ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣ ಮಾಸವೂ, ಮಾಂಸ ವ್ಯಾಪಾರವೂ...

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಶ್ರಾವಣ ಮಾಸ ಕೆಲವರಿಗೆ ಆದಾಯ ತಂದುಕೊಡುವ ಮಾಸವಾದರೆ, ಇನ್ನೂ ಕೆಲವರಿಗೆ ನಷ್ಟದ ಮಾಸವೂ ಹೌದು. ಸಾಲುಸಾಲು ಹಬ್ಬಗಳಿಂದಾಗಿ ಹಾಗೂ ಈ ಮಾಸದಲ್ಲಿ ಬಹಳಷ್ಟು ಮಂದಿ ಕಡ್ಡಾಯವಾಗಿ ಮಾಂಸಾಹಾರ ತ್ಯಜಿಸುವುದರಿಂದ ಮಾಂಸ ಹಾಗೂ ಮೀನು ಮಾರಾಟ, ವಹಿವಾಟಿಗೆ ಸಹಜವಾಗಿಯೇ ಹೊಡೆತ ಬಿದ್ದಿದೆ.

ಶ್ರಾವಣ ಮಾಸ ಆರಂಭವಾದ ನಂತರ ನಗರದಲ್ಲಿ ಶೇ50ರಿಂದ 60ರಷ್ಟು ಮಾಂಸದ ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಯಶವಂತಪುರ ಮೀನು ಮಾರುಕಟ್ಟೆ, ಮಂಜುನಾಥನಗರ ಹಾಗೂ ಶಿವಾಜಿನಗರ ರಸೆಲ್‌ ಮಾರುಕಟ್ಟೆ ಮಾಂಸದ ಅಂಗಡಿ ಮಾಲೀಕರು ಶ್ರಾವಣ ಮಾಸದ ವಹಿವಾಟಿನ ಬಗ್ಗೆ  ಕೇಳಿದರೆ, ‘ಡೌನ್ ಸ್ವಾಮಿ, ವ್ಯಾಪಾರ ಡೌನ್’ ಎನ್ನುತ್ತಾರೆ.

ಮಂಗಳೂರು, ಮಲ್ಪೆ, ಚೆನ್ನೈನಿಂದ ಬರುವ ಸಮುದ್ರದ ಮೀನುಗಳು ಬೆಂಗಳೂರಿನಲ್ಲಿ ಮಾರಾಟವಾಗುತ್ತವೆ. ಇನ್ನು ಕುರಿ ಹಾಗೂ ಮೇಕೆಗಳನ್ನು ವಿಜಯಪುರ, ಕೋಲಾರ, ಗೌರಿಬಿದನೂರು, ಶಿರಾ, ಹಿರಿಯೂರು, ಹಾಸನ ಭಾಗಗಳಿಂದ ತರುತ್ತಾರೆ.

ಶ್ರಾವಣ ಆರಂಭವಾದ ನಂತರ ಮನೆಗಳಲ್ಲಿ ಮಾಂಸ ಬಳಕೆಗೆ ಅನೇಕರು ಕಡಿವಾಣ ಹಾಕುತ್ತಾರೆ. ಮಾಂಸದ ಅಡುಗೆಯನ್ನೇ ಮಾಡುವುದಿಲ್ಲ.
‘ಕಳೆದ ವರ್ಷ ಶ್ರಾವಣದಲ್ಲಿ ಮಾತ್ರ ವ್ಯಾಪಾರ ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಶ್ರಾವಣಕ್ಕೂ ಮುಂಚೆಯೇ ವಹಿವಾಟು ಕಡಿಮೆಯಾಗಿದೆ. ನಮ್ಮ ಅಂಗಡಿಯಲ್ಲಿ ವಾರಕ್ಕೆ 50 ಕುರಿ ಮಾಂಸ ಖರ್ಚಾಗುತ್ತಿತ್ತು, ಈಗ 20ಕ್ಕೆ ಇಳಿದಿದೆ. ಫೈನಾನ್ಸ್‌ನಲ್ಲಿ ಸಾಲ ಪಡೆದು ವ್ಯಾಪಾರ ಮಾಡುತ್ತಿದ್ದೇವೆ.

ಕಂತುಗಳನ್ನು ಪಾವತಿಸಲು ಆಗುತ್ತಿಲ್ಲ. ನಾಗರಪಂಚಮಿ, ವರಮಹಾಲಕ್ಷ್ಮಿ, ಶ್ರೀಕೃಷ್ಣಜನ್ಮಾಷ್ಟಮಿ, ಗೌರಿ ಗಣೇಶ ಹಬ್ಬ... ಹೀಗೆ ಹಬ್ಬಗಳು ಬರುತ್ತಿವೆ. ಇತರ ದಿನಗಳಲ್ಲಿ ಮಾಂಸ ಸೇವಿಸುವವರು ಈ ಮಾಸದಲ್ಲಿ ಕಟ್ಟುನಿಟ್ಟಾಗಿ ಮಾಂಸಾಹಾರ ತ್ಯಜಿಸುತ್ತಾರೆ.

ಪರಿಣಾಮ ಶೇ70ರಷ್ಟು ವ್ಯಾಪಾರ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಂಜುನಾಥನಗರ ತಿಮ್ಮಯ್ಯ ರಸ್ತೆಯ ಆಫ್ರಿನ್‌ ಮಟನ್‌ ಸ್ಟಾಲ್‌ನ ಝಮ್ರದ್‌ ಚೌಧರಿ. ಕನಕಪುರ, ಮೈಸೂರು, ನಂಜನಗೂಡು ಭಾಗಗಳಿಂದ ಕುರಿ ತರಿಸುವ ಇವರು ಹತ್ತು ವರ್ಷಗಳಿಂದ ಇಲ್ಲಿ ಮಾಂಸದ ವ್ಯಾಪಾರ ಮಾಡುತ್ತಿದ್ದಾರೆ.

ಮೀನು ಮಾರುಕಟ್ಟೆ ಬಣಬಣ
ಯಶವಂತಪುರ ರೈಲ್ವೆ  ನಿಲ್ದಾಣದ ಸಮೀಪ ಇರುವ ಮೀನು ಮಾರುಕಟ್ಟೆಯಲ್ಲಿ ಎಂದಿನಂತೆ ಜನಜಂಗುಳಿ ಇರಲಿಲ್ಲ. ಬಣಗುಡುತ್ತಿದ್ದ ಮಾರುಕಟ್ಟೆಯಲ್ಲಿ ಮಾತಿಗೆ ಸಿಕ್ಕ ಕರ್ನಾಟಕ ಮಂಗಳೂರು ಫಿಶ್‌ ವರ್ಲ್ಡ್‌ನ ಮಾಲೀಕ ಅಮ್ಜದ್‌ ಅವರು ತಮ್ಮ ವ್ಯಾಪಾರ ಏರಿಳಿತದ ಬಗ್ಗೆ ಮಾತನಾಡಿದರು.

‘ಎರಡು ವರ್ಷಗಳಿಂದ ಮೀನು ವ್ಯಾಪಾರ ಮಾಡುತ್ತಿದ್ದೇನೆ. ಈ ತಿಂಗಳು ಶೇ60ರಷ್ಟು ವಹಿವಾಟು ಕಡಿಮೆಯಾಗಿದೆ. ಉತ್ತರ ಭಾರತೀಯರು ಮಾತ್ರ ಬರುತ್ತಿದ್ದಾರೆ. ಕೆರೆ ಮೀನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಕಳೆದ ತಿಂಗಳು ದಿನಕ್ಕೆ ಐದು ಬಾಕ್ಸ್‌ ಮೀನು ವ್ಯಾಪಾರವಾಗುತ್ತಿತ್ತು, ಆದರೀಗ ಎರಡು ಬಾಕ್ಸ್‌ ಖರ್ಚಾಗುತ್ತಿದೆ. (ಒಂದು ಬಾಕ್ಸ್‌ನಲ್ಲಿ 30 ಕೆ.ಜಿ. ಮೀನು ತುಂಬಿರುತ್ತಾರೆ) ನಮ್ಮಲ್ಲಿ 15ಕ್ಕೂ ಹೆಚ್ಚಿನ ವಿಧದ ಮೀನುಗಳು, ಸಿಗಡಿ, ಏಡಿ ಮಾರುತ್ತೇವೆ’ ಎನ್ನುತ್ತಾರೆ ಅಮ್ಜದ್‌.

ಬಿಕೋ ಎನ್ನುವ ರಸೆಲ್ ಮಾರುಕಟ್ಟೆ
ಶಿವಾಜಿನಗರದ ರಸೆಲ್‌ ಮಾರುಕಟ್ಟೆಯಲ್ಲಿ ಯಾವಾಗಲೂ ಜಾತ್ರೆಯ ವಾತಾವರಣವಿರುತ್ತದೆ. ಕಾಲಿಡುವುದಕ್ಕೂ ಸ್ಥಳವಿರುವುದಿಲ್ಲ.  ಅಷ್ಟೊಂದು ಜನದಟ್ಟಣೆ. ಇಲ್ಲಿ 120ಕ್ಕೂ ಹೆಚ್ಚಿನ ಮಾಂಸದ ಅಂಗಡಿಗಳಿವೆ. ತರಕಾರಿ ಮಾರುಕಟ್ಟೆ ಹಿಂಭಾಗದಲ್ಲೇ ಮಾಂಸದ ಅಂಗಡಿಗಳ ಸಾಲು ಕಾಣುತ್ತದೆ. ಕುರಿ, ಮೀನು ಜೊತೆಗೆ ಮಸಾಲೆಯನ್ನೂ ಇಲ್ಲಿಯೇ ತೆಗೆದುಕೊಂಡು ಹೋಗಬಹುದು.

ಆದರೆ ಮಾಂಸದ ಅಂಗಡಿಗಳಿರುವ ಈ ಸ್ಥಳ ಮಾತ್ರ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿತ್ತು. ಶ್ರಾವಣ ಮಾಸದ ಪರಿಣಾಮವಿದು. 25 ವರ್ಷಗಳಿಂದ ಮಾಂಸದ ವ್ಯಾಪಾರ ಮಾಡುತ್ತಿರುವ ಬಿ.ಎಸ್‌. ಮಹಮ್ಮದ್‌ ಮುಜೀಬುರ್‌ ರೆಹಮಾನ್‌ ಅವರು ತಮ್ಮ ವ್ಯಾಪಾರದ ಬಗ್ಗೆ ಮಾಹಿತಿ ನೀಡಿದರು.

‘ನಮ್ಮದು ಶಿವಾಜಿನಗರ. ಮಾಂಸದ ವ್ಯಾಪಾರವೇ ನಮ್ಮ ಕಾಯಕ. ದಿನಕ್ಕೆ 400ರಿಂದ 500 ಕೆ.ಜಿ. ಮಾಂಸ ವ್ಯಾಪಾರವಾಗುತ್ತಿತ್ತು. ಆದರೆ ಈ ತಿಂಗಳು ದಿನಕ್ಕೆ 250 ಕೆ.ಜಿ. ಮಾತ್ರ ವ್ಯಾಪಾರವಾಗುತ್ತಿದೆ. ಸಾಲುಸಾಲು ಹಬ್ಬಗಳಿಂದ ನಮ್ಮ ವ್ಯಾಪಾರ ಬಿದ್ದು ಹೋಗಿದೆ. ಗಣೇಶ ಹಬ್ಬ ಮುಗಿದ ಮೇಲೆ ವ್ಯಾಪಾರ ಚುರುಕಾಗಲಿದೆ. ಅದೇ ಅವಧಿಯಲ್ಲಿ ಬಕ್ರೀದ್ ಇರುವುದೂ ಪೂರಕವಾಗಿದೆ’ ಎನ್ನುತ್ತಾರೆ ಅವರು. ರಸೆಲ್‌ ಮಾರುಕಟ್ಟೆಗೆ ಮಾಂಸ ಖರೀದಿಸಲು ಮಾರತ್ತಹಳ್ಳಿ, ವಸಂತನಗರ, ಹೆಬ್ಬಾಳ, ಇಂದಿರಾನಗರ ಹಾಗೂ ಕೋರಮಂಗಲದಿಂದ ಜನ ಬರುತ್ತಾರೆ.

ಹೋಟೆಲ್‌ಗಳಿಗೂ ಬಿಸಿ
ಮಾಂಸದ ಅಂಗಡಿಗಳಿಗಷ್ಟೇ ಅಲ್ಲದೇ ಮಾಂಸಾಹಾರ ಹೋಟೆಲ್‌ಗಳಿಗೂ ಶ್ರಾವಣ ಮಾಸದ ಬಿಸಿ ತಟ್ಟಿದೆ. ‘ಹೋಟೆಲ್‌ನವರು ಹಿಂದಿಗಿಂತ ಶೇ 50ರಷ್ಟು ಕಡಿಮೆ ಮಾಂಸವನ್ನು ಖರೀದಿಸುತ್ತಿದ್ದಾರೆ’ ಎಂದು ಹೇಳುತ್ತಾರೆ ಮಹಮ್ಮದ್‌ ಮುಜೀಬುರ್‌ ರೆಹಮಾನ್‌. 

ಬ್ಯಾಚುಲರ್‌ಗಳೇ ಗ್ರಾಹಕರು
ಈ ತಿಂಗಳು ಕುಟುಂಬ ಸಮೇತ ಬರುವ ಸದಸ್ಯರು ಕಡಿಮೆಯಾಗಿದ್ದಾರೆ. ಹೆಚ್ಚಾಗಿ ಬ್ಯಾಚುಲರ್‌ಗಳೇ ಬರುತ್ತಿದ್ದಾರೆ. ವಸತಿ ಪ್ರದೇಶದ ಸಣ್ಣಪುಟ್ಟ ಮಾಂಸಾಹಾರ ಹೋಟೆಲ್‌ಗಳಿಗೆ ಈ ಪರಿಸ್ಥಿತಿ ಸಾಮಾನ್ಯ. ಶೇ30ರಷ್ಟು ಗ್ರಾಹಕರು ಕಡಿಮೆಯಾಗಿದ್ದಾರೆ. ಶ್ರಾವಣಕ್ಕೂ ಮುಂಚೆ 20 ಕೆ.ಜಿ. ಮೀನು ತರಿಸುತ್ತಿದ್ದೆವು, ಈಗ 10ಕೆ.ಜಿ. ತರಿಸುವಂತಾಗಿದೆ. ಮೆಜೆಸ್ಟಿಕ್‌, ವಾಣಿಜ್ಯ  ಪ್ರದೇಶಗಳಲ್ಲಿ ವ್ಯಾಪಾರಕ್ಕೇನೂ ತೊಡಕಾಗುವುದಿಲ್ಲ. ಮೊದಲಿನಂತೆ ಗ್ರಾಹಕರು ಬರಲು ಶ್ರಾವಣ ಮುಗಿಯಬೇಕು.
–ಪ್ರದೀಪ್‌,
ಆತಿಥ್ಯ ಕರಾವಳಿ ಶೈಲಿ ಮಾಂಸಾಹಾರ ಹೋಟೆಲ್‌, ವೆಸ್ಟ್‌ಆಫ್‌ ಕಾರ್ಡ್‌ ರಸ್ತೆ. ಶಿವನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT