ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿಸಿದ್ದ ಭೂಮಿ ಕ್ರಯಪತ್ರ ನಕಲಿ

ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್‌ ತಾಯಿ ತಾರಾಬಾಯಿ ಹೆಸರಿನಲ್ಲಿ ಭೂಮಿ
Last Updated 29 ಆಗಸ್ಟ್ 2016, 19:56 IST
ಅಕ್ಷರ ಗಾತ್ರ

ಬೆಂಗಳೂರು:  ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್‌ ಅವರ ತಾಯಿ  ತಾರಾಬಾಯಿ ಜಾಧವ್‌ ಆನೇಕಲ್‌ ತಾಲ್ಲೂಕಿನ ರಾಮನಾಯಕನಹಳ್ಳಿಯಲ್ಲಿ  ಖರೀದಿಸಿರುವ ಭೂಮಿಯ ಕ್ರಯಪತ್ರಗಳ ಪೈಕಿ ಒಂದು ಕ್ರಯಪತ್ರ ನಕಲಿ ಎಂಬುದು ಬೆಳಕಿಗೆ ಬಂದಿದೆ. 

ಕ್ರಯಪತ್ರ ಸಂಖ್ಯೆ 3463/ 2002/03 ರ ಸಾಚಾತನದ ಬಗ್ಗೆ ಈಗ ವಿವಾದ ಉಂಟಾಗಿದೆ.

ಆರ್‌. ರಾಮಕೃಷ್ಣಯ್ಯ ಅವರು ಟಿ.ವಿ.ಬಾಬು ಎಂಬುವವರಿಗೆ 2012 ರ ಏಪ್ರಿಲ್‌ 2 ರಂದು ಬರೆದುಕೊಟ್ಟ ಕ್ರಯ ಪತ್ರದಲ್ಲಿ ಇರುವ ಮಾಹಿತಿಯ ಪ್ರಕಾರ, ಸರ್ವೆ ಸಂಖ್ಯೆ 29/ ಪಿ 36 ರ ಎರಡು ಎಕರೆ ಜಮೀನು  1978 ರ ಅಕ್ಟೋಬರ್‌ 11 ರಂದು ಆರ್. ರಾಮಕೃಷ್ಣಯ್ಯ ಅವರಿಗೆ ಮಂಜೂರು ಆಗಿತ್ತು. 1982 ರ ಮೇ 3 ರಂದು ಉಪವಿಭಾಗಾಧಿಕಾರಿ ಆರ್‌.ರಾಮಕೃಷ್ಣಯ್ಯ ಅವರಿಗೆ ಸಾಗುವಳಿ ಚೀಟಿಯನ್ನೂ ಮಂಜೂರು ಮಾಡಿದ್ದರು.

ಆದರೆ, ರಾಮಕೃಷ್ಣಯ್ಯ ಎಂಬ ಹೆಸರಿನ  ರಾಮನಾಯಕನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ತಾರಾಬಾಯಿ ಅವರ ಹೆಸರಿಗೆ (ಸಂಖ್ಯೆ 3463/ 2002/03 )ಕ್ರಯ ಪತ್ರ ಬರೆದುಕೊಟ್ಟರು.  ಪೋಡಿಯನ್ನೂ  ಮಾಡಲಾಯಿತು. ಇದಕ್ಕೆ ಹೊಸ ಸಂಖ್ಯೆ 111 ಗೆ ಮ್ಯುಟೇಷನ್‌ ರಿಜಿಸ್ಟರ್‌ ಸಂಖ್ಯೆ 10/2003/04 ಅನ್ನು ನೀಡಲಾಯಿತು.
ಸರ್ಕಾರಿ ಭೂಮಿ ಪಡೆದಿದ್ದ ಆರ್‌.ರಾಮಕೃಷ್ಣಯ್ಯ ಅವರ ಹೆಸರು ರಾಮಯ್ಯ.  ತಾರಾಬಾಯಿ ಅವರಿಗೆ ಜಮೀನು ಮಾರಿದ ರಾಮಕೃಷ್ಣಯ್ಯನ ತಂದೆ ಹೆಸರು ಬಸಪ್ಪ ಅಲಿಯಾಸ್‌ ರಾಮಯ್ಯ ಎಂದು ನಮೂದಾಗಿದೆ.

‘ತಾರಾಬಾಯಿ ಅವರ ವಶದಲ್ಲಿ ಇರುವ ಕ್ರಯಪತ್ರದಲ್ಲಿನ ಹೆಬ್ಬೆಟ್ಟು ನನ್ನ ತಂದೆಯದ್ದಲ್ಲ. ಅದು ನಕಲಿ’ ಎಂದು ಮೂಲ ಭೂ ಮಂಜೂರಾತಿದಾರ  ಆರ್‌.ರಾಮಕೃಷ್ಣಯ್ಯ ಅವರು ಹೇಳಿದ್ದಾರೆ.

ಈ ವಿಚಾರವಾಗಿ ಆರ್‌.ರಾಮಕೃಷ್ಣಯ್ಯ ಅವರು 2009 ರ ನವೆಂಬರ್‌ನಲ್ಲಿ  ತಾರಾಬಾಯಿ ಮತ್ತು ಭೂಮಿ ಮಾರಿದ ರಾಮಕೃಷ್ಣಯ್ಯ ವಿರುದ್ಧ ಉಪವಿಭಾಗಾಧಿಕಾರಿ  ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.

ಆದರೆ, ತಾರಾಬಾಯಿ ಮತ್ತು ಮಾರಾಟಗಾರ ರಾಮಕೃಷ್ಣಯ್ಯ ನ್ಯಾಯಾಲಯಕ್ಕೆ ಹಾಜರಾಗದ ಕಾರಣ 2010 ಏಪ್ರಿಲ್‌ 31 ರಂದು ಆದೇಶ ಸಂಖ್ಯೆ ಆರ್‌ಎ 146/2009/10 ಮೂಲಕ ಜಮೀನು ಮಾರಾಟವನ್ನು ರದ್ದುಪಡಿಸಿತು. 

ತಾರಾಬಾಯಿ ಮತ್ತು  ಭೂಮಿ ಮಾರಿದ್ದ ರಾಮಕೃಷ್ಣಯ್ಯ  ಈ ಆದೇಶದ ವಿರುದ್ಧ   ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದರು. ಆದರೆ, ಜಿಲ್ಲಾಧಿಕಾರಿಯವರು 2011 ರ ಜುಲೈನಲ್ಲಿ ಉಪವಿಭಾಗಾಧಿಕಾರಿ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದರು.

ಇದೇ ಸಂದರ್ಭದಲ್ಲಿ ಮೂಲ ಭೂ ಮಂಜೂರಾತಿದಾರ ಆರ್‌. ರಾಮಕೃಷ್ಣಯ್ಯ ಅವರು ನ್ಯಾಯಾಲಯದ ಆದೇಶದ ಅನ್ವಯ ಮ್ಯುಟೇಷನ್‌  ರಿಜಿಸ್ಟರ್‌ ಕೂಡ ಮಾಡಿಸಿಕೊಂಡರು (ಎಂಆರ್19/2009/10).  ಆ ಬಳಿಕ ಆರ್‌.ರಾಮಕೃಷ್ಣಯ್ಯ ಅವರು ಟಿ.ವಿ.ಬಾಬು ಅವರಿಗೆ ₹ 30 ಲಕ್ಷಕ್ಕೆ ಮಾರಾಟ ಒಪ್ಪಂದ ಮಾಡಿಕೊಟ್ಟರು. ₹ 10 ಲಕ್ಷ ಮುಂಗಡ ಪಡೆದುಕೊಂಡರು.  2012 ರ ಏಪ್ರಿಲ್‌ 2 ರಂದು ಇದನ್ನು ನೋಂದಾಯಿಸಲಾಯಿತು.

ಜಮೀನಿನ ಸರ್ವೆ ಮತ್ತು ಆಕಾರ್‌ಬಂದ್‌ ಮಾಡದೇ ಕೃಷಿ ಭೂಮಿಯನ್ನು  ಶುದ್ಧ ಕ್ರಯಪತ್ರ ಮಾಡಲು ಬರುವುದಿಲ್ಲ. 2007ರಿಂದ ಈಚೆಗೆ ಸರ್ವೆ ನಂಬರ್ 29ರಲ್ಲಿದ್ದ ಕೃಷಿಭೂಮಿ ವ್ಯವಹಾರಗಳು ಮಾರಾಟ ಒಪ್ಪಂದದ ಆಧಾರದಲ್ಲಿಯೇ  ನಡೆಸಿರುವುದು ಕಂಡುಬಂದಿದೆ ಎಂದು ಹಿರಿಯ ಕಂದಾಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT