ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರೆಯರ ಮನೆಗೆ ಬಂದ ಗೌರೀ-ಗಣೇಶ

Last Updated 2 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಗಣೇಶ ಹಬ್ಬದ ಸಂದರ್ಭದಲ್ಲಿಯೇ ನಾನು ಮೊದಲ ಬಾರಿಗೆ ಉಪೇಂದ್ರ ಅವರ ಮನೆಗೆ ಹೋಗಿದ್ದು. ಆಗಿನ್ನೂ ನಮ್ಮ ಮದುವೆಯಾಗಿರಲಿಲ್ಲ. ಹಾಗಾಗಿ ಈ ಹಬ್ಬದಲ್ಲಿ  ಹಳೆಯ ಅವಿಸ್ಮರಣೀಯ ಘಟನೆಗಳು ಸ್ಮೃತಿಪಟಲದಲ್ಲಿ ಇಣುಕುತ್ತವೆ.

ಉಪ್ಪಿ ಗಣೇಶನ ಭಕ್ತ. ನಮ್ಮನೆಯಲ್ಲಿ ಗಣೇಶನನ್ನು ಕೂರಿಸುವ ಸಂಸ್ಕೃತಿಗೆ ಮುನ್ನಡಿ ಬರೆದದ್ದು ಉಪ್ಪಿ. ಅವರು ಆರು ವರ್ಷದ ಹುಡುಗನಾಗಿದ್ದಾಗ ಎಲ್ಲರ ಮನೆಯಲ್ಲಿಯೂ ಗಣೇಶನನ್ನು ಕೂರಿಸುವುದನ್ನು ಕಂಡು ತಮ್ಮ ಮನೆಯಲ್ಲಿಯೂ ಗಣೇಶನನ್ನು ತರುವ ಆಸೆಯಾಯಿತಂತೆ.

ಆಗ ಮನೆ ತುಂಬಾ ಚಿಕ್ಕದಾಗಿದ್ದರಿಂದ ಮನೆಯ ಹೊರಗೆ ಗಣೇಶನನ್ನು ಇಟ್ಟು ಪೂಜಿಸುತ್ತಿದ್ದರಂತೆ. ಒಂದು ವರ್ಷ ಜೋರಾಗಿ ಮಳೆ ಬಂದಿದ್ದರಿಂದ ಅಮ್ಮ (ನನ್ನ ಅತ್ತೆ) ಗಣೇಶನ ವಿಗ್ರಹವನ್ನು ಮನೆಯ ಒಳಗೆ ತರುವಂತೆ ಹೇಳಿದರಂತೆ. ಹೀಗೆ ಅಂದು ಗಣೇಶ ನಮ್ಮ ಮನೆಯ ಒಳಗೆ ಪ್ರವೇಶಿಸಿದ. 

ಪ್ರತಿವರ್ಷ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಗೌರೀ ಹಬ್ಬಕ್ಕಿಂತಲೂ ಗಣೇಶನ ಹಬ್ಬದ ಸಡಗರ ಹೆಚ್ಚಿರುತ್ತದೆ. ಉಪ್ಪಿ ಅವರ ಅಣ್ಣ ಗಣೇಶನನ್ನು ತರುತ್ತಾರೆ.

ವರಮಹಾಲಕ್ಷ್ಮಿ ಹಬ್ಬದಲ್ಲಿ ನಾವು ಮನೆಯ ಹೆಂಗಸರೆಲ್ಲ ತಯಾರಿ ನಡೆಸುತ್ತೇವೆ. ಆದರೆ ಈ ಹಬ್ಬದಲ್ಲಿ ಎಲ್ಲ ತಯಾರಿಯನ್ನು ಉಪ್ಪಿ ಮತ್ತು ಅವರ ಅಣ್ಣ ಮಾಡುತ್ತಾರೆ. ನಾವು ಸಣ್ಣಪುಟ್ಟ ಸಹಾಯವನ್ನು ಮಾಡುತ್ತೇವೆ. ಅಡುಗೆಮನೆಯ ಜವಾಬ್ದಾರಿ ಅಷ್ಟೇ ಹೆಂಗಸರದ್ದು.

ಸುಮಾರು 60ರಿಂದ 70 ಜನರು ಸೇರುವುದರಿಂದ ಅಡುಗೆ ಮಾಡುವವರನ್ನು ಕರೆಸುತ್ತೇವೆ. ಕೆಲವು ತಿನಿಸುಗಳನ್ನು ನಾವೇ ತಯಾರಿಸುತ್ತೇವೆ. ನಾನು ದಕ್ಷಿಣ ಭಾರತದ ತಿನಿಸುಗಳನ್ನು ಮಾಡುವುದರಲ್ಲಿ ಇನ್ನೂ ಪಳಗಿಲ್ಲ. ನನ್ನ ಅತ್ತೆ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ನಾನು ಅವರಿಗೆ ಸಹಾಯ ಮಾಡುತ್ತೇನೆ.

ಹಬ್ಬದಲ್ಲಿ ಗಣಹೋಮ ಮಾಡುತ್ತೇವೆ. ಅತ್ತೆ ಮತ್ತು ಮಾವನಿಗೆ ಹೆಚ್ಚು ಹೊತ್ತು ಕೂರುವುದಕ್ಕೆ ಆಗುವುದಿಲ್ಲ. ಹಾಗಾಗಿ ನಾನು ಮತ್ತು ಉಪ್ಪಿ ಪೂಜೆಗೆ ಕೂರುತ್ತೇವೆ. ಈ ವರ್ಷ ನನ್ನ ಅಮ್ಮ ಮತ್ತು ಅಣ್ಣ ಬರುತ್ತಿರುವುದರಿಂದ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ. ಉಪ್ಪಿಯ ಹುಟ್ಟುಹಬ್ಬವೂ ಗಣೇಶನ ಹಬ್ಬದ ಸಮೀಪವೇ ಇರುವುದರಿಂದ ಎಲ್ಲಾ ಸಂಬಂಧಿಕರು ಸೇರುತ್ತಾರೆ. ಕಡುಬು, ಪಾಯಸ ಮತ್ತು ಗಣೇಶನಿಗೆ ಇಷ್ಟವಾದ ತಿನಿಸುಗಳನ್ನೆಲ್ಲ ಮಾಡುತ್ತೇವೆ.

ಮಕ್ಕಳು ಚಿಕ್ಕವರಿದ್ದಾಗ ತುಂಬಾ ಅದ್ದೂರಿಯಾಗಿ ಹಬ್ಬ ಆಚರಿಸುತ್ತಿರಲಿಲ್ಲ. ನಾವೇ ಕುಟುಂಬದವರೆಲ್ಲ ಸೇರಿ ಸರಳವಾಗಿ ಆಚರಿಸುತ್ತಿದ್ದೆವು. ಈಗ ಅವರು ದೊಡ್ಡವರಾಗಿರುವುದರಿಂದ ಹಬ್ಬದ ತಯಾರಿಗೆ ಸಹಾಯ ಮಾಡುತ್ತಾರೆ. ಸಂಭ್ರಮದಿಂದ ಹಬ್ಬ ಮಾಡುವುದರಿಂದ ಅವರಿಗೂ ಖುಷಿ. ಎಲ್ಲರೂ ಒಟ್ಟಿಗೆ ಸೇರುವುದರ ಜೊತೆಗೆ ಸಾಂಪ್ರದಾಯಿಕ ಉಡುಗೆಗಳನ್ನು ತೊಡುತ್ತೇವೆ.

ಗಣೇಶಹಬ್ಬ ಎಂದಾಕ್ಷಣ ನಾನು ಬಾಲ್ಯದಲ್ಲಿ ಹಬ್ಬದ ಸಡಗರವನ್ನು ಅನುಭವಿಸಿದ ಕ್ಷಣಗಳು ನೆನಪಾಗುತ್ತವೆ. ಮುಂಬಯಿಯಲ್ಲಿ ನಮ್ಮ ಮನೆ ಸಮೀಪದಲ್ಲಿಯೇ ಸಮುದ್ರವಿತ್ತು. ಅಲ್ಲಿಯೇ ಗಣೇಶನ ವಿಸರ್ಜನೆ ಮಾಡುತ್ತಿದ್ದರು. ರಸ್ತೆಗಳಲ್ಲೆಲ್ಲ ಹಬ್ಬದ ವಾತಾವರಣವಿರುತ್ತಿತ್ತು. ಲಕ್ಷಗಟ್ಟಲೆ ಜನ  ಸೇರುತ್ತಿದ್ದರು. ಆದರೆ ಇಲ್ಲಿಯ ರಸ್ತೆಗಳಲ್ಲಿ ನಾನು ಅಷ್ಟೊಂದು ಸಂಭ್ರಮವನ್ನು ಕಂಡಿಲ್ಲ.

ಈ ಬಾರಿ ಗಣೇಶನನ್ನು ಕೂರಿಸಲು ಮನೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೇವೆ.  ಚಾನೆಲ್‌ನವರು ಮತ್ತು ಅಭಿಮಾನಿಗಳು ಬರುವುದರಿಂದ ಅವರಿಗೂ ಅನುಕೂಲಗಳನ್ನು ಕಲ್ಪಿಸಿದ್ದೇವೆ.

ಒಂದು ವರ್ಷ ಗಣೇಶಹಬ್ಬದ ಸಂದರ್ಭದಲ್ಲಿ ನಾನು, ಉಪ್ಪಿ ಅಮೆರಿಕದಲ್ಲಿದ್ದೆವು. ಈ ಬಾರಿ ಹಬ್ಬ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವಿತ್ತು. ಆದರೆ ಪರಿಚಯಸ್ಥರೊಬ್ಬರು ಗಣೇಶನ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಅಲ್ಲಿ ಗಣಹೋಮ ನಡೆಯುತ್ತಿತ್ತು. ಹೋಮಕ್ಕೆ ನಮ್ಮನ್ನು ಕುಳಿತುಕೊಳ್ಳುವಂತೆ ತಿಳಿಸಿದರು. ‘ಇಲ್ಲಿಯೂ ನಿಮ್ಮ ಜೊತೆ ಗಣೇಶ ಇದ್ದಾನೆ ನೋಡಿ’ ಎಂದು ನಾನು ಉಪ್ಪಿಗೆ ಹೇಳಿದೆ. ಮನಸ್ಸಿನಲ್ಲಿ ನಂಬಿಕೆ ಇದ್ದರೆ ದೇವರು ಎಂದಿಗೂ ಕೈಬಿಡುವುದಿಲ್ಲ ಎಂಬುದು ನನ್ನ ಅಭಿಪ್ರಾಯ.
-ಪ್ರಿಯಾಂಕಾ ಉಪೇಂದ್ರ

*
ಹಬ್ಬಗಳು ನಮ್ಮ ಸಂಸ್ಕೃತಿಯನ್ನು ನೆನಪಿಸುತ್ತದೆ. ಧಾವಂತದ ಬದುಕಿನಲ್ಲಿ ಕುಟುಂಬದವರಿಗೂ ಸ್ವಲ್ಪ ಸಮಯವನ್ನು  ಮೀಸಲಿಡಲು ಇದೊಂದು ಒಳ್ಳೆಯ ಸಂದರ್ಭ.

ನಾವೆಲ್ಲ ಹಬ್ಬದ ಸಂಭ್ರಮವನ್ನು ಅನುಭವಿಸುವುದು ಜಯನಗರದಲ್ಲಿರುವ ಅಜ್ಜಿಯ ಮನೆಯಲ್ಲಿ. ಅಮ್ಮ ಕ್ರಿಶ್ಚಿಯನ್‌, ಅಪ್ಪ ಅಯ್ಯಂಗಾರ್‌ ಆಗಿರುವುದರಿಂದ ವರ್ಷದಲ್ಲಿರುವ ಎಲ್ಲ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ದೀಪಾವಳಿ, ಗಣೇಶ ಚತುರ್ಥಿ, ಈಸ್ಟರ್‌, ಕ್ರಿಸ್‌ಮಸ್‌, ವರಮಹಾಲಕ್ಷ್ಮೀಹಬ್ಬ ನಮ್ಮ ಮನೆಯಲ್ಲಿ ವಿಶೇಷವಾಗಿರುತ್ತದೆ.

ಅಜ್ಜಿಯ ಮನೆಯಲ್ಲಿ ಗಣೇಶನನ್ನು ಇಡುತ್ತಾರೆ. ಪ್ರತಿವರ್ಷ ಪರಿಸರಸ್ನೇಹಿ ಗಣೇಶನನ್ನೇ ಕೂರಿಸುತ್ತೇವೆ. ಮೊದಲೆಲ್ಲ ಮನಸ್ಸಾದಾಗೆಲ್ಲ ಎಲ್ಲರೂ ಒಟ್ಟಿಗೆ ಅಜ್ಜಿ ಮನೆಯಲ್ಲಿ ಸೇರುತ್ತಿದ್ದೆವು. ಆದರೆ ಈಗ ಹಾಗೆ ಆಗುವುದಿಲ್ಲ. ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿ ಆಗಿರುತ್ತಾರೆ. ಹಬ್ಬ ಎನ್ನುವುದು ನಮ್ಮೆಲ್ಲರನ್ನು ಒಟ್ಟುಗೂಡಿಸುವ ಸಂಭ್ರಮ.

ಅಜ್ಜಿಮನೆಯಲ್ಲಿ ಈಗಾಗಲೇ ತಯಾರಿ ಪ್ರಾರಂಭವಾಗಿರುತ್ತದೆ. ಸಿಹಿಕಡುಬು, ಅಕ್ಕಿಪಾಯಸ ಎಂದರೆ ನನಗೆ ತುಂಬಾ ಇಷ್ಟ. ಅದನ್ನು ತಪ್ಪದೇ ಮಾಡಿರುತ್ತಾರೆ. ಅಡುಗೆಮನೆಯ ಸಂಪೂರ್ಣ ಉಸ್ತುವಾರಿ ಅಜ್ಜಿಯದು. ರುಚಿರುಚಿಯಾದ ಅಡುಗೆಯನ್ನು ಮಾಡುತ್ತಾರೆ. ನೆಂಟರಿಷ್ಟರ ಆತಿಥ್ಯ ಮತ್ತು  ತಿನ್ನುವುದಕ್ಕಷ್ಟೇ ನನ್ನ ಬೆಂಬಲ.

ಹಬ್ಬಕ್ಕೆ ಬಟ್ಟೆಯನ್ನು ಎಲ್ಲರೂ ಸೇರಿ ತೆಗೆದುಕೊಳ್ಳುತ್ತಿದ್ದೆವು. ಆದರೆ ಈ ಬಾರಿ ನಾನು ಶೂಟಿಂಗ್‌ಗಾಗಿ ಬೆಳಗಾವಿಯಲ್ಲಿರುವುದರಿಂದ ಇಲ್ಲಿಯೇ ಮೂರು ಬಟ್ಟೆ ಕೊಂಡುಕೊಂಡಿದ್ದೇನೆ. ಅಮ್ಮ ನಾದಿನಿಯರಿಗೆ ಪ್ರತಿವರ್ಷ ಸೀರೆ ಕೊಡಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ.

ಗಣೇಶಹಬ್ಬ ಎಂದಾಕ್ಷಣ ನನಗೆ ನೆನಪಾಗುವುದು ಬಾಲ್ಯದ ಕ್ಷಣಗಳು.  ಆಗ ನಾವು ವಿಲ್ಸನ್‌ ಗಾರ್ಡನ್‌ನಲ್ಲಿದ್ದೆವು. ಗಣೇಶನನ್ನು ಕೂರಿಸಲು ನಾವೆಲ್ಲ ಸ್ನೇಹಿತರು ಮನೆಮನೆಗೆ ತೆರಳಿ ಹಣ ಸಂಗ್ರಹಿಸುತ್ತಿದ್ದೆವು. ಬೀದಿಯ ಕೊನೆಯಲ್ಲಿ ಪೆಂಡಾಲ್‌ ಹಾಕಿ ಗಣೇಶನನ್ನು ಕೂರಿಸುತ್ತಿದ್ದೆವು. ತಿಂಡಿಗಳನ್ನು ಅಂಗಡಿಯಿಂದ ತರುವುದರ ಜೊತೆಗೆ ಎಲ್ಲರಿಗೂ ಹಂಚುತ್ತಿದ್ದೆವು. ಜಾತಿ, ಧರ್ಮದ ಭೇದವಿರುತ್ತಿರಲಿಲ್ಲ. ಇದೊಂದು ಭಾವೈಕ್ಯ ಬೆಸೆಯುವ ಹಬ್ಬ ಎಂಬುದು ನನ್ನ ಅಭಿಪ್ರಾಯ.
-ಮೇಘನಾ ರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT