ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ವಸೂಲಿ ಮಾಡುವ ಇಸ್ಕಾನ್ ಡಿ.ಕೆ.ಶಿವಕುಮಾರ್ ಆರೋಪ

‘ಅಕ್ಷಯ ಪಾತ್ರೆ’ ಪರಿಕಲ್ಪನೆ ಸಿದ್ದಗಂಗಾ ಮಠದ್ದು
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮೈಸೂರು:  ಇಸ್ಕಾನ್ ಸಂಸ್ಥೆ ವಿದೇಶಗಳಲ್ಲಿ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

‘ಅಕ್ಷಯ ಪಾತ್ರೆ’ ಪರಿಕಲ್ಪನೆ ಇಸ್ಕಾನ್‌ದಲ್ಲ. ಅದು ಹುಟ್ಟಿದ್ದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ. ಅದನ್ನು ತನ್ನದಾಗಿಸಿಕೊಂಡ ಇಸ್ಕಾನ್, ಹೊರದೇಶಗಳಲ್ಲಿ ಹಣ ವಸೂಲಿ ಮಾಡುತ್ತಿದೆ. ಆದರೆ, ರಾಜ್ಯದ ಮಠಗಳು ಹೊರದೇಶಗಳಿಗೆ ಕೈಚಾಚದೇ ಸ್ಥಳೀಯ ಸಂಪನ್ಮೂಲ ಬಳಸಿಕೊಂಡೇ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ ಎಂದು ಶ್ಲಾಘಿಸಿದರು.

‘ಅಕ್ಷರ ದಾಸೋಹ’ ಪರಿಕಲ್ಪನೆಯೂ ಸರ್ಕಾರಕ್ಕೆ ದಿಢೀರನೇ ಹೊಳೆಯಲಿಲ್ಲ. ಸುತ್ತೂರು ಮಠದಲ್ಲಿ ನಡೆಯುತ್ತಿದ್ದ ಅಕ್ಷರ ದಾಸೋಹ ಕಂಡು ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.

ತೆರಿಗೆ ಸಂಗ್ರಹಿಸುವುದಿಲ್ಲ, ಅಧಿಕಾರ ನಡೆಸುವುದಿಲ್ಲ ಎಂಬುದನ್ನು ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲೂ ಮಠಗಳು ಸೇವೆ ಮಾಡುತ್ತಿವೆ. ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಒಂದು ಮಠ ವಿದ್ಯಾಭ್ಯಾಸ ನೀಡುತ್ತದೆ ಎಂದರೆ ಅದು ಸುಲಭದ ಮಾತಲ್ಲ. ಲಕ್ಷಾಂತರ ಜನರಿಗೆ ಸುತ್ತೂರು ಮಠ ವಿದ್ಯೆ, ಅನ್ನ, ಉದ್ಯೋಗ ನೀಡಿದೆ. ಜನರನ್ನು ಶೈಕ್ಷಣಿಕವಾಗಿ ಮುಂದೆ ತರುವುದಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.

ನಾಸ್ತಿಕರಿಗೆ ದೇವರ ಹೆಸರೇಕೆ?:  ದೇವರನ್ನು ನಂಬುವುದಿಲ್ಲ ಎನ್ನುವ ಹಲವರು ದೇವರ ಹೆಸರನ್ನೇಕೆ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ನಾಸ್ತಿಕರು ಮಾತ್ರವಲ್ಲ, ಅವರ ಮಕ್ಕಳಿಗೂ ದೇವರ ಹೆಸರನ್ನಿಡುತ್ತಾರೆ. ಮಕ್ಕಳಿಗೆ ಉಡುದಾರ ಹಾಕಿಸುತ್ತಾರೆ. ಕಿವಿ, ಮೂಗು ಚುಚ್ಚಿಸುತ್ತಾರೆ. ಇವೆಲ್ಲವೂ ದೇವರು, ಧರ್ಮದ ಒಂದು ಭಾಗವೇ ಆಗಿದೆ. ಆದರೆ, ಬಾಯಿಯಲ್ಲಿ ಮಾತ್ರ ದೇವರ ವಿರುದ್ಧ ಕಿಡಿಕಾರುತ್ತಾರೆ. ದೇವರು, ಧರ್ಮವನ್ನು ನಾವು ಬಿಟ್ಟರೂ, ಅವು ನಮ್ಮನ್ನು ಬಿಡುವುದಿಲ್ಲ ಎಂದು ತಿಳಿಸಿದರು.

‘ಮನೆ ಹುಷಾರು, ಮಠ ಹುಷಾರು’ ಎಂದು ಹಿರಿಯರು ಹೇಳುತ್ತಿದ್ದ ಮಾತಿನಂತೆ ನಡೆಯಬೇಕು. ಇವೆರಡನ್ನೂ ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT