ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಗೆಲುವಿನ ಆಸೆಗೆ ಮಳೆ ಅಡ್ಡಿ

ಟ್ವೆಂಟಿ–20 ಕ್ರಿಕೆಟ್; ಮಿಂಚಿದ ಬೌಲರ್‌ಗಳು; ಎರಡನೇ ಪಂದ್ಯ ರದ್ದು; ವಿಂಡೀಸ್‌ಗೆ 1–0ರಲ್ಲಿ ಸರಣಿ
Last Updated 28 ಆಗಸ್ಟ್ 2016, 19:43 IST
ಅಕ್ಷರ ಗಾತ್ರ

ಲೌಡರ್‌ಹಿಲ್‌ (ಪಿಟಿಐ): ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ಭಾರತದ ಕನಸು ಭಾನುವಾರ ಮಳೆಯಲ್ಲಿ ಕೊಚ್ಚಿಹೋಯಿತು.
ಸೆಂಟ್ರಲ್‌ ಬ್ರೆವಾರ್ಡ್‌ ರೀಜನಲ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯ  ಮಳೆಯಿಂದಾಗಿ ರದ್ದಾಯಿತು.

ಹೀಗಾಗಿ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ದೋನಿ ಬಳಗವನ್ನು ಮಣಿಸಿದ್ದ ವೆಸ್ಟ್‌ ಇಂಡೀಸ್‌ ತಂಡ 1–0ರಿಂದ ಸರಣಿ ಗೆದ್ದು ಟೆಸ್ಟ್‌ ಸರಣಿಯಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ಟಾಸ್‌ ಗೆದ್ದ ಭಾರತ ತಂಡದ ನಾಯಕ  ದೋನಿ ಮೊದಲು ಫೀಲ್ಡಿಂಗ್‌ ಮಾಡಲು ತೀರ್ಮಾನಿಸಿದರು. ಕಾರ್ಲೊಸ್‌ ಬ್ರಾಥ್‌ವೈಟ್‌ ಸಾರಥ್ಯದ ತಂಡವನ್ನು 19.4 ಓವರ್‌ಗಳಲ್ಲಿ 143ರನ್‌ಗಳಿಗೆ ಕಟ್ಟಿಹಾಕಿದ ಬೌಲರ್‌ಗಳು ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಗುರಿ ಬೆನ್ನಟ್ಟಿದ ಭಾರತ  2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 15ರನ್‌ ಗಳಿಸಿದ್ದ ವೇಳೆ ಮಳೆ ಸುರಿಯಿತು. ಒಂದು ಗಂಟೆಗೂ ಹೆಚ್ಚು ಕಾಲ  ಕಾದರೂ ‘ವರುಣನ ಆಟ’ ನಿಲ್ಲುವ ಸೂಚನೆ ಸಿಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಂದ್ಯದ ಅಧಿಕಾರಿಗಳು ಸ್ಥಳೀಯ ಕಾಲಮಾನ  ಮಧ್ಯಾಹ್ನ 2 ಗಂಟೆಗೆ ಪಂದ್ಯವನ್ನು ರದ್ದು ಮಾಡುವ ತೀರ್ಮಾನ ಕೈಗೊಂಡರು.

ಆಘಾತ:  ಬ್ಯಾಟಿಂಗ್‌ ಆರಂಭಿಸಿದ ಕೆರಿಬಿಯನ್‌ ನಾಡಿನ ತಂಡಕ್ಕೆ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಮೊದಲ ಆಘಾತ ಎದುರಾಯಿತು.  ಮೊದಲ ಪಂದ್ಯದಲ್ಲಿ ಶತಕ ಗಳಿಸಿ ಮಿಂಚಿದ್ದ ಎವಿನ್‌ ಲೂಯಿಸ್‌ಗೆ (7) ಮೊಹಮ್ಮದ್‌ ಶಮಿ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ.

ಅಶ್ವಿನ್‌, ಮಿಶ್ರ ಮೋಡಿ:  ಆ ನಂತರ ಸ್ಪಿನ್ನರ್‌ಗಳಾದ ಅಮಿತ್‌ ಮಿಶ್ರಾ (24ಕ್ಕೆ3) ಮತ್ತು ಆರ್‌. ಅಶ್ವಿನ್‌ (11ಕ್ಕೆ2) ಮೋಡಿ ಮಾಡಿದರು.ಶಿಸ್ತುಬದ್ಧ ದಾಳಿ ನಡೆಸಿದ ಇವರು ವಿಂಡೀಸ್‌ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು. ಜಸ್‌ಪ್ರೀತ್‌ ಬೂಮ್ರಾ (26ಕ್ಕೆ2) ಮತ್ತು ಮೊಹಮ್ಮದ್‌ ಶಮಿ (31ಕ್ಕೆ2) ಅವರೂ ಪರಿಣಾಮಕಾರಿ ದಾಳಿ ನಡೆಸಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT