ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟು, ಪ್ರೀತಿ ಮೂಲಮಂತ್ರ

ಕಾಶ್ಮೀರ ಬಿಕ್ಕಟ್ಟು ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂತ್ರ
Last Updated 28 ಆಗಸ್ಟ್ 2016, 21:30 IST
ಅಕ್ಷರ ಗಾತ್ರ

ನವದೆಹಲಿ: ಕಾಶ್ಮೀರ ಸಮಸ್ಯೆ ಬಗೆಹರಿಸಲು ‘ಒಗ್ಗಟ್ಟು’ ಮತ್ತು ‘ಪ್ರೀತಿ ’ಯೇ ಮೂಲ ಮಂತ್ರಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ‘ಕಾಶ್ಮೀರದಲ್ಲಿ ನಾಗರಿಕರು ಅಥವಾ ಯೋಧರು ಬಲಿಯಾದರೆ, ಅದರಿಂದ ಆ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ನಷ್ಟ ಉಂಟಾಗುತ್ತದೆ’ ಎಂದಿರುವ ಪ್ರಧಾನಿ ಕಾಶ್ಮೀರದ ಜನರ ಹೃದಯ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಶನಿವಾರ ಪ್ರಧಾನಿ ಜತೆ ಚರ್ಚೆ ನಡೆಸಿ ಕಾಶ್ಮೀರ ಸಮಸ್ಯೆ ಬಗೆಹರಿಸಲು 3 ಅಂಶಗಳ ಸೂತ್ರಗಳನ್ನು ಮುಂದಿಟ್ಟಿದ್ದರು. ಅದರ ಬೆನ್ನಲ್ಲೇ ಪ್ರಧಾನಿ  ಈ ಮಾತುಗಳನ್ನಾಡಿದ್ದಾರೆ. ಕಾಶ್ಮೀರ ವಿಷಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು  22 ರಾಯಭಾರಿಗಳನ್ನು ನೇಮಿಸಲಾಗಿದೆ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಶನಿವಾರವಷ್ಟೇ ಪ್ರಕಟಿಸಿದ್ದರು.

‘ಮನದ ಮಾತು’ ತಿಂಗಳ ಕಾರ್ಯಕ್ರಮದಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಮೋದಿ, ‘ಕಾಶ್ಮೀರಕ್ಕೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಪಕ್ಷಗಳು ಒಂದೇ ನಿಲುವು ಹೊಂದಿವೆ. ಇದು ಪ್ರತ್ಯೇಕತಾವಾದಿಗಳು ಮತ್ತು ವಿಶ್ವಕ್ಕೆ ನೀಡಿರುವ ಸ್ಪಷ್ಟ ಸಂದೇಶ’ ಎಂದು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಮಕ್ಕಳ ಕೈಗಳಿಗೆ ಕಲ್ಲುಗಳನ್ನು ಕೊಟ್ಟು ಹಿಂಸಾಕೃತ್ಯಕ್ಕೆ ತಳ್ಳುವವರಿಗೆ ಎಚ್ಚರಿಕೆ ನೀಡಿದ ಅವರು, ‘ಹಿಂಸೆಗೆ ಪ್ರಚೋದಿಸುವವರು ಮುಂದೊಂದು ದಿನ ಆ ಮುಗ್ಧ ಮಕ್ಕಳಿಗೆ ಉತ್ತರಿಸಬೇಕಾಗಬಹುದು’ ಎಂದಿದ್ದಾರೆ.

‘ಕಾಶ್ಮೀರ ಸಮಸ್ಯೆ ಬಗ್ಗೆ ವಿವಿಧ ಪಕ್ಷಗಳ ಜತೆ ಸಾಕಷ್ಟು ಚರ್ಚೆ ನಡೆಸಿದ್ದೇನೆ. ಇದರಿಂದ ಒಂದು ಅಂಶ ಮನವರಿಕೆಯಾಗಿದೆ. ಒಗ್ಗಟ್ಟು ಮತ್ತು ಸ್ನೇಹದಿಂದ ಈ ಬಿಕ್ಕಟ್ಟಿಗೆ ಪರಿಹಾರ ಕಾಣಬಹುದು.

‘ದೇಶದ 125 ಕೋಟಿ ಜನರಲ್ಲಿರುವ ಸಾಮರ್ಥ್ಯದಲ್ಲಿ ನನಗೆ ನಂಬಿಕೆಯಿದೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಉಜ್ವಲ ಭವಿಷ್ಯ ನಮ್ಮದಾಗಲಿದೆ’ ಎಂದು ಹೇಳಿದ್ದಾರೆ.

*
ಢಣಾಪುರದ ಮಲ್ಲಮ್ಮಗೆ ಪ್ರಧಾನಿ ಪ್ರಶಂಸೆ



ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಆಗ್ರಹಿಸಿ ಪೋಷಕರ ವಿರುದ್ಧ ಸಿಡಿದೆದ್ದಿದ್ದ ಕರ್ನಾಟಕದ ವಿದ್ಯಾರ್ಥಿನಿ ಬಗ್ಗೆ ಮೋದಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

‘ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಢಣಾಪುರದ ಮಲ್ಲಮ್ಮ ಪೋಷಕರ ವಿರೋಧದ ನಡುವೆಯೂ ಉಪವಾಸ ಮಾಡಿ ಶೌಚಾಲಯ ನಿರ್ಮಿಸಿಕೊಂಡಿರುವುದು ಪ್ರಶಂಸನೀಯ’ ಎಂದಿದ್ದಾರೆ. ಮಲ್ಲಮ್ಮನ ಈ ಕಾರ್ಯ ಹಾಗೂ ಹಣಕಾಸಿನ ನೆರವು ನೀಡಿ ಶೌಚಾಲಯ ನಿರ್ಮಿಸಲು ಸಹಕರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್‌ ಶಫಿ ಅವರನ್ನು ಮೋದಿ ಹೊಗಳಿದ್ದಾರೆ.

16 ವರ್ಷದ ಮಲ್ಲಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಳು. ಇದನ್ನು ತಿಳಿದ ಗ್ರಾಮದ ಮುಖಂಡರು ಶೌಚಾಲಯ ನಿರ್ಮಿಸಿಕೊಟ್ಟಿದ್ದರು.

*
‘ಮೋದಿಯಿಂದಲ್ಲದೆ ಯಾರಿಂದಲೂ ಆಗದು’
ಜಮ್ಮು (ಪಿಟಿಐ):
‘ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ನರೇಂದ್ರ ಮೋದಿ ಅವರ ಅಧಿಕಾರ ಅವಧಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ಮುಂದೆಂದೂ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.

ರಾಜ್ಯದ ಬಿಕ್ಕಟ್ಟು ಪರಿಹರಿಸಲು ಅಟಲ್ ಬಿಹಾರಿ ವಾಜಪೇಯಿ ಅನುಸರಿಸಿದ್ದ ಮಾರ್ಗವೊಂದೇ ದಾರಿ ಎಂದೂ ಮುಫ್ತಿ ಹೇಳಿದ್ದಾರೆ.

‘ವಾಜಪೇಯಿ ಮಾರ್ಗ ಹೊರತುಪಡಿಸಿ ಪರಿಹಾರಕ್ಕೆ ಬೇರೆ ದಾರಿ ಇಲ್ಲ. ಇದನ್ನು ನಾವೂ ಅನುಸರಿಸಬೇಕು, ಪಾಕ್‌ ಕೂಡ ಅನುಸರಿಸಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT