಲ್ಗೊಂಡಿದ್ದೂ ಆಕಸ್ಮಿಕ.

ಆ ನಂತರ  1920ರಲ್ಲಿ ಬೆಲ್ಜಿಯಮ್‌ನ ಆಂಟ್ವರ್ಪ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಜಾಡು ಸಿಗುತ್ತದೆ. ಅಲ್ಲಿ ಪಾಲ್ಗೊಳ್ಳಲು ಭಾರತದ ಮೂವರು ಓಟಗಾರರು ಹೋಗಿದ್ದರು. ಪೂನಾ ಜಿಮ್‌ಖಾನ ಎಂಬ ಕ್ರೀಡಾ ಕ್ಲಬ್‌ ಈ ಆಯ್ಕೆ ಪ್ರಕ್ರಿಯೆ ನಡೆಸಿರುತ್ತದೆ. ಇವರೆಲ್ಲರಿಗೂ ಆಗಿನ ಉದ್ಯಮಿ ದೊರಾಬ್ಜಿ ಟಾಟಾ ಅವರು ಆರ್ಥಿಕ ನೆರವು ನೀಡಿದ್ದರು. ಮೂವರೂ ಮ್ಯಾರಥಾನ್‌ ಓಟಗಾರರು. ಅವರಲ್ಲಿ ಒಬ್ಬರು ಪಿ.ಡಿ.ಚೌಗುಲೆ.

ಇವರು ಬೆಳಗಾವಿಯ ಜೈನ ಸಮುದಾಯಕ್ಕೆ ಸೇರಿದವರು. ಅಲ್ಲಿ ಆ ಮೂವರಿಂದಲೂ ಗಮನಾರ್ಹ ಸಾಧನೆ ಕಂಡು ಬರುವುದಿಲ್ಲ. ಆದರೆ 1924ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ಗೆ ತಂಡವನ್ನು ಸಿದ್ದಗೊಳಿಸಲು ದೆಹಲಿಯಲ್ಲಿ ಆಯ್ಕೆ ಟ್ರಯಲ್ಸ್‌ ನಡೆಸಿ, ತರಬೇತಿ ಶಿಬಿರವನ್ನೂ ನಡೆಸಲಾಗಿತ್ತು. ‘ರಾಷ್ಟ್ರೀಯ ಪರಿಕಲ್ಪನೆ’ ಹೊಂದಿದ್ದ ಮೊದಲ ತಂಡ ಅದೆನ್ನಬಹುದು. ಲಾಂಗ್‌ಜಂಪ್‌ನಲ್ಲಿ ಪಟಿಯಾಲದ ದಲಿಪ್‌ ಸಿಂಗ್‌, ಹರ್ಡಲ್ಸ್‌ನಲ್ಲಿ ಮದ್ರಾಸಿನ ಲಕ್ಷ್ಮಣನ್‌, ಮ್ಯಾರಥಾನ್‌ನಲ್ಲಿ ಮುಂಬೈಯ ಎಂ.ಆರ್‌.ಹಿಂಜ್‌, 100ಮೀಟರ್ಸ್‌ ಓಟದಲ್ಲಿ ಬಂಗಾಳದ ಟಿ.ಕೆ.ಪಿಟ್‌ ಮತ್ತು 200 ಮೀಟರ್ಸ್‌ನಲ್ಲಿ ಜೆ.ಎಸ್‌.ಹಾಲ್‌, 3 ಮೈಲು ಓಟದಲ್ಲಿ ಸಿಪಾಯಿ ಪಾಲಾಸಿಂಗ್‌, ಹೈಜಂಪ್‌ನಲ್ಲಿ ಮದ್ರಾಸಿನ ಜೆ.ಸಿ.ಹೀತ್‌ಕೋರ್‌, ಒಂದು ಮೈಲು ಓಟದಲ್ಲಿ ಮದ್ರಾಸಿನ ವೆಂಕಟ್ರಾಮಸ್ವಾಮಿ ಭಾರತವನ್ನು ಪ್ರತಿನಿಧಿಸಿದ್ದರು. ಈ ತಂಡದ ಪ್ರಯಾಣ ವೆಚ್ಚವನ್ನು ಭರಿಸುವ ಪ್ರಯತ್ನದ ಸಂದರ್ಭದಲ್ಲಿಯೇ ‘ಭಾರತ ಒಲಿಂಪಿಕ್‌ ಸಂಸ್ಥೆ’ಯ ಪರಿಕಲ್ಪನೆ ಮೂಡಿ ಬಂದಿತು.

ಆಗ ಪ್ಯಾರಿಸ್‌ನಲ್ಲಿ ದಲೀಪ್‌ಸಿಂಗ್‌ ಲಾಂಗ್‌ಜಂಪ್‌ನ ಅರ್ಹತಾ ಸುತ್ತಿನಲ್ಲಿ 6.45 ಮೀಟರ್ಸ್‌ ಜಿಗಿದಿದ್ದರೆ, ಪಾಲಾಸಿಂಗ್‌ 5,000 ಮೀಟರ್ಸ್‌ ಹೀಟ್ಸ್‌ನಲ್ಲೇ 9ನೇಯವರಾಗಿ ಗುರಿ ತಲುಪಿದ್ದರು. ಜೆ.ಕೆ.ಪಿಟ್‌ 400ಮೀಟರ್ಸ್‌ ಹೀಟ್ಸ್‌ನಲ್ಲಿ ಓಡಲು 51.5 ಸೆಕೆಂಡುಗಳನ್ನು ತೆಗೆದುಕೊಂಡು 4ನೇಯವರಾಗಿ ಗುರಿ ಸೇರಿದ್ದರು. 1928, 32, 36ರ ಒಲಿಂಪಿಕ್ಸ್‌ಗಳ ಅಥ್ಲೆಟಿಕ್ಸ್‌ನಲ್ಲಿ ಭಾರತದ ವ್ಯಥೆಯ ಕಥೆ ಮುಂದುವರಿಯಿತಷ್ಟೇ. ಆ ನಂತರ 1948ರಲ್ಲಿ ನಡೆದ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಬಾರಿಗೆ ತ್ರಿವರ್ಣ ಧ್ವಜದ ಅಡಿಯಲ್ಲಿ ಪಾಲ್ಗೊಂಡಿತ್ತು.

ಆಗ ಬೆಂಗಳೂರಿನ ಆಂಗ್ಲೊ ಇಂಡಿಯನ್‌ ಸಮುದಾಯದ ಹೆನ್ರಿ ರೆಬೆಲೊ ಅವರು ಟ್ರಿಪಲ್‌ ಜಂಪ್‌ನ ಅರ್ಹತಾ ಸುತ್ತಿನಲ್ಲಿ 14.65 ಮೀಟರ್ಸ್‌ ದೂರ ಜಿಗಿದು ಫೈನಲ್‌ ತಲುಪಿದ್ದರು. ಅದರ ಮರುದಿನವೇ ಲಂಡನ್‌ನ ಹಲವು ಪತ್ರಿಕೆಗಳು ಈ ಸ್ವರ್ಧೆಯಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ವರ್ಧಿ ರೆಬೆಲೊ ಎಂಬುದಾಗಿ ಬರೆದಿದ್ದವು. ಆದರೆ ಫೈನಲ್‌ ಸ್ವರ್ಧೆಯ ವೇಳೆ ಅವರು ಬಲಗಾಲಿನ ಸ್ನಾಯು ಸೆಳೆತದ ತೊಂದರೆಗೆ ಸಿಲುಕಿದ್ದರಿಂದ ಸಂಪೂರ್ಣವಾಗಿ ವೈಫಲ್ಯ ಕಂಡರು.

ಸ್ವಾತಂತ್ರ್ಯಾನಂತರ ಭಾರತ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ  ಪದಕ ಗೆಲ್ಲಲಿಲ್ಲ, ನಿಜ. ಆದರೆ ಕೆಲವು ಅಥ್ಲೀಟ್‌ಗಳು ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ. ಮಿಲ್ಖಾಸಿಂಗ್‌, ಶ್ರೀರಾಮ್‌ ಸಿಂಗ್‌, ಪಿ.ಟಿ.ಉಷಾ, ವಿಕಾಸ್‌ಗೌಡ, ಲಲಿತಾ ಬಾಬರ್‌ ಅವರನ್ನು ಹೊರತು ಪಡಿಸಿ ಈ ದೇಶದ ಅಥ್ಲೆಟಿಕ್ಸ್ ಅನ್ನು ನೋಡುವಂತೆಯೇ ಇಲ್ಲ. 1960ರ ರೋಮ್‌ ಒಲಿಂಪಿಕ್ಸ್‌ನ 400 ಮೀಟರ್ಸ್‌ ಓಟದ ಫೈನಲ್‌ನಲ್ಲಿ 45.60 ಸೆಕೆಂಡುಗಳಲ್ಲಿ ಓಡಿದ್ದ ಮಿಲ್ಖಾಸಿಂಗ್‌ ಅವರು ಕೂದಲೆಳೆಯಷ್ಟು ಅಂತರದಿಂದ ಕಂಚಿನ ಪದಕವನ್ನು ಕಳೆದುಕೊಂಡರು. ನಾಲ್ಕನೇ ಸ್ಥಾನಕ್ಕೆ ಇಳಿದರು.

ಪಿ.ಟಿ.ಉಷಾ ಅವರು 1980ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದು 100 ಮೀಟರ್ಸ್‌ ಹೀಟ್ಸ್‌ನಲ್ಲಿ 12.27 ಸೆಕೆಂಡುಗಳಲ್ಲಿ ಓಡಿದ್ದರು. ಮುಂದಿನ ಹಂತಕ್ಕೆ ಹೋಗಿರಲಿಲ್ಲ. ಆದರೆ 1984ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಅವರು 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಫೈನಲ್‌ ತಲುಪಿದ್ದರು. ಆ ಹಂತದಲ್ಲಿ ಅವರು 55.42 ಸೆಕೆಂಡುಗಳಲ್ಲಿ ಓಡಿ ಕೂದಲೆಳೆಯಷ್ಟು ಅಂತರದಿಂದ ಕಂಚಿನ ಪದಕ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಅಂಜು ಬಾಬ್ಬಿ ಜಾರ್ಜ್‌ ಅವರು 2004ರಲ್ಲಿ ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನ ಲಾಂಗ್‌ಜಂಪ್‌ನಲ್ಲಿ ಸ್ವರ್ಧಿಸಿದ್ದರು. ಇವರು ಅಂತಿಮ ಹಂತ ತಲುಪಿದ್ದಲ್ಲದೆ 6.83 ಮೀಟರ್ಸ್‌ ದೂರ ಜಿಗಿದು 6ನೇ ಸ್ಥಾನ ಗಳಿಸಿದ್ದರು.

ಈ ಹಿನ್ನೆಲೆಯಲ್ಲಿ ನೋಡುವುದಾದರೆ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಲಲಿತಾ ಬಾಬರ್‌ ಸಾಧನೆ ಶ್ಲಾಘನಾರ್ಹ. ಇವರು 3,000 ಮೀಟರ್ಸ್‌ ಸ್ಟೀಪಲ್‌ಚೇಸ್‌ನಲ್ಲಿ  9ನಿಮಿಷ 22.74ಸೆಕೆಂಡುಗಳಲ್ಲಿ ಓಡಿ ಹತ್ತನೇಯವರಾಗಿ ಗುರಿ ಮುಟ್ಟಿದ್ದಾರೆ. ಬಹರೇನ್‌ ತಂಡವನ್ನು ಪ್ರತಿನಿಧಿಸಿದ್ದ ಕೆನ್ಯಾ ಮೂಲದ ರುತ್‌ ಬೆಬೆಟ್‌ 8ನಿಮಿಷ 59.75 ಸೆಕೆಂಡುಗಳಲ್ಲಿ ಓಡಿ ಚಿನ್ನದ ಪದಕ ಗೆದ್ದರು. ಲಲಿತಾ ಅವರಿಗಿಂತ ಮೊದಲು ಕೆನ್ಯಾ, ಇಥಿಯೋಪಿಯ, ಜರ್ಮನಿ, ಅಮೆರಿಕ, ಆಸ್ಟ್ರೇಲಿಯಾದ ಓಟಗಾರ್ತಿಯರು ಗುರಿ ತಲುಪಿದ್ದರು.  ಭಾರತದ ಇನ್ನೊಬ್ಬ ಸ್ವರ್ಧಿ ಸುಧಾಸಿಂಗ್‌ (9ನಿ.43.29ಸೆ.) 30ನೇಯವರಾಗಿ ಓಟವನ್ನು ಪೂರ್ಣಗೊಳಿಸಿದರು. ಅಮೆರಿಕಾದಲ್ಲೇ ನೆಲೆಸಿರುವ ಮೈಸೂರು ಮೂಲದ ಅಥ್ಲೀಟ್‌ ವಿಕಾಸ್ ಗೌಡ ಅವರು ಕೆಲವು ತಿಂಗಳ ಹಿಂದೆ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ನಂತರ ಚೇತರಿಸಿಕೊಂಡಿದ್ದರಾದರೂ, ರಿಯೊ ಒಲಿಂಪಿಕ್ಸ್‌ನಲ್ಲಿ ಅವರಿಂದ ಎಂದಿನ ಸಾಮರ್ಥ್ಯ ಕಂಡು ಬರಲಿಲ್ಲ. ಅವರು ರಿಯೊದಲ್ಲಿ ಡಿಸ್ಕಸ್‌ ಎಸೆತದಲ್ಲಿ 58.99 ಮೀಟರ್ಸ್‌ನ ಸಾಮರ್ಥ್ಯದೊಂದಿಗೆ 28ನೇ ಸ್ಥಾನಕ್ಕೆ ಇಳಿದರು. 33ರ ಹರೆಯದ ವಿಕಾಸ್‌ 2004ರಲ್ಲಿ ನಡೆದಿದ್ದ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ (61.39ಮೀ.) 15ನೇ ಸ್ಥಾನ ಗಳಿಸಿದ್ದರೆ, 2008ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ (60.69ಮೀ.) 22ನೇ ಸ್ಥಾನ ಪಡೆದಿದ್ದರು. ಆದರೆ 2012ರಲ್ಲಿ ಲಂಡನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಇವರು ಫೈನಲ್‌ ತಲುಪಿದ್ದೇ ಅಲ್ಲದೆ 64.79 ಮೀಟರ್ಸ್‌ನ ಸಾಧನೆ ಮಾಡಿ ಎಂಟನೇ ಸ್ಥಾನ ಪಡೆದರು. ಭಾರತದ ಮಟ್ಟಿಗೆ ಅದೊಂದು ಚಾರಿತ್ರಿಕ ಸಾಧನೆಯಾಗಿದೆ.

ಇವರ ಜೀವನ ಶ್ರೇಷ್ಠ ಸಾಮರ್ಥ್ಯವನ್ನೇ (66.28ಮೀ.) ರಿಯೊದಲ್ಲಿ ತೋರಿದ್ದರೂ ಐದನೇ ಸ್ಥಾನಕ್ಕೇರಲು ಸಾಧ್ಯವಿತ್ತಷ್ಟೆ. ರಿಯೊದಲ್ಲಿ ಜರ್ಮನಿಯ ಕ್ರಿಸ್ಟೋಫ್‌ ಹರ್ಟಿಂಗ್‌ (68.37ಮೀ.) ಚಿನ್ನ ಗೆದ್ದರೆ, ಎಸ್ಟೋನಿಯಾದ ಗೆರ್ಡ್‌ ಕ್ಯಾಂಟರ್‌ (65.10ಮೀ.) 5ನೇ ಸ್ಥಾನ ಪಡೆದರು.

ಬೆಂಗಳೂರಿನ ಕೆನೆತ್‌ ಪೊವೆಲ್‌ ಭಾರತ ಕಂಡ ಶ್ರೇಷ್ಠ ವೇಗದ ಓಟಗಾರರಲ್ಲಿ ಒಬ್ಬರು. ಇವರು 1964ರ ಟೋಕಿಯೊ ಒಲಿಂಪಿಕ್ಸ್‌ನ 100 ಮೀಟರ್ಸ್‌ ಹೀಟ್ಸ್‌ನಲ್ಲಿ 10.7 ಸೆಕೆಂಡುಗಳಲ್ಲಿ ಓಡಿದ್ದರೆ, 200 ಮೀಟರ್ಸ್‌ ಹೀಟ್ಸ್‌ನಲ್ಲಿ 21.9 ಸೆಕೆಂಡುಗಳಲ್ಲಿ ಓಡಿದ್ದರು. ಅದಾಗಲೇ ಒಲಿಂಪಿಕ್ಸ್‌ನಲ್ಲಿ ಅಮೆರಿಕಾದ ಕಪ್ಪು ಓಟಗಾರರು ವೇಗದ ಓಟದಲ್ಲಿ ಅಬ್ಬರಿಸಲು ಆರಂಭಿಸಿದ್ದರು. ಅಂತಹ ಸಂದರ್ಭದಲ್ಲಿ ಕೆನೆತ್‌ ಸಾಮರ್ಥ್ಯ ಗಮನಾರ್ಹ.

ರಿಯೊ ಒಲಿಂಪಿಕ್ಸ್‌ ಮುಗಿದ ತಕ್ಷಣ ಭಾರತೀಯರ   ಸಾಮರ್ಥ್ಯದ ಕುರಿತು ಚರ್ಚೆಗಳು ಶುರುವಾಗಿವೆ. ಒಬ್ಬರು ಇಲ್ಲಿ ಶ್ರಮ ಸಂಸ್ಕೃತಿ ಇಲ್ಲವೆಂದರೆ, ಇನ್ನೊಬ್ಬರು ಮೂಲಭೂತ ಸೌಲಭ್ಯಗಳೇ ಇಲ್ಲ ಎನ್ನುತ್ತಿದ್ದಾರೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಬಗ್ಗೆ ಮಾತುಗಳು ಕೇಳಿ ಬಂದರೆ, ಪ್ರತಿಭಾನ್ವೇಷಣೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.   ನಾವು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಆರಂಭಿಸಿದ ಅರ್ಧ ಶತಮಾನದ ನಂತರ ಒಲಿಂಪಿಕ್ಸ್‌ನಲ್ಲಿ ಸ್ವರ್ಧಿಸಲು ಇಳಿದ ಕೆನ್ಯಾ ಇವತ್ತು ಒಲಿಂಪಿಕ್ಸ್‌ನಲ್ಲಿ ಶತಕ ಬಾರಿಸಿದೆ. ಈ 100 ಪದಕಗಳಲ್ಲಿ ಅಥ್ಲೆಟಿಕ್ಸ್‌ ಒಂದರಲ್ಲೇ 30 ಚಿನ್ನವೂ ಸೇರಿದಂತೆ 93 ಪದಕಗಳನ್ನು ಕೆನ್ಯಾ ಗಳಿಸಿದೆ. ಆದರೆ ಭಾರತದ ‘ಶತಮಾನದ ಅಥ್ಲೆಟಿಕ್ಸ್‌’ನಲ್ಲಿ ಒಂದೇ ಒಂದು ಒಲಿಂಪಿಕ್ಸ್ ಪದಕ ಇಲ್ಲ !

ಭಾರತ ಎಡವಿದ್ದಾದರೂ ಎಲ್ಲಿ ಎಂಬ ಸೂಕ್ಷ್ಮವನ್ನು ಗಮನಿಸಿದಾಗ ಹತ್ತಾರು ಕಾರಣಗಳು ಧುತ್ತೆನ್ನುತ್ತವೆ. ಈ ಸಲ ಅಥ್ಲೆಟಿಕ್ಸ್ ಒಂದರಲ್ಲೇ 34 ಮಂದಿ ರಿಯೊದಲ್ಲಿ ಸ್ವರ್ಧಿಸಲು ಅರ್ಹತೆ ಗಳಿಸಿದರು. ಕಳೆದೊಂದು ಶತಮಾನದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಅರ್ಹತೆ ಪಡೆದುದಾಗಿದೆ. ಆದರೆ ಅರ್ಹತೆ ಗಿಟ್ಟಿಸಿದ ಪ್ರಕ್ರಿಯೆಯೇ ಅನುಮಾನಾಸ್ಪದವಾಗಿ ಕಾಡತೊಡಗಿದೆ.

ಟ್ರಿಪಲ್‌ಜಂಪ್‌ನಲ್ಲಿ ಭಾರತದ ರಂಜಿತ್‌ ಮಹೇಶ್ವರಿ ಅವರು ಬೆಂಗಳೂರಿನಲ್ಲಿ ಜುಲೈ 11ರಂದು ನಡೆದಿದ್ದ ಅರ್ಹತಾ ಕೂಟದಲ್ಲಿ 17.30 ಮೀಟರ್ಸ್‌ ಜಿಗಿದು ರಾಷ್ಟ್ರೀಯ ದಾಖಲೆಯನ್ನೇ ಹೊಸದಾಗಿ ಬರೆದರು. ಆದರೆ ಇದಾಗಿ ಒಂದೇ ತಿಂಗಳಲ್ಲಿ ರಿಯೊದಲ್ಲಿ ನಡೆದ ಸ್ವರ್ಧೆಯಲ್ಲಿ ಇವರು ಕೇವಲ 16.13ಮೀಟರ್ಸ್‌ ದೂರವಷ್ಟೇ ಜಿಗಿದು 30ನೇ ಸ್ಥಾನಕ್ಕೆ ಇಳಿದರು. ಇವರು ಹಿಂದೆ ಬೀಜಿಂಗ್‌ ಮತ್ತು ಲಂಡನ್‌ ಒಲಿಂಪಿಕ್ಸ್‌ಗಳಲ್ಲಿಯೂ ಇದೇ ತೆರನಾದ ‘ಕರಾಮತ್ತು’ ತೋರಿದ್ದಾರೆ. ಒಲಿಂಪಿಕ್ಸ್‌ ಅರ್ಹತಾ ಮಟ್ಟಕ್ಕಾಗಿ ‘ಎತ್ತರದ ಸಾಮರ್ಥ್ಯ’ ತೋರಿ, ಅಲ್ಲಿ ವಿಫಲರಾಗಿರುವ ಹಲವರಿದ್ದಾರೆ.

ದ್ಯುತಿ ಚಾಂದ್‌ 100 ಮೀಟರ್ಸ್‌ ಓಟದಲ್ಲಿ ಪಾಲ್ಗೊಂಡ ಸಂತಸದಲ್ಲಿ ವಾಪಸಾಗಿದ್ದಾರೆ. ಇವರು ನಿಗದಿತ ದೂರವನ್ನು 11.69ಸೆಕೆಂಡುಗಳಲ್ಲಿ ಕ್ರಮಿಸಿ 50ನೇ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಜಮೈಕಾದ ಎಲೈನ್‌ ಥಾಮ್ಸನ್‌ 10.71 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದಾರೆ. ಮಹಿಳೆಯರ 800 ಮೀಟರ್ಸ್‌ ಓಟದಲ್ಲಿ ಪದಕದ ಸಾಧ್ಯತೆ ಇಲ್ಲ ಎಂಬುದು ಕೂಟಕ್ಕೆ ಮೊದಲೇ ಗೊತ್ತಿತ್ತು. ಟಿಂಟು ಲುಕಾ ಅವರು ರಿಯೊದಲ್ಲಿ ಈ ದೂರವನ್ನು ಕ್ರಮಿಸಲು 2ನಿಮಿಷ 00.58ಸೆಕೆಂಡುಗಳನ್ನು ತೆಗೆದುಕೊಂಡರು.

ಟಿಂಟು 400 ಮೀಟರ್ಸ್‌ಗಳ ಮೊದಲ ಸುತ್ತಿನಲ್ಲಿ ಮುನ್ನಡೆಯನ್ನೇ ಕಾಪಾಡಿಕೊಂಡಿದ್ದರು. ಆದರೆ ನಂತರದ 400 ಮೀಟರ್‌ಗಳಲ್ಲಿ ಆ ವೇಗವನ್ನು ಉಳಿಸಿಕೊಳ್ಳಲಾಗಲಿಲ್ಲ. ಟಿಂಟು ಅವರ ಈ ದೌರ್ಬಲ್ಯದ ಬಗ್ಗೆ ಮೂರು ವರ್ಷಗಳ ಹಿಂದೆಯೇ ಅವರ ಕೋಚ್‌ ಪಿ.ಟಿ.ಉಷಾ ಒಪ್ಪಿಕೊಂಡಿದ್ದರು. ಈ ಮೂರೂ ವರ್ಷಗಳಲ್ಲಿ ಟಿಂಟು ಆ ದೌರ್ಬಲ್ಯದಿಂದ ಹೊರಬರಲಾಗಲಿಲ್ಲ. ಈ ಸ್ವರ್ಧೆಯಲ್ಲಿ ದಕ್ಷಿಣ ಆಫ್ರಿಕಾದ ಕ್ಯಾಸ್ಟರ್‌ ಸೆಮೆನ್ಯಾ (1ನಿ.55.28ಸೆ.) ಚಿನ್ನ ಗೆದ್ದರು. ಟಿಂಟು 29ನೇ ಸ್ಥಾನಕ್ಕಿಳಿದರು.

ಒಲಿಂಪಿಕ್ಸ್‌ನ ಮ್ಯಾರಥಾನ್‌ನಲ್ಲಿ ಭಾರತಕ್ಕೆ 96 ವರ್ಷಗಳ ಪರಂಪರೆ ಇದೆ. 1920ರ ಆಂಟ್ವರ್ಪ್‌ ಒಲಿಂಪಿಕ್ಸ್‌ನಲ್ಲೇ ಪಿ.ಡಿ.ಚೌಗುಲೆಯವರು 2ಗಂಟೆ 50ನಿಮಿಷ 45.4 ಸೆಕೆಂಡುಗಳಲ್ಲಿ ಓಡಿ 19ನೇಯವರಾಗಿ ಗುರಿ ತಲುಪಿದ್ದರು. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಸೂರತ್‌ಸಿಂಗ್‌ ಮಾಥುರ್‌ (2ಗಂಟೆ 58ನಿ.9.2ಸೆ.) 52ನೇ ಸ್ಥಾನ ಪಡೆದಿದ್ದರೆ, 1960ರ ರೋಮ್‌ ಒಲಿಂಪಿಕ್ಸ್‌ನಲ್ಲಿ ರಂಜಿತ್‌ ಭಾಟಿಯ (2ಗಂಟೆ57ನಿ.6.2ಸೆ.) 60ನೇ ಸ್ಥಾನ ಪಡೆದಿದ್ದರು. ಈ ಸಲ ರಿಯೊದಲ್ಲಿ ಭಾರತದ ಮೂವರು ಪೂರ್ಣಗೊಳಿಸಿದರು. ಟಿ.ಗೋಪಿ (2ಗಂಟೆ 15ನಿ.25ಸೆ.) ಮತ್ತು ಖೇತ್‌ರಾಮ್‌ (2ಗಂಟೆ15ನಿ.26ಸೆ.) ಕ್ರಮವಾಗಿ 25 ಮತ್ತು 26ನೇ ಸ್ಥಾನ ಪಡೆದರೆ, ನಿತೇಂದ್ರ ಸಿಂಗ್‌ ರಾವತ್‌ (2ಗಂಟೆ 22ನಿ.52ಸೆ.) 84ನೇ ಸ್ಥಾನ ಗಳಿಸಿದರು. ಇಲ್ಲಿ ಚಿನ್ನ ಗೆದ್ದ ಕೆನ್ಯಾದ ಎಲ್ಯುಡ್ ಕಿಪ್‌ಚೊಗೆ ಈ ದೂರವನ್ನು 2ಗಂಟೆ 08ನಿಮಿಷ 44 ಸೆಕೆಂಡುಗಳಲ್ಲಿ ಕ್ರಮಿಸಿದ್ದರು. ಮಹಿಳಾ ವಿಭಾಗದಲ್ಲಂತೂ ಒ.ಪಿ.ಜೈಶಾ (2ಗಂಟೆ 24ನಿ.04ಸೆ.) ಮತ್ತು ಕವಿತಾ ರಾವತ್‌ (2ಗಂಟೆ 59ನಿ.29ಸೆ.) ಕ್ರಮವಾಗಿ 89 ಮತ್ತು 120ನೇ ಸ್ಥಾನಗಳನ್ನು ಗಳಿಸಲಷ್ಟೇ ಶಕ್ತರಾದರು. ಚಿನ್ನ ಗೆದ್ದ ಕೆನ್ಯಾದ ಜೆಮಿಮಾ ಈ ದೂರವನ್ನು 2ಗಂಟೆ 24ನಿಮಿಷ 04ಸೆಕೆಂಡುಗಳಲ್ಲಿ ಕ್ರಮಿಸಿದ್ದರು.

ಭಾರತದ ಬಹುತೇಕ ಅಥ್ಲೀಟ್‌ಗಳು  ರಿಯೊ ಒಲಿಂಪಿಕ್ಸ್‌ಗೆ ರಹದಾರಿ ಪಡೆಯುವ ನಿಟ್ಟಿನ ‘ಅರ್ಹತಾ ಮಟ್ಟ’ವನ್ನು ತಲುಪುತ್ತಾರೆ. ಆದರೆ ರಿಯೊದಲ್ಲಿ ಮಾತ್ರ ಆ ಅರ್ಹತಾ ಮಟ್ಟಕ್ಕಿಂತ ಬಹಳ ಕಡಿಮೆ ಸಾಮರ್ಥ್ಯ ತೋರುತ್ತಾರೆ !
ಇಂತಹ ಅಥ್ಲೀಟ್‌ಗಳ ಬಲು ದೊಡ್ಡ ಪಟ್ಟಿಯೇ ಇದೆ. ಇಂತಹವರ ನಡುವೆಯೂ ಪಿ.ಟಿ.ಉಷಾ, ಅಂಜು ಬಾಬ್ಬಿ ಜಾರ್ಜ್, ಲಲಿತಾ ಬಾಬರ್‌, ಸುಧಾಸಿಂಗ್‌, ವಿಕಾಸ್‌ ಗೌಡ ಅವರಂತಹ ಉತ್ತಮ ಸಾಧಕರ ಮಾದರಿಯೂ ನಮ್ಮ ನಡುವೆ ಇದೆ.

ಮುಂದಿನ ದಿನಗಳಲ್ಲಿ ಹೆನ್ರಿ, ಮಿಲ್ಖಾ, ಶ್ರೀರಾಮ್‌ ಸಿಂಗ್‌, ಉಷಾ, ಅಂಜು, ವಿಕಾಸ್‌ಗೌಡ ಅವರಂತಹ ಹೆಚ್ಚು  ಸಾಧಕರು ನಮ್ಮ ನಡುವೆ ಬರುವಂತಾದರೆ, ನಾಲ್ಕು ವರ್ಷಗಳ ನಂತರ ಟೋಕಿಯೊ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಒಂದೆರಡು ಪದಕಗಳನ್ನಾದರೂ ನಿರೀಕ್ಷಿಸಬಹುದು.  
ಅಥ್ಲೆಟಿಕ್‌ ಅಂಗಳದಲ್ಲಿ  ಯೋಧರು
ಭಾರತದ ಮಟ್ಟಿಗೆ ಹೇಳುವುದಿದ್ದರೆ ಬ್ರಿಟಿಷರು ತಮ್ಮ ಸೇನೆಯಲ್ಲಿದ್ದ ಸೈನಿಕರು ಕ್ರೀಡಾ ಚಟುವಟಿಕೆಗಳಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸುತ್ತಿದ್ದರು.

ಹಾಕಿ, ಫುಟ್‌ಬಾಲ್‌, ಅಥ್ಲೆಟಿಕ್ಸ್‌ ಚಟುವಟಿಕೆಗಳೆಲ್ಲವನ್ನೂ ಬ್ರಿಟಿಷ್‌ ಸೈನಿಕರೇ ಭಾರತದಲ್ಲಿ ಆರಂಭಿಸಿದ್ದು. ಹೀಗಾಗಿ ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಒಲಿಂಪಿಕ್‌ ಆಂದೋಲನದಲ್ಲಿ ವೈಎಂಸಿಎಯಷ್ಟೇ ದೊಡ್ಡ ಪಾತ್ರವನ್ನು ಸೇನಾ ಕ್ರೀಡಾ ಮಂಡಳಿಯೂ ವಹಿಸಿದೆ.
ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಭಾರತದ ಸೇನೆಯಲ್ಲಿದ್ದವರೇ. ಆ ದಿನಗಳಲ್ಲಿ ಭಾರತದ ಹಾಕಿ ತಂಡದಲ್ಲಿ ಬಹುತೇಕ ಮಂದಿ ಭಾರತೀಯ ಸೇನೆಯಲ್ಲಿದ್ದವರೇ ಇರುತ್ತಿದ್ದರು.

ಸ್ವಾತಂತ್ರ್ಯ ನಂತರ ಕೂಡಾ ಭಾರತದ ಕ್ರೀಡಾ ಚಟುವಟಿಕೆಗಳಲ್ಲಿ ಸೈನಿಕರ ಪಾತ್ರ ಬಲು ದೊಡ್ಡದು. ಓಟಗಾರ ಮಿಲ್ಖಾ ಸಿಂಗ್‌ ಕೂಡಾ ಸೇನೆಯಲ್ಲಿಯೇ ತಮ್ಮ ಕ್ರೀಡಾ ಬದುಕನ್ನು ಕಂಡುಕೊಂಡವರು. ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ರಾಜ್ಯವರ್ಧನ್‌ ಸಿಂಗ್‌ ಕೂಡಾ ಸೇನೆಯಲ್ಲೇ ತರಬೇತು ಪಡೆದವರು.

ಭಾರತೀಯ ಸೇನೆಗೆ ಗೌರವ ತಂದ ಓಟಗಾರರಲ್ಲಿ ಶ್ರೀರಾಮ್‌ ಸಿಂಗ್‌ ಒಬ್ಬರು. ಇವರು 1976ರ ಮಾಂಟ್ರಿಯಲ್‌ ಒಲಿಂಪಿಕ್ಸ್‌ನಲ್ಲಿ 800 ಮೀಟರ್ಸ್‌ ದೂರವನ್ನು 1ನಿಮಿಷ 45.77ಸೆಕೆಂಡುಗಳಲ್ಲಿ ಕ್ರಮಿಸಿ 7ನೇಯವರಾಗಿ ಗುರಿ ತಲುಪಿದರು. ಇದು ಆ ಕಾಲದ ಏಷ್ಯನ್‌ ದಾಖಲೆ.
ಈ ಸಲ ರಿಯೊ ಒಲಿಂಪಿಕ್‌್ಸನ ಮ್ಯಾರಥಾನ್‌ನಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ ಗೋಪಿ, ಖೇತಾರಾಮ್‌, ನಿತೇಂದರ್‌ ಅವರು ಪುಣೆಯ ಆರ್ಮಿ ಕ್ರೀಡಾ ಸಂಸ್ಥೆಗೆ ಸೇರಿದವರು.  ಪುಣೆಯ ಹೊರ ವಲಯದಲ್ಲಿ ರಕ್ಷಣಾ ಇಲಾಖೆಯು ಸುಮಾರು 73 ಎಕರೆ ಪ್ರದೇಶದಲ್ಲಿ ಕ್ರೀಡಾ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ.

ಅನನ್ಯ ಅಥ್ಲೀಟ್‌ ಮಹಾರಾಷ್ಟ್ರ ದ ಲಲಿತಾ ಬಾಬರ್‌
ಲಲಿತಾ ಬಾಬರ್‌ ಅವರು ಭಾರತ ಕಂಡ ಅನನ್ಯ ಅಥ್ಲೀಟ್‌.  ಮಹಾರಾಷ್ಟ್ರದ ಸತಾರದ ಇವರು ಆರಂ ಭದ ದಿನಗಳಲ್ಲಿ ಮ್ಯಾರಥಾನ್‌ ಓಟದ ಬಗ್ಗೆಯೇ ಹೆಚ್ಚು ಗಮನ ಹರಿಸಿದ್ದರು. ಆದರೆ 2014ರ ಜನವರಿ ಯಿಂದ 3,000 ಮೀಟರ್ಸ್‌ ಸ್ಟೀಪಲ್‌ಚೇಸ್‌ನಲ್ಲಿ ಹೆಚ್ಚು ಪರಿಶ್ರಮ ವಹಿಸತೊಡಗಿದರು.

ಎಳವೆಯಲ್ಲಿ ಲಲಿತಾ ತಮ್ಮೂರಿನಿಂದ ಶಾಲೆಗೆ ದಿನವೂ ನಡೆಯುತ್ತಾ ಹೋಗಿ ಬರಲು 8 ಕಿ.ಮೀ. ಸವೆಸಬೇಕಿತ್ತು. ಆ ದಿನಗಳಲ್ಲೇ ಶಾಲಾ ಕೂಟಗಳಲ್ಲಿ ದೂರ ಅಂತರದ ಓಟದ ಸ್ವರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 2005ರಲ್ಲಿ 20 ವರ್ಷದೊಳಗಿನವರ ದೂರ ಅಂತರದ ಓಟದ ಸ್ವರ್ಧೆಯೊಂದರಲ್ಲಿ ಚಿನ್ನ ಗೆದ್ದರು.

ಮುಂಬೈ ಮ್ಯಾರಥಾನ್‌ನ ಮಹಿಳಾ ವಿಭಾಗದಲ್ಲಿ ಪೂರ್ವ ಆಫ್ರಿಕಾದ ಓಟಗಾರ್ತಿಯರದೇ ಏಕಸ್ವಾಮ್ಯ. ಆದರೆ ಲಲಿತಾ  ಅವರು 2012, 13 ಮತ್ತು 14ರಲ್ಲಿ ಸತತವಾಗಿ ಮೂರು ಸಲ ಪ್ರಶಸ್ತಿ ಗೆದ್ದಾಗ ಕೆನ್ಯಾ ಆಟಗಾರ್ತಿಯರಿಗೇ ಅಚ್ಚರಿ.  2014ರ ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಇವರು ಕಂಚಿನ ಪದಕ ಗೆದ್ದರು. ಅಲ್ಲಿ ಬಹರೇನ್‌ ದೇಶದ ರುತ್‌ ಜೆಬೆಟ್‌ ಮೊದಲಿಗರಾಗಿ ಗುರಿ ಮುಟ್ಟಿದ್ದರು. ರುತ್‌ ಜೆಬೆಟ್‌ ಇದೀಗ ರಿಯೊ ಒಲಿಂಪಿಕ್ಸ್‌ನಲ್ಲಿಯೂ ಚಿನ್ನ ಗೆದ್ದಿದ್ದಾರೆ. ಜೆಬೆಟ್‌ ಅವರು ಕೆನ್ಯಾ ಹೈಸ್ಕೂಲು ಮಟ್ಟದ ಮಕ್ಕಳಿಗಾಗಿ ನಡೆಯುವ ಕೆನ್ಯಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ  ಚಾಂಪಿಯನ್‌ ಆಗಿದ್ದರು. ನಂತರ ಇವರು ಬಹರೇನ್‌ ಪರ ಸ್ವರ್ಧಿಸಲು ಆರಂಭಿಸಿದರು.

ಚೀನಾದ ವುಹಾನ್‌ನಲ್ಲಿ ಹೋದ ವರ್ಷ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಲಲಿತಾ ಬಾಬರ್‌ ಅವರು ತಮ್ಮ ನೆಚ್ಚಿನ 3000 ಮೀಟರ್ಸ್‌ ಸ್ಟೀಪಲ್‌ ಚೇಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ ರಿಯೊ ಕೂಟದಲ್ಲಿ 10ನೇ ಸ್ಥಾನ ಗಳಿಸಿದ್ದಾರೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT