ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಡಳಿತಕ್ಕೆ ಬೇಕಿದೆ ಹೊಸ ಆಯಾಮ

ರಾಷ್ಟ್ರೀಯ ಕ್ರೀಡಾ ದಿನ
Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಧ್ಯಾನ್‌ಚಂದ್‌ ಹುಟ್ಟುಹಬ್ಬ ಎಂದರೆ  ಗಾಂಧಿ, ನೆಹರು, ಸುಭಾಶ್‌ಚಂದ್ರ ಬೋಸ್‌ ಜನ್ಮದಿನಾಚರಣೆಯಷ್ಟೇ ಮಹತ್ವದ್ದು. ಮೇಜರ್‌ ಧ್ಯಾನ್‌ಚಂದ್‌ ಭಾರತ ಕ್ರೀಡಾರಂಗಕ್ಕೆ ಹೊಸ ಆಯಾಮ ನೀಡಿದವರು, ಚೈತನ್ಯ ತುಂಬಿದವರು. ಬ್ರಿಟಿಷರ ಕ್ರೀಡೆ ಹಾಕಿಯಲ್ಲಿ ಆ ದೇಶದ ತಂಡಕ್ಕೇ ಸೆಡ್ಡು ಹೊಡೆದು ನಿಲ್ಲುವ  ಆತ್ಮವಿಶ್ವಾಸವನ್ನು ಭಾರತೀಯರಲ್ಲಿ  ತುಂಬಿದವರು ಅವರು. ಭಾರತೀಯರ ಮಟ್ಟಿಗೆ  ಪ್ರಾತಃಸ್ಮರಣೀಯರು.

1905ರ ಆಗಸ್ಟ್‌ 29ರಂದು ಹುಟ್ಟಿದ ಧ್ಯಾನ್‌ಚಂದ್‌ ಭಾರತ ಕಂಡ ಅನನ್ಯ ಹಾಕಿ ಆಟಗಾರ. ಇವರು 1928, 1932 ಮತ್ತು 1936ರ ಒಲಿಂಪಿಕ್ಸ್‌ಗಳಲ್ಲಿ ಹಾಕಿ ಚಿನ್ನದ ಪದಕ ಗೆದ್ದ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದರು. ಸುಮಾರು ಎಂಟು ದಶಕಗಳ ಹಿಂದೆಯೇ ಈ ದೇಶದಲ್ಲಿ ಹಾಕಿ ಆಟಗಾರರಿಗೆ ತಾರಾಮೌಲ್ಯ ಸಿಗುವಂತೆ ಮಾಡಿದವರು ಅವರು.

ಅರವತ್ತರ ದಶಕದ ಕೊನೆಯ ದಿನಗಳವು. ನಾನು ಆ ದಿನಗಳಲ್ಲಿ ಬಹುತೇಕ ರಾಷ್ಟ್ರೀಯ ಹಾಕಿ ಟೂರ್ನಿಗಳಲ್ಲಿ ಸರ್ವಿಸಸ್‌ ತಂಡದ ಪರ ಆಡುತ್ತಿದ್ದೆ. ಆ ಕಾಲದಲ್ಲೇ ಒಂದು ದಿನ ಪಟಿಯಾಲದಲ್ಲಿ ಪ್ರದರ್ಶನ ಪಂದ್ಯವೊಂದು ನಡೆದಿತ್ತು. ಧ್ಯಾನ್‌ಚಂದ್‌ ಅವರು ಆಡಲಿಳಿದಿದ್ದರು. ಆ ವಯಸ್ಸಿನಲ್ಲೂ ಅವರ ಕೈಚಳಕವನ್ನು ನೋಡಲು ಸಾವಿರಾರು ಮಂದಿ ಹಾಕಿ ಮೈದಾನದ ಸುತ್ತಲೂ ಸೇರಿದ್ದರು. ನಾನು ಅಂದು ಆಡಿದ್ದಕ್ಕಿಂತ ಅವರನ್ನು ಸಮೀಪದಿಂದ ನೋಡಿ ಸಂಭ್ರಮಿಸಿದ್ದೇ ಹೆಚ್ಚು.ಅವರು  ಬಾಲ್ಯದ ದಿನಗಳಿಂದಲೂ ನನಗೆ ಅಭಿಮಾನದ ಆಟಗಾರರಾಗಿದ್ದರು. 

ಸರಿಯಾಗಿ ಒಂದೂವರೆ ದಶಕದ ಹಿಂದಿನ ಮಾತು. ಆಗ ಉಮಾಭಾರತಿಯವರು ಕೇಂದ್ರ ಸರ್ಕಾರದಲ್ಲಿ ಕ್ರೀಡಾಸಚಿವೆಯಾಗಿದ್ದರು. ನಾನು ಭಾರತ ಕ್ರೀಡಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕನಾಗಿದ್ದೆ. ಅದೊಂದು ದಿನ ಸಚಿವೆಯವರೊಡನೆ ಇಲಾಖೆಗೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಂಡಿದ್ದೆ. ನಂತರ ಮಾತನಾಡುತ್ತಾ ಧ್ಯಾನ್‌ಚಂದ್‌ ಅವರು ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ನಾವು ಆಚರಿಸುವ ಪ್ರಸ್ತಾಪವೊಂದನ್ನು ಅವರ ಮುಂದಿಟ್ಟೆ. ತಕ್ಷಣ ಅತೀವ ಉತ್ಸಾಹದಿಂದ ಅದಕ್ಕೆ ಒಪ್ಪಿದ ಅವರು  ಸಂಬಂಧಿಸಿದ ಕಡತ ಸಿದ್ದಪಡಿಸಲು ಸೂಚಿಸಿದ್ದರು. ನಂತರ ಆ ಪ್ರಸ್ತಾಪ ಕೆಲವು ವರ್ಷಗಳ ನಂತರ ಕಾರ್ಯರೂಪಕ್ಕೆ ಬಂದಿತು.

ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ  ನೀಡುವ ಅರ್ಜುನ ಪ್ರಶಸ್ತಿಯನ್ನು ಹಿಂದೆಲ್ಲಾ ಇಂತಹದೇ ದಿನ ಕೊಡಬೇಕೆಂಬ ನಿಯಮವೇನೂ ಇರಲಿಲ್ಲ. ಸಂಬಂಧಪಟ್ಟ ಇಲಾಖೆಯ ಸಚಿವರು ಅಥವಾ ಕೆಲವು ರಾಜಕಾರಣಿಗಳ ಬಿಡುವಿನ ವೇಳೆಯನ್ನು  ಹೊಂದಿಸಿಕೊಂಡು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವುದಿತ್ತು. ಅಂತಹದ್ದೊಂದು ವ್ಯವಸ್ಥೆಯ ಬಗ್ಗೆ ನನಗೆ ಬಹಳ ಹಿಂದಿನಿಂದಲೂ ಅಸಮಾಧಾನ ಇದ್ದೇ ಇತ್ತು. ಅಂತಹ ಸಮಾರಂಭವನ್ನು ಒಂದು ನಿರ್ದಿಷ್ಟ ದಿನದಂದೇ ನಡೆಸುವ ಪರಂಪರೆ ಶುರು ಮಾಡಬೇಕೆಂದು ನಾನು ಕ್ರೀಡಾ ಪ್ರಾಧಿಕಾರದಲ್ಲಿದ್ದ ದಿನಗಳಲ್ಲಿ ಯೋಚಿಸಿದ್ದೆ. ಆ ಕುರಿತೂ ಸಂಬಂಧಪಟ್ಟ ಸಚಿವರಿಗೆ ಪತ್ರಗಳನ್ನೂ ಬರೆದಿದ್ದೆ. ಕೊನೆಗೊಂದು ದಿನ ಆ ಪದ್ಧತಿಯೂ ಶುರುವಾಯಿತು. ಈಗ ಅದೇನೇ ಇದ್ದರೂ ಖೇಲ್‌ರತ್ನ, ಅರ್ಜುನ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್‌ 29ರಂದೇ ನಡೆಯುತ್ತಿದೆ. ಇದು ಧ್ಯಾನ್‌ಚಂದ್‌ ಅವರಿಗೆ ನಾವು ನೀಡುತ್ತಿರುವ ಗೌರವವಾಗಿದೆ.

ಹಿಂದೆಲ್ಲಾ ಇಂತಹ ಕ್ರೀಡಾ ಪ್ರಶಸ್ತಿಯು ಅರ್ಹರಿಗೆ ಸಿಗದೇ ಹೋದಂತಹ ಬಹಳಷ್ಟು ನಿದರ್ಶನಗಳಿವೆ. ರಾಜಕಾರಣಿಗಳು ಅಥವಾ ಕೆಲವು ಪ್ರಭಾವಿಗಳ ಪ್ರಭಾವದಿಂದಾಗಿ ಅಷ್ಟೇನೂ ಗಣನೀಯ ಸಾಧನೆ ಮಾಡದೇ ಇರುವವರಿಗೂ ಈ ಪ್ರಶಸ್ತಿಗಳು ಸಿಕ್ಕಿವೆ. ಇದು ಆ ದಿನಗಳಲ್ಲಿ ನನಗೂ ಗೊತ್ತಿತ್ತು. ಈ ಬಗ್ಗೆ ಸುಮಾರು ಎರಡು ದಶಕಗಳ ಹಿಂದೆ ಕ್ರೀಡಾ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಎತ್ತರದ ಸಾಧನೆ ಮಾಡಿರುವ ಕೆಲವು ಕ್ರೀಡಾಪಟುಗಳ ಸಮಿತಿಯೊಂದನ್ನು ರಚಿಸಿ ಆ ಸಮಿತಿಯೇ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಬೇಕೆಂದು ನಾವೆಲ್ಲಾ ಅದೊಂದು ದಿನ ತೀರ್ಮಾನಿಸಿದ್ದೆವು. ಆಗ ಅಂತಹದ್ದೊಂದು ಸಮಿತಿಯೊಂದನ್ನು  ಮೊದಲ ಬಾರಿಗೆ ಕೇಂದ್ರ ಸರ್ಕಾರ ರಚಿಸಿತು.

ಪ್ರಕಾಶ್‌ ಪಡುಕೋಣೆಯವರು ಅದರ ಮೊದಲ ಅಧ್ಯಕ್ಷರಾಗಿದ್ದರು. ನಾನು ಸಂಚಾಲಕನಾಗಿದ್ದೆ. ನಾವಿಬ್ಬರೂ ಸೇರಿ ಅರ್ಹರನ್ನು ಗುರುತಿಸುವ ನಿಟ್ಟಿನಲ್ಲಿ ‘ಮಾರ್ಕಿಂಗ್‌’ ವ್ಯವಸ್ಥೆಯನ್ನು ಮಾಡಿದ್ದೆವು. ಅದು ಅತ್ಯಂತ ವೈಜ್ಞಾನಿಕವಾಗಿತ್ತು. ನಾನು ಆ ಸಮಿತಿಗೆ ಐದು ವರ್ಷಗಳ ಕಾಲ ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೆ. ಆ ಪರಂಪರೆ ಕೆಲವು ವರ್ಷಗಳ ಕಾಲ ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಾ ಬಂದಿತು.

ಈ ಸಲ ಕೂಡಾ ಖೇಲ್‌ರತ್ನ ಮತ್ತು ಅರ್ಜುನ ಪ್ರಶಸ್ತಿಗೆ ಅರ್ಹರಾದವರ ಆಯ್ಕೆಯೇ ನಡೆದಿದೆ. ಆ ಪಟ್ಟಿಯಲ್ಲಿ ಸಾಕ್ಷಿ, ಸಿಂಧು, ಜಿತು ರಾಯ್‌, ದೀಪಾ ಇವರೆಲ್ಲರ ಹೆಸರು ಕಂಡು ಬಂದಾಗ ನನಗೆ ಹೃದಯ ತುಂಬಿ ಬಂದಿತು.

ಇಂತಹದ್ದೊಂದು ದಿನ ಧ್ಯಾನ್‌ಚಂದ್‌ ಅವರನ್ನು ನಾವು ನೆನಪಿಸಿಕೊಳ್ಳುತ್ತೇವೆ, ನಿಜ. ಆದರೆ ಈ ನಾಡಿನಲ್ಲಿ ಕ್ರೀಡಾಭಿವೃದ್ಧಿಗೆ ನಾವೇನು ಮಾಡ ಬೇಕೆಂಬುದನ್ನು ಯೋಚಿಸುವುದೇ ಇಲ್ಲ. ಈ ರಾಷ್ಟ್ರೀಯ ಕ್ರೀಡಾ ಹಬ್ಬದ ಮರುದಿನವೇ ಎಲ್ಲವನ್ನೂ ಮರೆತು ಬಿಡುತ್ತೇವೆ.

ಈ ಸಂದರ್ಭ ದಲ್ಲಿ ರಿಯೊ ಒಲಿಂಪಿಕ್ಸ್‌ ಬಗ್ಗೆ ಮಾತನಾಡದಿರಲು ನನ್ನ ಮನಸ್ಸು ಒಪ್ಪು ತ್ತಿಲ್ಲ. ದೀಪಾ ಕರ್ಮಾ ಕರ್‌ ಸಾಧನೆ ಅತೀವ ಖುಷಿ ಕೊಡು ವಂತಿದೆ. ವಿದೇಶಿ ಕೋಚ್‌ಗಳ ಯಾವುದೇ ತರಬೇತಿ ಇಲ್ಲದೆಯೇ ಆಕೆ ನೀಡಿರುವ ಸಾಮರ್ಥ್ಯ ಅದ್ಭುತ. ಆಕೆಗೆ ನಾಲ್ಕನೇ ಸ್ಥಾನ ಬಂದಿರಬಹುದು. ಆದರೆ ನನಗಂತೂ ಆಕೆ ಪದಕ ಗೆದ್ದಿದ್ದಾಳೆಂದೇ ಎನಿಸುತ್ತಿದೆ. ಇನ್ನು ಗೋಪಿಚಂದ್‌ ಗರಡಿಯಲ್ಲಿ ಪಳಗಿದ ಸಿಂಧು ಬ್ಯಾಡ್ಮಿಂಟನ್‌ ಫೈನಲ್‌ ತಲುಪಿದ್ದೂ ಮಹತ್ವದ ಸಾಧನೆಯೇ ಹೌದು. ಆದರೆ ವಿದೇಶಿ ಕೋಚ್‌ಗಳ ಮಾರ್ಗದರ್ಶನದಲ್ಲಿ ಭಾರತದ ಹಾಕಿ ತಂಡಗಳು ನಾಲ್ಕರ ಘಟ್ಟ ತಲುಪಲು ವೈಫಲ್ಯ ಕಂಡಿರುವುದೂ ಅಷ್ಟೇ ನಿಜ ತಾನೆ. ಇಲ್ಲಿ ಕ್ರೀಡಾಡಳಿತಗಾರರೆಲ್ಲರೂ ಚಿಂತಿಸಬೇಕಾದಂತಹ ಸಂಗತಿ ಬಹಳಷ್ಟಿದೆ.

ನಮ್ಮ ನಡುವೆಯೇ ನುರಿತ ತರಬೇತುದಾರರಿದ್ದಾರೆ. ಅವರ ಪ್ರತಿಭೆಯನ್ನೇ ಬಳಸಿಕೊಂಡು ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಉತ್ತಮ ರಾಷ್ಟ್ರೀಯ ತಂಡಗಳನ್ನು ಕಟ್ಟುವ ಬಗ್ಗೆ ಮುಂದಿನ ದಿನಗಳಲ್ಲಿ ನಾವು ಯೋಚಿಸುವುದು ಒಳಿತು. ಹಿಂದೆಯೂ ಇಲ್ಲಿಯ ಕೋಚ್‌ಗಳೇ ಅತ್ಯುತ್ತಮ ತಂಡಗಳನ್ನು ಮತ್ತು ಅಥ್ಲೀಟ್‌ಗಳನ್ನು ರೂಪಿಸಿದ ಬಹಳಷ್ಟು ಉದಾಹರಣೆಗಳಿವೆ.

ಇವತ್ತು ದೇಶದಲ್ಲಿ ಕ್ರೀಡಾಡಳಿತ ಕ್ರೀಡೆಯೇ ಗೊತ್ತಿಲ್ಲದವರ ಕೈನಲ್ಲಿದೆ ಎಂದರೆ ಅತಿಶಯೊಕ್ತಿ ಎನಿಸದು. ಐಎಎಸ್‌ ಅಧಿಕಾರಿಗಳು ಕ್ರೀಡಾ ಇಲಾಖೆಯಲ್ಲಿ ಕೆಲವು ಸಮಯ ಆಡಳಿತ ನಡೆಸಿ ವರ್ಗವಾಗಿ ಹೋಗುತ್ತಾರೆ. ಅವರು ಕ್ರೀಡೆಯ ಆಗು ಹೋಗುಗಳ ಕುರಿತು ಅರಿವು ಮೂಡಿಸಿಕೊಳ್ಳುವುದರ ಒಳಗೆ ಅವರಿಗೆ ಬೇರೆ ಇಲಾಖೆಗೆ ವರ್ಗವಾಗುತ್ತದೆ. ಇನ್ನು ಕೆಲವರು ಬಂದು ಇಲಾಖೆಗೆ ಇರುವ ಚಿಕ್ಕ ಬಜೆಟ್‌ನಲ್ಲಿಯೇ ‘ಕಮಿಷನ್‌ ವಹಿವಾಟು’ ನಡೆಸಿ, ಒಂದಿಷ್ಟು ಹಣವನ್ನು ಕಿಸೆಗಿಳಿಸಿಕೊಂಡು ಹೊರಟು ಹೋಗುತ್ತಾರೆ.

ಈ ಎಲ್ಲಾ ಸಂದರ್ಭಗಳಲ್ಲಿಯೂ ಕ್ರೀಡಾಪಟುಗಳು ಬಹಳಷ್ಟು ಸೊರಗಿ ಹೋಗಿದ್ದಾರೆ. ಹೀಗಾಗಿ ಭಾರತದಲ್ಲಿ ಕ್ರೀಡಾಡಳಿತಕ್ಕೆ ಸಂಬಂಧಿಸಿದಂತೆ ಐಎಎಸ್‌, ಐಪಿಎಸ್‌ನಂತೆ ಪ್ರತ್ಯೇಕ ಕ್ರೀಡಾ ಕೇಡರ್‌ ಐಎಸ್‌ಎಸ್‌ (ಇಂಡಿಯನ್‌ ಸ್ಪೋರ್ಟ್ಸ್‌ ಸರ್ವಿಸ್‌) ಅನ್ನು ಸರ್ಕಾರ ಜಾರಿಗೆ ತರಲು ಪ್ರಯತ್ನಿಸಲಿ.  ಇದಕ್ಕಾಗಿಯೇ ಪ್ರತ್ಯೇಕ ಪರೀಕ್ಷೆ ಬರೆದು ಅರ್ಹರು ತೇರ್ಗಡೆ ಹೊಂದಲಿ. ಇಂತಹ ಅಧಿಕಾರಿಗಳು ರಾಷ್ಟ್ರ ಮತ್ತು ರಾಜ್ಯಗಳ ಕ್ರೀಡಾಸಂಸ್ಥೆಗಳ ಚಟುವಟಿಕೆಗಳ ಮೇಲೆ ಕಣ್ಣಿಡುವಂತಾಗಬೇಕು. ಕ್ರೀಡಾ ಇಲಾಖೆಯಲ್ಲಿ ಎಲ್ಲದಕ್ಕೂ ವಿಶ್ವಾಸಾರ್ಹತೆ ಇರುವಂತಹ ವ್ಯವಸ್ಥೆ ಬರಬೇಕು. ಇವತ್ತು ನಮ್ಮ ದೇಶದಲ್ಲಿ ಕ್ರೀಡಾಡಳಿತ ‘ರಾಂಗ್‌ಸೈಡ್‌ ಡ್ರೈವಿಂಗ್‌’ನಲ್ಲಿದೆ. ಇದು ಸರಿಯಾಗಬೇಕಿದೆ.
ಇವೆಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮಲ್ಲಿ ಕ್ರೀಡಾ ಸಂಸ್ಕೃತಿ ಬರಬೇಕಿದೆ. ಜನಸಾಮಾನ್ಯರಲ್ಲಿಯೂ ಕ್ರೀಡಾ ಪ್ರಜ್ಞೆ ಮೂಡಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡಾ ಪಠ್ಯಕ್ರಮವನ್ನು ಕಡ್ಡಾಯಗೊಳಿಸಬೇಕು.

ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಪರವಾಗಿಲ್ಲ. ಕ್ರೀಡೆಗೆ ಅನುಕೂಲವಾಗುವಂತಹ ಯಾವುದೇ ಕಾರ್ಯಕ್ರಮವನ್ನು ಎಲ್ಲರೂ ಒಗ್ಗೂಡಿ ಬೆಂಬಲಿಸಬೇಕಿದೆ. ಕ್ರೀಡಾಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳುವಾಗ ಪಕ್ಷ ರಾಜಕೀಯದಿಂದ ದೂರ ನಿಂತು ಕಾರ್ಯೋನ್ಮುಖವಾಗ ಬೇಕಾದ ಅಗತ್ಯವಿದೆ.

ಹಾಗಿದ್ದರೆ ಮಾತ್ರ ಈ ದೇಶದಲ್ಲಿ ಕ್ರೀಡಾಭಿವೃದ್ಧಿಗೆ ಸಂಬಂಧಿಸಿದಂತೆ ನನ್ನಂತಹವರು ಏನಾದರೂ ಕನಸು ಕಾಣಲು ಸಾಧ್ಯ.

ಜಗತ್ತಿನ ವಿವಿಧ ಕಡೆ ಕ್ರೀಡಾ ದಿನಾಚರಣೆ
ಭಾರತದಲ್ಲಿ ಮಾತ್ರ ಕ್ರೀಡಾ ದಿನಾಚರಣೆ ಯನ್ನು ಆಚರಿಸುತ್ತಿರುವುದಲ್ಲ, ಜಗತ್ತಿನ ಅನೇಕ ದೇಶಗಳಲ್ಲಿ ಕ್ರೀಡಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.

ಮಲೇಷ್ಯಾದಲ್ಲಿ ಅಕ್ಟೋಬರ್‌ ತಿಂಗಳ ಎರಡನೇ ಶನಿವಾರವನ್ನು ದೇಶದಾದ್ಯಂತ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸ
ಲಾಗುತ್ತಿದೆ.

ಕತಾರ್‌ನಲ್ಲಿಯೂ ಫೆಬ್ರುವರಿ ತಿಂಗಳ ಎರಡನೇ ಮಂಗಳವಾರ ಕ್ರೀಡಾ ದಿನಾಚರಣೆ ಎಂದು ಸರ್ಕಾರವೇ ಘೋಷಿಸಿದೆ. ಕತಾರ್‌ನಲ್ಲಿ ಒಲಿಂಪಿಕ್‌ ಸಮಿತಿಯು ಕ್ರೀಡಾ ದಿನಾಚರಣೆಯ ದಿನ ದೇಶದಾದ್ಯಂತ ಕ್ರೀಡೆಗೆ ಸಂಬಂಧಿಸಿದಂತೆ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ರಷ್ಯಾದಲ್ಲಿ ಆಗಸ್ಟ್‌ ತಿಂಗಳ ಎರಡನೇ ಶನಿವಾರ ಕ್ರೀಡಾ ದಿನಾಚರಣೆಯಾಗಿದೆ. ಆ ದಿನ ಆ ದೇಶದ ಎಲ್ಲಾ  ಶಾಲೆ ಮತ್ತು ಕಾಲೇಜುಗಳಲ್ಲಿ ಕ್ರೀಡೆಯ ಮಹತ್ವದ ಕುರಿತು ಅರಿವು ಮೂಡಿಸುವ ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತವೆ.

ಜಪಾನ್‌ನಲ್ಲಿ ಮಾತ್ರ ಪ್ರತಿ ಶನಿವಾರ ಮತ್ತು ಭಾನುವಾರ ಶಾಲಾ ಮಕ್ಕಳಿಗೆ ವಿಭಿನ್ನ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳು ವುದಕ್ಕೆ ಅವಕಾಶ ಇರುತ್ತವೆ.

ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವುದು ಮತ್ತು  ಸ್ವರ್ಧಾತ್ಮಕ ಮನೋಭಾವವನ್ನು ಬೆಳೆಸುವುದು ಕ್ರೀಡಾ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

ಭಾರತದ ಮಟ್ಟಿಗೆ ಕ್ರೀಡಾ ದಿನಾಚರಣೆ ವಾರ್ಷಿಕ ಪ್ರಶಸ್ತಿಗಳನ್ನು ನೀಡುವ ದಿನವೂ ಆಗಿದೆ. ಕ್ರೀಡಾರಂಗದಲ್ಲಿ ಉನ್ನತ ಸಾಧನೆ ಮಾಡಿರುವವರಿಗೆ ಕೇಂದ್ರ ಸರ್ಕಾರವು ಆ ದಿನ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.

ಕೆಲವು ರಾಜ್ಯ ಸರ್ಕಾರಗಳೂ ಇದೇ ಪರಂಪರೆಯನ್ನು ಮುಂದುವರಿಸಿವೆ.  ಭಾರತದಲ್ಲಿ ಕ್ರೀಡಾ ದಿನಾಚರಣೆಯಂದು ಮಹತ್ವದ ಕ್ರೀಡಾಕೂಟಗಳೇನೂ ನಡೆಯುವುದಿಲ್ಲ.

ಆದರೆ ಜನಸಾಮಾನ್ಯರಲ್ಲಿ ಮತ್ತು ಎಳೆಯರಲ್ಲಿ ಕ್ರೀಡೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ.

* ಲೇಖಕರು ಹಿಂದೆ ಭಾರತ ಹಾಕಿ ತಂಡಕ್ಕೆ ನಾಯಕರಾಗಿದ್ದರು. ರಾಷ್ಟ್ರೀಯ ಕೋಚ್‌ ಆಗಿದ್ದರು. ಭಾರತ ಕ್ರೀಡಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT