ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ನಲ್ಲಿ ಎಡವಿದ ಪೇಸ್‌–ಬೆಗೆಮನ್‌

ಎಟಿಪಿ ವಿನ್ಸ್‌ಟನ್‌– ಸಲೇಮ್‌ ಓಪನ್‌ ಟೆನಿಸ್‌ ಟೂರ್ನಿ
Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ವಿನ್ಸ್‌ಟನ್‌–ಸಲೇಮ್‌, ಅಮೆರಿಕ: ಎರಡನೇ ಸೆಟ್‌ನಲ್ಲಿ ಐದು ‘ಮ್ಯಾಚ್‌ ಪಾಯಿಂಟ್ಸ್‌’ಗಳನ್ನು ಕೈಚೆಲ್ಲಿದ ಭಾರತದ ಲಿಯಾಂಡರ್‌ ಪೇಸ್‌ ಮತ್ತು ಜರ್ಮನಿಯ ಆ್ಯಂಡ್ರೆ ಬೆಗೆಮನ್‌ ಅವರು ಇಲ್ಲಿ ನಡೆದ ಎಟಿಪಿ ವಿನ್ಸ್‌ಟನ್‌–ಸಲೇಮ್‌ ಓಪನ್‌ ಟೆನಿಸ್‌ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ್ದಾರೆ.
ಶನಿವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಪೇಸ್‌ ಮತ್ತು ಬೆಗೆಮನ್‌ 6–4, 6–7, 8–10ರಲ್ಲಿ  ಸ್ಪೇನ್‌ನ ಗಾರ್ಸಿಯ ಲೊಪೆಜ್‌ ಮತ್ತು ಫಿನ್‌ಲ್ಯಾಂಡ್‌ನ ಕೊಂಟಿನೆನ್‌ ವಿರುದ್ಧ ಸೋಲು ಕಂಡರು.

ಆತ್ಮ ವಿಶ್ವಾಸದ ಗಣಿ ಎನಿಸಿದ್ದ ಪೇಸ್‌ ಮತ್ತು ಬೆಗೆಮನ್‌ ಅವರು ಉತ್ತಮ ಆರಂಭ ಪಡೆದರು. ಮೊದಲ ಸೆಟ್‌ನಲ್ಲಿ ಭಾರತ ಮತ್ತು ಜರ್ಮನಿಯ ಆಟಗಾರರು ಅಂಗಳದಲ್ಲಿ ಅಬ್ಬರಿಸಿದರು.

ಬಿರುಗಾಳಿ ವೇಗದ ಸರ್ವ್‌ಗಳ ಮೂಲಕ ಗೇಮ್‌ ಗೆದ್ದು ಮುನ್ನಡೆ ಗಳಿಸಿದ ಪೇಸ್‌ ಮತ್ತು ಬೆಗೆಮನ್‌ ಅವರು ಎದುರಾಳಿಗಳ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದರು.

ಇದರಿಂದ ಲೊಪೆಜ್‌ ಮತ್ತು ಕೊಂಟಿನೆನ್‌ ಎದೆಗುಂದಲಿಲ್ಲ. ಭಾರತ ಮತ್ತು ಜರ್ಮನಿಯ ಆಟಗಾರರ ತಂತ್ರಕ್ಕೆ ಪ್ರತಿತಂತ್ರ ಹೆಣೆದು ಆಡಿದ ಈ ಜೋಡಿ ಸತತವಾಗಿ ಗೇಮ್‌ ಗೆದ್ದು ತಿರುಗೇಟು ನೀಡಿತು.
ಎಂಟು ಗೇಮ್‌ಗಳ ಬಳಿಕ ಉಭಯ ಜೋಡಿಗಳು 4–4ರಲ್ಲಿ ಸಮಬಲ ಸಾಧಿಸಿದ್ದವು. ಆ ನಂತರ ಪೇಸ್‌ ಮತ್ತು ಬೆಗೆಮನ್‌ ಅಧಿಪತ್ಯ ಸಾಧಿಸಿದರು.
ಚುರುಕಿನ ಸರ್ವ್‌ ಹಾಗೂ ಆಕರ್ಷಕ ಡ್ರಾಪ್‌ಗಳ ಮೂಲಕ ಗೇಮ್‌ ಗೆದ್ದ ಪೇಸ್‌ ಮತ್ತು ಬೆಗೆಮನ್‌ ಸುಲಭವಾಗಿ ಸೆಟ್‌ ಜಯಿಸಿ ಮುನ್ನಡೆ ಪಡೆದರು.
ಎರಡನೇ ಸೆಟ್‌ನಲ್ಲೂ ಭಾರತ ಮತ್ತು ಜರ್ಮನಿ ಆಟಗಾರರು ಮೋಡಿ ಮಾಡಿದರು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪೇಸ್‌ ಮತ್ತು ಬೆಗೆಮನ್‌ ತಮ್ಮ ಸರ್ವ್‌ ಉಳಿಸಿಕೊಳ್ಳುವ ಜೊತೆಗೆ ಮೂರು ಬಾರಿ ಎದುರಾಳಿಗಳ ಸರ್ವ್‌ ಮುರಿದು 6–1ರ ಮುನ್ನಡೆ ಗಳಿಸಿದ್ದರು. ಈ ಹಂತದಲ್ಲಿ ಭಾರತ ಮತ್ತು ಜರ್ಮನಿಯ ಜೋಡಿ ಮಾಡಿಕೊಂಡ ಎಡವಟ್ಟುಗಳು ಪ್ರಶಸ್ತಿ ಜಯದ ಕನಸಿಗೆ ಮುಳುವಾಯಿತು.

ಎರಡನೇ ಸೆಟ್‌ನಲ್ಲಿ ಭಾರತ– ಜರ್ಮನಿ ಜೋಡಿ ಐದು ‘ಮ್ಯಾಚ್‌ ಪಾಯಿಂಟ್ಸ್‌’ ಗಳನ್ನು ಕೈಚೆಲ್ಲಿತು. ಇದರ ಲಾಭ ಎತ್ತಿಕೊಂಡ ಲೊಪೆಜ್‌ ಮತ್ತು ಕೊಂಟಿನೆನ್‌ ಸತತ ಐದು ಗೇಮ್‌ ಗೆದ್ದರಲ್ಲದೆ, ‘ಟೈ ಬ್ರೇಕರ್‌’ನಲ್ಲಿ ಸೆಟ್‌ ವಶಪಡಿಸಿಕೊಂಡು 1–1ರಲ್ಲಿ ಸಮಬಲ ಮಾಡಿಕೊಂಡರು.
‘ಮ್ಯಾಚ್‌ ಟೈ ಬ್ರೇಕ್‌’ ನಲ್ಲೂ ಭಾರತ –ಜರ್ಮನಿ ಜೋಡಿಯ ಆಟ ನಡೆ ಯಲಿಲ್ಲ.  ಗುಣಮಟ್ಟದ ಆಟ ಆಡಿದ ಲೊಪೆಜ್‌ ಮತ್ತು ಕೊಂಟಿನೆನ್‌ ಎದುರಾಳಿಗಳ ಸವಾಲನ್ನು ಮೀರಿ ನಿಂತು ಪಂದ್ಯ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT