ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಗ್ರಾಹಕ ಉತ್ಪನ್ನ ಅಗ್ಗ, ಉದ್ಯೋಗ ಸೃಷ್ಟಿ ಹೆಚ್ಚಳ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ  (ಜಿಎಸ್‌ಟಿ) ಜಾರಿಯಾದಲ್ಲಿ ಗ್ರಾಹಕ ಉತ್ಪನ್ನಗಳು ಅಗ್ಗವಾಗಲಿದ್ದು, ಹೆಚ್ಚಿನ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರೀಯ ಅಬಕಾರಿ ಮತ್ತು ಸುಂಕ ಮಂಡಳಿ (ಸಿಬಿಇಸಿ) ಭವಿಷ್ಯ ನುಡಿದಿದೆ.

ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆ  ಅನುಷ್ಠಾನಗೊಳ್ಳುವುದರಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ವಿದೇಶಿ ಬಂಡವಾಳ ಹರಿದು ಬರಲಿದೆ ಎಂದು ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

ಜಿಎಸ್‌ಟಿ ಜಾರಿಯಿಂದ ಗ್ರಾಹಕರು, ವರ್ತಕರಿಗೆ ಆಗುವ ಲಾಭಗಳ ಬಗ್ಗೆಯೂ ಮಂಡಳಿ ಮಾಧ್ಯಮಗಳಲ್ಲಿ ಜಾಹೀರಾತು ಕೂಡ ನೀಡಿದೆ. ಜಿಎಸ್‌ಟಿ ಜಾರಿಯಾದರೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌), ಸೇವಾ ತೆರಿಗೆ, ಅಬಕಾರಿ ಸುಂಕ ಸೇರಿದಂತೆ ಕೇಂದ್ರ ಹಾಗೂ ರಾಜ್ಯಗಳ 12ಕ್ಕೂ ಹೆಚ್ಚು  ತೆರಿಗೆಗಳು (ಲೆವಿ) ರದ್ದಾಗಲಿವೆ.

ಇದು ರಾಜ್ಯಗಳ ನಡುವೆ ಅಡೆತಡೆ ಇಲ್ಲದ ಸುಲಭ ವ್ಯಾಪಾರ ಮತ್ತು ವಹಿವಾಟಿಗೆ ನಾಂದಿ ಹಾಡಲಿದೆ. ಹಲವು ಬಾರಿ ತೆರಿಗೆ ತೆರುವ ಹೊರೆ ತಪ್ಪಲಿದ್ದು ಮೂಲದಲ್ಲಿ ಒಂದೇ ಬಾರಿ ಏಕರೂಪ ತೆರಿಗೆ (ಜಿಎಸ್‌ಟಿ) ಸಂಗ್ರಹಿಸುವ ವ್ಯವಸ್ಥೆ ಜಾರಿಯಾಗಲಿದೆ ಎಂದು ಸಿಬಿಇಸಿ ಹೇಳಿದೆ.

ವಿವಿಧ ಸ್ತರದ ತೆರಿಗೆ ಪಾವತಿ ಬಗ್ಗೆ  ಹತ್ತು– ಹಲವು ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಜಂಜಾಟದಿಂದ ವರ್ತಕರಿಗೆ ಮುಕ್ತಿ ದೊರೆಯಲಿದೆ. ತಂತ್ರಜ್ಞಾನ ಬಳಕೆಯಿಂದ  ತೆರಿಗೆ ಇಲಾಖೆ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ.

ಇಡೀ ತೆರಿಗೆ ವ್ಯವಸ್ಥೆ ಅತ್ಯಂತ ಸರಳಗೊಳ್ಳಲಿದ್ದು ಗ್ರಾಹಕರ ಉಪಭೋಗ ಪ್ರಮಾಣ ಹೆಚ್ಚಲಿದೆ ಎಂದು ‘ಸಿಬಿಇಸಿ’ ಸಮರ್ಥಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT