ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವು ಸಾಗಣೆ ತಡೆಗೆ ನಾಕಾಬಂದಿ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಕಾರವಾರ: ಗಣೇಶ ಚತುರ್ಥಿ ಹಾಗೂ ಬಕ್ರೀದ್‌ ನಿಮಿತ್ತ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿದೆ. ಅದರಲ್ಲೂ ಪ್ರಮುಖವಾಗಿ ಗೋವು ಸಾಗಾಟ ತಡೆಗಟ್ಟುವ ಉದ್ದೇಶದಿಂದ ಜಿಲ್ಲೆಯ 30 ಕಡೆಗಳಲ್ಲಿ ನಾಕಾಬಂದಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ಆಯಕಟ್ಟಿನ ಸ್ಥಳಗಳಲ್ಲಿ ಈ ನಾಕಾಬಂದಿ ಹಾಕಿದ್ದು, ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಾಳಿ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮೇಲೆ ದಿನದ 24 ಗಂಟೆಯೂ ತೀವ್ರ ನಿಗಾ ಇರಿಸಿದ್ದಾರೆ.

ಪ್ರತಿಯೊಂದು ನಾಕಾಬಂದಿಯಲ್ಲೂ 4–5 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅನುಮಾನಾಸ್ಪದ ವಾಹನಗಳನ್ನು ಹೆದ್ದಾರಿಯಲ್ಲಿ ತಡೆದು ತಪಾಸಣೆ ನಡೆಸುತ್ತಿದ್ದಾರೆ.  ಜತೆಗೆ ಚಾಲಕನ ಹೆಸರು, ವಾಹನಗಳ ಸಂಖ್ಯೆಯನ್ನು ಪುಸ್ತಕದಲ್ಲಿ ನಮೂದು ಮಾಡಿಕೊಳ್ಳುತ್ತಿದ್ದಾರೆ. ಬಕ್ರೀದ್‌  ನಿಮಿತ್ತ ಗೋವು ಸಾಗಾಟ ನಡೆಯುವ ಸಾಧ್ಯತೆ ಇರುವುದರಿಂದ ಪ್ರತಿ ಗೂಡ್ಸ್‌ ಆಟೊಗಳನ್ನು ತಪ್ಪದೇ ತಪಾಸಣೆ ಮಾಡುತ್ತಿದ್ದಾರೆ.

ಕಾರವಾರ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಳಿ ಸೇತುವೆ, ಲಂಡನ್‌ ಸೇತುವೆ ಹಾಗೂ ಕಡವಾಡದಲ್ಲಿ ನಾಕಾಬಂದಿ ಮಾಡಲಾಗಿದೆ. ಗೋವಾ ಕಡೆಗಳಿಂದ ಬರುವ ವಾಹನಗಳ ಮೇಲೆ ಇಲ್ಲಿನ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ಗೋವು ಮಾತ್ರವಲ್ಲದೇ ಗೋವಾದಿಂದ ಮದ್ಯ ಕೂಡ ಅಕ್ರಮವಾಗಿ ಸಾಗಾಟ ವಾಗುವ ಸಾಧ್ಯತೆ ಇರುವ ಕಾರಣ ಪೊಲೀಸರು ಮೈಯೆಲ್ಲ  ಕಣ್ಣಾಗಿ ಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಬಕ್ರೀದ್‌ ಮುಗಿಯುವವರೆಗೂ ಈ ನಾಕಾಬಂದಿ ಚಾಲ್ತಿಯಲ್ಲಿರುತ್ತದೆ. ಸಂಶಯ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುವಂತೆ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಕಾರವಾರ ತಾಲ್ಲೂಕು ವ್ಯಾಪ್ತಿಯ ಮೂರು ಕಡೆಗಳಲ್ಲಿ ನಾಕಾಬಂದಿ ಹಾಕಲಾಗಿದೆ’ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಶರಣಗೌಡ  ತಿಳಿಸಿದರು.

ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಹಾಗೂ ಗೋವು ಸಾಗಾಟ ಬಗ್ಗೆ ಮಾಹಿತಿ ಸಿಕ್ಕರೆ ಸಾರ್ವಜನಿಕರು ಇಲಾಖೆಗೆ ತಿಳಿಸಬಹುದು. ಅವರ ಹೆಸರನ್ನು ಗೋಪ್ಯವಾಗಿಡಲಾಗುವುದು.
ಶರಣಗೌಡ.ವಿ.ಎಚ್‌
ಪೊಲೀಸ್‌ ಇನ್‌ಸ್ಪೆಕ್ಟರ್‌, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT