ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಿಸಿ ಹತ್ಯೆ; ಮಂಡ್ಯದಲ್ಲಿ ದಹನ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಿಯಕರನ ಜತೆ ಸೇರಿ ಪರಿಚಿತ ಮಹಿಳೆಯನ್ನು ಕಾರಿನಲ್ಲಿ ಅಪಹರಿಸಿದ್ದ ಶೀಲಾ ಎಂಬಾಕೆ, ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದು ಮಂಡ್ಯದಲ್ಲಿ ಶವ ಸುಟ್ಟು ಹಾಕಿದ್ದಾಳೆ.

ಈ ಸಂಬಂಧ ಶೀಲಾಳನ್ನು ಬಂಧಿಸಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಆಕೆಯ ಪ್ರಿಯಕರ ಅರುಣ್‌ಗಾಗಿ ಶೋಧ ನಡೆಸುತ್ತಿದ್ದಾರೆ. ತಿಮ್ಮಮ್ಮ ಅವರ ಬಳಿ ಇದ್ದ ಚಿನ್ನದ ಮಾಂಗಲ್ಯ ಸರ, ಕಿವಿ ಓಲೆ ಹಾಗೂ ಬಂಗಾರದ ಬಳೆಗಳಿಗಾಗಿ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪತಿ ಹಾಗೂ ನಾಲ್ವರು ಮಕ್ಕಳ ಜತೆ ಕುರುಬರಹಳ್ಳಿಯಲ್ಲಿ ನೆಲೆಸಿದ್ದ ತಿಮ್ಮಮ್ಮ, ಮೊದಲು ಸಮಾರಂಭಗಳಿಗೆ ಹೂವು ಪೂರೈಸುವ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಚೀಟಿ ವ್ಯವಹಾರ  ಪ್ರಾರಂಭಿಸಿದ್ದರು. ಪಕ್ಕದ ರಸ್ತೆಯ ಶೀಲಾ, ಚೀಟಿ ನೆಪದಲ್ಲಿ ಆಗಾಗ್ಗೆ ಇವರ ಮನೆಗೆ ಬಂದು ಹೋಗುತ್ತಿದ್ದರು. ಈ ವೇಳೆ ಆಕೆಯ ಕಣ್ಣು ಒಡವೆಗಳ ಮೇಲೆ ಬಿದ್ದಿತ್ತು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

‘ಆಗಸ್ಟ್‌ 25ರಂದು ಅರುಣ್‌ನನ್ನು ಮನೆಗೆ ಕರೆಸಿಕೊಂಡ ಶೀಲಾ, ತಾನು ರೂಪಿಸಿರುವ ಸಂಚಿನ ಬಗ್ಗೆ ವಿವರಿಸಿದ್ದಳು. ಬಳಿಕ ಮಧ್ಯಾಹ್ನ 2 ಗಂಟೆಗೆ ತಿಮ್ಮಮ್ಮ ಅವರಿಗೆ ಕರೆ ಮಾಡಿದ ಆಕೆ, ಹಣಕಾಸಿನ ವಿಚಾರದ ಬಗ್ಗೆ ಮಾತನಾಡಬೇಕು ಎಂದು ಕರೆಸಿಕೊಂಡಿದ್ದಳು.’

‘ಕಾರಿನಲ್ಲಿ ಅವರನ್ನು ಅಪಹರಿಸಿದ ಇಬ್ಬರೂ, ಮಾರ್ಗಮಧ್ಯೆ ಉಸಿರುಗಟ್ಟಿಸಿ ಸಾಯಿಸಿದ್ದರು. ಬಳಿಕ ಶವವನ್ನು ಡಿಕ್ಕಿಯಲ್ಲಿ ಹಾಕಿಕೊಂಡು, ರಾತ್ರಿ ಮಂಡ್ಯದ ಹನಗೆರೆ ಗ್ರಾಮಕ್ಕೆ ತೆರಳಿದ್ದರು. ಮೃತರ ಮೈಮೇಲಿದ್ದ ಆಭರಣಗಳನ್ನು ಬಿಚ್ಚಿಕೊಂಡ ಹಂತಕರು, ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಿ ಬೆಳಗಿನ ಜಾವ ನಗರಕ್ಕೆ ಮರಳಿದ್ದರು.’

‘ರಸ್ತೆ ಬದಿ ಅರೆಬೆಂದ ಶವ ಕಂಡ ಸ್ಥಳೀಯರು, ಮಂಡ್ಯ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇತ್ತ ತಿಮ್ಮಮ್ಮ ಕಾಣೆಯಾಗಿರುವ ಬಗ್ಗೆ ಅವರ ಕುಟುಂಬ ಸದಸ್ಯರೂ ಅದೇ ದಿನ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ಕೊಟ್ಟಿದ್ದರು. ಮಹಿಳೆಯ ಶವ ಪತ್ತೆಯಾಗಿರುವ ಬಗ್ಗೆ ಮಂಡ್ಯ ಪೊಲೀಸರು ನಿಯಂತ್ರಣ ಕೊಠಡಿಗೆ ಫೋಟೊ ಸಹಿತ ಮಾಹಿತಿ ಕೊಟ್ಟಿದ್ದರು. ಆ ಸುಳಿವು ಆಧರಿಸಿ ನಮ್ಮ ಸಿಬ್ಬಂದಿ ತಿಮ್ಮಮ್ಮ ಅವರ ಕುಟುಂಬ ಸದಸ್ಯರ ಜತೆ ಮಂಡ್ಯಕ್ಕೆ ತೆರಳಿದರು. ಮೃತದೇಹ ಗುರುತಿಸಿದ ಅವರ ಮಗ, ಹಣದಾಸೆಗೆ ಶೀಲಾಳೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಒಡವೆ ನಾಪತ್ತೆ
‘ಭಾನುವಾರ ಬೆಳಿಗ್ಗೆ ಕೆಲ ವಾಹಿನಿಗಳಲ್ಲಿ ಈ ಸುದ್ದಿ ಪ್ರಸಾರ ವಾಗುತ್ತಿದ್ದಂತೆಯೇ ಶೀಲಾ ಸಂಬಂಧಿಕರ ಮನೆಗೆ ತೆರಳಿದ್ದಳು. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಯಿತು. ತಿಮ್ಮಮ್ಮ ಅವರಿಂದ ದೋಚಿದ್ದ ಒಡವೆಗಳು ಅರುಣ್ ಬಳಿ ಇರುವುದಾಗಿ ಹೇಳಿದ್ದಾಳೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT