ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿಯಾಗಿ ತಿನ್ನಲು ಎಂಟು ಸೂತ್ರ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

1) ತಿನ್ನುವ ಬಗ್ಗೆ ತೃಪ್ತಿ ಇರಲಿ: ಆರೋಗ್ಯಕರವಾಗಿ ತಿನ್ನುವ ಅಭ್ಯಾಸದಲ್ಲಿ ಈ ಅಂಶ ಮುಖ್ಯ. ಏನು ತಿನ್ನುತ್ತೀರಿ ಎಂಬುದನ್ನು ನಿರ್ಧರಿಸಿ ಅದನ್ನು ತೃಪ್ತಿಯಿಂದ ತಿನ್ನುವುದು. ಆಹಾರದ ಆಯ್ಕೆ, ಅಡುಗೆ ಮಾಡುವುದು, ಆಸ್ವಾದಿಸಿ ತಿನ್ನುವುದು. ಟಿ.ವಿ ಮುಂದೆ ಚಿಪ್ಸ್‌ ತಿನ್ನುತ್ತಾ ಕೂರುವುದು ಒಳ್ಳೆ ಲಕ್ಷಣವಲ್ಲ. ಇದು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ. ರೋಗನಿರೋಧಕಶಕ್ತಿ, ಮಧುಮೇಹದಂಥ ಸಮಸ್ಯೆಗಳಿಗೂ ಕಾರಣವಾಗಬಹುದು. ಯಾವುದೇ ಅಡ್ಡಿ ಆತಂಕಗಳಿಲ್ಲದೇ ತಿಂದರೆ ಒಳ್ಳೆಯದು

2) ತಿನ್ನುವುದಕ್ಕೆ ಹಿಂದೇಟಾಕಬೇಡಿ: ತಿನ್ನುವ ಪ್ರತಿಯೊಂದರ ಮೇಲೂ ಹೆಚ್ಚು ಯೋಚಿಸುವ ಅವಶ್ಯಕತೆ ಇಲ್ಲ. ಇಷ್ಟಪಟ್ಟ ಆಹಾರ ತಿನ್ನಲು ಹಿಂದೇಟಾಕಬೇಡಿ. ಆದರೆ ಸ್ವಲ್ಪ ಮಟ್ಟದಲ್ಲಿ ತಿನ್ನಿ ಅಷ್ಟೆ.

‘ಇಷ್ಟವಾಗಿದ್ದನ್ನು ಸ್ವಲ್ಪ ತಿಂದರೆ ಸಾಕು, ಅದೇ ತೃಪ್ತಿ ನೀಡುತ್ತದೆ, ಅಯ್ಯೋ ಅದನ್ನು ತಿನ್ನಲಿಲ್ಲ ಎಂಬ ಕೊರಗೂ ಇರುವುದಿಲ್ಲ’ ಎಂದು ತಿಳಿಸಿಕೊಟ್ಟಿದೆ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧನೆಯೊಂದು

3) ಉಪವಾಸದಿಂದ ಪ್ರಯೋಜನವಿಲ್ಲ: ಇಡೀ ದಿನ ಏನನ್ನೂ ತಿನ್ನದೆ ಉಪವಾಸ ಇರುವುದು ಆಹಾರದೆಡೆಗೆ ಅಗೌರವ ತೋರಿದಂತೆ. ಉಪವಾಸವಿದ್ದರೆ ದೇಹ ಕರಗುತ್ತದೆ ಎಂದುಕೊಳ್ಳುತ್ತೇವೆ. ಆದರೆ ಅದು ತಪ್ಪು ತಿಳಿವಳಿಕೆ. ಇದು ನಮ್ಮ ಮೆಟಬಾಲಿಸಂ ಅನ್ನು ಹಾನಿ ಮಾಡುತ್ತದೆ ಅಷ್ಟೆ. ಆದ್ದರಿಂದ ಸಂಪೂರ್ಣ ಉಪವಾಸವಿರದೆ ತರಕಾರಿ, ಹಣ್ಣುಗಳನ್ನು ತಿನ್ನಬೇಕು. ಇದು ದೇಹಕ್ಕೆ ಶಕ್ತಿ ತುಂಬುತ್ತದೆ ಹಾಗೂ ಅವಶ್ಯಕ ಪ್ರೊಟೀನ್, ವಿಟಮಿನ್‌ಗಳನ್ನು ನೀಡುತ್ತದೆ

4) ಹೋಲಿಕೆ ಸಲ್ಲದು: ಇನ್ನೊಬ್ಬರನ್ನು ನೋಡಿ ಕಲಿಯುವುದು ಒಳ್ಳೆಯದೇ. ಹಾಗೆಂದು ಸದಾ ಇನ್ನೊಬ್ಬರೊಂದಿಗೆ ನಮ್ಮನ್ನು ನಾವು ತಾಳೆ ಹಾಕಿಕೊಳ್ಳುತ್ತಾ, ಕೀಳರಿಮೆ ಬೆಳೆಸಿಕೊಳ್ಳುವುದು ಒಳ್ಳೆ ಲಕ್ಷಣವಲ್ಲ. ಇದು ತಿನ್ನುವ ಅಭ್ಯಾಸಕ್ಕೂ ಅನ್ವಯಿಸುತ್ತದೆ. ಪ್ರತಿಯೊಬ್ಬರೂ ಭಿನ್ನವೇ.   ಜೀವನಶೈಲಿ, ತಿನ್ನುವ ಅಭ್ಯಾಸ,  ರುಚಿ, ಅಭಿರುಚಿಗಳೂ ಭಿನ್ನವೇ. ಆದ್ದರಿಂದ ಸದಾ ಬೇರೆಯವರೊಂದಿಗೆ ನಮ್ಮನ್ನು ನಾವು ಹೋಲಿಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲ

5) ಮನೆಯಲ್ಲೂ ಆರೋಗ್ಯಕರ ಆಹಾರವೇ ಇರಲಿ: ಮನೆಯಲ್ಲಿ ಹಣ್ಣಿನ ಬೋಲ್ ಅನ್ನು ಕಾಣುವಂತೆ ಇಟ್ಟಿದ್ದರೆ, ಹಣ್ಣು ಸೇವಿಸುವ ಪ್ರಮಾಣ ಹೆಚ್ಚು. ಈ ಮೂಲಕ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದಿದೆ ಅಮೆರಿಕದ ಸಂಶೋಧನೆಯೊಂದು. ಕಣ್ಣಿಗೆ ಕಾಣುವಂತೆ ಮನೆಯಲ್ಲಿ ಆರೋಗ್ಯಯುತ ಆಹಾರ ಇಟ್ಟುಕೊಂಡರೆ, ಅದನ್ನೇ ನೀವು ಹೆಚ್ಚು ತಿನ್ನುತ್ತೀರಿ, ಇದರಿಂದ ಆರೋಗ್ಯದ ಮಟ್ಟ ಹೆಚ್ಚುತ್ತದೆ ಹಾಗೂ ಜೀವನಶೈಲಿಯೂ ಬದಲಾಗುತ್ತದೆ ಎಂಬ ಅಂಶವನ್ನೂ  ಸಾಬೀತು ಮಾಡಲಾಗಿದೆ

6) ಬೆಳಗಿನ ಉಪಾಹಾರ ತ್ಯಜಿಸುವುದು ಸಲ್ಲ: ಡಯಟ್ ಮಾಡುವವರು ಬೆಳಗ್ಗಿನ ಹೊತ್ತು ತಿಂಡಿ ತಿನ್ನಬೇಕೋ ಬೇಡವೋ ಎಂಬುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಆದರೆ,  ಬೆಳಗಿನ ಉಪಾಹಾರ ಸೇವಿಸುವವರು, ಸೇವಿಸದೆ ಇರುವವರಿಗಿಂತ ಹೆಚ್ಚು ಆರೋಗ್ಯಕರವಾಗಿರುತ್ತಾರೆ ಎಂಬುದನ್ನು ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್‌ ಡಯೆಟಿಕ್ಸ್‌ನ ಜರ್ನಲ್‌ನಲ್ಲಿ ತಿಳಿಸಲಾಗಿದೆ. ಶಕ್ತಿಯುತ ಆಹಾರದೊಂದಿಗೆ ದಿನ ಆರಂಭಿಸಿದರೆ ದಿನವಿಡೀ ಚೈತನ್ಯವಾಗಿರುವಂತೆ ಮಾಡುತ್ತದೆ. ಆದ್ದರಿಂದ ಅದನ್ನು ತ್ಯಜಿಸುವುದು ಒಳ್ಳೆಯದಲ್ಲ

7) ತಿಂದದ್ದರ ಬಗ್ಗೆ ಪಶ್ಚಾತ್ತಾಪ ಬೇಡ: ಒಮ್ಮೆ ಏನನ್ನೋ ತಿಂದರೆ, ಅದನ್ನು ತಿನ್ನಬಾರದಿತ್ತು ಎಂದು ಸದಾ ಕೊರಗುತ್ತಾ ಕೂರುವುದು ಬೇಡ. ಆ ಆಹಾರ ಅದಾಗಲೇ  ಹೊಟ್ಟೆ ಸೇರಿರುತ್ತದೆ. ಆದ್ದರಿಂದ ಯೋಚಿಸುವ ಅಗತ್ಯವಿಲ್ಲ. ಈಗಾಗಲೇ ತಿಂದಿದ್ದರ ಬಗ್ಗೆ ಬೇಸರವಿದ್ದರೆ ಅದನ್ನು ಮುಂದುವರೆಸುವ ಅವಶ್ಯಕತೆ ಇಲ್ಲ ಎಂದಷ್ಟೇ ಅರ್ಥ.

ಈ ಅಂಶಕ್ಕೆ ಸಮರ್ಥನೆ ಎನ್ನುವಂತೆ ಜರ್ನಲ್ ಅಪೆಟೈಟ್‌ನ ಒಂದು ಸಂಶೋಧನೆಯೂ ನಡೆದಿದೆ. ತಾವು ತಿಂದಿದ್ದರ ಬಗ್ಗೆ ಕೊರಗುವ ಜನರು, ಜನರು ತಮ್ಮ ಆಹಾರದ ಬಗೆಗಿನ ಗುರಿಗಳನ್ನು ಪೂರೈಸುವುದಿಲ್ಲ ಎಂಬುದು ಈ ಸಂಶೋಧನೆಯ ಸಾರ. ಜೊತೆಗೆ ನಾವು ತಿನ್ನುವ ಆಹಾರದ ಬಗ್ಗೆ ಸದಾ ಕೊರಗುತ್ತಲೇ ಅಪರಾಧಿ ಭಾವ ಹೊಂದಿದ್ದರೆ, ಅದು ನಮ್ಮ ಸ್ವಗೌರವಕ್ಕೆ ಕುಂದು ತರುತ್ತದೆ ಎಂದಿದೆ

8) ಡಯಟ್ ಖಯಾಲಿಗೆ ಬೀಳಬೇಡಿ: ನಿಮ್ಮ ಸ್ನೇಹಿತೆ ಡಯಟ್ ಮಾಡಿ ತೆಳ್ಳಗೆ ಕಾಣಿಸಿಕೊಂಡಳು ಎಂಬ ಒಂದೇ ಕಾರಣಕ್ಕೆ ನೀವೂ ಡಯೆಟ್ ಪಾಲಿಸಲು ಮುಂದಾಗುತ್ತೀರಿ. ಆದರೆ ಇದು ಅಷ್ಟು ಒಳ್ಳೆಯದಲ್ಲ.

ಒಬ್ಬ ಮಹಿಳೆ ಎಂಟು ವಾರ ಕಟ್ಟುನಿಟ್ಟಿನ ಡಯೆಟ್ ಪಾಲಿಸಿದ ನಂತರದ ಒಂದು ವರ್ಷದಲ್ಲಿ, ಹಿಂದೆಂದಿಗಿಂತ ಹೆಚ್ಚು ಹಸಿವು ಕಾಣಿಸಿಕೊಂಡು ಅಧಿಕ ತಿನ್ನುವುದನ್ನು ರೂಢಿಸಿಕೊಳ್ಳುತ್ತಾರೆಂದು ಮೆಲ್ಬರ್ನ್‌ ವಿಶ್ವವಿದ್ಯಾಲಯದ ಅಧ್ಯಯನವೊಂದು ತಿಳಿಸಿಕೊಟ್ಟಿದೆ.

80% ಹೊಟ್ಟೆ ತುಂಬಿದ ನಂತರ ತಿನ್ನುವುದನ್ನು ನಿಲ್ಲಿಸಿ. ತೃಪ್ತಿಯಾಗಿ ತಿನ್ನಬೇಕೆಂಬ ಕಾರಣಕ್ಕೆ ಹೊಟ್ಟೆ ಬಿರಿಯುವಷ್ಟು ತಿನ್ನಬೇಕಿಲ್ಲ.  ಹಾಗೆಂದು ಲೆಕ್ಕ ಹಾಕುತ್ತಾ ತಿನ್ನುವುದು ಒಳ್ಳೆ ಅಭ್ಯಾಸವಲ್ಲ. ಇದು ಗೀಳಾಗುತ್ತದೆ. ಆಹಾರದ ಗುಣಮಟ್ಟ ಗಮನಿಸಬೇಕೇ ಹೊರತು, ಪ್ರಮಾಣವನ್ನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT