ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕೆ ಆಗ್ರಹಿಸಿದ ಸಂತ್ರಸ್ತ ಕುಟುಂಬಗಳು

ಒತ್ತುವರಿ ತೆರವು ಪ್ರದೇಶಕ್ಕೆ ಬಿಜೆಪಿ ನಾಯಕರ ಭೇಟಿ
Last Updated 29 ಆಗಸ್ಟ್ 2016, 19:42 IST
ಅಕ್ಷರ ಗಾತ್ರ

ಬೆಂಗಳೂರು: ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿ ಪ್ರದೇಶದ  ರಾಜಕಾಲುವೆ ಒತ್ತುವರಿ ತೆರವು ಪ್ರದೇಶಕ್ಕೆ ಸೋಮವಾರ ಬಿಜೆಪಿ ನಾಯಕರು ಭೇಟಿ ನೀಡಿದರು.

ಬಿಜೆಪಿ ಶಾಸಕರಾದ ಆರ್‌.ಅಶೋಕ, ಸುರೇಶ್‌ ಕುಮಾರ್‌, ಸತೀಶ್‌ ರೆಡ್ಡಿ, ಅಶ್ವತ್ಥನಾರಾಯಣ ಅವರು ಸ್ಥಳೀಯರನ್ನು ಭೇಟಿ ಮಾಡಿದಾಗ, ‘ನಮಗೆ ಸೂಕ್ತ ಪರಿಹಾರ ನೀಡದಿದ್ದರೆ ಆತ್ಮಹತ್ಯೆಯೊಂದೇ ಉಳಿದಿರುವ ಹಾದಿಯಾಗಿದೆ’ ಎಂದು ನೋವು ತೋಡಿಕೊಂಡರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅಶೋಕ, ‘1902 ಗ್ರಾಮನಕ್ಷೆ, ಬಿಎಂಆರ್‌ಡಿಎ,  ಬಿಡಿಎ ಸಿಡಿಪಿ ಹೀಗೆ ಮೂರು ನಕ್ಷೆಗಳಿವೆ. ಯಾವ ನಕ್ಷೆ ಬಳಸಿಕೊಂಡು ರಾಜಕಾಲುವೆ ತೆರವು ಮಾಡಬೇಕು ಎಂಬುದರ  ಕುರಿತು ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ’ ಎಂದು ದೂರಿದರು.

‘ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಯನ್ನು ತಕ್ಷಣ ನಿಲ್ಲಿಸಬೇಕು. ಈ ಕಾರ್ಯಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಪರ್ಯಾಯವಾಗಿ ಸರ್ಕಾರ  ಬಿಡಿಎ ಮೂಲಕ ನಿವೇಶನ ನೀಡಬೇಕು’ ಎಂದು ಆಗ್ರಹಿಸಿದರು.  

‘ಚೆನ್ನೈನಲ್ಲಿ ಪ್ರವಾಹ ಬಂದು ₹1ಲಕ್ಷ ಕೋಟಿ ನಷ್ಟವಾಗಿದೆ. ಆದರೂ ಅಲ್ಲಿ ಯಾವ ಸ್ಥಳವನ್ನು ಒಡೆದುಹಾಕಿಲ್ಲ, ಬದಲಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಾಗೇ ನಮ್ಮ ಸರ್ಕಾರವು ಪರ್ಯಾಯ ವ್ಯವಸ್ಥೆಗಳನ್ನು ಹುಡುಕಬೇಕು’ ಎಂದು ತಿಳಿಸಿದರು.

‘ಬಡವರು ಎಲ್ಲಿದ್ದಾರೋ ಅಲ್ಲಿನ ಮನೆಗಳನ್ನು ಒಡೆದು ಶ್ರೀಮಂತರು ವಾಸ ಮಾಡುವ ಸ್ಥಳಗಳನ್ನು ಹಾಗೇ ಬಿಡಲಾಗುತ್ತಿದೆ. ರಾಜರಾಜೇಶ್ವರಿ ನಗರದ ಆಸ್ಪತ್ರೆ, ಮಾಲ್‌, ದೊಡ್ಡ ಕಟ್ಟಡಗಳನ್ನು ಒಡೆಯಲು ಯಾಕೆ ಮುಂದಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಬೆಂಗಳೂರಿನ ಎಲ್ಲ ಶಾಸಕರು ಸಭೆ ಸೇರಿ ಹೋರಾಟದ ರೂಪುರೇಷೆಗಳ ಬಗೆಗೆ ಚರ್ಚೆ ನಡೆಸುತ್ತೇವೆ. ಬಿಬಿಎಂಪಿಯಲ್ಲಿ ನಮ್ಮ ಪಕ್ಷ ಆಧಿಕಾರಕ್ಕೆ ಬಂದರೆ ರಾಜಕಾಲುವೆ ಒತ್ತವರಿ ತೆರವಿಗೆ ಪಾರದರ್ಶಕ ನೀತಿ ಅನುಸರಿಸುತ್ತೇವೆ ಹೊರತು ಆಕ್ರಮಗಳಿಗೆ ಆಸ್ಪದ ಕೊಡುವುದಿಲ್ಲ’ ಎಂದು ಅವರು  ಹೇಳಿದರು.

ಸುರೇಶ್‌ ಕುಮಾರ್‌ ಮಾತನಾಡಿ, ‘ಚರಂಡಿಗಳ ಮರುವಿನ್ಯಾಸ ಮಾಡಬೇಕು. ಬಿಬಿಎಂಪಿ ಎಂಜಿನಿಯರ್ ವಿಭಾಗ ಮಾಡಿದ ತಪ್ಪಿನಿಂದ ಇಷ್ಟೆಲ್ಲಾ ಸಮಸ್ಯೆಯಾಗಿದೆ. ಬಡಾವಣೆ  ನಿರ್ಮಾಣ ಆಗುವುದಕ್ಕಿಂತ ಮುಂಚೆಯೇ ರಾಜಕಾಲುವೆಗಳನ್ನು ನಿರ್ಮಾಣ ಮಾಡಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT