ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆನೆ ಪದರ’ ಮಿತಿ ಸಡಿಲಿಸಲು ಚಿಂತನೆ

Last Updated 28 ಆಗಸ್ಟ್ 2016, 20:21 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇತರೆ ಹಿಂದುಳಿದ ವರ್ಗಗಳಿಗೆ (ಒ.ಬಿ.ಸಿ) ಮೀಸಲಿಟ್ಟ ಸರ್ಕಾರಿ ಹುದ್ದೆಗಳು ದೊಡ್ಡ ಸಂಖ್ಯೆಯಲ್ಲಿ ಖಾಲಿ ಉಳಿದಿರುವ ಕಾರಣದಿಂದ, ‘ಕೆನೆ ಪದರ’ ಮಿತಿಗೆ ತುಸು ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ವಾರ್ಷಿಕ ₹8 ಲಕ್ಷದವರೆಗೆ ಆದಾಯ ಇರುವವರನ್ನು ‘ಕೆನೆ ಪದರ’ ವ್ಯಾಪ್ತಿಯಿಂದ ಹೊರಗಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸರ್ಕಾರಿ ನೌಕರಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿನ ಸೀಟುಗಳಲ್ಲಿ ಶೇಕಡ 27ರಷ್ಟನ್ನು ಇತರೆ ಹಿಂದುಳಿದ ವರ್ಗಗಳ ಜನರಿಗೆ ಮೀಸಲಿಡಲಾಗಿದೆ. ಈ ಸೌಲಭ್ಯ ಪಡೆಯುವವರ ಕುಟುಂಬದ ವಾರ್ಷಿಕ ಆದಾಯ ಈಗಿನ ನಿಯಮಗಳ ಅನ್ವಯ ₹6 ಲಕ್ಷ ಮೀರುವಂತಿಲ್ಲ. ₹ 6 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವ ಕುಟುಂಬಗಳ ಅಭ್ಯರ್ಥಿಗಳು ಮೀಸಲಾತಿ ಸೌಲಭ್ಯಕ್ಕೆ ಅರ್ಹರಲ್ಲ. ಅವರನ್ನು ‘ಕೆನೆ ಪದರ’ದವರು ಎಂದು ಗುರುತಿಸಲಾಗುತ್ತಿದೆ.

ವಾರ್ಷಿಕ ಆದಾಯ ಮಿತಿ ಸಡಿಲಿಸುವುದರಿಂದ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಜನ ಮೀಸಲಾತಿ ಅಡಿ ಸರ್ಕಾರಿ ಹುದ್ದೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಗಿಟ್ಟಿಸಲು ಅರ್ಹರಾಗುತ್ತಾರೆ ಎಂಬುದು ಸರ್ಕಾರದ ಲೆಕ್ಕಾಚಾರ.

₹8 ಲಕ್ಷದವರೆಗೆ ವಾರ್ಷಿಕ ಆದಾಯ ಇರುವ ಒಬಿಸಿ ವರ್ಗದವರನ್ನು ಮೀಸಲಾತಿ ವ್ಯಾಪ್ತಿಗೆ ತರಬೇಕು  ಎಂಬ ಪ್ರಸ್ತಾವನೆ ಸಿದ್ಧಪಡಿಸಲು ಸಾಮಾಜಿಕ ನ್ಯಾಯ ಸಚಿವಾಲಯ ಮುಂದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆಗೆ ಸಂಪರ್ಕಿಸಿದಾಗ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯ ಅಶೋಕ್ ಸೈನಿ ಅವರು, ‘ವಾರ್ಷಿಕ ಆದಾಯದ ಮಿತಿಯನ್ನು ₹ 15 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ನಾವು ಶಿಫಾರಸು ಮಾಡಿದ್ದೇವೆ.

ಒಬಿಸಿ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ ಎರಡು ದಶಕಗಳು ಕಳೆದಿದ್ದರೂ, ಅದು ಪೂರ್ಣ ಪ್ರಮಾಣದಲ್ಲಿ ಬಳಕೆ ಆಗಿಲ್ಲ. ಇದಕ್ಕೆ ಪ್ರಮುಖ ಕಾರಣ ಈಗಿರುವ ವಾರ್ಷಿಕ ಆದಾಯ ಮಿತಿ’ ಎಂದು ಅವರು ಹೇಳಿದರು.

2006ರ ರಾಷ್ಟ್ರೀಯ ಮಾದರಿ ಸಮೀಕ್ಷೆ ಅನ್ವಯ ದೇಶದಲ್ಲಿ ಒಬಿಸಿ ಜನಸಂಖ್ಯೆಯ ಪ್ರಮಾಣ ಅಂದಾಜು ಶೇಕಡ 41ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT