ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ, ಗೌರೀ ಗಣೇಶ ಪೂಜೆ ಮಾಡೋಣ

Last Updated 29 ಆಗಸ್ಟ್ 2019, 6:45 IST
ಅಕ್ಷರ ಗಾತ್ರ

ಯಾವುದೇ ವ್ರತವಾಗಲಿ ಹಬ್ಬವಾಗಲಿ ಹಿಂದಿನ ದಿನವೇ ನಿಜವಾಗಿ ಆರಂಭವಾಗುತ್ತದೆ. ವ್ರತವನ್ನು ಆಚರಿಸುವವರು ಅದಕ್ಕಾಗಿ ಸಿದ್ಧತೆಯನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ವ್ರತದ ಹಿಂದಿನ ದಿನ ರಾತ್ರಿಯೇ ನಾಳೆ ವ್ರತವನ್ನು ಮಾಡುವೆನೆಂದು ಸಂಕಲ್ಪಿಸಿ ಉಪವಾಸ ಅಥವಾ ಫಲಾಹಾರ ಇಲ್ಲವೇ ಅಲ್ಪಾಹಾರ ಮಾಡಿ ವ್ರತದ ಪ್ರಧಾನ ದೇವರನ್ನು ಧ್ಯಾನಿಸುತ್ತಾ ನಿದ್ರಿಸಬೇಕು. ಗೌರೀಹಬ್ಬ ಅಥವಾ ಸ್ವರ್ಣಗೌರೀ ವ್ರತವೂ ಈ ನಿಯಮಕ್ಕೆ ಹೊರತಾಗಿಲ್ಲ.

ವ್ರತದ ದಿನ ನಸುಕಿನಲ್ಲೆದ್ದು, ಬಾಗಿಲನ್ನು ರಂಗವಲ್ಲಿಯಿಂದ ಸಿಂಗರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಮುಡಿಯಿಂದ ಅಡಿಯವರೆಗೂ ಮಿಂದು ಮಡಿಯ ಬಟ್ಟೆ ಉಟ್ಟುಕೊಂಡು ಹಣೆಗೆ ವಿಭೂತಿ ಕುಂಕುಮ ಮುಂತಾದವುಗಳನ್ನಿಟ್ಟುಕೊಂಡು ಪೂಜಿಸಲು ಸಿದ್ಧರಾಗಬೇಕು. ನದಿಯು ಸಮೀಪದಲ್ಲಿ ಇಲ್ಲದಿದ್ದರೆ ಮನೆಯಲ್ಲಿಯೇ ತಣ್ಣೀರಿನಿಂದ ಸ್ನಾನ ಮಾಡಬಹುದು. ಆರೋಗ್ಯವನ್ನು ಗಮನಿಸಿ ಸ್ನಾನಕ್ಕೆ ಬೆಚ್ಚಗಿನ ನೀರನ್ನೂ ಬಳಸಬಹುದು.

ಪರಿಶುದ್ಧವಾದ ಪೂಜೆಯ ಸ್ಥಾನದಲ್ಲಿ ಫಲ-ಪುಷ್ಪಗಳಿಂದ ಅಲಂಕೃತವಾದ ಮಂಟಪದಲ್ಲಿ ಕಲಶವನ್ನು ಅಥವಾ ಹೊಂಬಣ್ಣದ ಶ್ರೀಗೌರಿಯ ಮೂರ್ತಿಯನ್ನು ಇಡಬೇಕು. ಬಾಳೆ ಎಲೆಯ ಮೇಲೆ ಅಕ್ಕಿಯ ರಾಶಿಯನ್ನು ಹರಡಿ ಅದರ ಮೇಲೆ ಲಭ್ಯವಿರುವ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯ ಪಾತ್ರೆಯನ್ನು ಇಟ್ಟು ನೀರನ್ನು ತುಂಬಬೇಕು. ಅದರ ಮೇಲೆ ಕನಿಷ್ಠ ಐದು ಎಲೆಗಳಿರುವ ಮಾವಿನ ಚಿಗುರನ್ನು ಇಟ್ಟು, ಮೇಲಿನಿಂದ ತೆಂಗಿನಕಾಯಿ ವಸ್ತ್ರ ಬಳೆ ಮುಂತಾದವುಗಳನ್ನಿಟ್ಟು ಅಲಂಕರಿಸಬೇಕು.

ಪೂಜೆಯನ್ನು ಎರಡು ಬಗೆಯಲ್ಲಿ ಮಾಡಬಹುದು. ಅನುಕೂಲವಿದ್ದರೆ ಮಂತ್ರಗಳನ್ನು ಉಚ್ಚರಿಸುತ್ತಾ ಪೂಜಿಸಬಹುದು. ಶ್ರೀ ಗೌರ್ಯೈ ನಮಃ ಎಂದೋ, ಶ್ರೀ ಸ್ವರ್ಣಗೌರ್ಯೈ ನಮಃ ಎಂದೋ ಹೇಳುತ್ತಾ ಆವಾಹನ ಆಸನ ಪಾದ್ಯ ಅರ್ಘ್ಯ ಅಭಿಷೇಕ ಗಂಧ ಹೂ, ಅಕ್ಷತೆ ಧೂಪ ದೀಪ ನೈವೇದ್ಯ ಆರತಿ ಪ್ರದಕ್ಷಿಣ ನಮಸ್ಕಾರ ಪ್ರಾರ್ಥನೆಗಳನ್ನು ಮಾಡಬಹುದು.

ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತುತೇ

ಎಂಬ ಮಂತ್ರವನ್ನು ಆವರ್ತಿಸಬಹುದು. ಅದಲ್ಲದಿದ್ದರೆ ಭಕ್ತಿಯಿಂದ ಹಾಡು ಹೇಳುತ್ತಾ ಪೂಜೆಯನ್ನು ನೆರವೇರಿಸಬಹುದು. ಒಂದು ಸುಪ್ರಸಿದ್ಧವಾದ ಹಾಡು ಹೀಗಿದೆ:

ಪೂಜಿಸಿದಳು ಗೌರಿಯ
ರುಕ್ಮಿಣಿ ದೇವಿ
ಪೂಜಿಸಿದಳು ಗೌರಿಯ ...

ರುಕ್ಮಿಣೀದೇವಿಯು ಶ್ರೀಗೌರಿಯನ್ನು ಪೂಜಿಸಿ ಶ್ರೀಕೃಷ್ಣನನ್ನು ಮದುವೆಯಾಗುವಲ್ಲಿ ಸಫಲಳಾದಳು ಎಂಬ ಪುರಾಣದ ಕಥೆ ನಮಗೆ ತಿಳಿದಿದೆ. ಅದನ್ನು ಅನುಸರಿಸಿ ನಾವಾದರೂ ನಮ್ಮ ಮನೋಗತವನ್ನು ಶ್ರೀಗೌರಿಯಲ್ಲಿ ನಮ್ಮದೇ ಆದ ರೀತಿಯಲ್ಲಿ ನಿವೇದಿಸಿ ಇಷ್ಟಾರ್ಥಗಳನ್ನು ಪಡೆಯಬಹುದು.
ಪೂಜೆಯನ್ನು ಮಾಡಿ ಕಥೆಯನ್ನು ಕೇಳಬೇಕೆಂದು ಹೇಳುತ್ತಾರೆ.

ಶ್ರೀಗೌರಿಯ ಕಥೆ ಅನೇಕ ವಿಧವಾಗಿದೆ

ಶಿವನ ಪತ್ನಿಯಾದ ಸ್ವರ್ಣಗೌರಿಯು ಮಹಿಳೆಯರ, ವಿಶೇಷವಾಗಿ ಗೃಹಿಣಿಯರ ಮತ್ತು ಕನ್ಯೆಯರ ಪ್ರಾರ್ಥನೆಯನ್ನು ಆಲಿಸುವುದಕ್ಕಾಗಿ ಭಾದ್ರಪದ ಶುಕ್ಲ ತದಿಗೆಯ ದಿನ ಕೈಲಾಸದಿಂದ ಹೊರಟು ಎಲ್ಲೆಡೆಯೂ ಸಂಚರಿಸುತ್ತಾಳೆ. ಅವಳನ್ನು ಹಿಂದಿರುಗಿ ಕರೆತರುವಂತೆ ಶಿವನು ಶ್ರೀಗಣೇಶನನ್ನು ಕಳುಹಿಸುತ್ತಾನೆ.

ತಾಯಿಯ ಜೊತೆಗೂಡಿದ ಬೆನಕನು ಎಲ್ಲರ ಪೂಜೆ-ಪುನಸ್ಕಾರಗಳನ್ನು ಸ್ವೀಕರಿಸಿ ಅವಳೊಂದಿಗೆ 1/2/4 ಅಥವಾ ಭಕ್ತರ ಅಪೇಕ್ಷೆಯಂತೆ ಭೂಮಂಡಲದಲ್ಲಿದ್ದು ಕೆಲವು ದಿನಗಳಲ್ಲಿ ಕೈಲಾಸಕ್ಕೆ ಹಿಂದಿರುಗುತ್ತಾನೆ.

ಶ್ರೀಗಣೇಶನ ಹುಟ್ಟಿಗೆ ಸಂಬಂಧಿಸಿದ ಇನ್ನೊಂದು ಕಥೆ ಹೀಗಿದೆ: ಪಾರ್ವತಿಯು ಗಣೇಶನನ್ನು ತನ್ನ ಮೈಗೆ ಲೇಪಿಸುವ ಆರ್ದ್ರ ಹರಿದ್ರಾ ಚೂರ್ಣದಿಂದ, ಅಂದರೆ ನೀರಿನಲ್ಲಿ ಕಲಸಿದ ಅರಿಸಿನದ ಹಿಟ್ಟಿನಿಂದ ನಿರ್ಮಿಸಿ, ಜೀವ ಬರಿಸಿ, ಕಾವಲಿರುವಂತೆ ಆದೇಶಿಸಿ, ಸ್ನಾನಕ್ಕೆ ಹೋದಳು. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಆಗಮಿಸಿದ ಶಿವನಿಗೂ ಗಣೇಶನಿಗೂ ಪ್ರವೇಶಿಸುವ ವಿಷಯದಲ್ಲಿ ವಾಗ್ವಾದವುಂಟಾಗಿ, ಶಿವನು ಗಣೇಶನ ತಲೆಯನ್ನು ಕತ್ತರಿಸಿದನು.

ಸ್ನಾನವಾದ ಮೇಲೆ ಅಲ್ಲಿಗೆ ಬಂದ ಪಾರ್ವತಿಗೆ ವಿಷಯವು ತಿಳಿದು ಹೆಚ್ಚಿನ ಅನರ್ಥವಾಗುವ ಮೊದಲೇ ಗಣೇಶನನ್ನು ಬದುಕಿಸುವಂತೆ ಆಗ್ರಹಿಸಿದಳು. ಶಿವನು ಉತ್ತರಕ್ಕೆ ತಲೆ ಮಾಡಿ ಮಲಗಿದ ಆನೆಯ ತಲೆಯನ್ನು ತಂದು ಜೋಡಿಸಿ ಗಣೇಶನನ್ನು ಬದುಕಿಸಿದನು. ಕುಮಾರಸಂಭವದ ಹಿನ್ನೆಲೆಯ ಮತ್ತೊಂದು ಕಥೆ ಹೀಗಿದೆ: ದಕ್ಷಯಜ್ಞದಲ್ಲಿ ಸತಿಯ ವಿಯೋಗದಿಂದ ವೈರಾಗ್ಯ ಹೊಂದಿದ ಶಿವನು ಘೋರವಾದ ತಪಸ್ಸು ಮಾಡುತ್ತಿದ್ದನು. ಅವನನ್ನು ಸಂತೈಸಲು ಯಾರಿಗೂ ಸಾಧ್ಯವಾಗಲಿಲ್ಲ. ಸತಿಯ ಅವತಾರವೇ ಆದ ಪಾರ್ವತಿಯು ಶಿವನನ್ನೇ ವರಿಸಲು ಹದಿನಾರು ವರ್ಷಗಳ ವರೆಗೆ ತಪಸ್ಸು ಆಚರಿಸಿದಳು.

(ದೋರದಲ್ಲಿ ಹದಿನಾರು ಗ್ರಂಥಿಗಳು ಈ ವರ್ಷಗಳನ್ನು ಪ್ರತಿನಿಧಿಸುತ್ತವೆ.) ಇಬ್ಬರ ತಪಸ್ಸಿನ ಫಲವಾಗಿ ಪಾರ್ವತಿಯ ಮದುವೆಯಾಗಿ ಕುಮಾರನ ಜನನವಾಯಿತು. ಇದರಿಂದ ತಾರಕಾಸುರನ ಸಂಹಾರವಾಗಿ ಲೋಕ ಕಲ್ಯಾಣವಾಯಿತು. ಈ ವ್ರತವನ್ನು ಭಕ್ತಿಯಿಂದ ಆಚರಿಸಿದವರಿಗೆ ಇಹ–ಪರಗಳಲ್ಲಿ ಒಳ್ಳೆಯದಾಗುತ್ತದೆ.

ವರಸಿದ್ಧಿ ಶ್ರೀವಿನಾಯಕ ವ್ರತ

ವಿಚಿತ್ರವಾದರೂ ನಿಜವಾದ ಒಂದು ಸಂಗತಿಯಿದೆ: ಶ್ರೀಗೌರಿಯ ಪೂಜೆಯಲ್ಲಿ ಗರಿಕೆಯನ್ನು ಬಳಸಬಾರದು. ಆದರೆ ಗಣೇಶನ ಪೂಜೆಯನ್ನು ಗರಿಕೆಯಿಲ್ಲದೆ ಮಾಡಬಾರದು. ಶ್ರೀಗೌರಿವ್ರತವನ್ನು ಆಚರಿಸಿದ ದಿನವೇ ಸಂಜೆ ಗಣೇಶನ ಪೂಜೆಯ ಸಿದ್ಧತೆಯನ್ನು ಅಂತರಂಗದಲ್ಲಿ ಆರಂಭಿಸಬೇಕು. ಗಣೇಶನ ಮಣ್ಣಿನ ಮೂರ್ತಿಯನ್ನು ತಂದು ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಬೇಕು.

ಪಂಚಮಹಾಭೂತಗಳಲ್ಲಿ ಶ್ರೀಗೌರಿಯು ನೀರನ್ನು ಪ್ರತಿನಿಧಿಸಿದರೆ, ಗಣೇಶನು ಮಣ್ಣನ್ನು ಪ್ರತಿನಿಧಿಸುತ್ತಾನೆ. ನೀರಿನಿಂದಲೇ ಪೃಥ್ವಿಯ ಸೃಷ್ಟಿಯಾಯಿತೆಂದು ಉಪನಿಷತ್ತು ಸಾರುತ್ತದೆ. ಇಲ್ಲಿಯ ಕಥೆಯೂ ಹಾಗೆಯೇ ಇದೆ. ಶ್ರೀಗೌರಿಯು ಗಣೇಶನನ್ನು ಮೈ ಮಣ್ಣಿನಿಂದ ನಿರ್ಮಿಸುತ್ತಾಳೆ. ಶಿವನು ವಾಯುವಿನ ದೇವತೆ.

ಮಣ್ಣು ನೀರು ಗಾಳಿಗಳಿಲ್ಲದೆ ಮನುಷ್ಯನ ಜೀವನವಿಲ್ಲ. ಅವನು ಪ್ರಾಂಜಲ ಮನಸ್ಸಿನಿಂದ ಸಮಷ್ಟಿಯಾಗಿ ಪ್ರಾರ್ಥಿಸಿದರೆ ಇವೆಲ್ಲವೂ ಅನುಕೂಲವಾಗುತ್ತವೆ. ಅದಲ್ಲದಿದ್ದರೆ ಪ್ರಕೃತಿಯ ತತ್ತ್ವಗಳು ಪ್ರತಿಕೂಲವಾಗುತ್ತವೆ.

ಆದಿಪೂಜ್ಯನಾದ ಶ್ರೀ ಗಣೇಶನನ್ನು ಭಾದ್ರಪದ ಶುಕ್ಲ ಚತುರ್ಥಿಯಂದು ವಿಶೇಷವಾಗಿ ಆರಾಧಿಸುವ ರೂಢಿ ನಮ್ಮಲ್ಲಿದೆ. ಬೆಳಿಗ್ಗೆ ಬೇಗನೆ ಎದ್ದು ಮಂಗಳಸ್ನಾನವನ್ನು ಮಾಡಿ, ಕಲಶಸ್ಥಾಪನೆಯೊಂದಿಗೆ ಪ್ರತಿಮೆಯನ್ನು ಸ್ಥಾಪಿಸಿ, ಆವಾಹನ ಆಸನ ಮುಂತಾದ ಪೂಜೆಯನ್ನು ಮಾಡಬೇಕು. ಶ್ರೀ ಗಣೇಶಾಯ ನಮಃ ಎಂಬ ಮಂತ್ರವೊಂದೇ ಸಾಕು, ವಿನಾಯಕನನ್ನು ಪೂಜಿಸಲು.

ಈ ಮಂತ್ರವನ್ನು ಮತ್ತೆ ಮತ್ತೆ ಹೇಳುತ್ತಾ ಅಭಿಷೇಕ ಅಲಂಕಾರ ನೈವೇದ್ಯ ಮಂಗಳಾರತಿ ಪ್ರಾರ್ಥನೆ - ಎಲ್ಲವನ್ನೂ ಮಾಡಬಹುದು, ಸುಪ್ರಸಿದ್ಧವಾದ ಶ್ಲೋಕಗಳನ್ನು ಪೂಜೆಯ ಸಮಯದಲ್ಲಿಯೂ ಪೂಜೆಯಾದ ಮೇಲೆಯೂ ಹೇಳಬಹುದು. ಉದಾಹರಣೆಗಾಗಿ,

ವಕ್ರತುಂಡ ಮಹಾಕಾಯ
ಕೋಟಿಸೂರ್ಯಸಮಪ್ರಭ
ಅವಿಘ್ನಂ ಕುರು ಮೇ ದೇವ
ಸರ್ವಕಾರ್ಯೇಷು ಸರ್ವದಾ
ಎಂಬ ಶ್ಲೋಕವನ್ನು ಹೇಳಿಕೊಳ್ಳುತ್ತ ಪೂಜೆಯನ್ನು ಮಾಡಬಹುದು.
ಎಲ್ಲರಿಗೂ ಗೊತ್ತಿರಬಹುದಾದ ಇನ್ನೊಂದು ಶ್ಲೋಕವಿದೆ:
ಶುಕ್ಲಾಂಬರಧರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಮ್
ಪ್ರಸನ್ನವದನಂ ಧ್ಯಾಯೇತ್
ಸರ್ವವಿಘ್ನೋಪಶಾಂತಯೇ

ಇದನ್ನು ಉಚ್ಚರಿಸಿ, ಶ್ರೀ ಗಣೇಶಾಯ ನಮಃ ಎಂದು ಹೇಳುತ್ತಾ ಪೂಜಿಸಬಹುದು.

ಗಣೇಶನು ಮೋದಕಪ್ರಿಯ ಎನ್ನುತ್ತಾರೆ. ಅವನಿಗೆ ಪಂಚ ಭಕ್ಷ್ಯ ಪರಮಾನ್ನದೊಂದಿಗೆ ಚಕ್ಕುಲಿ ಉಂಡೆ ಕರಿಗಡಬು ಮುಂತಾದ ಅನೇಕ ಭಕ್ಷ್ಯಗಳನ್ನು ನೈವೇದ್ಯ ಮಾಡುತ್ತಾರೆ. ಗಜಮುಖನೆ ಗಣಪತಿಯೆ ನಿನಗೆ ವಂದನೆ ಎಂದು ಮುಂತಾದ ಹಾಡುಗಳನ್ನು ಹೇಳುತ್ತಾ ಆರತಿ ಮಾಡುತ್ತಾರೆ. ಪ್ರದಕ್ಷಿಣ ನಮಸ್ಕಾರಗಳಾದ ಮೂಲೆ ಗರಿಕೆಯನ್ನು ಸಮರ್ಪಿಸುತ್ತಾರೆ.

ದೋರಗ್ರಂಥಿ
ಶ್ರೀಗೌರಿಗೆ ಹದಿನಾರು ಸಾರೆ ನಮಸ್ಕಾರವನ್ನು ಮಾಡುವ/ಹೇಳುವ ಮೂಲಕ ಹದಿನಾರು ಗಂಟುಗಳಿರುವ ನೂಲನ್ನು ಗೌರೀಹಬ್ಬದ ದಿನ (ಪುಷ್ಪ-ಪತ್ರ ಪೂಜೆಯಾದ ಮೇಲೆ) ಪೂಜಿಸುತ್ತಾರೆ. ಅದು ಹೀಗಿದೆ:
ಸ್ವರ್ಣಗೌರ್ಯೈ ನಮಃ
ಮಹಾಗೌರ್ಯೈ ನಮಃ
ಕಾತ್ಯಾಯನ್ಯೈ ನಮಃ
ಕೌಮಾರ್ಯೈ ನಮಃ
ಭದ್ರಾಯೈ ನಮಃ
ವಿಷ್ಣುಸುಂದರ್ಯೈ ನಮಃ
ಮಂಗಳದೇವತಾಯೈ ನಮಃ
ರಾಕೇಂದು ವದನಾಯೈ ನಮಃ
ಚಂದ್ರಶೇಖರಪತ್ನ್ಯೈ ನಮಃ
ವಿಶ್ವೇಶ್ವರಪ್ರಿಯಾಯೈ ನಮಃ
ದಾಕ್ಷಾಯಣ್ಯೈ ನಮಃ
ಕೃಷ್ಣವೇಣ್ಯೈ ನಮಃ
ಲೋಲಲೋಚನಾಯೈ ನಮಃ
ಭವಾನ್ಯೈ ನಮಃ
ಚಂಪಕಾತ್ಮಜಾಯೈ ನಮಃ
ಮಹಾಗೌರ್ಯೈ ನಮಃ

ಈ ಷೋಡಶ ನಾಮಗಳಿಂದ ಪೂಜಿಸಿದ ದೋರವನ್ನು ಧರಿಸಿದರೆ ಕಾಮನೆಗಳೆಲ್ಲವೂ ದೊರೆಯುತ್ತವೆ.

*
ಗಣಪತಿಗೆ ಗರಿಕೆಯನ್ನು ಸಮರ್ಪಿಸುತ್ತ ಹೇಳಿಕೊಳ್ಳಬೇಕಾದ ನಾಮಗಳು:
ಗಣಾಧಿಪತಯೇ ನಮಃ
ಉಮಾಪುತ್ರಾಯ ನಮಃ
ಅಘನಾಶನಾಯ ನಮಃ
ಏಕದಂತಾಯ ನಮಃ
ಇಭವಕ್ತ್ರಾಯ ನಮಃ
ಮೂಷಿಕವಾಹನಾಯ ನಮಃ
ಕುಮಾರಗುರವೇ ನಮಃ
ಧೂಮ್ರಕೇತವೇ ನಮಃ
ಗಜಾನನಾಯ ನಮಃ
ವಿಘ್ನರಾಜಾಯ ನಮಃ
ಲಂಬೋದರಾಯ ನಮಃ
ವಿಕಟಾಯ ನಮಃ
ಹೇರಂಬಾಯ ನಮಃ
ಕಪಿಲಾಯ ನಮಃ
ಫಾಲಚಂದ್ರಾಯ ನಮಃ
ಶೂರ್ಪಕರ್ಣಾಯ ನಮಃ
ಪಾಶಾಂಕುಶಧರಾಯ ನಮಃ
ದ್ವೈಮಾತುರಾಯ ನಮಃ
ಸುಮುಖಾಯ ನಮಃ
ಸರ್ವಸಿದ್ಧಿಪ್ರದಾಯಕಾಯ ನಮಃ
ವರಸಿದ್ಧಿವಿನಾಯಕಾಯನಮಃ

ಈ ನಾಮಗಳನ್ನು ಹೇಳುತ್ತಾ ಒಂದೊಂದು ಸಾರೆಯೂ ಎರಡು ಗರಿಕೆಗಳನ್ನು ಸಮರ್ಪಿಸಬೇಕು.

ಸ್ಯಮಂತಕಮಣಿಯ ಕಥೆ
ಗಣಪತಿಯ ಪೂಜೆಯು ಮುಗಿದ ಮೇಲೆ ಸ್ಯಮಂತಕಮಣಿಯ ಕಥೆಯನ್ನು ಕೇಳುವ ರೂಢಿಯಿದೆ. ಈ ಕಥೆಯು ದ್ವಾಪರಯುಗಕ್ಕೆ ಸಂಬಂಧಿಸಿದೆ. ಸತ್ರಾಜಿತ ಎಂಬವನು ತಪಸ್ಸಿನಿಂದ ಸೂರ್ಯನನ್ನು ಮೆಚ್ಚಿಸಿ, ಪ್ರತಿದಿನವೂ ಹೇರಳವಾಗಿ ಚಿನ್ನವನ್ನು ನೀಡುವ ಸ್ಯಮಂತಕಮಣಿಯನ್ನು ಪಡೆದನು. ಅದರ ಮಹಿಮೆಯಿಂದ ಆಕರ್ಷಣೆಗೊಂಡು ಶ್ರೀಕೃಷ್ಣನು ಅದನ್ನು ತನಗೆ ಕೊಡುವಂತೆ ಸತ್ರಾಜಿತನನ್ನು ಕೇಳಿದನು. ಅವನು ಅದನ್ನು ಅವನಿಗೆ ಕೊಡಲಿಲ್ಲ.

ಹೀಗೆಯೇ ಕೆಲವು ದಿನಗಳು ಕಳೆದ ಮೇಲೆ ಶ್ರೀಕೃಷ್ಣನು ಗೆಳೆಯರೊಂದಿಗೆ ಬೇಟೆಯಾಡಲು ಕಾಡಿಗೆ ಹೋದನು. ಅವನ ಜೊತೆಗೆ ಸತ್ರಾಜಿತನ ತಮ್ಮನಾದ ಪ್ರಸನ್ನನೂ ಇದ್ದನು. ಅವನು ಅಣ್ಣನ ಮಣಿಯನ್ನು ಕಂಠದಲ್ಲಿ ಧರಿಸಿದ್ದನು. ಕಾಡಿನಲ್ಲಿ ಎಲ್ಲರೂ ಬೇಟಯಾಡುತ್ತಿರುವಾಗ ಬೇರೆ ಬೇರೆಯಾಗಿ ಚದುರಿ ಹೋದರು. ಪ್ರಸನ್ನನು ಒಬ್ಬನೇ ಸಾಗುತ್ತಿದ್ದಾಗ ಅವನಿಗೆ ಸಿಂಹವೊಂದು ಎದುರಾಯಿತು.

ಮಣಿಯ ಪ್ರಕಾಶಕ್ಕೆ ಅದು ಆಕರ್ಷಿತವಾಗಿ ಪ್ರಸನ್ನನ ಮೈಮೇಲೆ ಹಾರಿ ಕೊಂದು, ಮಣಿಯನ್ನು ತನ್ನದಾಗಿಸಿಕೊಂಡಿತು. ಮಣಿಯೊಂದಿಗೆ ಸಿಂಹವು ಹೋಗುತ್ತಿರುವಾಗ ಚಿರಂಜೀವಿಯಾದ ಜಾಂಬವಂತನು ಎದುರಾಗಿ ಅದನ್ನು ಕೊಂದು, ಮಣಿಯೊಂದಿಗೆ ತನ್ನ ಗುಹೆಗೆ ಹೋದನು. ಅಲ್ಲಿ ಆ ಮಣಿಯನ್ನು ಮಗುವಿನ ತೊಟ್ಟಿಲಿಗೆ ಅಲಂಕರಿಸಿದನು.

ಇತ್ತ ಬೇಟೆಗೆ ಹೋದವರೆಲ್ಲರೂ ಮರಳಿದರೂ ಪ್ರಸನ್ನನು ಮಾತ್ರ ಹಿಂದಿರುಗಲಿಲ್ಲ. ಆಗ ಸತ್ರಾಜಿತನಿಗೆ ಶ್ರೀಕೃಷ್ಣನ ಮೇಲೆ ಸಂಶಯವುಂಟಾಯಿತು. ಮಣಿಯ ಮೇಲಿ ಆಸೆಯಿಂದ ಅವನೇ ಪ್ರಸನ್ನನನ್ನು ಕೊಂದಿರಬಹುದೆಂದು ಎಲ್ಲರೂ ಭಾವಿಸಿದರು.

ಮಿಥ್ಯಾಪವಾದದಿಂದ ಕಂಗೆಟ್ಟು ಶ್ರೀಕೃಷ್ಣನು ಕಾಡಿನಲ್ಲಿ ಹುಡುಕುತ್ತ ಹೊರಟಾಗ ಪ್ರಸನ್ನನ ಶವ, ಸಿಂಹದ ಹೆಜ್ಜೆಯ ಗುರುತು ದೊರೆಯಿತು. ಅದನ್ನು ಅನುಸರಿಸಿ ಮುಂದೆ ಹೋದಾಗ ಕರಡಿಯ ಗುಹೆ ಎದುರಾಯಿತು. ಅಂಗರಕ್ಷಕರನ್ನು ಅಲ್ಲಿಯೇ ನಿಲ್ಲಿಸಿ ಶ್ರೀ ಕೃಷ್ಣನೊಬ್ಬನೇ ಗುಹೆಯನ್ನು ಪ್ರವೇಶಿಸಿದಾಗ ಅವನಿಗೆ ಅಚ್ಚರಿ ಕಾದಿತ್ತು. ಅಳುತ್ತಿರುವ ಕೂಸನ್ನು ಮಲಗಿಸುವುದಕ್ಕಾಗಿ ಯುವತಿಯೋರ್ವಳು ಅಲ್ಲಿ ಜೋಗುಳ ಹಾಡುತ್ತಿದ್ದಳು:

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ
ಸುಕುಮಾರಕ ಮಾ ರೋದೀಸ್ತವ ಹ್ಯೇಷ ಸ್ಯಮಂತಕಃ


ಶ್ರೀಕೃಷ್ಣನಿಗೆ ಅಲ್ಲಿಯೇ ಹೊಳೆಯುತ್ತಿರುವ ಮಣಿಯನ್ನು ಕಂಡು ಸಂತೋಷವಾಯಿತು. ಅವನು ಪಾಂಚಜನ್ಯವನ್ನು ಊದಿದನು. ಇದರಿಂದ ನಿದ್ರಿಸುತ್ತಿದ್ದ ಜಾಂಬವಂತನಿಗೆ ಎಚ್ಚರವಾಯಿತು. ತನ್ನ ಗುಹೆಯಲ್ಲಿ ಆಗಂತುಕನನ್ನು ನೋಡಿ ಅವನಿಗೆ ಸಿಟ್ಟು ಬಂದಿತು. ಇದರ ಪರಿಣಾಮವಾಗಿ 21 ದಿನಗಳ ವರೆಗೆ ಸಂಗ್ರಾಮವೇ ನಡೆಯಿತು.

ಶ್ರೀಕೃಷ್ಣನಲ್ಲಿ ಶ್ರೀರಾಮನನ್ನು ಕಂಡ ಜಾಂಬವಂತನು ಕ್ಷಮೆಯನ್ನು ಯಾಚಿಸಿ, ಮಣಿಯೊಂದಿಗೆ ತನ್ನ ಪುತ್ರಿಯಾದ ಜಾಂಬವತಿಯನ್ನು ಮದುವೆ ಮಾಡಿಕೊಟ್ಟನು. ಶ್ರೀಕೃಷ್ಣನು ಆ ಮಣಿಯನ್ನು ಸತ್ರಾಜಿತನಿಗೆ ತಲುಪಿಸಿದನು.

ಆಗ ಶ್ರೀ ಕೃಷ್ಣನು ನಿರಪರಾಧಿಯೆಂದು ತಿಳಿದು ಸತ್ರಾಜಿತನು ಮಿಥ್ಯಾಪವಾದ ಹೊರಿಸಿದ್ದಕ್ಕೆ ಪಶ್ಚಾತ್ತಾಪದಿಂದ ತನ್ನ ಪುತ್ರಿಯಾದ ಸತ್ಯಭಾಮೆಯನ್ನು ಮಣಿಯೊಂದಿಗೆ ಶ್ರೀಕೃಷ್ಣನಿಗೆ ಮದುವೆ ಮಾಡಿಕೊಟ್ಟನು. ಹೀಗೆ ಕಥೆಯು ಮುಂದುವರೆಯುತ್ತದೆ. ಇದನ್ನು ಕೇಳಿದವರಿಗೂ ಹೇಳಿದವರಿಗೂ ಯೋಗ-ಕ್ಷೇಮಗಳು ಉಂಟಾಗುತ್ತವೆ ಎಂಬುದು ಆಸ್ತಿಕರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT