ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ರೂಪಾಯಿ ನಗರ ಸಂಚಾರ

ಕಿರುದಾರಿ
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಎರಡು ವರ್ಷಗಳ ನಂತರ ಊರಿನಿಂದ ಗರ್ಲ್‌ಫ್ರೆಂಡ್‌ ಬೆಂಗಳೂರಿಗೆ ಬರುತ್ತಿದ್ದಾಳೆ. ಅವಳಿಗೆ ಇಡೀ ಬೆಂಗಳೂರು ಸುತ್ತಬೇಕು ಎಂಬ ಆಸೆ. ಹುಡುಗನಿಗೂ ತನ್ನ ಗೆಳತಿಯ ಜತೆ ಬೆಂಗಳೂರು ಸುತ್ತಬೇಕು, ಸಿನಿಮಾ ನೋಡಬೇಕು, ಒಳ್ಳೆಯ ಊಟ ಮಾಡಬೇಕು ಎಂಬೆಲ್ಲ ಆಸೆಗಳೇನೋ ಇವೆ. ಆದರೆ ಕಾಸು ಬೇಕಲ್ಲ. ಪರ್ಸಿನಲ್ಲಿ ಕೈಯಾಡಿಸಿದರೆ ಸಿಗುವುದು ಒಂದು ರೂಪಾಯಿ ಮಾತ್ರ.

ಬರೀ ಒಂದು ರೂಪಾಯಿ ಇಟ್ಟುಕೊಂಡು ಅವನು ತನ್ನ ಗೆಳೆತಿಯೊಂದಿಗೆ ಹೇಗೆ ಬೆಂಗಳೂರು ಸುತ್ತುತ್ತಾನೆ, ಸಿನಿಮಾ ನೋಡಿ, ಊಟ ಮಾಡಿ ಅವಳಿಗೆ ಬಟ್ಟೆಯನ್ನೂ ಕೊಡಿಸುತ್ತಾನೆ? ಈ ಅಸಾಧ್ಯವನ್ನು ಸಾಧ್ಯವಾಗಿಸಿ ಗೆಳತಿಯನ್ನು ಖುಷಿಪಡಿಸುವುದೇ ಅಭಿಷೇಕ್‌ ಎಂ. ಅವರ ಕಿರುಚಿತ್ರ ‘ಫ್ರೀ ಹಿಟ್‌’ ತಿರುಳು.

ಅಶ್ವಿನ್‌ ಬೆಂಗಳೂರಿನ ಬಟ್ಟೆಯಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಾಮಾನ್ಯ ಹುಡುಗ. ಒಂದು ದಿನ ಊರಿನಲ್ಲಿರುವ ಅವನ ಗೆಳತಿ ಫೋನ್‌ ಮಾಡಿ ‘ನಾಳೆ ನಾನು ಬೆಂಗಳೂರಿಗೆ ಬರ್ತಿದ್ದಿನಿ. ನನ್ನನ್ನು ಇಡೀ ಬೆಂಗಳೂರು ಸುತ್ತಿಸಬೇಕು’ ಎನ್ನುತ್ತಾಳೆ.

ಆಗ ಅಶ್ವಿನ್‌ಗೆ ನೆನಪಾಗುವುದು ಹಣ. ತಿಂಗಳ ಕೊನೆಯಾದ್ದರಿಂದ ಜೇಬನ್ನೆಲ್ಲ ಖಾಲಿ ಮಾಡಿಕೊಂಡು ಕೂತಿದ್ದ ಅವನಿಗೆ ಯಾವ ಸ್ನೇಹಿತರೂ ಸಹಾಯ ಮಾಡುವುದಿಲ್ಲ. ರೂಮಿನಲ್ಲಿ ಸಿಗುವ ಒಂದು ರೂಪಾಯಿಯಷ್ಟೇ ಅವನ ಆಸ್ತಿ. ಆ ಒಂದು ರೂಪಾಯಿ ಇಟ್ಟುಕೊಂಡೇ ಗೆಳತಿಯೊಂದಿಗೆ ಇಡೀ ಬೆಂಗಳೂರನ್ನು ಹೇಗೆ ಸುತ್ತುತ್ತಾನೆ ಎಂಬುದನ್ನು ‘ಫ್ರೀ ಹಿಟ್‌’ ತೋರಿಸುತ್ತದೆ.

ಈ ನಡುವೆ ಅವನ ಸಹಾಯಕ್ಕೆ ಎಫ್‌.ಎಂ. ರೇಡಿಯೊದ ಒಂದು ಕಾರ್ಯಕ್ರಮ, ಮೊದಲ ಪ್ರಯಾಣವನ್ನು ಉಚಿತವಾಗಿ ನೀಡುವ ಓಲಾ, ಊಬರ್‌ ಕಂಪೆನಿಗಳು, ಸ್ನೇಹಿತರು ಇವರೆಲ್ಲ ಅವನಿಗೆ ಒದಗಿ ಬರುತ್ತಾರೆ.

ಇಡೀ ದಿನ ತನ್ನ ಬಳಿ ಹಣ ಇಲ್ಲ ಎಂಬುದನ್ನು ಗೆಳತಿಗೆ ತಿಳಿಯಗೊಡದ ಹಾಗೆ ಅಶ್ವಿನ್‌ ಎಚ್ಚರಿಕೆ ವಹಿಸುತ್ತಾನೆ. ಆದರೆ ಗೆಳತಿಗೆ ಹೇಗೋ ಅವನ ಸ್ಥಿತಿ ತಿಳಿದಿರುತ್ತದೆ. ಆದರೆ ಅವಳೂ ನೇರವಾಗಿ ಅದರ ಬಗ್ಗೆ ಮಾತನಾಡುವುದಿಲ್ಲ. ಸಂಜೆ ಮನೆಗೆ ಮರಳುವಾಗ ‘ಸಾಧ್ಯವಾದಷ್ಟೂ ಬೇಗ ಸೆಟಲ್‌ ಆಗು’ ಎಂದು ಪರೋಕ್ಷವಾಗಿ ಹೇಳಿ ಹೋಗುತ್ತಾಳೆ.

ಗಟ್ಟಿ ಕಥನ ಇಲ್ಲದಿರುವುದು ಈ ಕಿರುಚಿತ್ರದ ದೊಡ್ಡ ದೌರ್ಬಲ್ಯ. ಯಾವ ತಿರುವಿನಲ್ಲಿಯೂ ಪ್ರೇಕ್ಷಕರನ್ನು ಅಚ್ಚರಿಗೊಳಿಸದ ಪೇಲವ ಕಥನವನ್ನು ಎತ್ತಿನಿಲ್ಲಿಸುವುದು ಛಾಯಾಗ್ರಹಣ (ಪ್ರೀತಮ್‌ ತೆಗ್ಗಿನಮನೆ) ಮತ್ತು ಸಂಕಲನ. ಈ ಕಿರುಚಿತ್ರ ನಿಂತಿರುವುದು ತಾಂತ್ರಿಕತೆಯ ಇಟ್ಟಿಗೆಯ ಮೇಲೆ. ಹದವಾದ ಹಿನ್ನೆಲೆ ಸಂಗೀತವೂ (ವಿಜಯ್‌ ರಾಜ್‌ ಮತ್ತು ನಿತಿನ್‌ ಹೂಗಾರ್‌) ಚಿತ್ರಕ್ಕೆ ಪೂರಕವಾಗಿಯೇ ಇದೆ.

ಈ ಕಿರುಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸಂಕಲನ ಎಲ್ಲ ಜವಾಬ್ದಾರಿಗಳನ್ನೂ ಅಭಿಷೇಕ್‌ ಅವರೇ ನಿಭಾಯಿಸಿದ್ದಾರೆ. ನಿರ್ದೇಶಕ ಸುನಿಲ್‌ ಜತೆ ಹಲವು ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಅಭಿಷೇಕ್‌, ಹಲವಾರು ಸಿನಿಮಾಗಳಿಗೆ ಗ್ರಾಫಿಕ್‌ ಕೆಲಸವನ್ನೂ ಮಾಡಿದ್ದಾರೆ.

‘ಓಲಾ ಕ್ಯಾಬ್‌ನವರು ಮೊದಲ ಪ್ರಯಣ ಉಚಿತ ಎಂದು ಘೋಷಿಸಿದಾಗ ಆ ವಿಷಯ ನನ್ನನ್ನು ಸೆಳೆಯಿತು. ನಂತರ ಅದೇ ಜಾಡು ಹಿಡಿದು ಹೀಗೆ ಉಚಿತವಾಗಿ ಸಿಗುವ ಕೊಡುಗೆಗಳನ್ನು ಹುಡುಕುತ್ತ ಹೋದೆ. ಯಾವುದೋ ಆಹಾರ ಆ್ಯಪ್‌, ರೇಡಿಯೊ ಕಾರ್ಯಕ್ರಮದಲ್ಲಿ ಸಿಗುವ ವೋಚರ್‌ಗಳು ಇವನ್ನೆಲ್ಲ ಸೇರಿಸಿ ಒಂದು ಕಥೆ ಹೆಣೆದೆ. ಅದಕ್ಕೆ ಕೆಲವು ಕಾಲ್ಪನಿಕ ಸಂಗತಿಗಳನ್ನೂ ಸೇರಿಸಿ ಈ ಕಿರುಚಿತ್ರದ ಸ್ಕ್ರಿಪ್ಟ್‌ ರೂಪಿಸಿದೆ’ ಎನ್ನುವ ಅವರು ಸ್ಕ್ರಿಪ್ಟ್‌ಗಾಗಿ ಒಂದೂವರೆ ತಿಂಗಳು ಶ್ರಮಿಸಿದ್ದಾರೆ.

‘ಫ್ರೀ ಹಿಟ್‌’ ಅಭಿಷೇಕ್‌ ಅವರ ಮೂರನೇ ಕಿರುಚಿತ್ರ. ‘ಹೆಡ್‌ಲೈನ್‌’ ಅವರ ಮೊದಲನೇ ಕಿರುಚಿತ್ರ. ಆದರೆ ಆ ಚಿತ್ರ ಅವರಿಗೆ ಅಷ್ಟು ಸಮಾಧಾನ ತರದ ಕಾರಣ ಅದನ್ನು ಬಿಡುಗಡೆ ಮಾಡಿರಲಿಲ್ಲ. ಎರಡನೇ ಕಿರುಚಿತ್ರ ‘ಲೈಪ್‌ ಸೆಟಲ್‌’. ಸಂಗೀತಾಧಾರಿತ ಈ ಕಿರುಚಿತ್ರವು ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

ಐವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಈ ಚಿತ್ರವನ್ನು ರೂಪಿಸಿರುವ ಅಭಿಷೇಕ್‌, ರೆಡಿಯೊ ಸಿಟಿ, ಮೆಜೆಸ್ಟಿಕ್‌ ಮತ್ತು ನಗರದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಿದ್ದಾರೆ.

ನಿರೂಪಣೆಯಲ್ಲಿ ತಿಳಿಹಾಸ್ಯವನ್ನು ತರಲು ಯತ್ನಿಸಿದ್ದರೂ ಅದು ಸಾಕಷ್ಟು ಯಶಸ್ವಿಯಾಗಿಲ್ಲ. ತಾಂತ್ರಿಕವಾಗಿ ಅಚ್ಚುಕಟ್ಟುತನವನ್ನು ಕಾಪಾಡಿಕೊಂಡಿರುವ ‘ಫ್ರೀ ಹಿಟ್‌’ನ ಕಥನ ಇನ್ನಷ್ಟು ಗಟ್ಟಿಯಾಗಿದ್ದಿದ್ದರೆ ಇನ್ನೊಂದು ಮಟ್ಟಕ್ಕೆ ಏರಬಹುದಿತ್ತು.

ಕಿರುಚಿತ್ರ ನೋಡಲು ಕೊಂಡಿ: youtu.be/V4F0SNU9ZO8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT