ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಷಿಯಲ್‌ ಮೀಡಿಯಾ’ ಘಟಕ ಶುರು

ವಾರ್ತಾ ಇಲಾಖೆ ಕಚೇರಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳ ಕ್ಷಣ ಕ್ಷಣದ ಮಾಹಿತಿ
Last Updated 28 ಆಗಸ್ಟ್ 2016, 19:51 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಿ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿಯನ್ನು ತ್ವರಿತಗತಿಯಲ್ಲಿ ಜನರಿಗೆ ಮುಟ್ಟಿಸುವ ಉದ್ದೇಶದಿಂದ ಇನ್ಫೆಂಟ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ‘ಸೋಷಿಯಲ್‌ ಮೀಡಿಯಾ’ ಎಂಬ ಘಟಕ ಉದ್ಘಾಟನೆಗೆ ಸಿದ್ಧವಾಗಿದೆ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಸದ್ಬಳಕೆ ಮಾಡಿಕೊಂಡು  ಫೇಸ್‌ಬುಕ್‌, ಟ್ವಿಟರ್‌, ಯೂ ಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಕ್ಷಣಕ್ಷಣದ ಮಾಹಿತಿ ನೀಡಲು ವಾರ್ತಾ ಇಲಾಖೆ ಮುಂದಾಗಿದೆ.

‘ಕರ್ನಾಟಕ ವಾರ್ತೆ’ ಹೆಸರಿನಲ್ಲಿ ಈಗಾಗಲೇ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಖಾತೆಗಳನ್ನು ತೆರೆಯಲಾಗಿದೆ. ಎಂಟು ತಿಂಗಳ ಹಿಂದೆ ಆರಂಭವಾದ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಸರ್ಕಾರಿ ಕಾರ್ಯಕ್ರಮಗಳು, ಸಚಿವರ ಹೇಳಿಕೆಗಳು, ಜಾಹೀರಾತುಗಳು, ವಿವಿಧ ಯೋಜನೆಗಳ ಕುರಿತ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ. ಇದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಪ್ರತ್ಯೇಕ ಘಟಕ ಸ್ಥಾಪಿಸಲಾಗಿದೆ.

ಈ ಘಟಕದ ತಾಂತ್ರಿಕ ನಿರ್ವಹಣೆಯ ಗುತ್ತಿಗೆಯನ್ನು ಆಬ್ಜೆಕ್ಟ್‌ ಒನ್‌ ಸಂಸ್ಥೆ ಪಡೆದುಕೊಂಡಿದೆ. ಮೂವರು ತಾಂತ್ರಿಕ ಸಿಬ್ಬಂದಿ, ಐವರು ವಿಷಯ ಪರಿಣಿತರಿದ್ದಾರೆ. 12 ಟಿ.ವಿ.ಗಳನ್ನು ಅಳವಡಿಸಲಾಗಿದ್ದು, ಕನ್ನಡದ ಸುದ್ದಿ ವಾಹಿನಿಗಳು ಅದರಲ್ಲಿ ಪ್ರಸಾರವಾಗುತ್ತವೆ. 

ಈ ವಾಹಿನಿಗಳಲ್ಲಿ ಪ್ರಸಾರವಾಗುವ ಸರ್ಕಾರಿ ಕಾರ್ಯಕ್ರಮಗಳ ಸುದ್ದಿಗಳು, ಜನರಿಗೆ ಉಪಯುಕ್ತವಾಗುವ ಮಾಹಿತಿಯನ್ನು ಪಡೆದು ಇಲಾಖೆಯ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾಗುತ್ತದೆ. ಹಾಗೆಯೇ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಲಾಗುತ್ತದೆ. ಮುಖ್ಯಮಂತ್ರಿ, ಸಚಿವರ ಭಾಷಣ, ಹೇಳಿಕೆಗಳ ವಿಡಿಯೊಗಳನ್ನು ಸಹ ಅಪ್‌ಲೋಡ್‌ ಮಾಡಲಾಗುತ್ತದೆ.

₹4 ಲಕ್ಷ ವೆಚ್ಚದಲ್ಲಿ ಒಳಾಂಗಣ ವಿನ್ಯಾಸ: ಈ ಘಟಕದ ಒಳಾಂಗಣ ವಿನ್ಯಾಸವನ್ನು ಕಲಾವಿದ ಪ್ರಕಾಶ್‌ ಚಿಕ್ಕಪಾಳ್ಯ ಮಾಡಿದ್ದು, ಇದಕ್ಕಾಗಿ ₹4 ಲಕ್ಷ ವೆಚ್ಚ ಮಾಡಲಾಗಿದೆ. ಮೊಬೈಲ್‌, ಸ್ಮಾರ್ಟ್‌ಫೋನ್‌ಗಳು ಉಂಟು ಮಾಡಿರುವ ಮೋಡಿಯನ್ನು ಘಟಕದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಹಳ್ಳಿಯ ಸೊಗಡಿನ ಚಿತ್ತಾರ, ಸಾಮಾಜಿಕ ಜಾಲತಾಣಗಳ ಲೋಗೋಗಳನ್ನು ಚಿತ್ರಿಸುವ ಮೂಲಕ ಗೋಡೆಗಳಿಗೆ ಚೆಂದದ ಮೆರುಗು ನೀಡಿದ್ದಾರೆ.

ಸ್ಟುಡಿಯೊ ಸೌಲಭ್ಯ: ಇದೇ ಘಟಕದಲ್ಲಿ ಸಣ್ಣ ಸ್ಟುಡಿಯೊ ನಿರ್ಮಿಸಲಾಗುತ್ತಿದೆ. ರೆಕಾರ್ಡಿಂಗ್‌, ಎಡಿಟಿಂಗ್‌ ಹಾಗೂ ಹ್ಯಾಂಗ್‌ಔಟ್ಸ್‌ ಮೂಲಕ ಮಾತನಾಡಲು ಅನುಕೂಲವಾಗುವ ರೀತಿಯಲ್ಲಿ ಸ್ಟುಡಿಯೊ ರೂಪಿಸಲಾಗುತ್ತಿದೆ.

ಸರ್ಕಾರ, ಮಾಧ್ಯಮಗಳ ನಡುವೆ ಸೇತುವೆ: ‘ಸೋಷಿಯಲ್‌ ಮೀಡಿಯಾ’ ಘಟಕ ಸರ್ಕಾರ ಹಾಗೂ ಮಾಧ್ಯಮಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಮುಖ್ಯಮಂತ್ರಿ, ಸಚಿವರು ಅಧಿಕೃತ ಪ್ರಕಟಣೆಗಳಿಗೆ ಕಾಯುವ ಅಗತ್ಯವಿಲ್ಲ.

ಅವರ ಅಭಿಪ್ರಾಯ, ಪ್ರಕಟಣೆಗಳಿಗೆ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಕಾಲಕಾಲಕ್ಕೆ ಅಪ್‌ಲೋಡ್‌ ಮಾಡಲಾಗುತ್ತದೆ. ಈ ಮಾಹಿತಿಗಳನ್ನು ಮಾಧ್ಯಮಗಳು ಬಳಸಿಕೊಳ್ಳಬಹುದು. 

‘ಇತ್ತೀಚೆಗೆ ನಡೆದ ದೇವರಾಜ ಅರಸು ಅವರ 101ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಕ್ಷಣ ಕ್ಷಣದ ಮಾಹಿತಿಯನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಲಾಯಿತು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು’ ಎಂದು ವಾರ್ತಾ ಇಲಾಖೆಯ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಹಾರ ಸಚಿವ ಯು.ಟಿ.ಖಾದರ್‌, ಕೃಷಿ ಸಚಿವ ಕೃಷ್ಣ ಬೈರೇಗೌಡ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಅವರನ್ನೊಳಗೊಂಡ ಜಾಲವನ್ನು ಸಹ ಆರಂಭಿಸಲಾಗುತ್ತದೆ’  ಎಂದು ಹೇಳಿದರು.

***
ಯುವ ಸಮುದಾಯಕ್ಕೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವಿಲ್ಲ. ಅವರಿಗೆ ಮಾಹಿತಿ ನೀಡಲು ಫೇಸ್‌ಬುಕ್‌, ಟ್ವಿಟರ್‌ ಹೆಚ್ಚು ಸಹಕಾರಿ.
-ಎನ್‌.ಆರ್‌. ವಿಶುಕುಮಾರ್‌, ನಿರ್ದೇಶಕ, ವಾರ್ತಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT