ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್ಎನ್ಎಲ್ ಕಳಪೆ ಸೇವೆಗೆ ಅಸಮಾಧಾನ

ದೂರವಾಣಿ ಸಲಹಾ ಸಮಿತಿ ಸಭೆ; ಉಪಕರಣಕ್ಕೆ ಪ್ರಸ್ತಾವ ನೀಡಲು ಸಿದ್ದೇಶ್ವರ ಸೂಚನೆ
Last Updated 29 ಆಗಸ್ಟ್ 2016, 12:08 IST
ಅಕ್ಷರ ಗಾತ್ರ

ದಾವಣಗೆರೆ: ‘ಬಿಎಸ್ಎನ್ಎಲ್ ಕಳಪೆ ಸೇವೆ ನೀಡುತ್ತಿದ್ದು, ನೆಟವರ್ಕ್ ಸಮಸ್ಯೆ ಬಗ್ಗೆ ಬಹಳ ದೂರುಗಳು ಬರುತ್ತಿವೆ. ಜಿಲ್ಲೆಯಲ್ಲಿ ಸೇವೆಯನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯವಿರುವ ಉಪಕರಣಗಳ ಬಗ್ಗೆ ಕೂಡಲೇ ಪ್ರಸ್ತಾವ ನೀಡಿ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸೂಚಿಸಿದರು.

ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಸೋಮವಾರ ನಡೆದ ದೂರವಾಣಿ ಸಲಹಾ ಸಮಿತಿ (ಟಿ.ಎ.ಸಿ) ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ದೇಶದಾದ್ಯಂತ ಬಿಎಸ್‌ಎನ್‌ಎಲ್‌ನ ಸಮಸ್ಯೆ ಇದೆ. ಲೋಕಸಭೆಯಲ್ಲೂ ಹಲವು ಬಾರಿ ಈ ಬಗ್ಗೆ ಚರ್ಚೆಗಳು ನಡೆದಿವೆ. ವಿಶೇಷವಾಗಿ ನಮ್ಮ ಜಿಲ್ಲೆಯಲ್ಲಿ ನೆಟವರ್ಕ್‌ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಆದೇಶಿಸಿದರು.

‘ನನ್ನ ಬಳಿ ಬಿಎಸ್‌ಎನ್‌ಎಲ್‌ನ ಎರಡು ಮೊಬೈಲ್‌ಗಳಿವೆ. ಕೆಲವೆಡೆ ನೆಟವರ್ಕ್‌ ಸಿಗದಿರುವುದರಿಂದ ನನ್ನ ಆಪ್ತ ಸಹಾಯಕನ ಬಳಿ ಇರುವ ಏರ್‌ಟೆಲ್‌ ಸಂಪರ್ಕವಿರುವ ಮೊಬೈಲ್‌ನಿಂದ ಮಾತನಾಡುತ್ತಿದ್ದೇನೆ. ನಮ್ಮ ಸರ್ಕಾರದ ಕಂಪೆನಿ ಮೊಬೈಲ್‌ ನೆಟವರ್ಕ್‌ ಸಿಗುವುದಿಲ್ಲ ಎಂಬುದಕ್ಕೆ ನಮಗೆ ನಾಚಿಕೆಯಾಗುತ್ತಿದೆ’ ಎಂದು ಸಂಸದ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಎಸ್‌ಎನ್‌ಎಲ್‌ನ ದೂರವಾಣಿ ಪ್ರಧಾನ ವ್ಯವಸ್ಥಾಪಕ ವಿವೇಕ ಜೈಸ್ವಾಲ್‌, ‘ಏರ್‌ಟೆಲ್‌ ನಮಗಿಂತ ಮೂರು ಪಟ್ಟು ಹೆಚ್ಚು ಟಾವರ್‌ಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಟಾವರ್‌ ಹಾಕಿದರೆ ತಿಂಗಳಿಗೆ ₹ 15,000 ನಿರ್ವಹಣೆಗೇ ವೆಚ್ಚವಾಗುತ್ತದೆ. ಅಲ್ಲಿಂದ ಕೇವಲ ₹ 2,000ದಿಂದ ₹ 3,000 ಆದಾಯ ಬರುತ್ತವೆ. ಹೀಗಾಗಿ ನಿರ್ವಹಣೆ ಮಾಡುವುದು ಸಮಸ್ಯೆಯಾಗುತ್ತಿದೆ’ ಎಂದು ತಿಳಿಸಿದರು.

‘ಉತ್ತಮ ಸೇವೆ ನೀಡಲು ಅಗತ್ಯವಿರುವ ಉಪಕರಣಗಳ ಪಟ್ಟಿ ಮಾಡಿ ಇಲಾಖೆಗೆ ಕಳುಹಿಸಿಕೊಡಿ. ಅದರ ಪ್ರತಿಯನ್ನು ನನಗೂ ಕೊಡಿ. ದೂರಸಂಪರ್ಕ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಿ ಅಗತ್ಯ ಅನುದಾನವನ್ನು ಕೊಡಿಸಲು ಯತ್ನಿಸುತ್ತೇನೆ’ ಎಂದು ಸಿದ್ದೇಶ್ವರ ತಿಳಿಸಿದರು.
‘ಕಗತೂರು, ದೊಡ್ಡಬ್ಬಿಗೆರೆ, ರಾಗಿಮಸಲವಾಡ, ಗುಂಡಗತ್ತಿ, ಹಿರೇಕಂದವಳ್ಳಿ. ಎಂ. ಹನುಮನಹಳ್ಳಿ ಗ್ರಾಮಗಳಲ್ಲಿ ನೆಟವರ್ಕ್‌ ಸಮಸ್ಯೆಯಿದ್ದು ಮುಂದಿನ ಮೂರು ತಿಂಗಳ ಒಳಗೆ ಸಮಸ್ಯೆಯನ್ನು ನಿವಾರಿಸಬೇಕು’ ಎಂದು ಅವರು ಸೂಚಿಸಿದರು.

ಲ್ಯಾಂಡ್‌ಲೈನ್‌ಗೆ ಒತ್ತು:  ‘ಶೇ 60ರಷ್ಟು ಆದಾಯ ಲ್ಯಾಂಡ್‌ಲೈನ್‌ ಸಂಪರ್ಕದಿಂದಲೇ ಸಂಸ್ಥೆಗೆ ಬರುತ್ತಿದೆ. ಇಂದು ಲ್ಯಾಂಡ್‌ಲೈನ್‌ ಗ್ರಾಹಕರು ಮೊಬೈಲ್‌ ಗ್ರಾಹಕರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಲ್ಯಾಂಡ್‌ಲೈನ್‌ನಿಂದ ಪ್ರತಿ ಭಾನುವಾರ ಉಚಿತ ಕರೆ ಸೌಲಭ್ಯ ಹಾಗೂ ಇತರ ದಿನಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 7 ಗಂಟೆವರೆಗೆ ಉಚಿತ ಕರೆ ಸೌಲಭ್ಯವನ್ನು ನೀಡಲಾಗಿದೆ.
ಬ್ರಾಡ್‌ಬ್ಯಾಂಡ್‌ಗೆ ಕನಿಷ್ಠ 1 ಎಂ.ಬಿ.ಪಿ.ಎಸ್‌. ವೇಗವನ್ನು ನೀಡಲಾಗುತ್ತಿದೆ. ‘ಸರ್ವೀಸ್‌ ವಿಥ್‌ ಸ್ಮೈಲ್‌’ ಯೋಜನೆಯಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ’ ಎಂದು ಜೈಸ್ವಾಲ್‌ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 2,31,973 ಮೊಬೈಲ್‌ ಸಂಪರ್ಕ ಹಾಗೂ 26,401 ಸ್ಥಿರ ದೂರವಾಣಿ ಸಂಪರ್ಕವಿದೆ. ಕಳೆದ ಸಾಲಿನಲ್ಲಿ ₹ 18 ಕೋಟಿ ಆದಾಯ ಬಂದಿದೆ. ದಾವಣಗೆರೆಯ ಎಚ್‌.ಕೆ.ಆರ್‌ ವೃತ್ತ ಹಾಗೂ ವಸಂತ ಥಿಯೇಟರ್‌ ಬಳಿ ಹೊಸದಾಗಿ ‘3ಜಿ’ ಟಾವರ್‌ ಅಳವಡಿಸಲಾಗುವುದು’ ಎಂದು ತಿಳಿಸಿದರು.

ಸಮಿತಿ ಸದಸ್ಯರಾದ ಕೆ. ಹೇಮಂತಕುಮಾರ್‌, ಅಬ್ದುಲ್‌ ರೆಹಮಾನ್‌, ಕೆ.ಎಂ. ಬಸವರಾಜು, ಎಸ್‌.ಎಂ. ಶಿವಕುಮಾರಯ್ಯ, ಕಣಿವೆಹಳ್ಳಿ ಮಂಜುನಾಥ, ಎಚ್‌. ಕೊಟ್ರಬಸಪ್ಪ, ಎನ್‌.ಎಚ್‌. ರವಿಂದ್ರನಾಥ್‌, ಕೆ.ಎಸ್‌. ಕೃಷ್ಣಕುಮಾರ್‌ ಸಭೆಯಲ್ಲಿ ಹಾಜರಿದ್ದರು. ಬಿಎಸ್‌ಎನ್‌ಎಲ್‌ ಉಪ ಪ್ರಧಾನ ವ್ಯವಸ್ಥಾಪಕ ನರಸಿಂಹಪ್ಪ ಸ್ವಾಗತಿಸಿದರು.

ಅಕ್ಟೋಬರ್‌ ಅಂತ್ಯಕ್ಕೆ ಒಎಫ್‌ಸಿ ಕೆಲಸ ಪೂರ್ಣ
‘ಜಿಲ್ಲೆಯ ಎಲ್ಲ 230 ಗ್ರಾಮ ಪಂಚಾಯ್ತಿಗಳಿಗೂ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಮೂಲಕ ಬ್ರಾಡ್‌ ಬ್ಯಾಂಡ್‌ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದ್ದು, ಬಾಕಿ ಉಳಿದಿರುವ 91 ಪಂಚಾಯ್ತಿಗಳಿಗೆ ಅಕ್ಟೋಬರ್‌ ಅಂತ್ಯದೊಳಗೆ ಸಂಪರ್ಕ ಕಲ್ಪಿಸಲಾಗುವುದು’ ಎಂದು ಬಿಎಸ್‌ಎನ್‌ಎಲ್‌ನ ದೂರವಾಣಿ ಪ್ರಧಾನ ವ್ಯವಸ್ಥಾಪಕ ವಿವೇಕ ಜೈಸ್ವಾಲ್‌ ತಿಳಿಸಿದರು.

‘ಜಿಲ್ಲೆಯ ಕೆಲವು ಪಂಚಾಯ್ತಿಗಳಲ್ಲಿ ಇಂಟರ್‌ನೆಟ್‌ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ’ ಎಂದು ಸಿದ್ದೇಶ್ವರ ಅವರು ಗಮನಕ್ಕೆ ತಂದಾಗ ಅವರು ಸಭೆಗೆ ಮಾಹಿತಿ ನೀಡಿದರು.

ದಾವಣಗೆರೆಯ ಎಲ್ಲ 40 ಗ್ರಾಮ ಪಂಚಾಯ್ತಿಗೆ ಒಎಫ್‌ಸಿ ಸಂಪರ್ಕ ಕಲ್ಪಿಸಲಾಗಿದೆ. ಹರಪನಹಳ್ಳಿ ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳ ಪೈಕಿ 12ಕ್ಕೆ ಒಎಫ್‌ಸಿ ಸಂಪರ್ಕ ಕಲ್ಪಿಸಲಾಗಿದೆ. ಚನ್ನಗಿರಿಯ 64 ಪಂಚಾಯ್ತಿ ಪೈಕಿ 17ರ ಕೆಲಸ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ 47 ಪಂಚಾಯ್ತಿಗಳ ಕೆಲಸವನ್ನು ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಹೊನ್ನಾಳಿಯ 47 ಪಂಚಾಯ್ತಿಗಳ ಪೈಕಿ 11ರ ಕೆಲಸ ಪೂರ್ಣಗೊಂಡಿದ್ದು, ಬಾಕಿ ಇರುವ 36 ಪಂಚಾಯ್ತಿ ಕೆಲಸ ಒಂದು ತಿಂಗಳ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT