ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಜಾತ್ರೆ!

Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಳೆದ ವರ್ಷ ಅಮೆರಿಕಕ್ಕೆ ಹೋಗಿದ್ದಾಗ, ‘ಕುಪರ್ಟಿನೊ ಕಾರ್ನಿವಾಲ್‌ಗೆ ಹೋಗೋಣ್ವಾ?’ ಎಂದು ಕ್ಯಾಲಿಫೋರ್ನಿಯಾದ ಕುಪರ್ಟಿನೊದಲ್ಲಿರುವ ತಂಗಿಯ ಒಂಬತ್ತು ವರ್ಷದ ಮಗಳು ಉಪಾಸನ ಕೇಳಿದಳು. ಹಾಗೆಂದರೇನು? ಕೇಳಿದೆ. ಈ ಊರಿನ ಜಾತ್ರೆ ಎಂದಳು. ಜಾತ್ರೆ ಎಂದ ಕೂಡಲೆ ನನ್ನ ಉತ್ಸಾಹ ಗರಿಗೆದರಿತು. ನಮ್ಮೂರಿನ ಜಾತ್ರೆಯ ನೆನಪಾಯಿತು. ಕೂಡಲೆ ಅವಳ ಜೊತೆ ಹೊರಟೆ.

ಪ್ರತಿ ವರ್ಷ ಸೆ. 11ರಿಂದ ಮೂರು ದಿನ ಕುಪರ್ಟಿನೊ ಕಾರ್ನಿವಾಲ್ ನಡೆಯುತ್ತದೆ. ಮಕ್ಕಳ ಮತ್ತು ಕುಟುಂಬದ ಸಂತೋಷಕ್ಕಾಗಿ ಇದನ್ನು ಕಳೆದ 12 ವರ್ಷಗಳಿಂದ ‘ಕುಪರ್ಟಿನೊ ಸೈಂಟ್ ಜೋಸೆಫ್ ಕ್ಯಾಥೊಲಿಕ್ ಚರ್ಚ್ ಮತ್ತು ಸ್ಕೂಲ್’ ವತಿಯಿಂದ ಊರವರ ಸಹಕಾರದೊಂದಿಗೆ ಆಚರಿಸಲಾಗುತ್ತಿದೆ. 

ಜಾತ್ರೆ ಪ್ರವೇಶ ಮಾಡಿದ ತಕ್ಷಣ ಎದುರು ಭಾಗದಲ್ಲಿ ನಮ್ಮನ್ನು ಮೊದಲು ಸ್ವಾಗತಿಸಿತು ಪ್ರಥಮ ಚಿಕಿತ್ಸೆ ಕೌಂಟರ್. ಅದನ್ನು ದಾಟಿ ಒಳ ಭಾಗಕ್ಕೆ ಬಂದರೆ ವೈವಿಧ್ಯಮಯ ತಿಂಡಿ ಸ್ಟಾಲ್. ಜೋಳದಪುರಿಯನ್ನು ಕೂಡ ಪರದೆ ಹಾಗಿರುವ ಆವರಣದೊಳಗೆ ತಯಾರಿಸಿ ಮಾರುತ್ತಿದ್ದರು.

ನೊಣ ಇಲ್ಲದಿದ್ದರೂ ಎಲ್ಲವನ್ನೂ ಮುಚ್ಚಿ ಇಟ್ಟಿದ್ದರು.ಆರಾಮವಾಗಿ ಕುಳಿತು ತಿನ್ನಲು ಅನುಕೂಲವಾಗುವಂತೆ ಅಲ್ಲಲ್ಲಿ ಕೊಡೆಯಂಥ ಸಾಧನದ ಅಡಿಯಲ್ಲಿ ಟೇಬಲ್, ಬೆಂಚ್‌ಗಳಿದ್ದವು. ತ್ಯಾಜ್ಯ ವಸ್ತುಗಳನ್ನು ಬಿಸಾಡಲು ಎಲ್ಲಾ ಕಡೆ ಕಸದ ತೊಟ್ಟಿಗಳಿದ್ದವು.

ಪಿಜ್ಜಾದ ರುಚಿ ನೋಡಬೇಕೆಂದು ಹೊರಟೆ. ‘ದೊಡ್ಡಮ್ಮ, ಯಾವ ತಿಂಡಿಯನ್ನೂ ತೆಗೆದುಕೊಳ್ಳಬೇಡ. ಅದರಲ್ಲಿ ಮಾಂಸವನ್ನೂ ಸೇರಿಸಿರುತ್ತಾರೆ! ಗೊತ್ತಾಗುವುದಿಲ್ಲ ಎಂದಳು’ ಉಪಾಸನ. ಮಧ್ಯ ಭಾಗದಲ್ಲಿ ಮ್ಯಾಜಿಕ್ ಶೋ ಇತ್ತು. ಉಚಿತ ಪ್ರದರ್ಶನ. ಜನರು ಮೌನವಾಗಿ ಕುಳಿತು ನೋಡುತ್ತಿದ್ದರು. ಜಾದೂಗಾರ ನಮ್ಮಲ್ಲಿ ಕರೆಯುವಂತೆ ಇಲ್ಲೂ ಮಕ್ಕಳನ್ನು ವೇದಿಕೆಗೆ ಕರೆದು ಅವರನ್ನೂ ಅದರಲ್ಲಿ ಒಳಗೊಳ್ಳುವಂತೆ ಮಾಡುತ್ತಿದ್ದನು.

ಒಂದು ಕಡೆಯಲ್ಲಿ ಚೆಂಡನ್ನು ಬೌಲಿಗೆ ಹಾಕುವುದು, ರಿಂಗನ್ನು ಗುರಿಯಿಟ್ಟು ಹೊಡೆಯುವುದು, ಬಲೂನಿಗೆ ತರಾವರಿ ಆಕಾರ ಕೊಡುವುದು ಹೀಗೆ ವಿವಿಧ ರೀತಿಯ ಆಟಗಳಿದ್ದವು. ಮತ್ತೊಂದು ಕಡೆಯಲ್ಲಿ ರಾಟೆ ತೊಟ್ಟಿಲು (ಜಯಂಟ್ ವ್ಹೀಲ್), ತಿರುಗುವ ಕಾರು ಇತ್ಯಾದಿ ಸಾಹಸದ ಮನರಂಜನೆಗಳಿದ್ದವು.

ಪುಟ್ಟ ಮಕ್ಕಳಿಗೆ ಆಡಲು ಬಟ್ಟೆಯಿಂದ ಮಾಡಿದ ಮೆತ್ತನೆಯ ದೊಡ್ಡ ಜಾರುಬಂಡಿಗಳಿದ್ದವು. ನನಗೆ ಬೆರಗು ಹುಟ್ಟಿಸಿದ ಒಂದು ಸಂಗತಿಯೆಂದರೆ ಅಮೆರಿಕನ್ನರ ಮೆಹಂದಿ ಮೋಹ. ಅವರು ಇದನ್ನು ‘ಹೆನ್ನಾ ಟ್ಯಾಟೂಸ್’ ಎಂದು ಕರೆಯುತ್ತಾರೆ.

ಮೂವರು ಅಮೆರಿಕನ್ ಮಹಿಳೆಯರು ಮೆಹಂದಿ ಕೋನ್ ಹಿಡಿದು ಮಕ್ಕಳ, ಯುವತಿಯರ ಕೈಯಲ್ಲಿ ತರತರದ ಚಿತ್ತಾರ ಮೂಡಿಸಲು ಹೆಣಗುತ್ತಿದ್ದರು. ಮೆಹಂದಿ ಹಾಕುವವಳಲ್ಲಿ ‘ಹೆನ್ನಾ ಗಿಡ ನಾನು ಬೆಳೆಸುತ್ತೇನೆ. ಈ ಪೇಸ್ಟನ್ನು ಮನೆಯಲ್ಲಿಯೇ ತಯಾರಿಸಿ ಬಳಸುತ್ತೇನೆ’ ಎಂದೆ. ಅದಕ್ಕೆ ಅವಳು ಆಶ್ಚರ್ಯದಿಂದ ‘ರಿಯಲಿ! ಹೌ ನೈಸ್’ ಎಂದಳು.

ಪುಟ್ಟ ಹುಡುಗಿಯರ ಮುಖಕ್ಕೆ ತಾಯಂದಿರು ಬಹಳ ಖುಷಿಯಿಂದ ಹಲೋ ಕಿಟ್ಟಿ, ಸ್ಪೈಡರ್ ಗರ್ಲ್, ಪ್ರಿನ್ಸೆಸ್ ಇತ್ಯಾದಿ ಹೆಸರಿನ ಡಿಸೈನ್‌ಗಳನ್ನು ಕಲಾಕಾರರಿಂದ ಬರೆಸುತ್ತಿದ್ದರು. ವಯಸ್ಸು, ಲಿಂಗಭೇದವಿಲ್ಲದೆ ಯಾರು ಬೇಕಾದರೂ ಅದರ ಮೇಲೆ ಪೇಂಟಿಂಗ್ ಮಾಡಬಹುದಿತ್ತು. ಅದಕ್ಕೆ ಬೇಕಾದ ಬ್ರಶ್, ಪೇಂಟ್ ಇಟ್ಟಿದ್ದರು. ಪೇಂಟ್ ಮಾಡಿದವರು ಅದನ್ನು ಮನೆಗೆ ಕೊಂಡು ಹೋಗಬಹುದು ಅಥವಾ ಅಲ್ಲೇ ಪ್ರದರ್ಶನಕ್ಕೆ ಇಡಬಹುದು.

ಹಾಗೆಂದು ಇವು ಯಾವುವೂ ಉಚಿತ ಅಲ್ಲ. ಇವುಗಳಲ್ಲಿ ಭಾಗವಹಿಸುವವರು ಮೊದಲೇ ಕೌಂಟರಿನಲ್ಲಿ ಟಿಕೆಟ್ ತೆಗೆಯಬೇಕು. ಟೆಡ್ಡಿಬೇರ್ ಗೊಂಬೆಗಳು, ಬಲೂನ್‌ಗಳನ್ನು ಮಾರುವ ಅಂಗಡಿಗಳು ಹಲವು ಇದ್ದವು.

ಪ್ಲಾಸ್ಟಿಕ್ ಗೊಂಬೆಗಳು ಕಾಣಸಿಗಲಿಲ್ಲ. ಅಲ್ಲಲ್ಲಿ ಅಮ್ಮಂದಿರು ಪುಟ್ಟಪುಟ್ಟ ಮಕ್ಕಳನ್ನು ಎಳೆಯುವ ಕುರ್ಚಿಯಲ್ಲಿ ಕುಳ್ಳಿರಿಸಿ ನೂಕಿಕೊಂಡು ಹೋಗುವ ದೃಶ್ಯ ಚೇತೋಹಾರಿಯಾಗಿತ್ತು. ಇಲ್ಲಿ ಅಮ್ಮಂದಿರು ಹಸುಗೂಸುಗಳನ್ನೂ ನಾವು ಮಾಡುವಂತೆ ಹೆಗಲಲ್ಲಿ, ಸೊಂಟದಲ್ಲಿ ನೇತಾಡಿಸಿಕೊಂಡು ಹೋಗುವುದಿಲ್ಲ.

ಇದು ಜಾತ್ರೆಯಾದರೂ ಸದ್ದು ಗದ್ದಲವಿಲ್ಲ. ನೂಕುನುಗ್ಗಲಿಲ್ಲ. ಮೈಕಾಸುರನ ಆರ್ಭಟವಿಲ್ಲ. ಸುಡುಮದ್ದಿನ ಹೊಗೆಯಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಲ್ಲ. ಜಾತಿ, ಮತ, ಧರ್ಮಗಳ ಹಂಗಿಲ್ಲ. ಆದರೂ ಮನರಂಜನೆ ಮತ್ತು ಸಂತೋಷಕ್ಕೆ ಕೊರತೆ ಇರಲಿಲ್ಲ. ಯಾಕೋ ನಮ್ಮೂರಿನ ಜಾತ್ರೆ ನೆನಪಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT