ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರತಾಳದ ಗೌರಿ ಭೋಜನಪ್ರಿಯ ಗಣೇಶ

Last Updated 2 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಈ ಹೊತ್ತು ಆಚರಣೆಗಳೂ ಅಲಂಕಾರ ಆಗುತ್ತಿರುವ ಹೊತ್ತು. ಹಾಗೇ ಅಲಂಕಾರವೇ ಆಚರಣೆ ಆಗುತ್ತಿರುವ ಹೊತ್ತೂ ಹೌದು. ಶ್ರಾವಣದ ಹಬ್ಬಗಳೆಂದರೆ ಆಚರಣೆಯೂ, ಅಲಂಕಾರವೂ ಆಗಿ ಭಾರತೀಯ ಅನ್ನಿಸುವುದರ ವಿಶೇಷತೆಯನ್ನು ಸಂಭ್ರಮಿಸುವುದಾಗಿದೆ. ಒಂದಷ್ಟು ಬಣ್ಣದ ಹೂವುಗಳು, ಒಂದಷ್ಟು ಹಣ್ಣುಗಳು, ಇನ್ನೂ ಒಂದಷ್ಟು ಸರಳ, ಸುಲಭದ ತಯಾರಿಗಳ ಜೊತೆಗೆ ಹಬ್ಬಗಳನ್ನು ಆಚರಿಸುವ ಮರ್ಮ ಬದುಕಿಗೆ ಸಂತಸವನ್ನು ತುಂಬುವುದೇ ಆಗಿದೆ.

ಅಷ್ಟೇ ಅಲ್ಲದೆ, ಉಪವಾಸ ಮತ್ತು ಊಟದ ಮಹತ್ವವನ್ನು ಹೇಳುವ ನಮ್ಮ ಹಬ್ಬಗಳು ಬದುಕಿಗೆ ಶಿಸ್ತು ಹಾಗೂ ಸಂಭ್ರಮವನ್ನು ತುಂಬುವ ಕೆಲಸವನ್ನು ಸ್ವಲ್ಪವೂ ತಪ್ಪದೇ ಮಾಡುತ್ತಿರುತ್ತವೆ. ಶ್ರಾವಣಮಾಸದ ವೈಭವದ ಲಕ್ಷ್ಮೀಪೂಜೆಯ ನಂತರ ಬರುವ ಭಾದ್ರಪದದ ಗೌರೀಹಬ್ಬದಲ್ಲಿ ಎರಡು ವಿಧದ ಆಚರಣೆಗಳು.

ಸಂಭ್ರಮದ ಸ್ವರ್ಣಗೌರಿ ಒಂದೆಡೆಯಾದರೆ, ಹರತಾಳ (ಉಪವಾಸ) ಮಾಡಿಕೊಂಡು ಪೂಜಿಸುವ ಹರತಾಲಿಕಾ ಅಥವಾ ಹರತಾಳಗೌರಿ ಇನ್ನೊಂದೆಡೆ. ಮಹಾರಾಷ್ಟ್ರ ಮತ್ತು ಕರಾವಳಿತೀರದ ಒಂದೆರಡು ಸಮುದಾಯದಲ್ಲಿ ಆರಾಧಿಸಲ್ಪಡುವ ಹರತಾಳ ಗೌರಿ, ಕರ್ನಾಟಕದ ಮಟ್ಟಿಗೆ ಸ್ವಲ್ಪ ಅಪರಿಚಿತಳೇ. ಮಕ್ಕಳಿಂದ ಹಿಡಿದು ಎಲ್ಲರೂ ಉಪವಾಸ ಆಚರಿಸುವ ಹರಿತಾಲಿಕಾ ಗೌರಿ ದೇವರೊಂದಿಗೆ ನಡೆಸುವ ಮೌನಸಂವಾದವೂ ಹೌದು.

ಶಿವನ ಅರ್ಧಾಂಗಿ ಪಾರ್ವತಿ ಈ ಹರತಾಳಿಕಾ ಉಪವಾಸ ಮಾಡುತ್ತಾ, ‘ಅಪರ್ಣಾ ಎಂದು ಕರೆಸಿಕೊಂಡು ಯಶಸ್ವಿಯಾಗಿ ಶಿವನನ್ನು ಪಡೆದಳು ಎನ್ನುವ ಕಥೆಯಿದೆ. (ಕಾಲಿದಾಸನ ಕುಮಾರಸಂಭವದಲ್ಲಿ ಪಾರ್ವತಿಯ ತಪಸ್ಸಿನ ವರ್ಣನೆ ಸೊಗಸಾಗಿ ವರ್ಣಿತವಾಗಿದೆ. ) ಅಂಥ ಹಠಸಾಧನೆಯ ಗೌರಿಯನ್ನು ಪೂಜಿಸಿದರೆ ತಾವೂ ಬದುಕಿನ ನೆಮ್ಮದಿಯನ್ನು ಪಡೆಯಬಹುದು ಎಂಬ ಬಯಕೆಯಿಂದ ಭೂಮಿ ಮೇಲಿನ ಗೌರಿಯರೂ ವ್ರತಾಚರಣೆ ಮಾಡುತ್ತಾ ಬಂದಿರುವುದು ಈಗ ಸಂಪ್ರದಾಯವಾಗಿದೆ. 

ಹರತಾಳಿಕಾ ಆಚರಣೆಯಲ್ಲಿ ಹಬ್ಬ ಆಚರಿಸುವವರು ಉಪವಾಸವಿದ್ದರೂ ಗೌರಿಗೆ ಸಿಹಿನೈವೇದ್ಯದೊಂದಿಗೆ ಷೋಡಶೋಪಚಾರಗಳು ನಡೆಯುತ್ತವೆ. ಷೋಡಶೋಪಚಾರಗಳು ಅಂದರೆ ಹದಿನಾರು ಬಗೆಯ ಉಪಚಾರಗಳು. ಅಭಿಷೇಕ, ಸ್ನಾನ, ಗಂಧ, ಕುಂಕುಮ, ವಸ್ತ್ರ, ಒಡವೆ – ಹೀಗೆ ಮಂಟಪದಲ್ಲಿ ಆಸೀನಳಾದ ಗೌರಿಗೆ ಉಪಚಾರಗಳು ನಡೆದು ಕೊನೆಗೆ ಸಿಹಿಯೊಂದಿಗೆ ಆಕೆಯನ್ನು ಸಂತೃಪ್ತಿಗೊಳಿಸುವುದು.

ಈ ಎಲ್ಲ ಉಪಚಾರಗಳಲ್ಲೇ ಅತ್ಯಂತ ಖುಷಿ ಕೊಡುವ ಉಪಚಾರವೆಂದರೆ ಗೌರಿಯನ್ನು ಅಲಂಕಾರ ಮಾಡುವುದು. ಅಲಂಕಾರ, ಸ್ತ್ರೀಯರಿಗೆ ಪರಮಾಪ್ತ. ಸೇವಂತಿಕಾ, ಬಕುಳ, ಚಂಪಕ, ಪುನ್ನಾಗ ಜಾಜಿ, ಕರವೀರ, ಮಲ್ಲಿಕಾ ಎನ್ನುವ  ಹೂಗಳೊಂದಿಗೆ ಬಣ್ಣ ಬಣ್ಣದ ಹಲವು ಹೂವುಗಳು ಈ ಗೌರೀಹಬ್ಬಕ್ಕೇ ವಿಶೇಷವಾಗಿ ಪ್ರಕೃತಿಯಲ್ಲಿ ದೊರೆತು ಗೌರಿಯ ಮುಡಿಯೇರುವುದನ್ನು ನೋಡುವಾಗ ಪ್ರಾಯಶಃ ಈಗ ಪೂಜೆ ಪರಿಪೂರ್ಣವಾಯಿತು ಎಂದೆನ್ನಿಸುವುದು ಸತ್ಯ. ಕೊಡುಕೊಳ್ಳುವಿಕೆಯ ಬಾಗಿನವೂ ಗೌರಿಹಬ್ಬದ ವೈಶಿಷ್ಟ್ಯವೇ. ಸಮೃದ್ಧಿ, ನೆಮ್ಮದಿಯನ್ನು ಪರಸ್ಪರ ಹಾರೈಸುತ್ತ ನೀಡುವ ಬಾಗಿನ ದಾನವೂ ಹೌದು, ಹಾರೈಕೆಯೂ ಹೌದು.

  ಮರುದಿನ ಸದ್ದು ಗದ್ದಲಗಳೊಂದಿಗೆ ಬರುವ ಗಣೇಶನ ಹಬ್ಬದ ಮೆನ್ಯುಕಾರ್ಡ್ ಯೋಚಿಸಿದಾಗ ನಿಜಕ್ಕೂ ಹರತಾಳ ಗೌರಿಯ ಉಪವಾಸ ಆಗಬೇಕಾಗಿದ್ದೇ ಎಂದೆನಿಸುತ್ತದೆ. ಮೋದಕ, ಪಂಚಕಜ್ಜಾಯ, ಚಕ್ಕುಲಿ, ಅಷ್ಟದ್ರವ್ಯಗಳೊಂದಿಗೆ ಭರ್ಜರಿ ನೈವೇದ್ಯ ಮಾಡಿಸಿಕೊಂಡು ಪೂಜಿಸಲ್ಪಡುವ ಗಣೇಶ–ಗೌರಿಯನ್ನು ಜೊತೆಯಲ್ಲೇ ಕರೆದುಕೊಂಡು ಹೊರಡುತ್ತಾನೆ, ಈ ಮಕ್ಕಳು ಹೀಗೆ, ಅಮ್ಮನನ್ನು ಬಿಟ್ಟಿರುತ್ತಾರೆಯೇ – ಎನ್ನುವಂತೆ! ಹೊರಡುವಾಗಲೂ ಯಾತ್ರೆಗೆ ಬೇಕಾದ ಭೋಜನವನ್ನೂ ಕಟ್ಟಿಸಿಕೊಂಡೇ ಗಣೇಶ ಹೊರಡುತ್ತಾನೆ.

ಕರಾವಳಿ ಕರ್ನಾಟಕದಲ್ಲಿ ಗೌರಿಗಿಂತಲೂ ಗಣೇಶನ ಹಬ್ಬಕ್ಕೇ ಹೆಚ್ಚು ಪ್ರಾಶಸ್ತ್ಯ. ಕರಾವಳಿಯ ಭಾರೀ ಮಳೆಗೆ ತೊಯ್ದು ತೊಪ್ಪೆಯಾಗುವ ನೆಲದಲ್ಲಿ ವಿಷ್ಣುಕ್ರಾಂತಿ ಎನ್ನುವ ಪುಟ್ಟ ಎಲೆಗಳ ನೆಲಬಳ್ಳಿ ಚಿಗುರಿ ಗಣೇಶನ ಪೂಜೆಗೆ ಅರ್ಹವಾಗುವುದೂ ಇದೆ. ಎಲ್ಲಿಯ ಗಣೇಶ? ಎಲ್ಲಿಯ ವಿಷ್ಣುಕ್ರಾಂತಿಯೋ? ತಿಳಿಯದು. ಆದರೆ ಷೋಡಶೋಪಚಾರದ ಪೂಜೆಯಲ್ಲಿ ಪರಿಮಳ ಬೀರುವ ಪತ್ರಗಳೊಂದಿಗೆ ವಿಷ್ಣುಕ್ರಾಂತಿಯೂ ಗಣೇಶನಿಗೆ ಏರಿಸಲಾಗುತ್ತದೆ.

ಇನ್ನು ಗಣೇಶನಷ್ಟು ಸ್ನೇಹಿದೇವರು ಇನ್ನೊಬ್ಬನಿಲ್ಲವೇನೋ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ, ಮೂರು ರಸ್ತೆ ಕೂಡುವಲ್ಲಿ, ಚೌತಿಯಂದು ಪೆಂಡಾಲ್ ಹಾಕಿಸಿಕೊಂಡು ಬಯಲಲ್ಲೂ, ರಸ್ತೆಯಲ್ಲೂ ಪೂಜಿಸಿಕೊಳ್ಳುತ್ತಾನೆ.  ಪುಟ್ಟ ಮಕ್ಕಳಿಂದ ಹಿಡಿದು ವೈದಿಕರವರೆಗೂ ಎಲ್ಲರಿಗೂ ಸಲ್ಲುತ್ತಾ, ತಾನು ಬಹುಜನಪ್ರಿಯ ಎಂದೂ ತನ್ನನ್ನು ಪೂಜಿಸುವ ಹಕ್ಕೂ ಎಲ್ಲರಿಗೂ ಇದೆ ಎಂದು ಸಾರುತ್ತಾನೆ.

ಚೌತಿಯ ಇನ್ನೊಂದು ವೈಶಿಷ್ಟ್ಯವೆಂದರೆ ಆ ದಿನ ಸ್ವಲ್ಪ ಹೆಚ್ಚೇ ಕಣ್ಣಿಗೆ ಬೀಳುವ ಚಂದ್ರನನ್ನು ನೋಡದೇ ಇರಬೇಕು ಎನ್ನುವ ಮಾತು. ಚೌತಿಯಂದು ಚಂದ್ರದರ್ಶನ ಮಾಡಿದರೆ ಅನ್ಯಾಯವಾಗಿ ಅಪವಾದ ಕೇಳಬೇಕಾಗುತ್ತದೆ ಎನ್ನುವ ಮಾತಿಗೂ ಕೃಷ್ಣ ಮತ್ತು ಸ್ಯಮಂತಕಮಣಿಯ ಕಥೆಗೂ ನಂಟಾಗಿ ಹಬ್ಬದ ಸಂಭ್ರಮದಲ್ಲಿ ಸಣ್ಣ ಆತಂಕವನ್ನೂ ಮನಸ್ಸಿಗೆ ಮೂಡಿಸುತ್ತಾನೆ ಗಣೇಶ.

ಸಂಕಷ್ಟಹರಗಣಪತಿಯ ವ್ರತವನ್ನು ಆಚರಿಸುವವರಿಗೆ ಆಕಾಶದ ಅಷ್ಟಮೂಲೆಗಳನ್ನೂ ಶೋಧಿಸಿದಾಗಲೂ ಕಾಣದೇ ಹೋಗುವ ಚಂದ್ರ, ಗಣೇಶಹಬ್ಬದಂದು ಕಣ್ಣಿಗೆ ರಾಚುವಂತೇ ಪ್ರತ್ಯಕ್ಷನಾಗುತ್ತಾನೆ. ಮಕ್ಕಳಿಗೆ, ಇದೇ ದೊಡ್ಡ ಕುತೂಹಲ. ಗಣೇಶವಿಸರ್ಜನೆ ಮಾಡುವ ಹೊತ್ತಲ್ಲಂತೂ ನೀರಿನಲ್ಲಿ ಕಾಣುವ ಚಂದ್ರ, ಗಣೇಶನಷ್ಟೇ ಮುದ ನೀಡಿ ಗಾಬರಿಯನ್ನೂ ಹುಟ್ಟಿಸುತ್ತಾನೆ.   

ಹೆಣ್ಣುಮಕ್ಕಳಿಗೆ ಹಬ್ಬಗಳೆಂದರೆ ಖುಷಿಯೂ, ಒತ್ತಡವೂ ಏಕಕಾಲಕ್ಕೇ. ಶ್ರಾವಣದಲ್ಲಂತೂ ಹಬ್ಬಗಳದ್ದೇ ಕಾರುಬಾರು. ಅಷ್ಟಿದ್ದೂ ಭಾದ್ರಪದದ ಗೌರೀಹಬ್ಬ ಮಾತ್ರ ಒಂದು ಮುಷ್ಟಿ ಹೆಚ್ಚು ಆಪ್ತ. ಏಕೆಂದರ ಗೌರಿಯ ಸಂಸಾರದಲ್ಲಿ ನಮ್ಮ ಸಂಸಾರದ ನೆರಳೂ ಕಾಣುತ್ತದೆ ಎಂದೋ, ಗೌರಿಯಂತೇ ಕುಟುಂಬದ ಜವಾಬ್ದಾರಿ ತನ್ನ ಹೆಗಲ ಮೇಲಿರುತ್ತದೆ ಎಂದೋ, ಒಟ್ಟಿನಲ್ಲಿ ಗೌರಿಯಂಥದ್ದೇ ಬದುಕು ನಮ್ಮದೂ ಎನ್ನುವ ಒಳಾರ್ಥದ ಜೊತೆಗೆ, ಗೌರಿ–ಗಣೇಶ ಹಬ್ಬಗಳ ನಂತರ ಒಂದಷ್ಟು ದಿನಗಳ ಕಾಲ ಹಬ್ಬಗಳಿಂದ, ಅವುಗಳ ತಯಾರಿಯಿಂದ ವಿರಾಮವೂ ಸಿಗುತ್ತದೆನ್ನುವ ಸತ್ಯವೂ ಇರುವುದರಿಂದ ಗೌರಿ ಯಾವತ್ತಿಗೂ ಪರಮಾಪ್ತೆ ಮತ್ತು ಗಣೇಶ ಯಾವತ್ತಿಗೂ ಸ್ನೇಹಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT