ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆರ್ಥಿಕ ನೀತಿ ಬದಲಾಗಲಿ

ಯುವ ಸಮಾವೇಶದಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಅಭಿಮತ
Last Updated 29 ಆಗಸ್ಟ್ 2016, 11:08 IST
ಅಕ್ಷರ ಗಾತ್ರ

ಮಂಡ್ಯ: ದೇಶದ ಅರ್ಥಿಕ ನೀತಿ ಬದಲಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸದನಗಳಲ್ಲಿ ಕೃಷಿ ಕುರಿತು ಚರ್ಚೆ ನಡೆಸಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯ ಸಲಹೆ ನೀಡಿದರು.

ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಕ್ರಾಂತಿ ಯುವ ಶಕ್ತಿ ಸಂಘಟನೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ಬೃಹತ್‌ ಯುವ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದನದಲ್ಲಿ ಜಿಎಸ್‌ಟಿ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ, ರೈತರ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ. ಕೃಷಿಯಿಂದ ರೈತರು ವಿಮುಖರಾಗಿ ಪಾಳು ಬಿಟ್ಟಿರುವ ಭೂಮಿ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕು. ಕೃಷಿಕ್ಷೇತ್ರ ಸಂಪೂರ್ಣವಾಗಿ ಸತ್ತುಹೋಗಿದೆ. ರಾಗಿ, ಭತ್ತ, ತೆಂಗು ಬೆಳೆಯಿಂದ ರೈತರು ಹಿಂದೆ ಸರಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ.  ರೈತರ ಸಮಸ್ಯೆ ಸರ್ಕಾರ ಕೇಳುವಂತಾಗಬೇಕು. ರಾಜಕಾರಣಿಗಳು ಹಿಂದೆ ಜನರ ರಕ್ಷಣೆಗೆಂದು ಜೈಲಿಗೆ ಹೋಗುತ್ತಿದ್ದರು, ಇಂದು ಬೇರೆ ಬೇರೆ ಕಾರಣಗಳಿಗೆ ಜೈಲಿಗೆ ಹೋಗುತ್ತಿರುವುದು ದುರಂತ ಎಂದು ದೂರಿದರು.

ಕಾವೇರಿ ಕಣಿವೆ ಪ್ರದೇಶದಲ್ಲಿ ಮುಂಗಾರು ವಿಫಲದಿಂದ ಕರ್ನಾಟಕ ಹಾಗೂ ತಮಿಳುನಾಡಿನ ರೈತರಿಬ್ಬರು ಕಷ್ಟದಲ್ಲಿದ್ದಾರೆ. ಆದರೆ, ನಮಗೆ ಕುಡಿಯಲು ನೀರು ಸಾಲುತ್ತಿಲ್ಲ, ತಮಿಳುನಾಡಿಗೆ ನೀರು ಬಿಡಬೇಕು ಎಂದು ಜಯಲಲಿತಾ ದುಂಬಾಲು ಬೀಳುವುದು ಸರಿಯಿಲ್ಲ ಎಂದು ತಿಳಿಸಿದರು.

ಸಂಘಟನೆಗಳ ಹೋರಾಟವು ಹಣ ವಸೂಲಿಗೆ ಸೀಮಿತವಾಗಿರದೇ ದೇಶದ ಅಭಿವೃದ್ಧಿ, ಭಾಷೆ, ಸಮಾನತೆ ಹಾಗೂ ರೈತ ಪರ ಹೋರಾಟಕ್ಕೆ ಮುಡಿಪಾಗಿರಬೇಕು.ಪ್ರಾಮಾಣಿಕ ಹೋರಾಟ ಮಾಡಿದ ನಾಯಕರ ಮಾರ್ಗದರ್ಶನ ಎಲ್ಲರಿಗೂ ಅವಶ್ಯಕವಾಗಿದೆ ಎಂದು ಹೇಳಿದರು.

ಜಿಲ್ಲೆಯ ಕೆ.ವಿ. ಶಂಕರಗೌಡ, ಎಸ್‌.ಎಂ. ಕೃಷ್ಣ, ಪ್ರೊ. ನಂಜುಂಡಸ್ವಾಮಿ ಅವರು ರೈತರ ಬಗ್ಗೆ ದೂರದೃಷ್ಟಿ ಇಟ್ಟುಕೊಂಡಿದ್ದ ವ್ಯಕ್ತಿಗಳು.  ಹಲವು ನಾಯಕರು ಹೋರಾಟದ ಮೂಲಕ ಜಿಲ್ಲೆಯಲ್ಲಿ ಹೆಸರು ಮಾಡಿದ್ದಾರೆ. ಖಾಸಗಿ ಫೈನಾನ್ಸ್‌ ಕಂಪನಿಯಿಂದ ಜನರು ನಲುಗಿ ಹೋಗಿದ್ದಾರೆ, ಇವರ ಹಾವಳಿ ತಡೆಯಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಂ. ರಘುಪತಿ ಅವರು, ಜಿಲ್ಲೆಯ ರೈತರು ಕಷ್ಟದಲ್ಲಿದ್ದಾರೆ. ಕೆ.ಆರ್‌.ಎಸ್‌. ಅಣೆಕಟ್ಟೆ ಭರ್ತಿಯಾಗಿಲ್ಲ, ಕುಡಿಯಲು ನೀರು ಸಾಲುತ್ತಿಲ್ಲ, ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಿಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕ್ರಾಂತಿ ಯುವ ಶಕ್ತಿ ಸಂಘಟನೆ ರಾಜ್ಯ ಘಟಕ ಅಧ್ಯಕ್ಷ ತಾ.ರ. ತುಳಸಿರಾಮ್‌ ಮಾತನಾಡಿ, ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಹ  ರೈತರನ್ನು ಭೇಟಿ ಮಾಡಲು ಬರದ ಕೃಷಿ ಸಚಿವ ಕೃಷ್ಣಭೈರೇಗೌಡ ಅವರಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.

ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ರಕಾಶ್‌ ಬಾಬು, ಕಾಂಗ್ರೆಸ್‌ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಸ್‌. ಆತ್ಮಾನಂದ, ಮಾಜಿ ಶಾಸಕ ಎಂ. ಶ್ರೀನಿವಾಸ್‌, ಟಿ. ವರಪ್ರಸಾದ್‌, ಬಸ್‌ ನಂಜುಂಡಪ್ಪ, ಪಾಸಿಬಲ್‌ ಸಿನಿಮಾ ನಟರಾದ ದೀಪಕ್‌, ಶ್ರಾವ್ಯ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌, ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಸ್‌. ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT