ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. 2: ರಾಜ್ಯದಲ್ಲೂ ಮುಷ್ಕರ

Last Updated 29 ಆಗಸ್ಟ್ 2016, 19:29 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಸ್ತೆ ಸಾರಿಗೆ ಸುರಕ್ಷತಾ ಕಾಯ್ದೆ–2016ನ್ನು ವಿರೋಧಿಸಿ ಸೆಪ್ಟೆಂಬರ್ 2ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ರಾಜ್ಯದಲ್ಲೂ ಮುಷ್ಕರ ನಡೆಸಲು ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟ ಸೇರಿದಂತೆ ನಾನಾ ಸಂಘಟನೆಗಳು ಕರೆ ಕೊಟ್ಟಿವೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಫೆಡರೇಷನ್ ಉಪಾಧ್ಯಕ್ಷ ಪ್ರಕಾಶ್. ಕೆ ಮಾತನಾಡಿ,‘ಈ ಮಸೂದೆ ವಿರುದ್ಧವಾಗಿ 2015ರ 30 ಏಪ್ರಿಲ್ ಹಾಗೂ ಸೆಪ್ಟಂಬರ್ 2ರಂದು ರಾಷ್ಟ್ರವ್ಯಾಪ್ತಿ ಮುಷ್ಕರಗಳನ್ನು ನಡೆಸಲಾಯಿತು.

ಆಗ  ಕೇಂದ್ರ ಸರ್ಕಾರ 18 ರಾಜ್ಯಗಳ ಸಾರಿಗೆ ಮಂತ್ರಿಗಳನ್ನು ಒಳಗೊಂಡಂತೆ ರಾಜಸ್ಥಾನ ಸಾರಿಗೆ ಸಚಿವರ ನೇತೃತ್ವದಲ್ಲಿ  ‘ಗ್ರೂಪ್‌ ಆಫ್‌ ಮಿನಿಸ್ಟರ್ಸ್’ ಸಮಿತಿ ರಚನೆ  ಮಾಡಿ ಮಸೂದೆ ಅಂಗೀಕಾರ ಬಗ್ಗೆ ಅಧ್ಯಯನ ನಡೆಸಿ ಈಗಿರುವ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ ವರದಿ ನೀಡಿದೆ’ ಎಂದರು

‘ಸಂಚಾರ ನಿಯಮ ಉಲ್ಲಂಘಿಸಿದರೆ ಅಥವಾ ಉದ್ದೇಶಪೂರ್ವಕವಲ್ಲದ ನಿಯಮಗಳ ಉಲ್ಲಂಘನೆಗಾಗಿ ದುಬಾರಿ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಈ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವಂತೆ ಒತ್ತಾಯಿಸಿ ಸೆಪ್ಟೆಂಬರ್ 2 ರಂದು ರಾಜ್ಯದಲ್ಲಿ 24 ಗಂಟೆಗಳ ಕಾಲ ಬಸ್, ಟ್ಯಾಕ್ಸಿ, ಕಾರುಗಳು ಸೇರಿದಂತೆ ವಿವಿಧ ವಾಹನಗಳನ್ನು ರಸ್ತೆಗಿಳಿಸದೆ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ’ ಎಂದರು.

‘ಕಣ್ತಪ್ಪಿ ಆಗುವ ನಿಯಮಗಳ ಉಲ್ಲಂಘನೆಗೆ ರಸ್ತೆ ಗುಡಿಸುವುದು, ಮೋರಿ ಸ್ವಚ್ಛಗೊಳಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು, ನಿಯಮ ಉಲ್ಲಂಘಿಸಿದವರ ಭಾವಚಿತ್ರಗಳನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅವಮಾನಿಸುವಂತಹ ಉದ್ದೇಶವಿರುವ ರಸ್ತೆ ಸಾರಿಗೆ ಸುರಕ್ಷತಾ ಕಾಯ್ದೆಯನ್ನು ಕೇಂದ್ರ ಸರ್ಕಾರ ಅಗತ್ಯ ಮಾರ್ಪಾಡು ಮಾಡಬೇಕು. ಇಲ್ಲದಿದ್ದರೆ ಮುಂದೆ ಮತ್ತಷ್ಟು ಉಗ್ರಸ್ವರೂಪದ ಪ್ರತಿಭಟನೆ ಮತ್ತು ಹೋರಾಟವನ್ನು ಹಮ್ಮಿಕೊಳ್ಳಲು ವಿವಿಧ ಸಾರಿಗೆ ಯೂನಿಯನ್‌ಗಳು ನಿರ್ಧರಿಸಿವೆ’ ಎಂದು ತಿಳಿಸಿದರು.

‘ಬಸ್ಸು, ಕಾರು, ಆಟೋ, ಟ್ಯಾಕ್ಸಿ ಸೇರಿದಂತೆ ವಿವಿಧ ವಾಹನಗಳ ಚಾಲಕರಿಗೆ ಇಎಸ್ಐ, ಪಿಎಫ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು. ಜೊತೆಗೆ ಜನಸಾಮಾನ್ಯರಿಗೆ ಮಾರಕವಾಗುವ ಕಾಯ್ದೆ ಸಂಸತ್‌ನಲ್ಲಿ ಮಂಡಿಸದೆ ವಾಪಸ್ ಪಡೆಯಬೇಕೆಂದು’ ಆಗ್ರಹಿಸಿದರು.

‘ಸಾರಿಗೆ ಮುಷ್ಕರದಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ ಅವರು, ಜನಸಾಮಾನ್ಯರಿಗೆ ತೊಂದರೆ
ಯಾಗುವ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ಕೇಂದ್ರ ಸರ್ಕಾರ ಸೂಕ್ತ ತಿದ್ದುಪಡಿ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT