ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇರುತ್ತಿದೆ ತ್ಯಾಜ್ಯನೀರು; ಕೆರೆಯಾಯ್ತು ಕಡುಹಸಿರು

ಆರ್.ನಾರಾಯಣಪುರದ ಶೀಲವಂತ ಕೆರೆ ಅಭಿವೃದ್ಧಿಗೆ ಸ್ಥಳೀಯರ ಒತ್ತಾಯ
Last Updated 29 ಆಗಸ್ಟ್ 2016, 5:59 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ಕ್ಷೇತ್ರದ ವೈಟ್‌ಫೀಲ್ಡ್ ಸಮೀಪದ ಆರ್.ನಾರಾಯಣಪುರದ ಶೀಲವಂತನ ಕೆರೆಗೆ ಕಾಲುವೆಗಳ ಮೂಲಕ ಒಳಚರಂಡಿ ನೀರು ಸೇರುತ್ತಿದೆ. ಇದರಿಂದಾಗಿ ಕಲುಷಿತಗೊಂಡಿರುವ ಕೆರೆಯ ನೀರು  ಕಡುಹಸಿರು ಬಣ್ಣಕ್ಕೆ ತಿರುಗಿದ್ದು, ದುರ್ನಾತ ಹೊರಸೂಸುತ್ತಿದೆ.

ಬಿಬಿಎಂಪಿ ಹಗದೂರು ವಾರ್ಡ್ ವ್ಯಾಪ್ತಿಗೆ ಸೇರಿದ ವೈಟ್‌ಫೀಲ್ಡ್ ಗ್ರಾಮದ ಸರ್ವೇ ನಂಬರ್‌ 41ರಲ್ಲಿನ ಈ ಕೆರೆ 19 ಎಕರೆ 32 ಗುಂಟೆ ಹೊಂದಿದೆ. ವರ್ತೂರು ಕೆರೆಯಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಈ ಕೆರೆಯ ಸುತ್ತಮುತ್ತ ನೂರಾರು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿವೆ. 

ಇವುಗಳ ಒಳಚರಂಡಿ ನೀರನ್ನು ಕೊಳವೆಗಳ ಮೂಲಕ  ಕೆರೆಗೆ ಬಿಡಲಾಗುತ್ತಿದೆ. ಅಲ್ಲದೇ ಕೆರೆಗೆ ಸಂಪರ್ಕವಿರುವ ರಾಜಕಾಲುವೆಗಳಿಗೂ ನೇರವಾಗಿ ಒಳಚರಂಡಿ ನೀರನ್ನು ಹರಿಬಿಡಲಾಗುತ್ತಿದೆ. ಇದರಿಂದಾಗಿ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡಿದೆ ಎಂದು ದೂರುತ್ತಾರೆ ಸ್ಥಳೀಯರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಕೊಳಕು ನೀರನ್ನು ತ್ಯಾಜ್ಯನೀರು ಸಂಸ್ಕರಣಾ ಘಟಕದಲ್ಲಿ (ಎಸ್‌ಟಿಪಿ)  ಶುದ್ಧೀಕರಿಸಿದ ಬಳಿಕವೇ ಹೊರಬಿಡಬೇಕು. ಆದರೆ, ಇಲ್ಲಿನ ಅನೇಕ ಅಪಾರ್ಟ್‌ಮೆಂಟ್‌  ಸಮುಚ್ಚಯಗಳಲ್ಲಿ ಎಸ್‌ಟಿಪಿ ಇಲ್ಲ’ ಎಂದು ಸ್ಥಳೀಯರಾದ ನಲ್ಲೂರುಹಳ್ಳಿ ಟಿ.ನಾಗೇಶ ದೂರಿದರು.

‘ಎರಡು ವರ್ಷಗಳಿಂದ ಕೆರೆಯ ಅಭಿವೃದ್ಧಿ ಕಾರ್ಯ ಕುಂಟುತ್ತ ಸಾಗಿದೆ. ಕೆರೆಯ ಸುತ್ತಮುತ್ತ ತಡೆಗೋಡೆಯನ್ನು ವ್ಯವಸ್ಥಿತವಾಗಿ ನಿರ್ಮಿಸಿಲ್ಲ. ಕೆಲವೆಡೆ ತಡೆಗೋಡೆ ಕುಸಿದು ಹೋಗಿದೆ. ಕೆರೆಯ ಸುತ್ತಮುತ್ತ ಅವೈಜ್ಞಾನಿಕವಾಗಿ ತಂತಿ ಬೇಲಿಯನ್ನು ಹಾಕಲಾಗಿದೆ’ ಎಂದರು.

4 ಎಕರೆ ಕೆರೆ ಒತ್ತುವರಿ: ‘ಕೆರೆಯ ಪೂರ್ವ ಭಾಗದಲ್ಲಿ ಸುಮಾರು ನಾಲ್ಕು ಎಕರೆಗೂ ಹೆಚ್ಚು ಜಾಗ ಒತ್ತುವರಿಯಾಗಿದೆ. ಕೆರೆಗೆ ಹೊಂದಿಕೊಂಡಿರುವ ಸರ್ವೇ ನಂಬರ್‌ 42ರಲ್ಲಿ, 44ರಲ್ಲಿ, 45ರಲ್ಲಿ ಹಾಗೂ 47ರಲ್ಲಿ ರಾಜಕೀಯ ಮುಖಂಡರೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ.   ಒತ್ತುವರಿ ತೆರವುಗೊಳಿಸಿ,  ಕೆರೆಗೆ  ತಂತಿ ಬೇಲಿ ಅಳವಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸರ್ವೇ ನಂಬರ್‌ 46ರಲ್ಲಿರುವ 9 ಗುಂಟೆ ಸರ್ಕಾರಿ ಸ್ಮಶಾನ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಒತ್ತುವರಿದಾರರು ರಾಜಕೀಯವಾಗಿ ಪ್ರಭಾವಶಾಲಿಗಳಾಗಿರುವುದರಿಂದ ತಹಶೀಲ್ದಾರರು ತೆರವು ಮಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಕೆಲವು ತಿಂಗಳುಗಳ ಹಿಂದೆ ಕೆರೆ ಒತ್ತುವರಿ ಕುರಿತು ಅಧ್ಯಯನ ನಡೆಸುತ್ತಿರುವ ಸದನ ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು  ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಒತ್ತುವರಿ ತೆರವಿಗೆ ಸೂಚಿಸಿದ್ದರು. ಆದರೆ   ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು. 

‘ಕೆರೆ ಕಟ್ಟೆಗೆ ಹೊಂದಿಕೊಂಡು ನಗರ ಮಹಾ ಯೋಜನೆಯ ನಕ್ಷೆಯಲ್ಲಿ ಆರ್.ನಾರಾಯಣಪುರ ಗ್ರಾಮದ ಮೂಲಕ ವೈಟ್‌ಫೀಲ್ಡ್  ಬೋರ್‌ವೆಲ್‌ ರಸ್ತೆಗೆ ಒಟ್ಟು 80 ಅಡಿ ಅಗಲದ ಸಂಪರ್ಕ ರಸ್ತೆ ಇರುವುದಾಗಿ ತೋರಿಸಲಾಗಿದೆ. ಆದರೆ, ವಾಸ್ತವದಲ್ಲಿ ಅಲ್ಲಿರುವುದು ಕೇವಲ 12 ಅಡಿಗಳಷ್ಟು ಅಗಲದ ರಸ್ತೆ ಮಾತ್ರ. ಇಡೀ ರಸ್ತೆ ಸಂಪೂರ್ಣವಾಗಿ ಒತ್ತುವರಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT