ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಸಿಬಲ್’ ಮನಸ್ಸಿದ್ದರೆ ಮಾರ್ಗ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ಅದಕ್ಕೆ ಬೇಕಾಗಿರುವುದು ಛಲವಷ್ಟೆ. ಇಂತಹ ಛಲದ ಕಥೆ ಹೊಂದಿರುವ ‘ಪಾಸಿಬಲ್’ ಎಂಬ ಸಿನಿಮಾ ಬರುತ್ತಿದೆ. ಅಂದಹಾಗೆ ಇದು ಲವ್ ಮತ್ತು ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ.

‘ತುಂಬಾ ನಿರೀಕ್ಷೆ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಕಳೆದ ಪ್ರೀತಿಯನ್ನು ತನ್ನ ಛಲದಿಂದ ನಾಯಕ ಮತ್ತೆ ಹೇಗೆ ಪಡೆಯುತ್ತಾನೆ ಎಂಬುದೇ ಚಿತ್ರದ ತಿರುಳು. ಚಿತ್ರದ ಮೊದಲಾರ್ಧ ಪ್ರೀತಿಯ ಪಯಣಕ್ಕೆ ಮೀಸಲಾಗಿದ್ದರೆ, ಉಳಿದಾರ್ಧ ಸಸ್ಪೆನ್ಸ್ – ಥ್ರಿಲ್ಲರ್ ಆಗಿದೆ’ ಎಂದು ಚಿತ್ರದ ಕುರಿತು ನಿರ್ದೇಶಕ ರಾಜು ಹೇಳಿದರು.

ರಾಜು ಅವರ ಮೇಲೆ ನಂಬಿಕೆ ಇಟ್ಟು ಟಿ.ಆರ್‌. ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಂಜುನಾಥ್ ಕೆಲ ಕಾಲ ವಿದೇಶದಲ್ಲಿದ್ದವರು. ಕನ್ನಡಾಭಿಮಾನಿಯಾಗಿರುವ ಅವರು ಅಲ್ಲಿದ್ದಾಗಲೇ ಕನ್ನಡ ಚಿತ್ರವೊಂದನ್ನು ನಿರ್ಮಿಸುವ ಕನಸು ಕಂಡಿದ್ದರು. ಅಲ್ಲಿಂದ ವಾಪಸಾದ ಬಳಿಕ ಅವರು ಕೈ ಹಾಕಿದ್ದು ‘ಪಾಸಿಬಲ್‌’ ಚಿತ್ರದ ನಿರ್ಮಾಣಕ್ಕೆ. ‘ಹೊರದೇಶಗಳಲ್ಲಿ ಕೆಲವು ವರ್ಷ ಕಳೆದಿರುವುದರಿಂದ, ಅಲ್ಲಿರುವ ಕನ್ನಡ ಸಂಘಟನೆಗಳ ಪರಿಚಯವೂ ಇದೆ. ಹಾಗಾಗಿ ಚಿತ್ರವನ್ನು ಆಸ್ಟ್ರೇಲಿಯಾ ಮತ್ತು ಲಂಡನ್‌ನಲ್ಲೂ ಬಿಡುಗಡೆ ಮಾಡುವ ಆಲೋಚನೆ ಇದೆ’ ಎಂದರು ಮಂಜುನಾಥ್.

ಕೊಂಚ ನರ್ವಸ್ ಆದಂತೆ ಕಂಡುಬಂದ ನಾಯಕ ನಟ ರಾಜ್‌, ‘ಇದು ನನ್ನ ಮೊದಲ ಸಿನಿಮಾ. ನಾನು ಈ ಚಿತ್ರದಲ್ಲಿ ಪೊಲೀಸ್ ಆಗಬೇಕೆನ್ನುವ ಕನಸು ಹೊತ್ತ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಕನಸು ಸಾಕಾರ ಮಾಡಿಕೊಳ್ಳಲು ಹಾತೊರೆಯುವ ನಾಯಕ, ತನಗೆ ಅರಿವಿಲ್ಲದೆ ಕಷ್ಟದಲ್ಲಿ ಸಿಲುಕಿಕೊಳ್ಳುತ್ತಾನೆ. ಕಷ್ಟದ ಜತೆಗೆ ಪ್ರೀತಿಯನ್ನೂ ಜಯಿಸುವ ಪಾತ್ರ ಇದಾಗಿದೆ’ ಎಂದು ತಮ್ಮ ಪಾತ್ರವನ್ನು ಪರಿಚಯಿಸಿಕೊಂಡರು.

ರಾಜ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಶ್ರಾವ್ಯಾ, ‘ಚಿತ್ರದಲ್ಲಿ ಒರಟಾದ ಮತ್ತು ವಿಭಿನ್ನ ಪಾತ್ರ ನನ್ನದು’ ಎಂದರು. ಪಾತ್ರಕ್ಕಾಗಿ ಬುಲೆಟ್ ಬೈಕ್ ಓಡಿಸುವುದನ್ನು ಕಲಿತ ಅವರು, ಅದಕ್ಕಾಗಿ ಪಟ್ಟ ಪಡಿಪಾಟಲನ್ನು ಹಂಚಿಕೊಂಡರು. ದಿನೇಶ್ ಕುಮಾರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿವೆ. 

ಸೆಪ್ಟೆಂಬರ್ 2ರಂದು ಚಿತ್ರ ಬಿಡುಗಡೆ ಮಾಡುವ ಆಲೋಚನೆ ಹೊಂದಿರುವ ನಿರ್ಮಾಪಕರು, ಚಿತ್ರದ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ಹಮ್ಮಿಕೊಂಡಿದ್ದಾರೆ. ರಾಜ್ಯದಾದ್ಯಂತ ಚಿತ್ರತಂಡ ಪ್ರವಾಸ ಕೈಗೊಂಡು, ಅಲ್ಲಲ್ಲಿ ದೇಸಿ ಆಟಗಳನ್ನು ಆಯೋಜಿಸಲು ನಿರ್ಧರಿಸಿದೆ. ಅಲ್ಲದೆ, ಈ ಆಟಗಳಲ್ಲಿ ಗೆದ್ದವರಿಗೆ ಸೂಕ್ತ ಬಹುಮಾನ ಕೂಡ ನೀಡಲಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT