ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ನಿವೇಶನದಲ್ಲಿ ಭರ್ಜರಿ ಕುಂಬಳಕಾಯಿ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಫೇಸ್‌ಬುಕ್‌ ಸ್ನೇಹಿತರೊಬ್ಬರು ತಮ್ಮ ಬೆಂಗಳೂರಿನ ಮನೆಯ ಪಕ್ಕದ ಖಾಲಿ ನಿವೇಶನದಲ್ಲಿ ವಿವಿಧ ತರಕಾರಿ ಬೀಜ ಹಾಕಿ, ಅವು ಬೆಳೆದು ಉತ್ತಮ ಫಸಲು ಕೊಟ್ಟಾಗ ಅವುಗಳ ಜೊತೆ ಫೋಟೊ ಕ್ಲಿಕ್ಕಿಸಿ ತಮ್ಮ ಫೇಸ್‌ಬುಕ್‌ ಖಾತೆಗೆ ಅಪ್‌ಲೋಡ್‌ ಮಾಡಿ ಬೀಗಿದ್ದರು. ಅದು ಇತರರಿಗೂ ಪ್ರೇರಣೆ ನೀಡುವಂತೆಯೂ ಇತ್ತು.

ಇದಾದ ಕೆಲವೇ ದಿನಗಳಲ್ಲಿ ವಾಣಿಜ್ಯ ನಗರ ಹುಬ್ಬಳ್ಳಿಯ ಅಕ್ಷಯ ಕಾಲೊನಿಯಲ್ಲಿ ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡ ಖಾಲಿ ನಿವೇಶನದಲ್ಲಿ ಬೆಳೆದ ತರಕಾರಿ ಗಮನ ಸೆಳೆಯಿತು. ಹೋಗಿ ನೋಡಿದರೆ ಒಂದೊಂದು ಕುಂಬಳಕಾಯಿ 36 ಕೆ.ಜಿವರೆಗೂ ತೂಗುತ್ತಿತ್ತು. ಅದನ್ನ ನೋಡಿದ ಯಾರ ಕಣ್ಣುಗಳೂ ಒಮ್ಮೆ ಹಿಗ್ಗದೇ ಇರವು.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹಾರ್ಸಿಕಟ್ಟಾ ಸಮೀಪದ ಹೊಲಗದ್ದೆಯ ಕೃಷ್ಣ ಹೆಗಡೆ ಅವರಿಗೆ ಸೇರಿದ ಅಪಾರ್ಟ್‌ಮೆಂಟ್‌ ಅದಾಗಿತ್ತು. ಅವರು ತರಕಾರಿ ಬೆಳೆದ ಖಾಲಿ ನಿವೇಶನ ಅವರ ಸಂಬಂಧಿಯದ್ದು. ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವ ಕೃಷ್ಣ ಹೆಗಡೆ ಮಹಾರಾಷ್ಟ್ರದ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದು, ಒಂದು ವರ್ಷದಿಂದೀಚೆಗೆ ಹುಬ್ಬಳ್ಳಿಯ ಅಕ್ಷಯ ಕಾಲೊನಿಯಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣ ಮಾಡಿದ್ದಾರೆ.

ನಿವೇಶನ ಖಾಲಿ ಇರುವ ಬದಲು ಅದರಲ್ಲಿ ತರಕಾರಿ ಬೆಳೆಯಬಹುದಲ್ಲ ಎಂಬ ಆಲೋಚನೆ ಬಂದಾಗ ತಮ್ಮ ಮನೆಯ ನಿರ್ವಹಣೆ ಹೊತ್ತಿರುವ ರವಿ ಹೆಗಡೆ ಅವರಿಗೆ ಒಂದಿಷ್ಟು ಸಲಹೆ ನೀಡಿದ್ದಾರೆ. ಕೃಷಿ ಕುರಿತು ಮೊದಲೇ ಆಸಕ್ತಿ ಹೊಂದಿದ್ದ ರವಿ ಅವರು, ಕೃಷ್ಣ ಹೆಗಡೆಯವರ ಸಲಹೆಗಳಿಗೆ ನೀರೆರೆದಿದ್ದು, ಅದರ ಪ್ರತಿಫಲವೆಂಬಂತೆ ಖಾಲಿ ನಿವೇಶನ ತರಕಾರಿ ತೋಟವಾಗಿ ಮಾರ್ಪಾಟಾಯಿತು.

ಸಿಮೆಂಟ್‌ ಸೇರಿಕೊಂಡು ಫಲವತ್ತತೆ ಕಳೆದುಕೊಂಡಿದ್ದ 30X40 ಅಳತೆಯ ನಿವೇಶನ ಕಸ, ಕಡ್ಡಿ, ಪೊದೆಗಳಿಂದ ಕೂಡಿರುವ ಬದಲು ಬಗೆಬಗೆಯ ತರಕಾರಿಗಳ ಬೀಡಾಗಿದೆ. ಕುಂಬಳಕಾಯಿ, ಬೀನ್ಸ್‌, ಅವರೆ, ಟೊಮೆಟೊ, ಬೆಂಡೆ, ಬದನೆ, ಮೆಣಸು ಬೆಳೆಯಲಾಗಿದೆ. ಜೊತೆಗೆ ಜೋಳ, ಅನಾನಸ್, ಪೇರಲೆ, ದಾಳಿಂಬೆ ಗಿಡಗಳು ಫಲ ಕೊಡುತ್ತಿವೆ.

ಹುಬ್ಬಳ್ಳಿಯ ಮಾರುಕಟ್ಟೆಯಿಂದ ತಂದ ಕುಂಬಳಕಾಯಿ ಬೀಜ ಹಾಕಿ ಮೂರೇ ತಿಂಗಳ ಅವಧಿಯಲ್ಲಿ 36 ಕೆ.ಜಿ. ತೂಗುವ ಕಾಯಿಗಳನ್ನು ಬಿಟ್ಟಾಗ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಮೊದಲ ಹಂತದಲ್ಲಿ ಆರು ಕುಂಬಳಕಾಯಿ ಕೊಯ್ದು, ಮುಂಬೈ, ಬೆಂಗಳೂರು, ಹಾರ್ಸಿಕಟ್ಟಾ, ಹುಬ್ಬಳ್ಳಿಯಲ್ಲೇ ನೆಲೆಸಿರುವ ಸಂಬಂಧಿಗಳಿಗೆ ಕೊಟ್ಟಿದ್ದಲ್ಲದೇ ಅಕ್ಕ ಪಕ್ಕದ ಮನೆಯವರಿಗೂ ಹಂಚಲಾಗಿದೆ. ಬಳ್ಳಿಯಲ್ಲಿ ಮೂರ್ನಾಲ್ಕು ಕಾಯಿಗಳು ಉಳಿದಿವೆ.

ಸಿಮೆಂಟ್‌ ಸೇರಿ ಫಲವತ್ತತೆ ಕಳೆದುಕೊಂಡ ಮಣ್ಣಿನಲ್ಲಿ ಇಷ್ಟೆಲ್ಲ ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರ ಧಾರವಾಡ ಕೃಷಿ ವಿ.ವಿ.ಯಿಂದ ತರಲಾದ ಎರೆಹುಳು ಗೊಬ್ಬರವಾಗಿತ್ತು. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದಿರುವ ತರಕಾರಿ ಮನೆಗೆ ಬಳಕೆಯಾಗಿ ಹೆಚ್ಚಾಗುತ್ತಿತ್ತು. ನೀರನ್ನು ಮಾತ್ರ ಪ್ರತಿನಿತ್ಯ ನೀಡುವುದು ರೂಢಿ.

ನಿವೇಶನದಲ್ಲಿ ಮನೆ ಕಟ್ಟುವವರೆಗೂ ಇಲ್ಲಿ ತರಕಾರಿಗಳನ್ನು ಬೆಳೆಯುತ್ತೇವೆ ಎನ್ನುವ ಕೃಷ್ಣ ಹೆಗಡೆಯವರು ಪರಿಸರದ ಕುರಿತು ಅಪಾರ ಕಳಕಳಿ ಹೊಂದಿದ್ದಾರೆ ಎಂಬುದು ಅವರ ಮಾತಿನಲ್ಲೇ ವ್ಯಕ್ತವಾಗುತ್ತದೆ.

‘ಪ್ರಕೃತಿಯಿಂದ ನಾವೆಂದೂ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಾರದು. ಪ್ರಕೃತಿ ಜೊತೆಗೂಡಿ ಮಾಡುವ ಕಾರ್ಯದಲ್ಲಿ ಲಾಭದ ನಿರೀಕ್ಷೆಯಿಟ್ಟಲ್ಲಿ ಅದು ಪ್ರಕೃತಿಗೆ ಮಾಡುವ ದ್ರೋಹವೆನಿಸಲಿದೆ. ಬದಲಾಗಿ ಒಳ್ಳೆ ಮನಸ್ಸಿನಿಂದ ಪ್ರಕೃತಿಗೆ ಕಿಂಚಿತ್ತಾದರೂ ನೀಡಿದರೆ ಪ್ರತಿಫಲವಾಗಿ ಪ್ರಕೃತಿ ಹೆಚ್ಚಿನದ್ದನ್ನೇ ನಮಗೆ ನೀಡಲಿದೆ. ಆದರೆ ಅಲ್ಲಿ ವಾಣಿಜ್ಯಿಕ ದೃಷ್ಟಿಯಿರಬಾರದು’ ಎಂಬುದು ಅವರ ಕಳಕಳಿ. ಅದಕ್ಕೆಂದೇ ಕೃಷ್ಣ ಹೆಗಡೆ ಅವರು ಕೊಟ್ಟ ಉದಾಹರಣೆ ಅವರು ಬೆಳೆಸಿದ ಕುಂಬಳಕಾಯಿ.

‘ಒಂದು ಚಿಕ್ಕ ಬೀಜ ಇಷ್ಟು ದೊಡ್ಡ ಕಾಯಿ ನೀಡಿದೆ. ಅದಕ್ಕೆಂದು ನಾವು ನೀಡಿದ್ದು, ಹೆಚ್ಚೇನಲ್ಲ. ಬೀಜದೊಂದಿಗೆ ಮಣ್ಣು, ಗೊಬ್ಬರ, ನೀರು. ಇಷ್ಟಕ್ಕೇ 36 ಕೆ.ಜಿ. ತೂಕದ ಕಾಯಿ ನೀಡಿದೆ. ಅಷ್ಟು ಸಾಕಲ್ಲವೇ...’

‘ನಮ್ಮದೇ ಖಾಲಿ ನಿವೇಶನದಲ್ಲಿ ಗಿಡ ಗಂಟಿಗಳು ಬೆಳೆದರೆ ಅವು ಕಳೆಗಳಲ್ಲ. ಅವುಗಳನ್ನು ಕಿತ್ತು ಹಾಕುವ ಬದಲು ಹಾಗೇ ಬಿಡಬೇಕು. ಅದರಿಂದ ಮಣ್ಣು ಸಡಿಲಗೊಳ್ಳುವುದರೊಂದಿಗೆ ನೀರು ಕೂಡ ಭೂಮಿಗೆ ಇಳಿಯಲು ಅನುಕೂಲವಾಗಲಿದೆ’ ಎಂದು ಸಲಹೆ ನೀಡುವ ಕೃಷ್ಣ ಹೆಗಡೆ, ಪ್ರಕೃತಿಗೆ ಏನೂ ಕೊಡಲಾಗದಿದ್ದರೆ ಆಗ ನಾವೇ ಕಳೆಗಳಾಗುತ್ತೇವೆ’ ಎಂದು ವಿಶ್ಲೇಷಿಸುತ್ತಾರೆ.

ಅವರು ದೊಡ್ಡ ಅಪಾರ್ಟ್‌ಮೆಂಟ್‌ ಕಟ್ಟಿಸಿ ಅದರಲ್ಲೂ ಪರಿಸರ ಪೂರಕ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ. ಮಳೆ ನೀರು ಸಂಗ್ರಹಿಸಿ ಅದನ್ನು ಬಳಸುತ್ತಿದ್ದಾರೆ. ಬೋರ್‌ವೆಲ್‌ಗೂ ಮಳೆನೀರನ್ನು ಇಂಗಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅದಕ್ಕೇ ‘ಮಳೆ ಬಂದರೂ ಖುಷಿ, ಬಿಸಿಲು ಬಂದರೂ ಖುಷಿ ನನಗೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT