ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿಗೆ ಗೊಬ್ಬರವಾದ ಈರುಳ್ಳಿ!

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ವಿಜಯಪುರ: ಈರುಳ್ಳಿಗೆ ಉತ್ತಮ ಬೆಲೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಭ್ರಮನಿರಸನವಾಗಿದೆ. ಐದು ತಿಂಗಳಿನಿಂದ ಇಲಾರಗಿಯಲ್ಲಿ ಶೇಖರಿಸಿಟ್ಟಿದ್ದ (ಬಯಲು ಪ್ರದೇಶದಲ್ಲಿ ಈರುಳ್ಳಿ ಸಂಗ್ರಹಿಸುವ ವ್ಯವಸ್ಥೆ) ಈರುಳ್ಳಿ ಕೊಳೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಮಾರುಕಟ್ಟೆಯಲ್ಲಿ ಬೆಳೆಗೆ ಸೂಕ್ತ ದರ ಇಲ್ಲ; ಇನ್ನೊಂದೆಡೆ ಅದನ್ನು ಇಟ್ಟುಕೊಳ್ಳಲೂ ಆಗುತ್ತಿಲ್ಲ. ಅದಕ್ಕಾಗಿಯೇ ಈರುಳ್ಳಿಯನ್ನು ದ್ರಾಕ್ಷಿ ತೋಟಗಳಿಗೆ ಗೊಬ್ಬರವಾಗಿ ಬಳಸಲು ಮುಂದಾಗಿದ್ದಾರೆ.

‘ಐದ್‌ ತಿಂಗಳಿಂದ ಕಾದಿವ್ರಿ. ರೇಟೂ ಬರಲಿಲ್ಲ. ಹಾಕಿದ್ದ ರೊಕ್ಕನೂ ಹೊಂಡಲಿಲ್ಲ.  ಉಳ್ಳಾಗಡ್ಡಿ ಕೊಳ್ಯಾಕತ್ತೈತಿ’ ಎಂದು ವಿಜಯಪುರ ತಾಲ್ಲೂಕು ಉಪ್ಪಲದಿನ್ನಿಯ ರೈತ ಸೋಮನಾಥ ಶಿವನಗೌಡ ಬಿರಾದಾರ ಅಳಲು ತೋಡಿಕೊಂಡರು.

ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಕನಿಷ್ಠ ₹ 35 ಸಾವಿರ ಖರ್ಚಾಗುತ್ತದೆ.  ಹಿಂದಿನ ವರ್ಷ ಬೇಸಿಗೆಯಲ್ಲಿ 20 ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆದು ₹ 25 ಲಕ್ಷ ಲಾಭ ಗಳಿಸಿದ್ದರು. ಈ ಬಾರಿ ಭೀಕರ ಬರಗಾಲದಲ್ಲೂ ಇಷ್ಟೇ ಜಮೀನಿನಲ್ಲಿ 80 ಟನ್‌ ಈರುಳ್ಳಿಯ ಬಂಪರ್‌ ಬೆಳೆ ಪಡೆದಿದ್ದರು. ಆದರೆ ಸಿಕ್ಕಿದ್ದು ಮಾತ್ರ ₹ 2 ಲಕ್ಷ.

‘ಹಾಕಿದ ಬಂಡವಾಳವೂ ಮರಳದೇ ರೈತರಿಗೆ ಹೊಡೆತ ಬಿದ್ದಿದೆ. ಕೊಳೆಯುತ್ತಿರುವ ಈರುಳ್ಳಿಯನ್ನು ಏನು ಮಾಡಬೇಕು ಎಂದು ತೋಚದೆ ಎಲ್ಲವನ್ನೂ ದ್ರಾಕ್ಷಿ ಪಡಕ್ಕೆ ಹಾಕಿಸುತ್ತಿದ್ದೇನೆ. ಈರುಳ್ಳಿಯೇ ಗೊಬ್ಬರವಾಗಿ ಪರಿವರ್ತನೆಯಾದರೆ ಕನಿಷ್ಠ ಗೊಬ್ಬರದ ಖರ್ಚಾನ್ನಾದರೂ ಕಡಿಮೆಯಾಗಬಹುದು’ ಎನ್ನುತ್ತಾರೆ ಸೋಮನಾಥ.

ಬೇಸಿಗೆ ಬೆಳೆಯಲ್ಲಿ ಕೈಸುಟ್ಟುಕೊಂಡರೂ  ಮುಂಗಾರು ಹಂಗಾಮಿನಲ್ಲಿ ಮತ್ತೆ ಎರಡು ಎಕರೆಯಲ್ಲಿ ಈರುಳ್ಳಿ ನಾಟಿ ಮಾಡಿದ್ದಾರೆ. ಅದರಲ್ಲಾದರೂ ಲಾಭ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಸಾಲದ ಶೂಲ: ‘ಕಳೆದ ವರ್ಷ ಆರು ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆದು, ಹೊಲದಲ್ಲೇ ₹ 7.5 ಲಕ್ಷಕ್ಕೆ ವ್ಯಾಪಾರಿಗಳಿಗೆ ಗುತ್ತಿಗೆ ನೀಡಿದ್ದೆ. ಆದರೆ ಈ ಬಾರಿ ಸಿಕ್ಕಿದ್ದು ₹ 1.20 ಲಕ್ಷ ಅಷ್ಟೇ.

ಹೆಚ್ಚಿನ ಲಾಭ ದೊರಕುವ ನಿರೀಕ್ಷೆಯಿಂದ ಹೊಲವನ್ನು ಮತ್ತೊಬ್ಬರಿಗೆ ಅಡ ಇಟ್ಟು, ₹ 8 ಲಕ್ಷ ಸಾಲ ಮಾಡಿ ಹೊಲವನ್ನು ಅಭಿವೃದ್ಧಿಪಡಿಸಿದ್ದೆ. ಈಗ ಸಾಲದ ಹೊರೆ ಹೆಚ್ಚುತ್ತಿದೆ’ ಎಂದು ಮತ್ತೊಬ್ಬ ಬೆಳೆಗಾರ ಹನುಮಂತ ಬಸಪ್ಪ ಕುರುಬರ ಹೇಳಿದರು.

ತಿಪ್ಪೆಗೆ ಈರುಳ್ಳಿ: ಬಸವನಬಾಗೇವಾಡಿ ತಾಲ್ಲೂಕು ಕೊಲ್ಹಾರ ಸುತ್ತಲಿನ ಹಂಗರಗಿ, ಬೆಳ್ಳುಬ್ಬಿ, ಕೊಲ್ಹಾರ, ರೋಣಿಹಾಳ, ಉಪ್ಪಲದಿನ್ನಿ ಗ್ರಾಮಗಳ ರೈತರು ಉಳ್ಳಾಗಡ್ಡಿಯನ್ನು ಮಾರಲು ಆಗದೆ, ಇತ್ತ ಇಲಾರಗಿಯಲ್ಲೇ ಕೊಳೆತು ಹೋಗುವುದನ್ನು ನೋಡಲಾಗದೆ ದ್ರಾಕ್ಷಿ ಪಡಗಳಿಗೆ ಗೊಬ್ಬರ ರೂಪದಲ್ಲಿ ಹಾಕುವ ದೃಶ್ಯಗಳು ಕಂಡು ಬರುತ್ತಿವೆ.

ಇನ್ನು ನಿಡಗುಂದಿ, ತೆಲಗಿ, ಗೊಳಸಂಗಿ, ಕೂಡಗಿ, ಮಸೂತಿ, ಬೀರಲದಿನ್ನಿ ಭಾಗದ ಬೆಳೆಗಾರರು ರಸ್ತೆ ಬದಿ, ತಿಪ್ಪೆಗೆ ಸುರಿದಿರುವ ದೃಶ್ಯವೂ ಕಂಡುಬಂದಿದೆ.

***
ಈರುಳ್ಳಿ ಬೆಳೆದವರ ಸಮಸ್ಯೆ ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲ. ತಹಶೀಲ್ದಾರ್‌ಗಳಿಂದ ವರದಿ ಪಡೆದು, ಪರಿಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ
-ಕೆ.ಬಿ.ಶಿವಕುಮಾರ, ಜಿಲ್ಲಾಧಿಕಾರಿ

***
ಬೇಸಿಗೆ,  ಬರದ ನಡುವೆಯೂ ಈರುಳ್ಳಿ ಸಮೃದ್ಧ ಫಸಲು ಬಂದಿತ್ತು. ಆದರೆ ದರ ಸಿಗದೇ ಭವಿಷ್ಯವೇ ಅತಂತ್ರವಾಗಿದೆ.
-ಹನುಮಂತ ಕುರುಬರ,ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT