ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ರಾಮ್‌ಜೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ರಾಕೆಟ್‌ ತಂತ್ರಜ್ಞಾನದಲ್ಲಿ ಸೂಪರ್‌ ಸಾನಿಕ್ ಕಂಬುಷನ್‌ ರಾಮ್‌ಜೆಟ್ (ಸ್ಕ್ರಾಮ್‌ಜೆಟ್‌) ಎಂಜಿನ್‌ ಈವರೆಗಿನ ಅತ್ಯಾಧುನಿಕ ತಂತ್ರಜ್ಞಾನವೆನಿಸಿದೆ. ಅಮೆರಿಕ, ರಷ್ಯಾ ಮತ್ತು ಐರೋಪ್ಯ ಒಕ್ಕೂಟವಷ್ಟೇ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿವೆ.

ಈಗ ಇದೇ ಸ್ವರೂಪದ ಎಂಜಿನ್‌ ಅನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿ, ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತವೂ ಈ ರಾಷ್ಟ್ರಗಳ ಸಾಲಿಗೆ ಸೇರಿದೆ.

ರಾಕೆಟ್‌ಗಳ ಎಂಜಿನ್‌ಗಳಲ್ಲಿ ಸಾಮಾನ್ಯವಾಗಿ ಇಂಧನವಾಗಿ ಜಲಜನಕವನ್ನು ಹಾಗೂ ದಹನಶೀಲ ಉತ್ಕರ್ಷಣಕಾರಿಯಾಗಿ (ಆಕ್ಸಿಡೈಸ್) ಆಮ್ಲಜನಕವನ್ನು ಬಳಸಲಾಗುತ್ತದೆ. ಸಾಮಾನ್ಯ ರಾಕೆಟ್‌ಗಳಲ್ಲಿ ಜಲಜನಕ ಮತ್ತು ಆಮ್ಲಜನಕ ಎರಡನ್ನೂ ಸಂಗ್ರಹಿಸಿ ಇಡಲಾಗಿರುತ್ತದೆ.

ರಾಕೆಟ್‌ಗಳು ಇವೆರಡನ್ನೂ ಹೊತ್ತುಕೊಂಡು ಹೋಗುತ್ತವೆ. ಸ್ಕ್ರಾಮ್‌ಜೆಟ್‌ ಎಂಜಿನ್ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಹೀರಿಕೊಂಡು ಕೆಲಸ ಮಾಡುವುದರಿಂದ ಕಾರ್ಯಾಚರಣೆಯ ವೆಚ್ಚದಲ್ಲಿ ಭಾರಿ ಇಳಿಕೆ ಆಗುತ್ತದೆ.

ಇಸ್ರೊ ತನ್ನ ಮರುಬಳಕೆ ಉಡಾವಣಾ ವಾಹನಗಳಲ್ಲಿ ಈ ಎಂಜಿನ್‌ಗಳನ್ನು ಬಳಸಲು ಉದ್ದೇಶಿಸಿದೆ. ಇದನ್ನು ಇನ್ನಷ್ಟು ಸುಧಾರಣೆ ಮಾಡಬೇಕಿದೆ ಎಂದು ಇಸ್ರೊ ಹೇಳಿದೆ. ಈ ಪರೀಕ್ಷೆ ಯಶಸ್ವಿಯಾಗಿರುವುದರಿಂದ ಸ್ಕ್ರಾಮ್‌ಜೆಟ್‌ ಎಂಜಿನ್‌ ಇರುವ ರಾಕೆಟ್‌ಗಳ ಅಭಿವೃದ್ಧಿಯಲ್ಲಿ ಇಸ್ರೊ ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಿದೆ. ಇಸ್ರೊ ಸಾಧನಗೆ ರಾಷ್ಟ್ರಪತಿ ಪ್ರಣವ್  ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

*
ಮ್ಯಾಕ್‌ 6 ಎಂದರೇನು?:

ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ.

ಬದಲಾದ ಈ ವೇಗವನ್ನು ‘ಮ್ಯಾಕ್‌’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್‌ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್‌ ಎಂದು ಕರೆಯಲಾಗುತ್ತದೆ.

*
ಪರೀಕ್ಷೆ ಉದ್ದೇಶ
*ಹೈಪರ್‌ ಸಾನಿಕ್‌ ವೇಗದಲ್ಲಿ ಸ್ಕ್ರಾಮ್‌ಜೆಟ್‌ ಎಂಜಿನ್‌ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ  ಪರೀಕ್ಷೆ
*ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ
*ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ

*
ಪರೀಕ್ಷೆ ವಿವರ
* ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6ಗಂಟೆಗೆ ಉಡಾವಣೆ
* ಇಸ್ರೊದ ಸುಧಾರಿತ ತಂತ್ರಜ್ಞಾನ ವಾಹನ (ಎಟಿವಿ) 02 ಬಳಸಿ ಪರೀಕ್ಷೆ
* ಎಟಿವಿಯಲ್ಲಿ ಎರಡು ಹಂತದ ಎಂಜಿನ್
* ಮೊದಲ ಎಂಜಿನ್‌ ಮೂಲಕ ಎಟಿವಿ ಉಡಾವಣೆ
* ತುಸು ಸಮಯದ ನಂತರ 2ನೇ ಎಂಜಿನ್‌ ಕಾರ್ಯನಿರ್ಹಹಣೆ
* ನಂತರದ ಹಂತದಲ್ಲಿ ಎರಡು ಸ್ಕ್ರಾಮ್‌ಜೆಟ್‌ ಎಂಜಿನ್‌ಗಳ ದಹನ ಕ್ರಿಯೆ ಆರಂಭ

*
3277 ಕೆ.ಜಿ.
ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್‌ ಎಂಜಿನ್‌ ಸೇರಿ ಎಟಿವಿ 02ನ ತೂಕ
*
5 ಸೆಕೆಂಡ್
ಸ್ಕ್ರಾಮ್‌ಜೆಟ್‌ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ
*
300 ಸೆಕೆಂಡ್‌
ಪರೀಕ್ಷೆಯ ಅವಧಿ
*
320 ಕಿ.ಮೀ
ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ
*
7408 ಕಿ.ಮೀ/ಮ್ಯಾಕ್‌ 6
ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ

***
ಸ್ಕ್ರಾಮ್‌ಜೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ ನಡೆಸಿರುವ ಇಸ್ರೊ ವಿಜ್ಞಾನಿಗಳಿಗೆ  ಹೃದಯಪೂರ್ವಕ ಅಭಿನಂದನೆಗಳು.
-ಪ್ರಣವ್ ಮುಖರ್ಜಿ, ರಾಷ್ಟ್ರಪತಿ


***
ಇದು ನಮ್ಮ ವಿಜ್ಞಾನಿಗಳ ಶ್ರಮ ಮತ್ತು   ನೈಪುಣ್ಯಕ್ಕೆ ಸಾಕ್ಷಿ. ಇಸ್ರೊಗೆ ಅಭಿನಂದನೆಗಳು.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT