ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಿ ಬಾಳಿದರೆ ಸ್ವರ್ಗ ಸುಖ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಆಮನೆಯಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ಒಂದು ಸಭೆ ನಡೆಯುತ್ತದೆ. ಮನೆಯ ಯಜಮಾನ ಶಿವಾನಂದ ಮಠಪತಿ ಅಧ್ಯಕ್ಷತೆ ವಹಿಸುತ್ತಾರೆ. ಅವರ ಜೊತೆ ಅವರ ಪತ್ನಿ ಈರವ್ವ ಇರುತ್ತಾರೆ. ಜೊತೆಗೆ ಅವರ ಮೂವರು ಮಕ್ಕಳು, ಮೂವರು ಸೊಸೆಯರೂ ಇರುತ್ತಾರೆ.

ಸಭೆಯ ಅಜೆಂಡ ಏನೆಂದರೆ ಅಧ್ಯಕ್ಷರೂ ಸೇರಿದಂತೆ ಪ್ರತಿಯೊಬ್ಬ ಸದಸ್ಯರೂ ಈ ದಿನ ಏನೇನು ಕೆಲಸ ಮಾಡಿದರು ಎನ್ನುವುದನ್ನು ಅವಲೋಕಿಸುವುದು ಹಾಗೂ ನಾಳೆ ಯಾರು ಯಾರು ಯಾವ ಯಾವ ಕೆಲಸ ಮಾಡಬೇಕು ಎನ್ನುವುದನ್ನು ತೀರ್ಮಾನಿಸುವುದು.

ನಾಳೆ ಯಾರು ಗಿಡಕ್ಕೆ ನೀರು ಹಾಯಿಸಬೇಕು, ಯಾರು ಅಡುಗೆ ಮಾಡಬೇಕು, ಯಾರು ತರಕಾರಿ ಮಾರಾಟಕ್ಕೆ ಹೋಗಬೇಕು, ಯಾರು ಉಪ್ಪಿನ ಕಾಯಿ ಮಾರಲು ಹೋಗಬೇಕು ಎನ್ನುವುದೆಲ್ಲಾ ಇಲ್ಲೇ ನಿರ್ಧಾರವಾಗುತ್ತದೆ. ಅದರಂತೆ ಅವರು ನಡೆದುಕೊಳ್ಳುತ್ತಾರೆ.

ಸಭೆ ಇಷ್ಟಕ್ಕೇ ಸೀಮಿತವಾಗಿರುವುದಿಲ್ಲ. ಸಂಸಾರದ ಇತರ ಸಮಸ್ಯೆಗಳು, ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು, ಅಪ್ಪ–ಮಕ್ಕಳ ಅಭಿಪ್ರಾಯ ಭೇದಗಳು, ಅತ್ತೆ–ಸೊಸೆಯರ ನಡುವೆ ಏನಾದರೂ ತಪ್ಪು ತಿಳಿವಳಿಕೆ ಇದ್ದರೆ ಅವುಗಳೂ ಇಲ್ಲಿಯೇ ನಿವಾರಣೆಯಾಗುತ್ತವೆ. ಮನೆಗೆ ಯಾವ ವಸ್ತುವನ್ನು ತರಬೇಕು, ಯಾವುದನ್ನು ತರಬಾರದು, ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಹೀಗೆ ಎಲ್ಲವೂ ಇಲ್ಲಿಯೇ ನಿರ್ಧಾರವಾಗುತ್ತದೆ. ಸಭೆ ಮುಗಿದ ನಂತರ ಊಟ. ಆಮೇಲೆ ಸುಖ ನಿದ್ದೆ.

ಇದು ಬೆಳಗಾವಿ ಜಿಲ್ಲೆ ರಾಮದುರ್ಗ ಸಮೀಪದ ಮುದಕವಿಯ ಶಿವಾನಂದ ಮಠಪತಿ ಅವರ ಕುಟುಂಬದ ಕತೆ. ಶಿವಾನಂದ ಮಠಪತಿ ಅವರಿಗೆ ಈರಣ್ಣ, ಮಲ್ಲಯ್ಯ, ಬಸಯ್ಯ ಎಂಬ ಮೂರು ಗಂಡು ಮಕ್ಕಳಿದ್ದಾರೆ. ದಾಕ್ಷಾಯಿಣಿ, ವಿದ್ಯಾ, ಜ್ಯೋತಿ ಎಂಬ ಮೂವರು ಸೊಸೆಯರು. ಈರಣ್ಣ ಮತ್ತು ಮಲ್ಲಯ್ಯ ಅವರಿಗೆ ತಲಾ ಇಬ್ಬರು ಮಕ್ಕಳಿದ್ದಾರೆ.

ಬಸಯ್ಯಗೆ ಒಂದು ಮಗುವಿದೆ. ಎಲ್ಲರೂ ಒಂದೇ ಮನೆಯಲ್ಲಿದ್ದಾರೆ. ದಿನವಿಡೀ ಕಷ್ಟಪಟ್ಟು ದುಡಿಯುತ್ತಾರೆ. ಮೃಷ್ಟಾನ್ನ ತಿನ್ನುತ್ತಾರೆ. ಕಣ್ಣು ತುಂಬಾ ನಿದ್ದೆ ಮಾಡುತ್ತಾರೆ. ಈ ಕೂಡು ಕುಟುಂಬದಲ್ಲಿ ನೋವು, ಸಂಕಟಕ್ಕೆ ಜಾಗವೇ ಇಲ್ಲ. ಸಮಸ್ಯೆಗಳೂ ಅವರ ಸುತ್ತ ಹಾದಿಲ್ಲ. ಸಾಲ ಎಂಬುದು ಅವರನ್ನು ಹುಡುಕಿಕೊಂಡು ಬಂದಿಲ್ಲ.

ಇದು ಮಠಪತಿ ಅವರ ಮನೆಯ ಕತೆಯಾದರೆ ರಾಮದುರ್ಗದ ಬಳಿಯೇ ಇರುವ ಸುನ್ನಾಳದ ಹನುಮಂತ ಕುಲಗೋಡ ಅವರ ಮನೆಯ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಹನುಮಂತಪ್ಪ ಅವರ ಮನೆಯಲ್ಲಿ ಪ್ರತಿ ದಿನ ಸಭೆ ನಡೆಯುವುದಿಲ್ಲ. ಆದರೆ ಇಲ್ಲಿಯೂ ಎಲ್ಲರೂ ಒಟ್ಟಾಗಿದ್ದಾರೆ. ಒಟ್ಟಿಗೇ ದುಡಿಯುತ್ತಾರೆ. ಒಟ್ಟಿಗೇ ಊಟ ಮಾಡುತ್ತಾರೆ. ಆ ಮೂಲಕ ಸುಖ ಸಮೃದ್ಧಿಗೆ ದಾರಿ ಕಂಡುಕೊಂಡಿದ್ದಾರೆ.

ಹನುಮಂತಪ್ಪ ಅವರಿಗೆ ಅಜ್ಜಪ್ಪ ಮತ್ತು ಭೀಮಪ್ಪ ಎಂಬ ಇಬ್ಬರು ಮಕ್ಕಳು. ಇಬ್ಬರು ಸೊಸೆಯರು. ಅಜ್ಜಪ್ಪ ಅವರಿಗೆ ಮೂರು ಮಕ್ಕಳು. ಭೀಮಪ್ಪಗೆ ಇಬ್ಬರು ಮಕ್ಕಳು. ಇಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು.

ಮುದಕವಿಯ ಶಿವಾನಂದ ಮಠಪತಿ ಅವರಿಗೆ 10 ಎಕರೆ 5 ಗುಂಟೆ ಜಮೀನು ಇದೆ. ಇದು ಬೆಟ್ಟದ ಕಲ್ಲು ಗುಡ್ಡ. ಆ ಗುಡ್ಡದ ಮೇಲೆಯೇ ಈ ಕೂಡು ಕುಟುಂಬ ಸ್ವರ್ಗ ನಿರ್ಮಿಸಿದೆ. ಇದು ಮಳೆಯಾಶ್ರಿತ ಪ್ರದೇಶ. ನೀರು ಇಲ್ಲ. 18 ವರ್ಷದ ಹಿಂದೆ ಕೊರೆಸಿದ ಕೊಳವೆ ಬಾವಿಯಲ್ಲಿ ಒಂದು ಇಂಚು ನೀರಿದೆ. ಚಿಕ್ಕು, ಲಿಂಬು, ಮಾವು, ನೆಲ್ಲಿ, ನೇರಳೆ, ಹುಣಸೆ, ನುಗ್ಗೆ, ಕಬ್ಬು ಮುಂತಾದ ಬೆಳೆಯನ್ನು ಬೆಳೆಯಲಾಗುತ್ತದೆ.

ಮನೆಯಲ್ಲಿಯೇ ಉಪ್ಪಿನ ಕಾಯಿ ಕಾರ್ಖಾನೆ ಮಾಡಲಾಗಿದೆ. ಹೊಲದಲ್ಲಿ ದುಡಿಯುತ್ತಲೇ ತರಕಾರಿ, ಚಿಕ್ಕು, ಮಾವು, ಉಪ್ಪಿನಕಾಯಿ ಮುಂತಾದವುಗಳನ್ನು ಹತ್ತಿರದ ರಾಮದುರ್ಗ, ಬೆಳಗಾವಿ, ಹುಬ್ಬಳ್ಳಿ–ಧಾರವಾಡಗಳಲ್ಲಿ ಮನೆ ಮಂದಿಯೇ ಹೋಗಿ ಮಾರಿ ಬರುತ್ತಾರೆ. ಶಿವಾನಂದ ಅವರ ಪತ್ನಿ ಈರವ್ವ ಅವರಿಗೆ ತರಕಾರಿ ಮಾರಾಟದಲ್ಲಿ 20 ವರ್ಷದ ಅನುಭವ ಇದೆ.

ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಹಕೀಕತ್ ಶಿವಾನಂದ ಅವರಿಗೆ ಗೊತ್ತಿದೆ. ಇದನ್ನೇ ಅವರು ತಮ್ಮ ಮಕ್ಕಳು ಮತ್ತು ಸೊಸೆಯರಿಗೆ ಹೇಳಿಕೊಟ್ಟಿದ್ದಾರೆ. ಹೊಂದಾಣಿಕೆಯ ಬದುಕನ್ನು ಕಲಿಸಿದ್ದಾರೆ. ಅದಕ್ಕಾಗಿಯೇ ಅವರೆಲ್ಲರೂ ಒಟ್ಟಾಗಿಯೇ ಸಂಸಾರದ ರಥ ಎಳೆಯ ತೊಡಗಿದ್ದಾರೆ. ಅವರ ಜೊತೆ ಮಾತಿಗೆ ಕುಳಿತರೆ ಸೌಹಾರ್ದ ಪ್ರಪಂಚದ ಬಾಗಿಲು ತೆರೆಯುತ್ತದೆ.

‘ಹೀಗೆ ಎಲ್ಲರೂ ಒಟ್ಟಾಗಿ ಇದ್ದೀರಲ್ಲ. ಯಾವಾಗಲೂ ಜಗಳ ಪಗಳಾ ಆಗಿಲ್ಲವಾ?’ ಎಂದು ಕೇಳಿದರೆ, ‘ಸಂಸಾರ ಎಂದ ಮೇಲೆ ಸಣ್ಣ ಪುಟ್ಟ ವೈಮನಸ್ಯ ಎಲ್ಲಾ ಬರ್ತಾವರಿ. ಆದರೆ ಅಪ್ಪ–ಅಮ್ಮ ಅದನ್ನೆಲ್ಲಾ ಬಗೆಹರಿಸತ್ತಾರ್ರಿ’ ಎಂದು ಮಲ್ಲಯ್ಯ ಹೇಳುತ್ತಾರೆ.

‘ಏನ್ರಮ್ಮ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿತ. ಸದಾ ಕೆಲಸ, ಕೆಲಸ, ಇದರ ನಡುವೆ ಒಂದಿಷ್ಟು ಬಿಡುವು ಬೇಕು ಎಂದು ನಿಮಗೆ ಅನ್ನಿಸುವುದಿಲ್ಲವಾ’ ಎಂದು ಸೊಸೆಯರನ್ನು ಕೆಣಕಿದರೆ ‘ಕೆಲಸದಾಗ ಇರೋ ಸುಖಾ ಮತ್ಯಾವುದರಲ್ಲಿ ಸಿಗತೈತರಿ’ ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ.

‘ನೀವು ಅಣ್ಣ ತಮ್ಮಂದಿರು ಸರಿ. ಒಂದೇ ತಾಯಿ ಮಕ್ಕಳು. ನಿಮಗೆ ಮೊದಲಿಂದಲೂ ಹೊಂದಾಣಿಕೆ ಇದೆ. ಬೇರೆ ಬೇರೆ ಕಡೆಯಿಂದ, ಬೇರೆ ಬೇರೆ ಹಿನ್ನೆಲೆಯಿಂದ ಬಂದ ನಿಮ್ಮ ಪತ್ನಿಯರು ಹೀಗೆ ಹೊಂದಾಣಿಕೆ ಮಾಡಿಕೊಂಡಿದ್ದು ಹೇಗೆ’ ಎಂದರೆ ‘ನಮ್ಮ ಅಪ್ಪ ಭಾರೀ ಬುದ್ಧಿವಂತಾರ್ರಿ.

ಸಗಣಿ ಪಗಣಿ ಬಳದೋರ ಮನೆಯಿಂದಲೇ ಎಲ್ಲಾ ಸೊಸೆಯರನ್ನು ಆಯ್ಕೆ ಮಾಡ್ಯಾರ್ರಿ. ಬಡವರ ಮನೆಯಿಂದ ಹೆಣ್ಣು ತಂದರ ಹೊಂದಿಕೊಂಡು ಹೋಕಾರ ಎನ್ನೋದು ಅವರಿಗೂ ಗೊತ್ತದಾರ್ರಿ. ಈ ಮನೆಗೆ ಬಂದ ಮ್ಯಾಲೆ ಹ್ಯಾಂಗ್ ನಡಕೋಬೇಕು ಅನ್ನೋದನ್ನು ನಮ್ಮಮ್ಮ ಕಲಿಸ್ಯಾಳ್ರಿ. ಅದಕ್ಕಾ ನಮ್ಮ ಸಂಸಾರ ಇಷ್ಟು ಚೆನ್ನಾಗಿ ನಡೀಕತ್ತೈತರ್ರಿ’ ಎಂಬ ಮಾತು ಕೇಳುವುದಕ್ಕೇ ಸಂತೋಷವಾಗುತ್ತದೆ.

ಶಿವಾನಂದ ಮಠಪತಿ ದಂಪತಿಗೆ ಒಂದು ಖಯಾಲಿ ಇದೆ. ಅವರು ಪ್ರತಿ ವರ್ಷ ಶ್ರೀಶೈಲಕ್ಕೆ ಪಾದಯಾತ್ರೆ ಹೋಗುತ್ತಾರೆ. ಮುದಕವಿಯಿಂದ ಶ್ರೀಶೈಲ ಸುಮಾರು 600 ಕಿ.ಮೀ ದೂರದಲ್ಲಿದೆ. ಅಲ್ಲಿಯವರೆಗೆ ನಡೆದುಕೊಂಡೇ ಹೋಗುತ್ತಾರೆ. ಅವರ ಪಾದಯಾತ್ರೆಗೆ ಪ್ರತೀ ಬಾರಿಯೂ ಒಬ್ಬೊಬ್ಬ ಮಗ–ಸೊಸೆ ಜೊತೆಯಾಗುತ್ತಾರೆ.

ಮಠಪತಿ ಅವರ ಕೃಷಿ ಭೂಮಿಯನ್ನು ನೋಡಿದರೆ ನೀರಿಲ್ಲದ ನಾಡಲ್ಲಿ ಹೇಗೆ ಕೃಷಿ ಮಾಡಬೇಕು ಎಂಬ ಪಾಠ ಕಲಿಸುವಂತಿದೆ. ಮಠಪತಿ ಅವರ ಸಂಸಾರವನ್ನು ನೋಡಿದರೆ ಒಟ್ಟಾಗಿ ಬದುಕುವ ಕಲೆ ಹೇಗೆ ಎನ್ನುವುದನ್ನು ಕಲಿಸುತ್ತದೆ.

ಕೂಡಿ ಬಾಳುವ ಸುಖವನ್ನು ಅನುಭವಿಸುತ್ತಿರುವ ಸುನ್ನಾಳದ ಹನುಮಂತ ಕುಲಗೋಡ ಅವರ ಸಂಸಾರ ಕೂಡ ಹೊಸ ಹೊಸ ಹೊಳಹುಗಳನ್ನು ನೀಡುತ್ತದೆ.
ಹನುಮಂತಪ್ಪ ಅವರಿಗೆ ಇರುವುದು ಒಟ್ಟು ಆರೂವರೆ ಎಕರೆ ಭೂಮಿ. ಎರಡೂವರೆ ಎಕರೆ ಭೂಮಿ ಒಂದು ಕಡೆ, 4 ಎಕರೆ ಭೂಮಿ ಒಂದು ಕಡೆ ಇದೆ. ಹನುಮಂತಪ್ಪ ಈ ಭೂಮಿಯಲ್ಲಿ ಬಿಳಿಜೋಳ, ಕಡ್ಲೆ, ಹುರುಳಿ, ಕುಸಬಿ, ಪುಂಡಿ ಬೆಳೆದುಕೊಂಡಿದ್ದರು. ಅವರ  ರೈತಾಪಿ ಜೀವನ ಆರಕ್ಕೇರಿರಲಿಲ್ಲ.

ಮೂರಕ್ಕಿಳಿದಿರಲಿಲ್ಲ. ಹಿರಿಯ ಮಗ ಅಜ್ಜಪ್ಪ ಐಟಿಐ ಓದಿ ಸುನ್ನಾಳಕ್ಕೆ ಮರಳಿ ಜೈ ಹನುಮಾನ್ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದರು. ವ್ಯವಹಾರದ ಕುಶಲತೆ ಸಾಕಷ್ಟು ಸಿದ್ಧಿಸಿತ್ತು. 2005ರಲ್ಲಿ ಅವರು ಅಂಗಡಿ ಮುಚ್ಚಿ ನೇಗಿಲು ಹಿಡಿದರು. ರಾಮದುರ್ಗದ ಸುತ್ತಮುತ್ತ ತರಕಾರಿ ಹೆಚ್ಚು ಬೆಳೆಯುತ್ತಿರಲಿಲ್ಲ. ಬಹುತೇಕ ರೈತರು ಸೂರ್ಯಕಾಂತಿ, ಕಬ್ಬು, ಬಾಳೆ ನಂಬಿಕೊಂಡಿದ್ದರು. ಅಜ್ಜಪ್ಪ ಇದನ್ನೇ ತಮ್ಮ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಂಡರು.

ಎಲ್ಲ ರೈತರ ದಾರಿಯನ್ನು ಅವರು ತುಳಿಯಲಿಲ್ಲ. ಮಲಪ್ರಭೆ ನದಿಯ ದಂಡೆಯ ಮೇಲಿರುವ ತಮ್ಮ ಎಲ್ಲ ಜಮೀನಿಗೂ ನೀರಾವರಿ ಸೌಲಭ್ಯ ಕಲ್ಪಿಸಿದರು. ದೀರ್ಘಾವಧಿ ಬೆಳೆಯ ಜೊತೆಗೆ ತರಕಾರಿ ಬೆಳೆಯುವುದನ್ನು ರೂಢಿ ಮಾಡಿಕೊಂಡರು. ಬೆಂಡೆ, ಸೌತೆ, ಮೂಲಂಗಿ, ಮೆಣಸಿನಕಾಯಿ, ಮೆಂತೆ, ಸಬ್ಬಸಿಗೆ, ಕೊತ್ತಂಬರಿ, ಹರಿವೆ, ಪಾಲಕ್, ಅರಿಶಿಣ ಹೀಗೆ ಬಹುತೇಕ ಎಲ್ಲ ಬಗೆಯ ತರಕಾರಿಗಳೂ ಅವರ ಹೊಲದಲ್ಲಿ ನಗತೊಡಗಿದವು.

ತಮ್ಮ ಭೀಮಪ್ಪನ ಜೊತೆಗೂಡಿ ಅಜ್ಜಪ್ಪ ಅವರ ತರಕಾರಿ ಕೃಷಿ ಗರಿಗೆದರಿತು. ಇದಕ್ಕೆ ಅಜ್ಜಪ್ಪ ಮತ್ತು ಭೀಮಪ್ಪ ಅವರ ಪತ್ನಿಯರೂ ಜೊತೆಯಾದರು. ತಂದೆ, ತಾಯಿ ಕೂಡ ಸಾಥ್ ನೀಡಿದರು. ಈಗ 6 ಮಂದಿಯೂ ಒಟ್ಟಿಗೇ ಕೃಷಿ ಮಾಡುತ್ತಾರೆ. ಮಾರಾಟವನ್ನೂ ಮಾಡುತ್ತಾರೆ. ಸಾವಯವ ಕೃಷಿಯನ್ನೇ ನಂಬಿಕೊಂಡ ಅವರು ಸ್ವಾವಲಂಬಿಗಳೂ ಆಗಿದ್ದಾರೆ. ಹೀಗೆ ಕೃಷಿಯಲ್ಲಿ ಸ್ವಾವಲಂಬಿಯಾಗಲು ಕೂಡು ಕೃಷಿಯ ಪಾತ್ರವೇ ಹೆಚ್ಚು ಎಂದು ಅಜ್ಜಪ್ಪ ಹೇಳುತ್ತಾರೆ.

ಈ ಮನೆಯಲ್ಲಿಯೂ ಒಂದು ಶಿಸ್ತು ಇದೆ. ತಾಯಿ ಪಾರ್ವತವ್ವ ತರಕಾರಿ ಮಾರಾಟಕ್ಕೆ ಹೋದರೆ ಒಬ್ಬ ಸೊಸೆ ಅಡುಗೆ ಮಾಡುತ್ತಾರೆ. ಇನ್ನೊಬ್ಬ ಸೊಸೆ ತರಕಾರಿ ಕೃಷಿಯಲ್ಲಿ ತೊಡಗುತ್ತಾರೆ. ಮಠಪತಿ ಕುಟುಂಬದಂತೆ ಇಲ್ಲಿ ತಂದೆಯೇ ಯಜಮಾನರಲ್ಲ. ಅಜ್ಜಪ್ಪನೇ ಎಲ್ಲ ಉಸ್ತುವಾರಿ ನೋಡಿಕೊಳ್ಳುತ್ತಾರೆ.
ಅಜ್ಜಪ್ಪ ಕೇವಲ ತಾವು ಇಂತಹ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಲ್ಲ. ಇತರರನ್ನೂ ಈ ರೀತಿಯ ಕೃಷಿಗೆ ಪ್ರೇರೇಪಿಸುತ್ತಾರೆ. ಅದಕ್ಕಾಗಿ ಒಂದು ಗುಂಪನ್ನೂ ರಚಿಸಿಕೊಂಡಿದ್ದಾರೆ.

‘ಕೃಷಿ ಬಳಗ’ ಎಂದು ಕರೆಯಲಾಗುವ ಈ ಗುಂಪು ಪ್ರತಿ ತಿಂಗಳ ಕೊನೆಯ ರವಿವಾರ ಸಭೆ ಸೇರಿ ಕೃಷಿ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತದೆ. ಕೃಷಿ ವಿಧಾನ, ತಳಿ ಬಗ್ಗೆಯೂ ಸಮಾಲೋಚನೆ ನಡೆಯುತ್ತದೆ. ತಾವು ಅನುಸರಿಸುವ ವಿಧಾನಗಳನ್ನು ಹೇಳಿಕೊಳ್ಳುತ್ತಾರೆ. ಪ್ರತೀ ಬಾರಿಯೂ 50–60 ಕೃಷಿಕರು ಸೇರುತ್ತಾರೆ. ಈ ಕೃಷಿ ಸಭೆಗೂ ಎಲ್ಲರೂ ಬುತ್ತಿ ಕಟ್ಟಿಕೊಂಡು ಬರುತ್ತಾರೆ. ಬುತ್ತಿಯನ್ನು ಹಂಚಿ ತಿನ್ನುತ್ತಾರೆ.

ಅಜ್ಜಪ್ಪ ಅವರ ಮನೆಯಲ್ಲಿ ಎಲ್ಲರಿಗೂ ಕನಸುಗಳಿವೆ, ಆದರೆ ಆ ಕನಸು ಪ್ರತ್ಯೇಕವಾಗಿಲ್ಲ. ಎಲ್ಲರೂ ತಮ್ಮ ತಮ್ಮ ಕನಸುಗಳನ್ನು ಒಟ್ಟಿಗೇ ಹೇಳಿಕೊಳ್ಳುತ್ತಾರೆ. ಒಬ್ಬರ ಕನಸನ್ನು ನನಸು ಮಾಡಲು ಇನ್ನೊಬ್ಬರು ಶ್ರಮಿಸುತ್ತಾರೆ.

ಯಾರಿಗೋ ಒಬ್ಬರಿಗೆ ಇಂದು ಜಾತ್ರೆಗೆ ಹೋಗಬೇಕು ಅನ್ನಿಸಿದರೆ ಎಲ್ಲರೂ ಸೇರಿ ಕೆಲಸವನ್ನು ಬೇಗ ಬೇಗ ಮುಗಿಸಿ ಒಟ್ಟಿಗೇ ಜಾತ್ರೆಗೆ ಹೋಗುತ್ತಾರೆ. ಸಂಬಂಧಿಗಳ ಮನೆಯಲ್ಲಿ ಮದುವೆ, ಇತರ ಯಾವುದೇ ಸಮಾರಂಭ ನಡೆದರೆ ತಂದೆಯನ್ನು ಕಳುಹಿಸುತ್ತಾರೆ. ಕೆಲವೊಮ್ಮೆ ತಾಯಿಯೂ ಹೋಗುತ್ತಾರೆ.

ಮನೆ ಮಂದಿಯೆಲ್ಲಾ ಹೋಗುವ ಸಮಾರಂಭವಾಗಿದ್ದರೆ ಎಲ್ಲರೂ ಒಟ್ಟಿಗೇ ಹೋಗುತ್ತಾರೆ. ಆದರೆ ಕೃಷಿ ಕೆಲಸವನ್ನು ಮುಗಿಸಿಯೇ ಹೋಗುತ್ತಾರೆ. ಯಾಕೆಂದರೆ ಇವರ ತರಕಾರಿಗೆ ನಿರ್ದಿಷ್ಟ ಗ್ರಾಹಕರಿದ್ದಾರೆ. ಅವರಿಗೆ ತೊಂದರೆ ಮಾಡುವ ಹಾಗಿಲ್ಲ.

ತಾಯಿ ಎಲ್ಲಿಯಾದರೂ ಹೊರಗೆ ಹೋಗಿದ್ದಾರೆ ಎಂದರೆ ಮನೆಯ ಸೊಸೆಯರಲ್ಲಿ ಯಾರಾದರೊಬ್ಬರು ತರಕಾರಿ ತೆಗೆದುಕೊಂಡು ಸಂತೆಗೆ ಹೋಗುತ್ತಾರೆ. ನಿರ್ದಿಷ್ಟ ಗ್ರಾಹಕರು ಇರುವುದರಿಂದ ತರಕಾರಿ ಮಾರಾಟ ಬೇಗ ಮುಗಿದು ಹೋಗುತ್ತದೆ.

ಹಬ್ಬಕ್ಕೆ ಅಕ್ಕ ತಂಗಿಯರು ಮನೆಗೆ ಬಂದಾಗ ಎಲ್ಲರೂ ಸೇರಿ ಸಿನಿಮಾಕ್ಕೆ ಹೋಗುತ್ತಾರೆ. ಬಟ್ಟೆ ತೆಗೆದುಕೊಳ್ಳಬೇಕು ಎಂದರೂ ಇದೇ ಸಂದರ್ಭವನ್ನು ಬಳಸಿಕೊಳ್ಳುತ್ತಾರೆ. ಎಲ್ಲರಿಗೂ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುವ ಸ್ವಾತಂತ್ರ್ಯವಿದೆ. ಯಾರ ಅಭಿಪ್ರಾಯವನ್ನೂ ಇಲ್ಲಿ ತಳ್ಳಿ ಹಾಕುವುದಿಲ್ಲ. ಬೇರೆಯವರ ಅಭಿಮತವನ್ನು ಗೌರವಿಸುವ ಕಲೆಯನ್ನು ಅವ್ವ ಎಲ್ಲರಿಗೂ ಕಲಿಸಿದ್ದಾರೆ ಎನ್ನುತ್ತಾರೆ ಅಜ್ಜಪ್ಪ.

ಅಜ್ಜಪ್ಪ ಮತ್ತು ಮಠಪತಿ ಅವರ ಮನೆಯಲ್ಲಿ ಟಿ.ವಿ ಇದೆ. ಆದರೆ ಅದರ ಬಳಕೆ ಕಡಿಮೆ. ಅಜ್ಜಪ್ಪ ಅವರ ಮನೆಯಲ್ಲಿ ಆಕಾಶವಾಣಿಯನ್ನು ಮಾತ್ರ ಎಲ್ಲರೂ ಕೇಳುತ್ತಾರೆ.

‘ಯಾಕೆ ನೀವು ಟಿ.ವಿ ನೋಡಲ್ಲ? ನಿಮಗೂ ಟಿ.ವಿ ನೋಡಬೇಕು ಎಂದು ಅನ್ನಿಸುವುದಿಲ್ಲವೇ?’ ಎಂದು ಈ ಎರಡೂ ಕುಟುಂಬದ ಮಹಿಳೆಯರನ್ನು ಕೇಳಿದರೆ ಅಚ್ಚರಿ ಎನ್ನುವಂತೆ ಒಂದೇ ರೀತಿಯ ಉತ್ತರ ಬರುತ್ತದೆ.

‘ಅಯ್ಯೋ ಬೆಳಿಗ್ಗೆಯಿಂದ ಕೆಲಸ. ಮುಂಜಾನೆ 5ಕ್ಕೇ ಎದ್ದು ಕೆಲಸದಲ್ಲಿ ತೊಡಗುತ್ತೀವಿ. ಸಂಜೆಯಾದರೆ ಊಟ ಮಾಡಿ ಮಲಗಿದರೆ ಸಾಕು ಎನ್ನುವಂತಾಗಿರುತ್ತದೆ. ಇನ್ನು ಟೀವಿ ಗೀವಿ ಎಲ್ಲಾ ಯಾಕೆ’ ಎಂದು ಅವರು ಕೇಳುತ್ತಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ನನ್ನ ಜೊತೆಗೆ ಬಂದಿದ್ದ ಸ್ನೇಹಿತರು ‘ಟಿ.ವಿ ನೋಡಿದ್ದರೆ ಅವರು ಹೀಗೆ ಒಟ್ಟಿಗೆ ಇರಲು ಸಾಧ್ಯ ಇರಲಿಲ್ಲ ಬಿಡಿ!’ ಎಂದರು. ಸಂಸಾರಗಳನ್ನು ಮುರಿಯುವ ಕತೆಗಳೇ ಹೆಚ್ಚಾಗಿರುವ ಟಿ.ವಿ ಧಾರಾವಾಹಿಗಳನ್ನು ನೆನೆದು ನಾನೂ ‘ಹೌದು ಹೌದು’ ಎಂದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT