ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ ಪೊಲೀಸರ ನಡೆಗೆ ಅಸಮಾಧಾನ

ಎಸ್ಪಿ ಕಚೇರಿಯಲ್ಲಿ ದಲಿತರ ಕುಂದು ಕೊರತೆ ಸಭೆ
Last Updated 29 ಆಗಸ್ಟ್ 2016, 11:52 IST
ಅಕ್ಷರ ಗಾತ್ರ

ರಾಮನಗರ:  ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದಲಿತ ಮುಖಂಡರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಗುಪ್ತ ಅವರಿಗೆ ದೂರಿತ್ತರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ಕನಕಪುರ ದಲಿತರ ಸಮಸ್ಯೆಗಳ ವ್ಯಾಪಕವಾಗಿ ಚರ್ಚೆ ನಡೆಯಿತು. ‘ಕನಕಪುರ ತಾಲ್ಲೂಕಿನ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ದಲಿತರ ನೋವಿಗೆ ಸ್ಪಂದಿಸುತ್ತಿಲ್ಲ. ಕೆಲವು ಕಡೆ ಪೊಲೀಸರೇ ಬೆದರಿಕೆ ಹಾಕುತ್ತಿದ್ದಾರೆ. ರಾಜಿ ಸಂಧಾನಕ್ಕೆ ಒತ್ತಾಯಿಸುತ್ತಿದ್ದಾರೆ. ದೂರು ಸಲ್ಲಿಸಲು ಹೋದರೆ ಅವಮಾನಿಸುತ್ತಾರೆ. ದೂರು ತೆಗೆದುಕೊಳ್ಳಲು 4–5 ದಿನ ಬೇಕು, ಎಫ್‌ಐಆರ್ ಮಾಡಲು ತಿಂಗಳು ಗಟ್ಟಲೇ ಸಮಯ ಬೇಕು’ ಎಂದು ಸಮಾಜದ ಮುಖಂಡರು ಆರೋಪಿಸಿದರು.

‘ಕನಕಪುರ ವೃತ್ತ ವ್ಯಾಪ್ತಿಯಲ್ಲಿ 180 ಜಾತಿ ನಿಂದನೆ ಪ್ರಕರಣಗಳು ದಾಖಲಾಗಿದ್ದು, ಕೇವಲ 10ರಲ್ಲಿ ಮಾತ್ರ ಆರೋಪ ಪಟ್ಟಿ ಸಲ್ಲಿಸಲಾಗಿದೆ. 29 ಪ್ರಕರಣಗಳಲ್ಲಿ ಬಿ ರಿಪೋರ್ಟ್ ನೀಡಲಾಗಿದೆ. ದಲಿತರ ಸಮಸ್ಯೆಗಳನ್ನು ಕನಕಪುರ ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದೆಲ್ಲ ನೋಡಿದರೆ ‘ರಿಪಬ್ಲಿಕ್ ಆಫ್ ಕನಕಪುರ ಪೊಲೀಸ್’ ವ್ಯವಸ್ಥೆಯಿದೆ ಎಂಬ ಅನುಮಾನ ವ್ಯಕ್ತವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಗ್ಗಲಿಪುರ ಠಾಣೆಯಲ್ಲಿ ರಿಯಲ್ ಎಸ್ಟೇಟ್, ಮರಳು ದಂಧೆ ಮಾಡುವವರ ಪರ ಪೊಲೀಸರು ವರ್ತಿಸುತ್ತಿದ್ದಾರೆ’ ಎಂದು ಗೋವಿಂದಯ್ಯ ದೂರಿದರು. ‘ದಲಿತರ ಜಮೀನುಗಳನ್ನು ಸರ್ವಣೀಯರು ಒತ್ತುವರಿ ಮಾಡಿಕೊಳ್ಳುವ ಪ್ರಕರಣಗಳಿಗೆ ಜಿಲ್ಲೆಯಾದ್ಯಂತ ಠಾಣೆಗಳಿಗೆ ಮನ್ನಣೆ ಇಲ್ಲ. ಸಿವಿಲ್ ಪ್ರಕರಣ ಎಂದು ವಾಪಸ್ ಕಳುಹಿಸುತ್ತಾರೆ.ಈ ಪ್ರಕರಣಗಳನ್ನು ಅಟ್ರಾಸಿಟಿ ಕಾಯ್ದೆಯಡಿಯೂ ಪ್ರಕರಣ ದಾಖಲಿಸಬೇಕು’ ಎಂದು ಮುಖಂಡರು ಆಗ್ರಹಿಸಿದರು. 

ಮದ್ಯ ಮಾರಾಟ ನಿಷೇಧಿಸಿ: ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ಅಪ್ರಾಪ್ತರು, ಹಿರಿಯರು, ಹೆಣ್ಣು ಮಕ್ಕಳು ಸಹ ಕುಡಿತದ ಚಟಕ್ಕೆ ಸಿಲುಕಿ ದಾರಿ ತಪ್ಪುತ್ತಿದ್ದಾರೆ. ಅಬಕಾರಿ ಇಲಾಖೆಗೆ ಹಾಗೂ ಪೊಲೀಸರಿಗೆ ಸೂಕ್ತ ನಿದೇರ್ಶನ ನೀಡಿ ಅಕ್ರಮ ಮದ್ಯ ಮಾರಾಟವವನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯ ತಿದ್ದುಪಡಿ ಅಂಶಗಳು ಕುರಿತು ಮತ್ತು ಸಮರ್ಪಕ ಅನುಷ್ಟಾನದ ಕುರಿತು ಪೊಲೀಸರಿಗೆ ತರಬೇತಿ ಆಯೋಜಿಸಬೇಕು’ ಎಂದು ಸುಂದರೇಶ್ ಸಲಹೆ ನೀಡಿದರು.

ಸೂಕ್ತ ಕ್ರಮದ ಭರವಸೆ: ಪೊಲೀಸ್ ವರಿಷ್ಠಾಕಾರಿ ಡಾ. ಚಂದ್ರಗುಪ್ತ ಪ್ರತಿಕ್ರಿಯಿಸಿ ‘ಈಗಾಗಲೇ ಹಲವು ಪ್ರಕರಣಗಳಲ್ಲಿ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದ್ದು, ಇನ್ನೂ ಕೆಲವು ವಿಚಾರಣೆ ಹಂತದಲ್ಲಿವೆ. ಕಾನೂನಿನ ಅನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು.

ತಿಂಗಳ ಕೊನೆ ಭಾನುವಾರ ಸಭೆ: ‘ಪ್ರತಿ ತಿಂಗಳ ಕೊನೆಯ ಭಾನುವಾರ ಜಿಲ್ಲಾ ಮಟ್ಟದಲ್ಲಿ ಹಾಗೂ ಎರಡನೇ ಭಾನುವಾರ ಆಯಾ ಠಾಣಾ ವ್ಯಾಪ್ತಿಯಲ್ಲಿ ಕುಂದು ಕೊರತೆ ಸಭೆಗಳು ನಡೆಯಲಿವೆ. ಯಾವ ಆಹ್ವಾನಕ್ಕೆ ಕಾಯದೇ ಆಯಾ ದಿನ 11 ಗಂಟೆ ಸಭೆಗೆ ಹಾಜರಾಗಬಹುದು’ ಎಂದು ತಿಳಿಸಿದರು.

ಡಿವೈಎಸ್ಪಿಗಳಾದ ಲಕ್ಷ್ಮಿಗಣೇಶ್, ತಮ್ಮಯ್ಯ, ಸಿಪಿಐಗಳಾದ ಜಗದೀಶ್, ರಮೇಶ್, ಅನಿಲ್ ಕಮಾರ್, ದಲಿತ ಮುಖಂಡರಾದ ರಾ.ಸಿ.ದೇವರಾಜು, ರಾಂಪುರ ನಾಗೇಶ್, ಗೋವಿಂದಯ್ಯ, ಪಿ.ಜೆ. ಗೋವಿಂದರಾಜು, ಶಿವ ಕುಮಾರಸ್ವಾಮಿ, ವೆಂಕಟೇಶ್, ಶಿವಶಂಕರ್, ವೆಂಕಟಾಚಲಯ್ಯ  ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT