ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಉದ್ಯಮಗಳಿಗೆ ಕನ್ನಡದ ಕಿಂಡಿ

Last Updated 7 ಸೆಪ್ಟೆಂಬರ್ 2016, 9:36 IST
ಅಕ್ಷರ ಗಾತ್ರ

ಚಿಕ್ಕ ಕಿಂಡಿಯಲ್ಲಿ ವಿಶಾಲ ಮಾರುಕಟ್ಟೆಯನ್ನು ಜಾಲಾಡಿ ಬೇಕುಬೇಡದ ವಸ್ತುಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಯುವುದು ಆನ್‌ಲೈನ್‌ ಮಾರಾಟ ಜಾಲದ ಹೆಗ್ಗಳಿಕೆ. ಆನ್‌ಲೈನ್‌ ಮಾರಾಟ ಜಾಲವನ್ನು ದೇಸಿ ಉದ್ಯಮಗಳು ವಿದೇಶಿ ಕಂಪೆನಿಗಳಂತೆ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿಲ್ಲ, ಯಾವ ಜಾಲತಾಣವನ್ನು ಜಾಲಾಡಿದರೂ ಸಿಗುವುದು ದೇಸಿಗಿಂತ ವಿದೇಶಿ ಉತ್ಪನ್ನಗಳು, ಬ್ರ್ಯಾಂಡ್‌ಗಳೇ ಎಂಬ ದೂರು ಈಗಲೂ ಕೇಳಿಬರುತ್ತಲೇ ಇದೆ.

ಈ ಕೊರತೆಯನ್ನು ನೀಗಿಸುವ ಜೊತೆಗೆ ಅಚ್ಚಕನ್ನಡದ ಕಿಂಡಿಯ ಮೂಲಕ ಗ್ರಾಮೀಣ ಮತ್ತು ದೇಸಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ  ವೇದಿಕೆಯೊಂದು ಒಂದು ತಿಂಗಳ ಹಿಂದೆಯಷ್ಟೇ ಹುಟ್ಟಿಕೊಂಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ  ಎರಡು ದಶಕಗಳಿಗೂ ಹೆಚ್ಚು ಕಾಲ  ದುಡಿದು ಸ್ವಯಂನಿವೃತ್ತಿ ಪಡೆದಿರುವ ಕಾಕಲ್‌ ಚಂದ್ರಶೇಖರ್‌ ಅವರು ಈ ಅಂತರ್ಜಾಲ ಮಾರಾಟ ಕೇಂದ್ರದ ಸಂಸ್ಥಾಪಕರು. ‘ಟೋಟಲ್‌ ಕನ್ನಡ ಡಾಟ್‌ ಕಾಮ್‌’ ಎಂಬ ಪುಸ್ತಕ ಮಳಿಗೆ ಸ್ಥಾಪಿಸುವ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದ ಲಕ್ಷ್ಮೀಕಾಂತ್‌ ಅವರು ಇದರ ಸಹಸಂಸ್ಥಾಪಕರು. ಅಮೆರಿಕದಲ್ಲಿ ಐಟಿ ಕ್ಷೇತ್ರದ ನೌಕರಿ ಬಿಟ್ಟು ಗ್ರಾಮೀಣ ಉದ್ಯಮಗಳಿಗೆ ಹೊಸ ಚೈತನ್ಯ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಅವರು ಬೆಂಗಳೂರಿಗೆ ವಾಪಸಾದವರು.

‘ಟೋಟಲ್‌ ಕರ್ನಾಟಕ’ದ ಕೇಂದ್ರ ಕಚೇರಿ ಇರುವುದು ಬೆಂಗಳೂರಿನ ಜೆ.ಪಿ. ನಗರ ಏಳನೇ ಹಂತದಲ್ಲಿ. ಕನ್ನಡವಷ್ಟೇ ಬಲ್ಲವರೂ ಸುಲಭವಾಗಿ ಖರೀದಿ ಮಾಡಿ ಬಿಲ್‌ ಪಾವತಿಸಲು ನೆರವಾಗುವಂತೆ ಸೂಕ್ಷ್ಮ ವಿಷಯಗಳನ್ನೂ ಅಚ್ಚಕನ್ನಡದಲ್ಲೇ ವಿವರಿಸಿರುವುದು ಇದರ ಹೆಗ್ಗಳಿಕೆ.

ದೇಸಿ, ಗ್ರಾಮ್ಯ
ಆನ್‌ಲೈನ್‌ ಮಾರಾಟ ಜಾಲಗಳಲ್ಲಿ ದೇಸಿ ಮತ್ತು ಗ್ರಾಮೀಣ ಕೈಗಾರಿಕೆಯ ಲೇಬಲ್‌ನಡಿಯಲ್ಲಿ ಹೆಚ್ಚಾಗಿ ಸಿಗುವುದು ಹತ್ತಿಯ ಉಡುಗೆಗಳು. ಟೆರ್ರಾಕೋಟಾದ ಅಭರಣಗಳೂ ಯಥೇಚ್ಛವಾಗಿ ಸಿಗುತ್ತವೆ. ಆದರೆ ಪಾರಂಪರಿಕ ಕಸುಬುದಾರಿಕೆಯುಳ್ಳ ಗ್ರಾಮೀಣ ಗುಡಿ ಕೈಗಾರಿಕೆ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳಿಗೆ ಆನ್‌ಲೈನ್‌ ವಹಿವಾಟು, ವ್ಯವಹಾರ ಕಂಪೆನಿಗಳು ವಿಧಿಸುವ ಷರತ್ತುಗಳಿಗೆ ಬದ್ಧರಾಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಅಗತ್ಯವಿರುವ ತಂತ್ರಜ್ಞಾನದ ಅರಿವಾಗಲೀ ಅಥವಾ ಅದಕ್ಕೆ ಬೇಕಾಗಿರುವ ಪರಿಭಾಷೆ, ಕಾರ್ಯವಿಧಾನಗಳ ಮಾಹಿತಿಯಾಗಲೀ ಅವರಿಗೆ ಇರುವ ಸಾಧ್ಯತೆ ಕಡಿಮೆ.

ಹತ್ತಿಯ ಉಡುಪುಗಳು, ಪ್ರದೇಶವಾರು ಮಹತ್ವದ ಆಹಾರೋತ್ಪನ್ನಗಳು, ಗುಡಿ ಕೈಗಾರಿಕೆ ಉತ್ಪನ್ನಗಳು, ಚಿತ್ರಕಲೆ, ಉಡುಗೊರೆ ನೀಡಲು ಅತ್ಯಂತ ಸೂಕ್ತವೆನಿಸುವ ಕರಕುಶಲ ಉತ್ಪನ್ನಗಳು ಹೀಗೆ ಎಲ್ಲವೂ ಅಲ್ಲಿ ಲಭ್ಯ.

ಖರೀದಿಗೆ ಸರಳ ಮಾರ್ಗ
ರಾಜ್ಯದ ವಿವಿಧ ಪ್ರದೇಶಗಳ ಸೊಗಡಿಗೆ ಸಂಬಂಧಿಸಿದ ವಸ್ತುಗಳನ್ನು ಆಹಾರೋತ್ಪನ್ನ, ವಸ್ತ್ರ ಮತ್ತು ಇತರ ವಿಭಾಗಗಳಲ್ಲಿ ಪ್ರತ್ಯೇಕವಾಗಿ ವಿಂಗಡಿಸಲಾಗಿದೆ. ಪಾರಂಪರಿಕ ಧಾರವಾಡ, ಇಳಕಲ್‌, ಮೊಳಕಾಲ್ಮುರು ಸೀರೆಗಳು, ‘ದೇಸಿ’, ‘ಚರಕ’ದ ಉತ್ಪನ್ನಗಳು ಅಲ್ಲಿ ಸಿಗುವಷ್ಟೇ ದರದಲ್ಲಿ ಈ ಜಾಲತಾಣದಲ್ಲಿ ಸಿಗುತ್ತವೆ.

ಚನ್ನಪಟ್ಟಣದ ಗೊಂಬೆಗಳಷ್ಟೇ ಸುಂದರವಾದ ಕೊಪ್ಪಳ ಬಳಿಯ ಕಿನ್ನಾಳದ ಪಾರಂಪರಿಕ ಗೊಂಬೆಗಳು, ಸಾಗರ ಬಳಿಯ ಹೆಗ್ಗೋಡಿನ ‘ಅಂಬರ ಚಿತ್ತಾರ’ದ ಉತ್ಪನ್ನಗಳು, ಶಿಕಾರಿಪುರದ ಟೆರ್ರಾಕೋಟಾ ಆಭರಣಗಳು ಹೀಗೆ ಪಟ್ಟಿ ಬೆಳೆಯುತ್ತದೆ. ಬೀದರ್‌ನ ಪರಂಪರೆ ಬಿಂಬಿಸುವ ಬಿದ್ರಿ ಕಲೆಯ ಉಡುಗೊರೆ ವಸ್ತುಗಳಿಗೆ ಪ್ರತ್ಯೇಕ ವಿಭಾಗವಿದೆ.

ಮತ್ತೊಂದು ವಿಶೇಷವೆಂದರೆ, ಯಾವುದೇ ವಸ್ತುವನ್ನು ಕ್ಲಿಕ್‌ ಮಾಡಿದರೂ ಅದರ ಬಗೆಗಿನ ಸಣ್ಣದೊಂದು ವಿವರಣೆ ಸಿಗುತ್ತದೆ. ಕಾಟನ್‌ ಕುರ್ತಾ ಕ್ಲಿಕ್‌ ಮಾಡಿದರೆ ಆ ಬಣ್ಣ ಮತ್ತು ಬಣ್ಣಗಳ ಸಂಯೋಜನೆ, ವಿನ್ಯಾಸ ಅಥವಾ ಚಿತ್ತಾರದ ವೈಶಿಷ್ಟ್ಯದ ವಿವರ ತೆರೆದುಕೊಳ್ಳುತ್ತದೆ.

ಇದು ಕನ್ನಡವಷ್ಟೇ ಬಲ್ಲ ಗ್ರಾಹಕರಿಗೂ ಗುಣಮಟ್ಟ ಮತ್ತು ಕಚ್ಚಾವಸ್ತುವಿನ ಕುರಿತ ಮಾಹಿತಿಯನ್ನೂ ರವಾನಿಸುವ ಕಾರಣ ತೃಪ್ತಿಯಿಂದ ಖರೀದಿಸಲು ಅವಕಾಶ ನೀಡುತ್ತದೆ. ಇದರೊಂದಿಗೆ ಆ ಉತ್ಪನ್ನದ ತಯಾರಿಕಾ ವಿಧಾನಕ್ಕೆ ಸಂಬಂಧಿಸಿದ ಸಣ್ಣ ಯುಟ್ಯೂಬ್ ವಿಡಿಯೊ ಕೂಡಾ ಇದೆ.

ಯಾವುದೇ ಮಳಿಗೆಗಳಲ್ಲಿ ಸಿಗುವ ಆಲಂಕಾರಿಕ ಮತ್ತು ಉಡುಗೊರೆ ವಸ್ತುಗಳ ಬೆಲೆಗೆ ಹೋಲಿಸಿದರೆ ‘ಟೋಟಲ್‌ ಕರ್ನಾಟಕ’ದಲ್ಲಿನ ಉತ್ಪನ್ನಗಳ ಬೆಲೆ ಗಣನೀಯವಾಗಿ ಕಡಿಮೆ ಇದೆ. ಇದಕ್ಕೆ ಕಾರಣ ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ತಲುಪುವುದು.

ಸಹವರ್ತಿಗಳ ನೆರವು
‘ಆನ್‌ಲೈನ್‌ ಮಾರಾಟ ಜಾಲದ ಬಗ್ಗೆ  ಕಿಂಚಿತ್ತೂ ಮಾಹಿತಿ ಇಲ್ಲದ ಆದರೆ ಪಕ್ಕಾ ದೇಸಿ ಕುಶಲಕರ್ಮಿಗಳು ಸ್ಥಳೀಯ ಎನ್‌ಜಿಒ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ಮೂಲಕ ಈ ಮಾರಾಟ ಜಾಲದ ಪ್ರಯೋಜನ ಪಡೆಯಬಹುದು. ‘ಸಹವರ್ತಿ’ ಎಂದು ಕರೆಯಲಾಗುವ ಆ ವ್ಯಕ್ತಿ/ಸಂಸ್ಥೆಗೆ ತಯಾರಕರಿಗೆ ಗೌರವಧನ ನೀಡಬೇಕಾದಲ್ಲಿ ತಯಾರಕರೇ ಭರಿಸಬೇಕಾಗುತ್ತದೆ’ ಎಂದು ಚಂದ್ರಶೇಖರ ಕಾಕಲ್‌ ಅವರು ಹೇಳುತ್ತಾರೆ.

ಕಿನ್ನಾಳದ ಗೊಂಬೆಗಳ ಅಂದಚಂದ ನೋಡಿ ಮೆಚ್ಚಿದ ತಮಿಳಿನ ಚಿತ್ರ ನಿರ್ದೇಶಕರೊಬ್ಬರು 100 ಹಸು ಮತ್ತು 100 ಹುಲಿಗಳ ಗೊಂಬೆ ತಯಾರಿಸಿಕೊಡುವಂತೆ ಕೇಳಿದ್ದಾರೆ. ಕಿನ್ನಾಳದ ಕುಶಲಕರ್ಮಿಗಳಿಗೆ ಇಷ್ಟು ದೊಡ್ಡ ಆರ್ಡರ್‌ ಸಿಕ್ಕಿರುವುದು ಅಪರೂಪ ಎಂದು ಸ್ಮರಿಸುತ್ತಾರೆ ಲಕ್ಷ್ಮೀಕಾಂತ್‌.
‘ತಂತ್ರಜ್ಞಾನ ನಮ್ಮದು ಪೂರೈಕೆ ಅವರದು’ ಎಂಬುದು ಈ ಮಾರಾಟ ಜಾಲದ ಮಾನದಂಡ. ಹೊಸದಾಗಿ ಸೇರ್ಪಡೆಯಾಗಲು ಬಯಸುವ ತಯಾರಕರು ತಮ್ಮ ಉತ್ಪನ್ನಗಳ ಫೋಟೊವನ್ನು ವಾಟ್ಸ್‌ಆ್ಯಪ್‌ ಅಥವಾ ಇಮೇಲ್‌ ಮೂಲಕ ‘ಟೋಟಲ್‌ ಕರ್ನಾಟಕ’ಕ್ಕೆ ಕಳುಹಿಸಿದರೆ ಮುಂದಿನ ಹೆಜ್ಜೆಯ ಬಗ್ಗೆ ಅವರೇ ಮಾಹಿತಿ ನೀಡುತ್ತಾರೆ.


ಸಂಪರ್ಕ ಕೊಂಡಿಗಳು: ದೂರವಾಣಿ: 080 4952 1123
www.totalkarnataka.com

support@totalkarnataka.com

facebook.com/totalkarnatakaonlined

ಆನ್‌ಲೈನ್‌ನಲ್ಲೂ ದೇಸಿ ಆಹಾರೋತ್ಪನ್ನ
ಕಾಕಲ್‌ ಚಂದ್ರಶೇಖರ್‌ ಅವರ ಸಹೋದರ ಪ್ರಕಾಶ್‌ ಕೆ.ಎಲ್‌ ಅವರು ತಮ್ಮೂರು ಕಾಕಲ್‌ನ ಮಾವಿನಕಾಯಿ, ಅಮಟೆಕಾಯಿ ಮುಂತಾದುವುಗಳ ತಾಜಾ ಉಪ್ಪಿನಕಾಯಿಯನ್ನು ವಿಸ್ತಾರವಾದ ಮಾರುಕಟ್ಟೆಗೆ ಪರಿಚಯಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಹಾಗೆ ಅದನ್ನು ಟೋಟಲ್‌ ಕರ್ನಾಟಕ ಡಾಟ್‌ ಕಾಮ್‌ನಲ್ಲಿ ಪರಿಚಯಿಸಿದ ದಿನದಿಂದಲೇ ಅತ್ಯಂತ ಬೇಡಿಕೆಯಲ್ಲಿ ಮಾರಾಟವಾಗುತ್ತಿದೆ.

ಕಾಕಲ್‌ನ ಉಪ್ಪಿನಕಾಯಿಗೆ ರುಚಿಯಷ್ಟೇ ಪ್ರಾದೇಶಿಕ ಮಹತ್ವವೂ ಇದೆ. ಹೀಗೆ ವಿವಿಧ ಪ್ರದೇಶವಾರು ಆಹಾರೋತ್ಪನ್ನಗಳನ್ನೂ ಈ ಜಾಲಕ್ಕೆ ಸೇರ್ಪಡೆ ಮಾಡುವ ಪ್ರಯತ್ನ ನಡೆದಿದೆ. ನಿಮ್ಮೂರಿನ ಊಟೋಪಹಾರಗಳನ್ನು ಉಪ್ಪಿನಕಾಯಿಯಂತೆ ವಿದೇಶಕ್ಕೆ ಬೇಕಾದರೂ ರವಾನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT