ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಆಹಾರದ ಇನ್ನೊಂದು ರಾಜಕೀಯ

ಕೂಪನ್ ಮೇಲೆ ಕೂಪನ್ನು, ಆದರೂ ಬಡವರಿಗಿಲ್ಲ ರೇಷನ್ನು!
Last Updated 31 ಆಗಸ್ಟ್ 2016, 20:02 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದಲ್ಲಿ ರೇಷನ್‌ ಕಾರ್ಡನ್ನು ಕರೆಯುವುದೇ ಕೂಪನ್ ಅಂತ. ಹಾಗಾಗಿ ಕೂಪನ್ ಮೇಲೆ ಮತ್ತೆ ಕೂಪನ್ ತೆಗೆದುಕೊಳ್ಳಬೇಕು ಎಂದು ಸುದ್ದಿ ಬಂದಾಗ ಜನರು ನಕ್ಕುಬಿಟ್ಟರು. ‘ಕೂಪನ್ ಮೇಲೆ ಕೂಪನ್ನಾ?’ ಹೌದು ಕೂಪನ್ ಮೇಲೆ ಕೂಪನ್ನು. ನಿಮ್ಮ ಪೌರತ್ವವನ್ನು ಸಾಬೀತು ಮಾಡಲು ಮತ್ತೆ ಬಯೊಮೆಟ್ರಿಕ್‌ನಲ್ಲಿ ಹೆಬ್ಬೆರಳನ್ನೊತ್ತಬೇಕು, ಕೂಪನ್ ಮೇಲೆ ಕೂಪನ್ ತೆಗೆದುಕೊಳ್ಳಬೇಕು.

ಜನರಿಗೇನೂ ಬೇಜಾರಿಲ್ಲ ಬಿಡಿ. ಯಾಕೆಂದರೆ ನೀವು ಯಾತಕ್ಕಾಗಿ ಇದನ್ನು ಮಾಡುತ್ತಿದ್ದೀರೆಂದು ಅವರು ಅರಿಯರು. ತಾವೇನು ಸಾಬೀತು ಮಾಡಬೇಕಾಗಿದೆ ಎಂಬುದನ್ನೂ ಅವರು ಅರಿಯರು. ನಿತ್ಯದೂಟಕ್ಕೆ ನಾಲ್ಕು ಕಾಳು ಅಕ್ಕಿ ಬೇಕು ಅವರಿಗೆ. ಪಡಿತರದಲ್ಲಿ ತಿಂಗಳಿಗೊಮ್ಮೆ ತಮ್ಮ ಸಂಸಾರಕ್ಕೆ ಸಾಕಾಗುವಷ್ಟಲ್ಲದಿದ್ದರೂ, ತುಸುವೇ ಆದರೂ ಅಕ್ಕಿ ಸಿಗುತ್ತದೆ. ಅದನ್ನು ಪಡೆದುಕೊಳ್ಳಲು ಅವರು ಯಾವ ಅಗ್ನಿ ಪರೀಕ್ಷೆಗಾದರೂ ಸಿದ್ಧ.

ಈ ಜನರಿಗಾದರೂ ಅದೆಷ್ಟು ತಾಳ್ಮೆ ಎನಿಸುತ್ತದೆ ನನಗೆ. ಪ್ರತಿ ತಿಂಗಳಿಗೊಮ್ಮೆ ಈ ಸರ್ಕಾರ ಅವರ ಪೌರತ್ವವನ್ನು ಸಾಬೀತುಪಡಿಸಲು ಹೊಸ ಹೊಸ ಪರೀಕ್ಷೆಗೊಳಪಡಿಸಿದರೂ ಬಿಡದೆ, ಬೇಸರಿಸದೆ ತಮ್ಮನ್ನೊಡ್ಡಿಕೊಳ್ಳುತ್ತಾರಲ್ಲ? ಎಲ್ಲಿ ಹೋಯಿತು ಇವರ ಸ್ವಾಭಿಮಾನ? ‘ಎಲ್ಲಾ ರೇಷನ್‌ ಕಾರ್ಡುಗಳನ್ನೂ ನವೀಕರಿಸಬೇಕು, ಹಳೆಯದ್ದು ನಡೆಯುವುದಿಲ್ಲ’ ಎಂದು ಸರ್ಕಾರ ಆದೇಶ ಮಾಡಿದಾಗ ‘ಅದಕ್ಕೇನು, ಹೊಸದಾಗಿ ಮಾಡಿಸಿಕೊಳ್ತೇವೆ’ ಎಂದು ಬಡಜನರೆಲ್ಲ ಮುಗಿಬಿದ್ದು ಹೊಸ ರೇಷನ್‌ ಕಾರ್ಡ್ ಮಾಡಿಸಿಕೊಂಡರು. ‘ಇದು ಸಾಲದು, ಕಾರ್ಡ್ ಜೊತೆಗೆ ನಿಮ್ಮ ಮನೆಯವರೆಲ್ಲರ ಫೋಟೊ ಬೇಕು’ ಎಂದಿತು ಆಡಳಿತ.

ಹೊಟ್ಟೆಪಾಡಿಗಾಗಿ ದೂರ ದೂರ ವಲಸೆ ಹೋಗಿದ್ದವರನ್ನೂ ಕರೆಸಿಕೊಂಡು ಫೋಟೊ ತೆಗೆಸಿಕೊಟ್ಟರು. ‘ಸಾಲದು, ಇದಕ್ಕೆ ನಿಮ್ಮ ಮನೆಯ ಕರೆಂಟ್ ಬಿಲ್‌ನಲ್ಲಿರುವ ಆರ್.ಆರ್. ನಂಬರ್ ಜೋಡಿಸಬೇಕು.’ ಆರ್.ಆರ್. ನಂಬರ್ ಮುಗಿಯುತ್ತಲೇ ಆಧಾರ್ ನಂಬರ್ ಎಂದಿತು ಸರ್ಕಾರ, ಅದಕ್ಕೂ ಸೈ ಎಂದ ಜನ ಮುಗಿಬಿದ್ದು ಆಧಾರ್ ಕಾರ್ಡ್ ಮಾಡಿಸಿಕೊಂಡರು. ಅತ್ತ ಆಧಾರ್ ಕಾರ್ಡ್ ವಿರುದ್ಧ ದೇಶದ ತುಂಬೆಲ್ಲ ಚರ್ಚೆಗಳಾಗುತ್ತಿರುವಾಗ, ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ಕೇಸುಹಾಕಿ ಅದು ನಾಗರಿಕರ ಖಾಸಗಿ ಹಕ್ಕುಗಳಿಗೆ ಧಕ್ಕೆ ಮಾಡುತ್ತದೆಯೆಂದು ವಕೀಲರು ವಾದಿಸುತ್ತಿರುವಾಗ ಇತ್ತ ಹಳ್ಳಿ ಹಳ್ಳಿಗಳಲ್ಲಿ ಮಕ್ಕಳು ಮುದುಕರಾದಿಯಾಗಿ ಎಲ್ಲರೂ, ನೂರಕ್ಕೆ 90 ಜನರು ಆಧಾರ್‌ ಕಾರ್ಡ್‌ಗೆ ಅರ್ಜಿ ಕೊಟ್ಟು ಮುಗಿದಿತ್ತು.

ಇನ್ನು ಕಾರ್ಡನ್ನು ಕೊಡುವುದು ಬಿಡುವುದು ಸರ್ಕಾರದ್ದು. ಸರ್ಕಾರದಿಂದ ತಡ ಆಗಬಹುದೇ ಹೊರತು ಜನರಿಂದಲ್ಲ. ತಪ್ಪುಗಳು ಸರ್ಕಾರದ ಕಂಪ್ಯೂಟರುಗಳಿಂದ ಆಗಬಹುದೇ ಹೊರತು ಜನರಿಂದಲ್ಲ. ಅದಕ್ಕೇ ಇರಬೇಕು ಸರ್ಕಾರಕ್ಕೆ ನಮ್ಮ ಜನಗಳ ಮೇಲೆ ಅಷ್ಟು ನಂಬಿಕೆ. ಏನು ಬೇಡಿದರೂ ಕೊಡುವರಲ್ಲ ಇವರು! ಅದಕ್ಕಾಗಿಯೇ ಬೇಡಿಕೆಗಳ ಪಟ್ಟಿ ಉದ್ದುದ್ದಕ್ಕೆ ಬೆಳೆಯುತ್ತಲೇ ಇದೆ.

‘ಮೊಬೈಲ್‌ನಿಂದ ಎಸ್ಸೆಮ್ಮೆಸ್ ಮಾಡಬೇಕು!’. ಈ ಆದೇಶ ಬಂದಾಗ ಮಾತ್ರ ಕೆಲಕಾಲ ಜನ ಪಿಳಿಪಿಳಿ ಕಣ್ಣು ಬಿಟ್ಟಿದ್ದು ನಿಜ. ಯಾಕೆಂದರೆ ಹಳ್ಳಿ ಹಳ್ಳಿಗೂ ಮೊಬೈಲುಗಳು ಬಂದಿದ್ದರೂ, ಅದು ವಲಸೆ ಹೋಗುವ ಪಡ್ಡೆ ಹುಡುಗರ ಕೈಗಳಲ್ಲಿತ್ತು. ಹಾಡು ಕೇಳಲಿಕ್ಕೆ ಬರುತ್ತಿತ್ತೇ ಹೊರತು ಎಸ್ಸೆಮ್ಮೆಸ್ ಮಾಡಲು ಕಲಿತವರಾರೂ ಇರಲಿಲ್ಲ. ‘ಸೇವಾ ಕೇಂದ್ರ’ಗಳು ತೆರೆದುಕೊಂಡು ಎಸ್ಸೆಮ್ಮೆಸ್‌ಗಳನ್ನು ಮಾರಾಟ ಮಾಡಿದವು.

ಬೆಂಗಳೂರಿನ ಬಹುಮಹಡಿಯ ಹವಾನಿಯಂತ್ರಿತ ಕೊಠಡಿಗಳೊಳಗಿನ ಕಿಟಕಿಯಿಂದ ನೋಡಿದಾಗ ಹೊರಗೆ ನೆಲದ ಮೇಲೆ ಓಡಾಡುವವರೆಲ್ಲ ಬಹುಶಃ ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಖದೀಮರಾಗಿಯೇ ಕಾಣಿಸುತ್ತಿರಬೇಕು. ಆದರೆ ಇತ್ತ ನೆಲದಲ್ಲಿ ಈ ಜನರ ಮಧ್ಯೆ ನಿಂತು ನೋಡುತ್ತ ಬಂದಿರುವ ನಮಗೆ ಅವರು ನಮ್ಮದೇ ಜನಗಳಾಗಿ ಕಾಣುತ್ತಾರೆ. ಈ ಕಾರಣಕ್ಕೇ ರೇಷನ್‌ ಅಂಗಡಿಯಾತನಿಗೂ ಸರ್ಕಾರ ಈ ಜನರನ್ನು ಗೋಳು ಹೊಯ್ದುಕೊಳ್ಳುವ ಪರಿ ಅರ್ಥವಾಗದು. ಹಿಂದಿನ ತಿಂಗಳು ರೇಷನ್‌ ಕೊಟ್ಟಿದ್ದ ಅದೇ ಮುದುಕಿಗೆ ಈ ತಿಂಗಳು, ‘ನಿನ್ನ ಹೆಸರಲ್ಲಿ ಕಾಳು ಬಂದಿಲ್ಲಬೇ’ ಎನ್ನಲು ಮನಸ್ಸಾಗದು. ಪ್ರತಿ ನಿತ್ಯ ನೋಡುವ ಅದೇ ಜನರನ್ನು ‘ನೀವು ಇದೇ ದೇಶದವರಾ?’ ಎಂದು ಪ್ರಶ್ನೆ ಮಾಡುವ ಗೋಜಲು ಆತನಿಗೆ ಎಂದೂ ಮೂಡಿಯೇ ಇಲ್ಲ. ಆದರೇನು, ಆತ ಕೂಡ ಅಸಹಾಯಕ. ಬಂದಷ್ಟು ಕಾಳಿನಲ್ಲಿ ಕಾರ್ಡ್ ಇದ್ದವರಿಗೆ, ಎಸ್ಸೆಮ್ಮೆಸ್ ಮಾಡಿದವರಿಗೆ, ಆಧಾರ್‌ ಕಾರ್ಡ್ ಇದ್ದವರಿಗೆ, ಥಂಬ್ (ಹೆಬ್ಬೆರಳು) ಮೂಡಿದವರಿಗೆ ಮಾತ್ರ ಕೊಡಬೇಕು.

ಸರ್ಕಾರ ತನ್ನ ಗುರಿಯನ್ನು ಸ್ಪಷ್ಟವಾಗಿಟ್ಟುಕೊಂಡಿದೆ, ಆದರೆ ಅದನ್ನು ಜನರ ಮುಂದಿಡುತ್ತಿಲ್ಲ. ಇಲ್ಲಿ ಸರ್ಕಾರವೆಂದರೆ ಯಾರು? ಜನರಿಂದ ಆರಿಸಿ ಹೋದ ರಾಜಕೀಯ ಪಕ್ಷದ ಸರ್ಕಾರದ ಬಗ್ಗೆ ನಾನು ಹೇಳುತ್ತಿಲ್ಲ. ಅಧಿಕಾರ ಯಂತ್ರವೇ ನಿಜವಾದ ಸರ್ಕಾರ. ಯಾವ ಘೋಷಣೆ ಕೂಗಿ, ಪ್ರಣಾಳಿಕೆ ಬರೆದುಕೊಟ್ಟು ಆರಿಸಿ ಬಂದ ಸರ್ಕಾರವೇ ಆಗಿರಲಿ, ಅದು ಬದ್ಧವಾಗಿರಬೇಕಾದ ಅಧಿಕಾರಶಾಹಿ ಆಡಳಿತದ ಸರ್ಕಾರ. ಯಾಕೆಂದರೆ ಒಂದು ಎಳೆ ಹಿಡಿದು ಹೊರಟಿರುವ ಅದು ಹೊಸ ಸರ್ಕಾರ  ಬಂದಾಕ್ಷಣ ತನ್ನ ದಿಕ್ಕು, ದೆಸೆಗಳನ್ನು ಬದಲು ಮಾಡದು. ಪಿ.ವಿ. ನರಸಿಂಹ ರಾವ್ ಅವರ ಯುಗದಲ್ಲಿ ವಿಶ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ ಬಂದು ಆ ಜಾಗತಿಕ ಒಪ್ಪಂದಗಳ ನಿರ್ದೇಶನದಂತೆ ಆಡಳಿತವನ್ನು ಚಲಾಯಿಸುತ್ತಿರುವ ಅದಕ್ಕೆ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಒಂದೆ.

ತನ್ನ ಸೂತ್ರವನ್ನು ಬದಲಾಯಿಸಲು ಸಾಧ್ಯವಿಲ್ಲ. ‘ಈ ದೇಶದಲ್ಲಿ ಆರೋಗ್ಯ, ಆಹಾರ ಇವನ್ನೆಲ್ಲ ಜನಕ್ಕೆ ಪುಗಸಟ್ಟೆ ಕೊಟ್ಟುಬಿಡ್ತಿದ್ದೀರಾ, ಅದನ್ನೆಲ್ಲ ಇನ್ನು ಮುಚ್ಚಿ ಹಾಕಿ. ಮಾರುಕಟ್ಟೆ ಎಲ್ಲವನ್ನೂ ನೋಡಿಕೊಳ್ಳುತ್ತದೆ, ಮಾರುಕಟ್ಟೆಗೆ ಬಿಟ್‌ಬಿಡಿ’ ಎನ್ನುತ್ತದೆ ವಿಶ್ವ ವ್ಯಾಪಾರದ ಷರತ್ತು. ನೂರೆಂಟು ಜನಕಲ್ಯಾಣ ಯೋಜನೆಗಳಿರುವ ನಮ್ಮ ದೇಶದಲ್ಲಿ ಅದನ್ನು ಮಾಡುವುದು ಹೇಗೆ? ಸೋಸುವುದು. ಮತ್ತೆ ಮತ್ತೆ ಸೋಸುತ್ತ ಹೋಗುವುದು.

ಆರೋಗ್ಯದ ವಿಚಾರದಲ್ಲಂತೂ ಚಿಂತೆ ಇಲ್ಲ, ಆರೋಗ್ಯ ಕೆಡುವವರೆಗೆ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಆರೋಗ್ಯ ಕೆಟ್ಟಾಗ ಸರ್ಕಾರಿ ಏನು, ಖಾಸಗಿ ಏನು, ಆರಾಮಾದರೆ ಸಾಕು ಎಂದು ಎಷ್ಟಾದರೂ ತೆತ್ತು ಸಿಕ್ಕಲ್ಲಿ ಚುಚ್ಚಿಸಿಕೊಂಡು ಬರುತ್ತಾರೆ. ಇದು ನಮ್ಮ ಜನರ ಪರಿ. ಆದರೆ ತಿಂಗಳಿಗೊಮ್ಮೆ ಕೊಡಲೇ ಬೇಕಾದ ಆಹಾರ-ರೇಷನ್‌ನು- ಅದರ ವಿಚಾರವೇ ಬೇರೆ. ಚೀಲ ಹಿಡಿದು ಅಂಗಡಿಯ ಮುಂದೆ ಕರಾರುವಾಕ್ಕಾಗಿ ನಿಂತುಬಿಡುತ್ತಾರೆ. ಈ ವ್ಯವಸ್ಥೆಯ ಬಗ್ಗೆ ಬಹಳ ತಲೆ ಕೆಡಿಸಿಕೊಂಡ ಐಎಎಸ್ ಮೇಧಾವಿಗಳು ಜನರನ್ನೇ ಬೀಳಿಸುವ ಹೊಸ ಹೊಸ ಜರಡಿಗಳನ್ನು, ಸೋಸುವ ಈ ವಿಧಾನಗಳನ್ನು ಕಂಡು ಹಿಡಿದರು.

ಖೊಟ್ಟಿ ಕಾರ್ಡುಗಳನ್ನು ತೆಗೆದುಹಾಕಲೆಂದು ಈ ಕೂಪನ್ ಪದ್ಧತಿ ಎನ್ನುತ್ತಾರೆ ನಾಟಕದ ರೂವಾರಿಗಳಲ್ಲೊಬ್ಬರಾದ ಇಲಾಖೆಯ ಅಧಿಕಾರಿ. ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ಲೋಕಾಯುಕ್ತದ ಅಡಿಯಲ್ಲಿ ಡಾ. ಬಾಲಸುಬ್ರಮಣ್ಯಂ ಅವರು ತಯಾರಿಸಿದ್ದ ಒಂದೇ ವರದಿಯು ಸಾಕಿತ್ತು ಖೊಟ್ಟಿ ಕಾರ್ಡುಗಳನ್ನು ತೆಗೆದು ಹಾಕಲು. ಆದರೆ ಆ ವರದಿ ಎಲ್ಲಿಯೋ ದೂಳು ಹಿಡಿಯುತ್ತ ಬಿದ್ದಿದೆಯಷ್ಟೇ ಅಲ್ಲ, ಇಲಾಖೆಯ ಈಗಿನವರಿಗೆ ಅದರ ಬಗ್ಗೆ ಮಾಹಿತಿ ಕೂಡ ಇಲ್ಲ.

ಖೊಟ್ಟಿ ಕಾರ್ಡುಗಳನ್ನು ಹೊರ ತೆಗೆದು ಹಾಕಲು ರಾಜಕೀಯ ಇಚ್ಛಾಶಕ್ತಿ ತೋರಿಸದೆ, ಇರುವ ನಿಜದ ಕಾರ್ಡುಗಳನ್ನೇ ಖೊಟ್ಟಿ ಎನ್ನುತ್ತ ಮತ್ತೆ ಮತ್ತೆ ಪರೀಕ್ಷೆಗೊಡ್ಡುವುದು ಸತ್ಯವನ್ನು ಸುಳ್ಳೆಂದು ಸಾಬೀತು ಮಾಡುವ ಪ್ರಯತ್ನ.

ನಿಜವಾದ ಉದ್ದೇಶವನ್ನು ಸ್ಪಷ್ಟಪಡಿಸದೆಯೇ ಮತ್ತೆ ಮತ್ತೆ ಜನರನ್ನು ಪರೀಕ್ಷೆಗೊಡ್ಡುವುದು ಇನ್ನಷ್ಟು ಗೋಜಲನ್ನು ಸೃಷ್ಟಿ ಮಾಡುತ್ತದೆಯೇ ಹೊರತು ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹೊಸ ವ್ಯವಸ್ಥೆ ಯಾಕೆಂದು ಇಲಾಖೆಯವರನ್ನು ಕೇಳಿದರೆ ಜನರಿಗೆ ಉತ್ತರ ನೀಡಲು ಇಲಾಖೆ ಪರದಾಡುತ್ತದೆ. ‘ರೇಷನ್‌ ಅಂಗಡಿಯಾತನ ಏಕಸ್ವಾಮ್ಯವನ್ನು ಮುರಿಯಲಿಕ್ಕೆ, ತಾಲ್ಲೂಕಿನಲ್ಲಿ ಯಾವ ಅಂಗಡಿಗೆ ಬೇಕಾದರೂ ಹೋಗಿ ರೇಷನ್‌ ತರಬಹುದು’. ‘ಬಯೊಮೆಟ್ರಿಕ್ ಕೊಟ್ಟರೆ ಮೊಬೈಲಿಗೇ ಕೂಪನ್ ಕಳಿಸುತ್ತೇವೆ, ಮನೆಯಲ್ಲಿ ಯಾರು ಬೇಕಾದರೂ ಆ ಮೆಸೇಜ್ ತೋರಿಸಿ ಥಂಬ್ ಕೊಟ್ಟರೆ ರೇಷನ್‌ ಸಿಕ್ಕುಬಿಡುತ್ತದೆ’. ಇತ್ಯಾದಿ, ಇತ್ಯಾದಿ...

ಮೇಲೆ ನಿಂತು ನೋಡುವ ಅಧಿಕಾರಿಗಳಿಗೆ ಎಲ್ಲರ ಕೈಗಳಲ್ಲೂ ಮೊಬೈಲ್ ಕಾಣಿಸುತ್ತದೆ. ಆದರೆ ನಾನು ನೋಡುವ ಹುಬ್ಬಳ್ಳಿ ವಡ್ಡರ ಓಣಿಯ ಕೃಷ್ಣಾಬಾಯಿಯಾಗಲಿ, ಖಾನಾಪುರ ತಾಲ್ಲೂಕಿನ ದಟ್ಟ ಕಾಡಿನಲ್ಲಿ ವಾಸಿಸುವ ವಡ್ಡೇಬೈಲ ಎಂಬ ಕುಗ್ರಾಮದ ಮಲ್ಲವ್ವಗಾಗಲಿ, ಅವರ ಬಳಿ ಮೊಬೈಲೂ ಇಲ್ಲ, ಮೊಬೈಲ್ ಮೆಸೇಜ್ ಓದಲೂ ಬರುವುದಿಲ್ಲ. ಇಂಥವರ ಬಯೊಮೆಟ್ರಿಕ್‌ ಅನ್ನು ನಿಮ್ಮ ಮಶೀನು ಗುರುತಿಸುವುದೇ ಇಲ್ಲ. ಹಾಗಾದರೆ ಅವರು ರೇಷನ್‌ಗೆ ಅರ್ಹರಲ್ಲವೇ? ಅವರು ನಿಮ್ಮ ದೇಶದ ಪ್ರಜೆಗಳಲ್ಲವೇ?

ನಮ್ಮದೇ ಊರಿನ, ವಾರ್ಡಿನ ರೇಷನ್‌ ಅಂಗಡಿಯಾತ ದರ್ಪ ತೋರಿಸಬಹುದು, ತನ್ನ ಅಂಗಡಿಯ ಸಾಮಾನುಗಳನ್ನು ಕೊಳ್ಳಲು ಒತ್ತಾಯಿಸಬಹುದು, ತೂಕದಲ್ಲಿ ವಂಚನೆ ಮಾಡಿ ಕಾಳನ್ನು ಮಾರಿಕೊಳ್ಳುತ್ತಲೂ ಇರಬಹುದು. ಆದರೆ ರೇಷನ್‌ ಬಂದಿದ್ದಾಗ ಊರ ಜನರಿಗೆ ಇಲ್ಲವೆನ್ನದೆ ಸ್ವಲ್ಪವಾದರೂ ರೇಷನ್‌ ಕೊಡುತ್ತಿದ್ದನಲ್ಲ? ಕಾಳು ಉಳಿದಿದ್ದರೆ ಸ್ವಲ್ಪ ಜಾಸ್ತಿ ಬೆಲೆಗಾದರೂ ಬೇಕಾದವರಿಗೆ ಕೊಡುತ್ತಿದ್ದನಲ್ಲ? ಆದರೀಗ ಈ ನೂರೆಂಟು ನಿಬಂಧನೆಗಳು ಜನರ ಹೆಸರಲ್ಲಿ ಪಡಿತರವನ್ನೇ ನಿರಾಕರಿಸುತ್ತಿವೆಯಲ್ಲ? ಗೌರವದ ಬದುಕಿನ ಮೂಲಭೂತ ಹಕ್ಕಿನ ನಿರಾಕರಣೆಯಲ್ಲವೇ ಇದು? ಬೇರೆ ಊರಿನ ರೇಷನ್‌ ಅಂಗಡಿಗೆ ಹೋದರೆ ಆತ ಯಾಕೆ ಕೊಟ್ಟಾನು?

ಇನ್ನೊಂದು ಮುಖ್ಯ ಪ್ರಶ್ನೆ ಬಯೊಮೆಟ್ರಿಕ್ ಅಥವಾ ಜನರ ಹೆಬ್ಬೆರಳ ಗುರುತಿನದು. ಕಾರ್ಡು ಮಾಡಿಸುವಾಗ ಬಯೊಮೆಟ್ರಿಕ್ ಆಗಿದೆ. ರೇಷನ್‌ ಒಯ್ಯುವಾಗಲೂ ಬಯೊಮೆಟ್ರಿಕ್ ಆಗುತ್ತದೆ. ಮಧ್ಯೆ ಮತ್ತೊಂದು ಹೆಬ್ಬೆರಳೇಕೆ? ಕೈಕೆಲಸ ಮಾಡುವವರ, ಕೂಲಿಕಾರರ ಹೆಬ್ಬೆರಳಿನ ಗುರುತು ಸದಾ ಒಂದೇ ರೀತಿ ಇರುವುದಿಲ್ಲ ಎಂದು ಸಾಬೀತು ಆಗಿರುವಾಗಲೂ, ರೇಷನ್‌ ಕಾರ್ಡುಗಳಿಗೆ ಆಧಾರ್ ಲಿಂಕ್ ಮಾಡುವುದರಿಂದ ಬೋಗಸ್ ಕಾರ್ಡುಗಳ ಪತ್ತೆ ಆಗುವುದಿಲ್ಲ ಎಂದು ಅಧಿಕಾರಿಗಳಿಗೆ ಮೊದಲೇ ಗೊತ್ತಿದ್ದಾಗಲೂ ಸಾರ್ವಜನಿಕ ಹಣ ಪೋಲು ಮಾಡಿದರು.

ಈಗ ಮತ್ತೆ ಅದೇ ಹೆಸರಿನಲ್ಲಿ ಮತ್ತೆ ದುಡ್ದು ವ್ಯಯ. ಬೋಗಸ್ ಕಾರ್ಡ್ ಗುರುತಿಸಲು, ಆರ್.ಆರ್. ನಂಬರ್, ಮೊಬೈಲ್ ಮೆಸೇಜ್, ಆಧಾರ್ ಸಂಖ್ಯೆ ಎಲ್ಲವನ್ನೂ ಮಾಡಿ ಕಡೆಗೆ, ‘ಬೋಗಸ್ ಕಾರ್ಡ್ ಹುಡುಕಿ ಕೊಟ್ಟವರಿಗೆ ಬಹುಮಾನ’ ಎಂದು ತಾವು ನಿರ್ಗಮಿಸುವ ಕೆಲ ದಿನಗಳ ಮೊದಲು ಅಂದಿನ ಆಹಾರ ಮಂತ್ರಿ ದಿನೇಶ್ ಗುಂಡೂರಾವ್ ಘೋಷಿಸಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದರು. ಸೋಲು ಅವರದಲ್ಲ, ಆ ತಪ್ಪು ವ್ಯವಸ್ಥೆಯದ್ದು. ಬೋಗಸ್ ಕಾರ್ಡುಗಳಾಗಲಿ, ಆಹಾರದ ಸೋರಿಕೆಯಾಗಲಿ, ವ್ಯವಸ್ಥೆಯ ಸಮಸ್ಯೆಯೇ ಬೇರೆ, ಸರ್ಕಾರ ಹುಡುಕುತ್ತಿರುವ ಅಥವಾ ಹೇಳುತ್ತಿರುವ ಪರಿಹಾರವೇ ಬೇರೆ.

ಅಲ್ಲಿ ಅಧಿಕಾರಿಗಳ ಅವ್ಯವಹಾರದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ವಂಚನೆಯಾದರೂ ಮುಚ್ಚಿ ಹಾಕಲು ಪ್ರಯತ್ನ, ಇನ್ನೊಂದೆಡೆ ಬೊಕ್ಕಸಕ್ಕೆ ₹ 45 ಸಾವಿರ  ಕೋಟಿಗಳ ಕಡಿತ ಆಗುತ್ತಿರುವಾಗಲೂ ಹೊಟ್ಟೆ ತುಂಬಿರುವ ಸರ್ಕಾರಿ ನೌಕರರಿಗೆ ಮಾತ್ರ ವೇತನ ಹೆಚ್ಚಳ.

ಅಲ್ಲೆಲ್ಲೂ ಕಾಣದ ಬೊಕ್ಕಸದ ಸೋರಿಕೆ, ಜನಸಾಮಾನ್ಯರ ಊಟದ ವಿಚಾರದಲ್ಲಿ ಮಾತ್ರ ನಮ್ಮ ಸರ್ಕಾರಕ್ಕೆ ಕಾಣುತ್ತಿರುವುದು ಇನ್ನೊಂದು ರೀತಿಯ ಆಹಾರ ರಾಜಕೀಯವಲ್ಲದೆ ಇನ್ನೇನು? ಪಕ್ಷಾತೀತ ರಾಜಕೀಯವಿದು. ಕೆಲವು ಜಾತಿ/ವರ್ಗದ ಜನರು ದನದ ಮಾಂಸವನ್ನು ತಿನ್ನಬಾರದು, ಮಾರಬಾರದು ಎನ್ನುವುದರಲ್ಲಿನ ರಾಜಕೀಯಕ್ಕೂ, ಅತ್ಯಲ್ಪ ಪಡಿತರ ಆಹಾರ ಕೂಡ ಅವರಿಗೆ ಸಿಗದಂತೆ ಮಾಡುವ ಈ ರಾಜಕೀಯಕ್ಕೂ ಮಧ್ಯೆ ವ್ಯತ್ಯಾಸ ಇದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT