ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ರಾಮ್‌ಜೆಟ್‌ ಎಂಜಿನ್‌ ಪರೀಕ್ಷೆ ಇಸ್ರೊ ಕಿರೀಟಕ್ಕೆ ಮತ್ತೊಂದು ಗರಿ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ವಾತಾವರಣದಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ಇಂಧನ ದಹನಕ್ಕೆ ಬಳಸುವ ಸ್ಕ್ರಾಮ್‌ಜೆಟ್‌ ಎಂಜಿನ್‌ ತಂತ್ರಜ್ಞಾನವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಯಶಸ್ವಿಯಾಗಿ ಪರೀಕ್ಷಿಸುವ  ಮೂಲಕ  ಇಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರಿದೆ.

ರಾಕೆಟ್‌ಗಳಲ್ಲಿ ಇಂಧನವಾಗಿ ಜಲಜನಕ ಹಾಗೂ ದಹನಶೀಲ ಉತ್ಕರ್ಷಕವಾಗಿ ಆಮ್ಲಜನಕವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಆದರೆ ಸ್ಕ್ರಾಮ್‌ಜೆಟ್‌ನಲ್ಲಿ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಹೀರಿಕೊಳ್ಳುವ ಸಂಕೀರ್ಣ ತಂತ್ರಜ್ಞಾನವನ್ನು ಇಸ್ರೊ ಅಭಿವೃದ್ಧಿಪಡಿಸಿ ಯಶಸ್ವಿಯಾಗಿರುವುದು ದೇಶಕ್ಕೆ ಹೆಮ್ಮೆ ತರುವ ಸಂಗತಿ.

ಪ್ರಸ್ತುತ ಈ ಸಂಕೀರ್ಣ ತಂತ್ರಜ್ಞಾನ ಅಮೆರಿಕ, ರಷ್ಯಾ ಹಾಗೂ ಐರೋಪ್ಯ ಒಕ್ಕೂಟಗಳ ಬಾಹ್ಯಾಕಾಶ ಸಂಸ್ಥೆಗಳ ಬಳಿ ಮಾತ್ರವೇ ಇದೆ. ಈ ದೇಶಗಳ ನೆರವಿಲ್ಲದೆ ದೇಶಿಯವಾಗಿಯೇ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ಇಸ್ರೊ ಯಶಸ್ಸಿನ ಕಿರೀಟಕ್ಕೆ ಸಿಕ್ಕ ಮತ್ತೊಂದು ಗರಿ ಎಂದೇ ಹೇಳಬಹುದು.

ಒಟ್ಟು ₹ 35 ಕೋಟಿ ವೆಚ್ಚದ ಯೋಜನೆಯ ಪೈಕಿ ಭಾನುವಾರ ನಡೆಸಿದ ಪ್ರಯೋಗಕ್ಕೆ ₹ 3 ಕೋಟಿ ವೆಚ್ಚವಾಗಿದೆ.   ಶಬ್ದದ ವೇಗಕ್ಕಿಂತ ಆರು ಪಟ್ಟು ವೇಗವಾಗಿ ಸಾಗಿದ ಸ್ಕ್ರಾಮ್‌ಜೆಟ್‌ ಅಳವಡಿಸಿದ ಆಧುನಿಕ ತಂತ್ರಜ್ಞಾನ ವಾಹನದಲ್ಲಿ  (ಎಟಿವಿ) ಎರಡು ಎಂಜಿನ್‌ಗಳಿದ್ದವು.

ಮೊದಲ ಎಂಜಿನ್‌ ಮೂಲಕ ಎಟಿವಿ ಉಡಾವಣೆಯಾದರೆ ಮತ್ತೊಂದು  ಎಂಜಿನ್‌ ಸ್ಕ್ರಾಮ್‌ಜೆಟ್‌ನ ಮುಂಭಾಗವು ವಾತಾವರಣದ ಆಮ್ಲಜನಕವನ್ನು ಹೀರಿಕೊಂಡು ಮಧ್ಯ ಭಾಗದಲ್ಲಿ ದಹಿಸಿ ಕೊನೆಯಲ್ಲಿ ಬೆಂಕಿಯನ್ನು ಉಗುಳುತ್ತಾ ಮುನ್ನುಗ್ಗುವಂತೆ ರೂಪಿಸಲಾಗಿದೆ. ಇದರಲ್ಲಿ ಆಮ್ಲಜನಕ ಒಳಹೋಗುವ, ಜಲಜನಕ ಹಾಗೂ ಆಮ್ಲಜನಕ ಮಿಶ್ರಣ ಮತ್ತು ದಹಿಸುವ ವ್ಯವಸ್ಥೆ ಇವೆಲ್ಲಾ ಸಂಕೀರ್ಣ ತಂತ್ರಜ್ಞಾನ.

ಸಾಮಾನ್ಯ ರಾಕೆಟ್‌ಗಳಲ್ಲಿ ಆಮ್ಲಜನಕವನ್ನು ಘನ ರೂಪದಲ್ಲಿ ಇಲ್ಲವೇ ದ್ರವರೂಪದಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಸ್ಕ್ರಾಮ್‌ಜೆಟ್‌ನಲ್ಲಿ  ಆಮ್ಲಜನಕವನ್ನು ವಾತಾವರಣದಿಂದಲೇ ಹೀರಿಕೊಳ್ಳುವ ವ್ಯವಸ್ಥೆ ಇರುವುದರಿಂದ  ರಾಕೆಟ್‌ನಲ್ಲಿ ಇಂಧನ ಹೊತ್ತೊಯ್ಯುವ ತೂಕ ಕಡಿಮೆಯಾಗುತ್ತದೆ. ಅಂದರೆ ರಾಕೆಟ್‌ನಲ್ಲಿ ಮತ್ತಷ್ಟು ಭಾರವನ್ನು ತೆಗೆದುಕೊಂಡು ಹೋಗಬಹುದು. ಇದರಿಂದ ಉಡಾವಣಾ ವೆಚ್ಚ ಶೇ 50ರಷ್ಟು ಕಡಿಮೆಯಾಗುತ್ತದೆ.

ಪರೀಕ್ಷೆಯಲ್ಲಿ ಸ್ಕ್ರಾಮ್‌ಜೆಟ್‌ ಐದು ನಿಮಿಷ ಕಾಲ ಕೆಲಸ ಮಾಡಿ 20 ಕಿ.ಮೀ. ದೂರ ತಲುಪಿದೆ.  ಈ ಅವಧಿಯಲ್ಲಿ ಹೈಪರ್‌ಸಾನಿಕ್ ವೇಗದಲ್ಲಿ ಸ್ಕ್ರಾಮ್‌ಜೆಟ್‌ ಆಮ್ಲಜನಕವನ್ನು ಹೀರಿಕೊಂಡು ಜಲಜನಕದ ಜೊತೆ ಪರಿಪೂರ್ಣವಾಗಿ ಮಿಶ್ರಣವಾಗಿರುವುದೇ, ದಹನ ಕ್ರಿಯೆ ಪರಿಪೂರ್ಣ ಆಗಿರುವುದೇ ಎನ್ನುವ ಪರೀಕ್ಷೆ ನಡೆದಿದೆ.

ಇದನ್ನು ಪುಟ್ಟ ಹೆಜ್ಜೆ ಎಂದುಕೊಂಡರೂ ತಂತ್ರಜ್ಞಾನ ಅಳವಡಿಕೆ ದೃಷ್ಟಿಯಿಂದ ಇದನ್ನು ಅಭೂತಪೂರ್ವ ಪರೀಕ್ಷೆ ಎಂದೇ ಹೇಳಬೇಕು ಎಂದು ವಿಕ್ರಂ ಸಾರಾಭಾಯಿ ಕೇಂದ್ರದ ನಿರ್ದೇಶಕ ಡಾ.ಕೆ.ಶಿವನ್‌ ಹೇಳಿದ್ದಾರೆ. ಇದು ನಿಜವೇ ಸರಿ. ಸ್ಕ್ರಾಮ್‌ಜೆಟ್‌ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಅಂತರಿಕ್ಷ ಸಾಗಣೆಗೆ, ಬಾಹ್ಯಾಂತರಿಕ್ಷ ವಿಮಾನದಲ್ಲಿ, ರಾಕೆಟ್‌ ಮತ್ತು ಕ್ಷಿಪಣಿ ಅಭಿವೃದ್ಧಿಯಲ್ಲೂ ಬಳಸಬಹುದು.

ಅಂದರೆ ಖರ್ಚು ಕಡಿಮೆಯಾಗಿ ವೇಗ ಹೆಚ್ಚಾಗುತ್ತದೆ. ಭಾರತವು ಮರುಬಳಕೆಯ ಅವತಾರ್‌ ಎನ್ನುವ ಹೆಸರಿನ ಉಪಗ್ರಹ ಉಡಾವಣಾ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿಯೂ ಸ್ಕ್ರಾಮ್‌ಜೆಟ್‌ ಬಳಕೆಯಾಗಲಿದೆ. ಇದು ಉಪಗ್ರಹ ಉಡಾವಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ಭಾರತ ಮತ್ತು ರಷ್ಯಾ ಜಂಟಿ ಸಹಭಾಗಿತ್ವದ ಬ್ರಹ್ಮೋಸ್‌, ಮ್ಯಾಕ್‌ 3 ವೇಗದಲ್ಲಿ ಹಾರಾಡುತ್ತದೆ. ಇದನ್ನು ರಾಡಾರ್‌ನಲ್ಲಿ ಪತ್ತೆ ಮಾಡುವುದು ಕಷ್ಟ. 

ಈ ಕ್ಷಿಪಣಿಗಳನ್ನು ಚೀನಾ ಗಡಿಯಲ್ಲಿ ನಿಯೋಜಿಸಿದ ಕ್ಷಣದಿಂದ ಚೀನಾ ಸರ್ಕಾರ ಕೆಂಗಣ್ಣು ಬೀರುತ್ತಿದೆ. ಬ್ರಹ್ಮೋಸ್‌ನಲ್ಲಿ ಸ್ಕ್ರಾಮ್‌ಜೆಟ್‌ ತಂತ್ರಜ್ಞಾನ ಬಳಸಿದರೆ ವೇಗ ಮತ್ತು ಸಾಗುವ ದೂರ ಸಹ ಹೆಚ್ಚಾಗುತ್ತದೆ. ಇದು ಭಾರತಕ್ಕೆ ಮತ್ತಷ್ಟು ಸುಭದ್ರತೆ ತರುವುದರಲ್ಲಿ ಸಂಶಯವೇ ಇಲ್ಲ.

ಈ ಬೆಳವಣಿಗೆಯು ಭಾರತ ವಿರೋಧಿ ಭಾವನೆ ಹೊಂದಿರುವ ನೆರೆ ರಾಷ್ಟ್ರಗಳಿಗೆ  ನಡುಕ ತರಬಹುದು. ಒಟ್ಟಾರೆ ಸ್ಕ್ರಾಮ್‌ಜೆಟ್‌ ತಂತ್ರಜ್ಞಾನ ಭಾರತದ ರಕ್ಷಣಾ ವ್ಯವಸ್ಥೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ಅಧ್ಯಾಯವನ್ನೇ ಸೃಷ್ಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT