ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮನೆಯಂಗಳದಿ ನಕ್ಕು ನಲಿಸುವ ನಾಟಕಗಳು

ರಂಗಭೂಮಿ
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಹಾಸ್ಯ ನಾಟಕಗಳ ರಚನೆ ಬಹಳ ಕಷ್ಟ. ನಟಿಸುವುದು ಇನ್ನೂ ಕಷ್ಟ. ಒಂದಲ್ಲ, ಎರಡಲ್ಲ, ಸತತ ಏಳು ಹಾಸ್ಯ ನಾಟಕಗಳ ಪ್ರಯೋಗ ನೀಡಿ ನಿತ್ಯವೂ ತುಂಬಿದ ನಾಟ್ಯಗೃಹದಲ್ಲಿ ಭರಪೂರ ಮನರಂಜನೆ ನೀಡಿದ ಹೆಗ್ಗಳಿಕೆಗೆ ಚನ್ನಬಸಯ್ಯ ಗುಬ್ಬಿ ಅವರ ಅಮರೇಶ್ವರ ವಿಜಯ ನಾಟಕ ಮಂಡಳಿ ಪಾತ್ರವಾಯಿತು.

ಮಲ್ಲೇಶ್ವರದ ಕೇಶವಕಲ್ಪ ರಂಗಮಂದಿರದಲ್ಲಿ ಇತ್ತೀಚೆಗೆ ಒಂದು ವಾರ ಕಾಲ ನಡೆದ ಹಾಸ್ಯ ನಾಟಕೋತ್ಸವ ಪ್ರೇಕ್ಷಕರಿಗೆ ಹಾಸ್ಯ ರಸಾಯನವನ್ನು ಉಣಬಡಿಸಿತು.

ಯು.ಗೋವಿಂದಗೌಡ (ಜೀಜಿ), ಡಿ.ಹನುಮಕ್ಕ, ಶ್ರೀಕಾಂತ ವಿ.ಎಸ್., ಕೆ.ಡಿ.ನಾಗಣ್ಣ, ಸುರೇಶ್ ಜಿ., ಧನ್ವಂತ್ರಿ ಬಿ.ಎ., ವೆಂಕಟೇಶ್ ಎಂ., ಭರತ್ ಎಂ.ಜೆ. ಮುಂತಾದ ಕಲಾವಿದರು ತಮ್ಮ ಮಾತು, ಹಾವಭಾವದಿಂದ ಪ್ರೇಕ್ಷಕರ ಮುಖದ ಮಂದಹಾಸ ಮಾಸದಂತೆ ನೋಡಿಕೊಂಡರು. ಕೆಲ ಸನ್ನಿವೇಶದಲ್ಲಿ  ಬಿದ್ದು ಬಿದ್ದು ನಗುವಂತಾಗಲು ಮಾತುಗಳ ಪಂಚ್ ಜತೆಗೆ- ನಟ ನಟಿಯರ ಉತ್ತಮ ಅಭಿನಯವೂ ಕಾರಣವಾಯಿತು.

ಜೀಜಿ ನಿರ್ದೇಶನದಲ್ಲಿ ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘವು ‘ಪಳೆಂಕರು’, ಎಂ.ವೆಂಕಟೇಶ್ ನಿರ್ದೇಶನದಲ್ಲಿ ಸುರಕ್ಷಾ ವೇದಿಕೆಯು ‘ವಿಕಟ ವಿಲಾಸ’ ನಾಟಕವನ್ನು ಸಾದರಪಡಿಸಿದವು.

ತ್ರಿಮೂರ್ತಿ ಕಲಾಕೂಟಕ್ಕಾಗಿ ಡಿ.ಹನುಮಕ್ಕ ಅವರು ಜಯಂತ ಕಾಯ್ಕಿಣಿ ಅವರ ‘ಸೇವಂತಿ ಪ್ರಸಂಗ’ ನಿರ್ದೇಶಿಸಿದರು. ಬಿ.ಎ.ಶಾಂತಲಾದೇವಿ ನಿರ್ದೇಶನದಲ್ಲಿ ‘ಭುಕ್ಕುಂಡ ವರ್ಸಸ್ ಭೂಪತಿ’ ಎಂಬ ನಾಟಕವನ್ನು ಅಮರೇಶ್ವರ ವಿಜಯ ನಾಟಕ ಮಂಡಳಿಯೇ ಪ್ರಸ್ತುತಪಡಿಸಿತು.

ಎನ್.ಎಸ್.ರಾವ್ ಅವರ ‘36 ಅಲ್ಲ 63’ ನಾಟಕವನ್ನು ವೈರಲೆಸ್ ಶ್ರೀನಿವಾಸ ನಿರ್ದೇಶನದಲ್ಲಿ ಗಾಯತ್ರಿ ನಗರದ ಲಲಿತ ಕಲಾಸಂಘವು ಪ್ರದರ್ಶಿಸಿತು. ಕೆ.ಗುಂಡಣ್ಣ ಅವರ ‘ಪಂಚಭೂತಗಳು’ ನಾಟಕವನ್ನು ಜಯನಗರ ಸಂಕ ನಾಣಿ ಕಲಾವಿದರು ಸಂಯುಕ್ತ ಕರ್ನಾಟಕ ನಾರಾಯಣ್ ನಿರ್ದೇಶನದಲ್ಲಿ ಪ್ರಯೋಗಿಸಿದರು. ತಾವರಕೆರೆ ಮುದ್ದಯ್ಯನಪಾಳ್ಯ ರಂಗಪರಂಪರೆ ಟ್ರಸ್ಟ್ ಧನ್ವಂತ್ರಿ ನಿರ್ದೇಶನದಲ್ಲಿ ‘ದಾಸರು ಬಂದರು ದಾರಿ ಬಿಡಿ’ ನಾಟಕ ಪ್ರದರ್ಶಿಸಿತು.

ಕೆ.ಗುಂಡಣ್ಣ, ಎನ್.ಎಸ್.ರಾವ್ ರಚಿಸಿದ ‘ಪಂಚಭೂತಗಳು’, ‘36 ಅಲ್ಲ 63’ ಹೊರತುಪಡಿಸಿದರೆ; ಉಳಿದ ಎಲ್ಲ ನಾಟಕಗಳು ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ ಹಾಗೂ ಅಮರೇಶ್ವರ ವಿಜಯ ನಾಟಕ ಮಂಡಳಿ ನಿರಂತರವಾಗಿ ನಡೆಸಿಕೊಂಡು ಬಂದ ರಂಗಾಂದೋಲನದಲ್ಲಿ ರೂಪುಗೊಂಡ ನಾಟಕಗಳು.

ನಟ, ನಟಿಯರಾಗಿ ಈ ತಂಡಗಳನ್ನು ಪ್ರವೇಶಿಸಿದ ಯುವ ಪ್ರತಿಭಾವಂತರು ತಾವೇ ನಾಟಕಕಾರರಾಗುವ ಮಟ್ಟಕ್ಕೆ ಬೆಳೆದಿದ್ದಾರೆ. ಕೆಲವರು ನಾಟಕ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ನಾಟ್ಯ ಸರಸ್ವತಿಯ ಆಂಜನೇಯ ಅವರ ಬೆಂಬಿಡದ ಪ್ರೋತ್ಸಾಹ ಈ ಯುವ ಸಮುದಾಯಕ್ಕೆ ಇದೆ.

ಈ ನಾಟಕೋತ್ಸವ ಆಯೋಜಿಸಿದ 94ರ ಹರೆಯದ ಚನ್ನಬಸಯ್ಯ ಗುಬ್ಬಿ ವೃತ್ತಿ ರಂಗಭೂಮಿಯ ಹೆಸರಾಂತ ನಟರಾಗಿದ್ದವರು. ಮೂರು ದಶಕಗಳ ಹಿಂದೆ ನಾಟಕ ಕಂಪನಿ ಬಿಟ್ಟು ಬಂದ ಅವರು ಸುಮ್ಮನೆ ಕೂಡಲಿಲ್ಲ. ಯುವ ಕಲಾಸಮೂಹದ ಜತೆ ಕೈಗೂಡಿಸಿ ಅಮರೇಶ್ವರ ವಿಜಯ ನಾಟಕ ಮಂಡಳಿ ಸ್ಥಾಪಿಸಿ ವೇದಿಕೆ ನಿರ್ಮಿಸಿಕೊಟ್ಟರು.

ಕೋಲ್ಕತ್ತಕ್ಕೆ ಹೋಗಿ ಸುಭಾಷ್ ಚಂದ್ರ ಬೋಸರ ಬಗ್ಗೆ ಅಪೂರ್ವ ಮಾಹಿತಿ ಸಂಗ್ರಹಿಸಿ ನಾಟಕ ಬರೆಸಿ ನಿರ್ದೇಶನ ಮಾಡಿಸಿದರು. ಸ್ವಾತಂತ್ರ್ಯ ಚಳವಳಿಯ ಸೇನಾನಿ ‘ಹೊಸಮನಿ ಸಿದ್ದಪ್ಪ’ನವರ ನಾಟಕ ಪ್ರದರ್ಶಿಸಿಸಿದರು. ಕಾಲದೊಂದಿಗೆ ಹೆಜ್ಜೆ ಹಾಕಿ ಪ್ರಸ್ತುತರಾಗುತ್ತ ಹೋದ ಕಾರಣಕ್ಕೆ ವೃತ್ತಿರಂಗಭೂಮಿಯ ಈ ಹಿರಿಯ ಜೀವ ಮೂಲೆಗುಂಪಾಗಿಲ್ಲ.

ನಾಟಕವಾಡಲು ಸುಸಜ್ಜಿತ ರಂಗಮಂದಿರ ಬೇಕು. ಕಲಾಕ್ಷೇತ್ರ, ಕಲಾಗ್ರಾಮ, ಕೆ.ಎಚ್.ಕಲಾಸೌಧ ಸೇರಿದಂತೆ ನಗರದಲ್ಲಿರುವ ಬೆರಳೆಣಿಕೆಯ ರಂಗಮಂದಿರಗಳು ಈ ತಂಡಗಳಿಗೆ ದೊರೆತದ್ದು ಆರು ತಿಂಗಳಿಗೋ, ಒಂಬತ್ತು ತಿಂಗಳಿಗೋ ಒಮ್ಮೆ. ಉಳಿದಂತೆ ಶಾಲೆ, ಕಾಲೇಜುಗಳ ಚಿಕ್ಕಪುಟ್ಟ ಸಭಾಭವನದಲ್ಲಿ ನಾಟಕವಾಡಿದ್ದಾರೆ.

ದೂಳು ತಿನ್ನುತ್ತ ಪಾಳುಬಿದ್ದಿರುವ ಮಂದಿರಗಳನ್ನೇ ರಂಗಮಂದಿರಗಳಾಗಿ ಪರಿವರ್ತಿಸಿಕೊಂಡು ನಾಟಕ ಪ್ರದರ್ಶಿಸಿದ್ದಾರೆ. ರಂಗಗೃಹ ಚಿಕ್ಕದಿರಲಿ, ದೊಡ್ಡದಿರಲಿ ಅದಕ್ಕೇ ತಮ್ಮ ಅಭಿನಯವನ್ನು ಹೊಂದಿಸಿಕೊಂಡು ನಾಟಕ ಪ್ರದರ್ಶಿಸುವ ಈ ಯುವಕರ ಸಾಹಸಕ್ಕೆ ಬೆನ್ನು ತಟ್ಟಲೇಬೇಕು.

ನಗರದ ವಿವಿಧೆಡೆ ಕನಿಷ್ಠ ಇಪ್ಪತ್ತು– ಇಪ್ಪತ್ತೈದು ಸರಳ ರಂಗ ಮಂದಿರಗಳು, ಬಯಲು ನಾಟ್ಯಗೃಹಗಳು ತುರ್ತಾಗಿ ಸ್ಥಾಪನೆಯಾಗುವ ಅನಿವಾರ್ಯತೆಯನ್ನು ಈ ಎಲ್ಲ ಪ್ರಯೋಗಗಳು, ಉತ್ಸವಗಳು ಗಮನಕ್ಕೆ ತರುತ್ತವೆ.

ನೃತ್ಯಗಾತಿ ಡಾ.ಮಾಲಿನಿ ರವಿಶಂಕರ್– ಬೆಳಕು ತಜ್ಞ ಬಿ.ಕೆ.ರವಿಶಂಕರ್ ದಂಪತಿ ತಮ್ಮ ತಂದೆ ಎಚ್.ಆರ್.ಕೇಶವಮೂರ್ತಿ ಅವರ ಸ್ಮರಣಾರ್ಥ ಮಲ್ಲೇಶ್ವರದಲ್ಲಿ ನಿರ್ಮಿಸಿರುವ ‘ಕೇಶವಕಲ್ಪ ರಂಗಮಂದಿರ’ ಒಂದು ಪುಟ್ಟದಾದ ಆಪ್ತ ನಾಟ್ಯಗೃಹ. ಅಂತರರಾಷ್ಟ್ರೀಯ ಬೆಳಕುತಜ್ಞ ವಿ.ರಾಮಮೂರ್ತಿ ಅವರ ಸಲಹೆಯೊಂದಿಗೆ ಈ ಭವನದ ಬೆಳಕು ಮತ್ತಿತರ ವಿನ್ಯಾಸವನ್ನು ನಿರ್ಮಾಣ ಮಾಡಲಾಗಿದೆ.

ನೃತ್ಯವನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಿಸಿರುವ ಈ ಪುಟ್ಟ ಸಭಾಂಗಣವನ್ನು ನಾಟಕಕ್ಕೆ ಹೊಂದಿಸಿಕೊಂಡು ಮಾಡುವ ಸಮಯಪ್ರಜ್ಞೆ, ಔಚಿತ್ಯಪ್ರಜ್ಞೆ ಕಲಾವಿದರಲ್ಲಿ ಇದ್ದುದರಿಂದ ಈ ನಾಟಕ ಚಟುವಟಿಕೆ ಯಶಸ್ವಿಯಾಗಿ ಮುಂದುವರಿಯಿತು. ಮಲ್ಲೇಶ್ವರ ಬಡಾವಣೆಯ ನೂರಾರು ರಂಗಾಸಕ್ತರು ನಿತ್ಯವೂ ತಪ್ಪದೆ ನಾಟಕ ವೀಕ್ಷಿಸಿದರು. ಸಭಾಭವನ ಭರ್ತಿಯಾಗಿ ಹೊರಗೆ ಕೆಲವರು ನಿಂತು ನಾಟಕ ವೀಕ್ಷಿಸಿದ್ದು ಉತ್ಸವದ ಯಶಸ್ಸನ್ನು ಸಾರಿ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT