ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವಿನ ಸಮರ್ಥ ಬಳಕೆಗಿರಲಿ ಯಂತ್ರ

ಹೊಸ ಹೆಜ್ಜೆ-19
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬರಗಾಲ ಸೇರಿದಂತೆ ಕೆಲ ಕಾರಣಗಳಿಂದ ಮೇವಿನ ಅಭಾವ ಆಗಾಗ್ಗೆ ತಲೆದೋರುವುದು ಸಹಜ. ಆದ್ದರಿಂದ ಸಿಗುವ ಮೇವನ್ನೇ ಜಾಣ್ಮೆಯಿಂದ ಉಪಯೋಗಿಸಿಕೊಂಡು ಭವಿಷ್ಯಕ್ಕೆ ಒಂದಿಷ್ಟು ಕೂಡಿ ಇಟ್ಟುಕೊಳ್ಳುವಲ್ಲಿಯೇ ಜಾಣ್ಮೆ ಇದೆ.

ಹೀಗೆ ಮೇವಿನ ರಕ್ಷಣೆ ಮಾಡಿಡಲು ಬಂದಿದೆ ವಿದ್ಯುತ್ ಚಾಲಿತ ಮೇವು ಕೊಯ್ಯುವ ಯಂತ್ರ. ಮೇವು ಹುಲ್ಲಿನ ಪ್ರತಿಯೊಂದು ಭಾಗವನ್ನೂ ಸದ್ಬಳಕೆ ಮಾಡಿಕೊಳ್ಳುವುದು ಯಂತ್ರದ ಉದ್ದೇಶ. ಸಾಮಾನ್ಯವಾಗಿ ಈಗ ರೈತರು ಕುಡುಗೋಲು ಅಥವಾ ಮೇವು ಕತ್ತರಿಸುವ ಸಲಕರಣೆ ಬಳಸಿ ಮೇವನ್ನು ತುಂಡರಿಸುತ್ತಾರೆ. ಮೂರ್ನಾಲ್ಕು ಇಂಚು ಉದ್ದದ ತುಂಡುಗಳನ್ನು ಕತ್ತರಿಸಿ ಹಾಕುತ್ತಾರೆ.

ಬಹಳಷ್ಟು ಮೇವಿನ ಬೆಳೆಯಲ್ಲಿ ಉದ್ದನೆಯ, ದಪ್ಪನೆಯ ದಂಟು/ಕಾಂಡ ಇರುತ್ತದೆ. ಇದರ ಸಮೇತ ಜಾನುವಾರುಗಳಿಗೆ ಮೇವನ್ನು ನೀಡಿದಾಗ, ದಂಟು/ಕಾಂಡದ ಭಾಗಗಳನ್ನು ಬಿಟ್ಟು ಜಾನುವಾರುಗಳು ಬರೀ ಎಲೆಗಳನ್ನು ತಿನ್ನುವುದೇ ಹೆಚ್ಚು. ಆದ್ದರಿಂದ ಮೇವಿನ ಬೆಳೆಯ ಬಹುತೇಕ ಭಾಗಗಳು ವ್ಯರ್ಥವಾಗುತ್ತವೆ.

ಈ ಸಮಸ್ಯೆಯನ್ನು ನೀಗಿಸುತ್ತಿದೆ ವಿದ್ಯುತ್ ಚಾಲಿತ ಯಂತ್ರ. ಈಗಾಗಲೇ ಕೆಲವು ರೈತರು ಇದನ್ನು ಬಳಸುತ್ತಿದ್ದಾರೆ. ಇದರಲ್ಲಿ  ಮೇವಿನ ಬೆಳೆಯನ್ನು ಒಂದೆರಡು ಅಂಗುಲ ಉದ್ದದ ತುಂಡಗಳಾಗಿ ಕತ್ತರಿಸಲು ಅವಕಾಶ ಇರುವುದು ವಿಶೇಷ. ಜೊತೆಗೆ, ಹಾಕಿದ ಮೇವಿನಲ್ಲಿ ಬಹಳಷ್ಟು ದಂಟಿನ/ಗಟ್ಟಿ ಭಾಗವನ್ನು ಬಿಟ್ಟು ನೇಪಿಯರ್, ಮೆಕ್ಕೆಜೋಳ, ಜೋಳ, ಸಜ್ಜೆ ಮತ್ತಿತರ ಮೇವಿನ ಮೂಲದ ಬೆಳೆಗಳನ್ನು ಸಣ್ಣದಾಗಿ ಕತ್ತರಿಸಲು ಈ ಯಂತ್ರ ಉಪಯುಕ್ತವಾಗುತ್ತವೆ.

ಪಶುಪಾಲನಾ ಇಲಾಖೆಯು ಈ ರೀತಿಯ ಯಂತ್ರಗಳ ಖರೀದಿಗೆ ಸಹಾಯಧನ ನೀಡುತ್ತದೆ. ಸುಮಾರು 20 ಸಾವಿರ ರೂಪಾಯಿ ಬೆಲೆಯ ಮೇವು ಕತ್ತರಿಸುವ ಯಂತ್ರಗಳ ಖರೀದಿಗೆ ಶೇಕಡ 50ರ ರಿಯಾಯಿತಿ ಕೊಡಲಾಗುತ್ತಿದೆ. ಎರಡು ಅಶ್ವಶಕ್ತಿಯ ಮೋಟಾರ್‌ನ ಈ ಯಂತ್ರಗಳಿಂದ ಕೇವಲ 10 ನಿಮಿಷದಲ್ಲಿ 8–10 ರಾಸುಗಳಿಗೆ ಬೇಕಾಗುವಷ್ಟು ಮೇವನ್ನು ಕತ್ತರಿಸಬಹುದು.

ಹಸಿ ಮೇವನ್ನು, ಒಣಮೇವನ್ನು ಸಣ್ಣದಾಗಿ ತುಂಡರಿಸುವುದರಿಂದ, ಕಾಂಡ- ಎಲೆಗಳೂ ಇದರಲ್ಲಿ ಸೇರಿಕೊಳ್ಳುವುದರಿಂದ ಹಾಗೂ ಉಪ್ಪು ಮಿಶ್ರಿತ ನೀರನ್ನು ಎರಚಿ ಕೊಡುವುದರಿಂದ ಜಾನುವಾರುಗಳು ಚೆನ್ನಾಗಿ ತಿನ್ನುತ್ತವೆ. ಜಮೀನುಗಳಲ್ಲಿ ಅಲ್ಲಲ್ಲಿ ಇರುವ ಕಳೆಗಳನ್ನು, ಹುಲ್ಲುಗಳನ್ನು ಬಳಸುವುದೂ ಮೇವಿನ ಅಭಾವವನ್ನು ನೀಗಿಸಲು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT