ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್ ಆಗಸದಲ್ಲಿ ಕರ್ನಾಟಕದ ಪಟ`

Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕರಾವಳಿಯ ಚಿತ್ರ ಕಲಾವಿದ ಮತ್ತು ಪರಿಸರ ಹೋರಾಟಗಾರ ದಿನೇಶ್‌ ಹೊಳ್ಳ ಅವರ ‘ಫೇಸ್‌ಬುಕ್‌’ ತುಂಬಾ ಪರಿಸರ ಕಾಳಜಿ ಮತ್ತು ಹೋರಾಟದ ಚಿತ್ರಗಳು ಹಾಗೂ ಸ್ಟೇಟಸ್‌ಗಳೇ ತುಂಬಿವೆ. ಪ್ರತಿಭಟನೆಗಳ ಕುರಿತು,  ರಾಜಕಾರಣಿಗಳ ನಿರ್ಲಕ್ಷ್ಯದ ಕುರಿತು ಅವರ ಸ್ಟೇಟಸ್‌ಗಳಲ್ಲಿ ಬೇಸರ, ಸಿಟ್ಟು–ಸೆಡವು ಎದ್ದುಕಾಣುತ್ತದೆ.

ಒಂದು ದಿನ ಅವರ ‘ಫೇಸ್‌ಬುಕ್‌’ ಪುಟಕ್ಕೆ ಬಂದ ಖಾಸಗಿ ಸಂದೇಶವೊಂದರಲ್ಲಿ – ‘ನಿಮ್ಮ ಫೇಸ್‌ಬುಕ್‌ ಪುಟಗಳ ತುಂಬ ಯಾವುದೋ ಹೋರಾಟದ ವಿವರಗಳು ಇದ್ದಂತಿದೆ. ಏನದು? ಪಶ್ಚಿಮಘಟ್ಟ ಉಳಿಸಿ ಅನ್ನೋ ಫಲಕಗಳಿವೆಯಲ್ಲ... ಏನವು?’ ಎನ್ನುವ ಪ್ರಶ್ನೆಗಳಿದ್ದವು. ಈ ಸಂದೇಶ ಕಳುಹಿಸಿದ್ದು ಫ್ರಾನ್ಸ್‌ನ ‘ಡೀಪಿ ಕ್ಯಾಪಿಟಲ್‌ ಆಫ್‌ ಕೈಟ್‌ ಫೆಸ್ಟಿವೆಲ್‌’ನ ಅಧ್ಯಕ್ಷ ಸಾಂಡ್ರಿನ್‌ ಸಫರ್ಗ್‌.

ಕಳೆದ ಹತ್ತು ವರ್ಷಗಳಿಂದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ನಿರಂತರವಾಗಿ ಭಾರತವನ್ನು ಪ್ರತಿನಿಧಿಸುತ್ತಿರುವ ದಿನೇಶ್‌ ಹೊಳ್ಳ ಅವರಿಗೆ ಸಾಂಡ್ರಿನ್‌ ಪರಿಚಯವಿತ್ತು. ಆ ಪರಿಚಯದ ಹಿನ್ನೆಲೆಯಲ್ಲಿ ಹೊಳ್ಳರ ಆಸಕ್ತಿಗಳ ಬಗ್ಗೆ ಸಾಂಡ್ರಿನ್‌ ವಿಚಾರಿಸಿದ್ದರು.

ಈ ಸಂದೇಶದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪರಿಸರ ಹೋರಾಟಗಳು ಹಾಗೂ ಪಶ್ಚಿಮಘಟ್ಟದ ಸಮಸ್ಯೆಗಳ ಬಗ್ಗೆ ಹೊಳ್ಳ ವಿವರವಾಗಿ ಬರೆದರು. ಇದೆಲ್ಲದರ ಫಲ – ಈ ಬಾರಿ ಫ್ರಾನ್ಸ್‌ನ ಡೀಪಿ ಕಡಲ ಕಿನಾರೆಯಲ್ಲಿ ನಡೆಯುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪರಿಸರ ಪರವಾದ ಧ್ವನಿಯೊಂದು ಮೂಡಲಿದೆ.

ಸಾಂಡ್ರಿನ್‌ ಗಾಳಿಪಟ ಉತ್ಸವ ಸಮಿತಿಯ ಅಧ್ಯಕ್ಷರಾದರೂ ಅಂತರಂಗದಲ್ಲಿ ಅದಮ್ಯ ಪರಿಸರ ಪ್ರೇಮಿ. ಪ್ರಕೃತಿಯ ಮಡಿಲು ಇಲ್ಲದೇ ಇದ್ದರೆ ಎಲ್ಲಿಯ ಪಟ, ಎಲ್ಲಿಯ ಸೂತ್ರ ಎಂಬುದನ್ನು ಅರಿತವರು. ಆದ್ದರಿಂದಲೇ ತಮ್ಮ ಗಾಳಿಪಟ ಉತ್ಸವಕ್ಕೆ ಪರಿಸರ ಕಾಳಜಿಯ ಸ್ಪರ್ಶ ನೀಡಲು ಅವರು ಮುಂದಾಗಿದ್ದಾರೆ.

‘ಯುನೆಸ್ಕೋ’ ಮಾನ್ಯತೆ ಪಡೆದ ಪರಿಸರ ತಾಣಗಳನ್ನು ಕಾಪಾಡಿಕೊಳ್ಳುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ವಿಡಿಯೊ ಪ್ರದರ್ಶನ ಹಾಗೂ ಫ್ರಾನ್ಸ್‌ನಲ್ಲಿಯೇ ಇರುವ ‘ಯುನೆಸ್ಕೋ’ ಮುಖ್ಯ ಕಚೇರಿಗೆ ಮನವಿ ಸಲ್ಲಿಕೆ ಸೇರಿದಂತೆ ಪರಿಸರ ಕಾಳಜಿಯ ಹಲವು ಕಾರ್ಯಕ್ರಮಗಳನ್ನು ‘ಗಾಳಿಪಟ ಉತ್ಸವ’ದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಅಂದಹಾಗೆ, ನಮ್ಮ ಪಶ್ಚಿಮಘಟ್ಟದಲ್ಲಿ ಇರುವ ‘ಪುಷ್ಪಗಿರಿ’ ಎಂಬ ದಟ್ಟ ಕಾಡಿನ ಸುಂದರ ಬೆಟ್ಟ ‘ಯುನೆಸ್ಕೋ’ ಪಟ್ಟಿಯಲ್ಲಿ ಇದೆ. 

ಮಂಗಳೂರಿನಲ್ಲಿ ಸಿದ್ಧವಾದ ಪೋಸ್ಟರ್‌
ಫ್ರಾನ್ಸ್‌ನಲ್ಲಿನ ಗಾಳಿಪಟ ಉತ್ಸವದಲ್ಲಿ ಭಾರತಕ್ಕೆ ಈ ಬಾರಿ ಮತ್ತೊಂದು ಗೌರವ ಸಂದಿದೆ. ಅದು, ಉತ್ಸವದ ಪ್ರಧಾನ ಪೋಸ್ಟರ್‌ ವಿನ್ಯಾಸವನ್ನು ಕನ್ನಡಿಗರಾದ ದಿನೇಶ್‌ ಹೊಳ್ಳ ರೂಪಿಸಿದ್ದಾರೆ ಎನ್ನುವ ವಿಶೇಷವದು. ಗಾಳಿಪಟ ಉತ್ಸವದ ಹಿನ್ನೆಲೆ, ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಅದು ಪ್ರತಿನಿಧಿಸುವ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಂಡು ದಿನೇಶ್ ಪೋಸ್ಟರ್‌ ವಿನ್ಯಾಸಮಾಡಿದ್ದಾರೆ.

ದಿನೇಶ್‌ರ ಪೋಸ್ಟರ್‌ನಲ್ಲಿ ಉತ್ಸವ ನಡೆಯುವ ಕಡಲ ದಂಡೆಯಲ್ಲಿ ಇರುವ ಚಾಪೆಲ್‌ ನಗರ ಮುಖ್ಯ ಆಕರ್ಷಣೆಯಾಗಿದೆ. ಅದು ಬಂದರು ನಗರವಾದ್ದರಿಂದ ದೋಣಿಗಳೇ ಅಲ್ಲಿನ ಅನನ್ಯತೆಯ ಸಂಕೇತ ಎನ್ನಬಹುದು. ಈ ಬಾರಿ ಕೆನಡಾವನ್ನು ಆಹ್ವಾನಿತ ದೇಶವನ್ನಾಗಿ ಪರಿಗಣಿಸಲಾಗಿದ್ದು, ಅಲ್ಲಿನ ಬುಡಕಟ್ಟು ಕಲೆಯನ್ನು ಸಂಕೇತಿಸುವ ಹಕ್ಕಿಯನ್ನೂ ಪೋಸ್ಟರ್‌ ಸಂಕೇತಿಸುವಂತಿದೆ. ಈ ಪೋಸ್ಟರ್‌ಗಳಿಗೆ ತಮ್ಮ ಸಹಿ ಹಾಕಿ ಕಲಾರಸಿಕರಿಗೆ ನೀಡುವ ಅವಕಾಶವನ್ನು ಉತ್ಸವದ ಆಯೋಜಕರು ದಿನೇಶ್‌ ಅವರಿಗೆ ಕಲ್ಪಿಸಿದ್ದಾರೆ.

ಉತ್ಸವದಲ್ಲಿ ಕಲಾಪ್ರದರ್ಶನಕ್ಕೂ ದಿನೇಶ್‌ ಹೊಳ್ಳ ಅವರಿಗೆ ಅವಕಾಶ ಕಲ್ಪಿಸಾಗಿದೆ. ಅಂದಹಾಗೆ, ಈ ಬಾರಿ ಗಾಳಿಪಟ ಉತ್ಸವದ ಶೀರ್ಷಿಕೆ ‘ಬುಡಕಟ್ಟು ಸಮುದಾಯದ ಕಲೆಗಳು’. ಈ ವಿಚಾರವನ್ನೇ ವಿಷಯವನ್ನಾಗಿರಿಸಿಕೊಂಡು ಹೊಳ್ಳ ಕಲಾಕೃತಿಗಳನ್ನು ರಚಿಸಿದ್ದಾರೆ. ಅವರು ಈ ಶೀರ್ಷಿಕೆಯನ್ನು ಎರಡು ವಿಧವಾಗಿ ಗ್ರಹಿಸಿದ್ದಾರೆ. ಭಾರತೀಯ ಸಮಾಜದ ವಿಶೇಷವಾದ ದಾಂಪತ್ಯದ ಪರಿಕಲ್ಪನೆ ಹಾಗೂ ಭಾರತದ ವಿವಿಧ ರಾಜ್ಯಗಳಲ್ಲಿನ ಬುಡಕಟ್ಟು ಸಮುದಾಯದ ಕಲಾಕೃತಿಗಳ ಅಧ್ಯಯನ – ಇವುಗಳ ಹಿನ್ನೆಲೆಯಲ್ಲಿ ದಿನೇಶ್ ಹೊಳ್ಳ ತಮ್ಮ ಚಿತ್ರಗಳನ್ನು ರಚಿಸಿದ್ದಾರೆ. 

‘ಅಸ್ಸಾಂ, ಮಣಿಪುರ, ಕರ್ನಾಟಕ, ಕೇರಳ, ಕಾಶ್ಮೀರ ಸೇರಿದಂತೆ ನನ್ನ ಅರಿವಿಗೆ ನಿಲುಕುವ ಹಲವಾರು ಬುಡಕಟ್ಟು ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದೇನೆ. ಆಯಾ ರಾಜ್ಯದ ಜನಪದ ಜಗತ್ತನ್ನು ಅರಿತುಕೊಂಡು ನನ್ನದೇ ಆದ ದೃಷ್ಟಿಕೋನದಿಂದ ಚಿತ್ರಗಳನ್ನು ಸಿದ್ಧಪಡಿಸಿದ್ದೇನೆ. ಉದಾಹರಣೆಗೆ, ಮಧುಬನಿ ಶೈಲಿಯ ಬಗ್ಗೆ ತಿಳಿದುಕೊಂಡು ನಾನು ಅದನ್ನು ನಕಲು ಮಾಡುವುದಿಲ್ಲ. ಬದಲಾಗಿ ನನ್ನದೇ ಶೈಲಿಯಲ್ಲಿ  ಆ ವಿಚಾರವನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತೇನೆ’ ಎನ್ನುತ್ತಾರೆ ದಿನೇಶ್‌.

ಪಟದ ಬೆನ್ನೇರಿತು ಕಲೆ
ದಿನೇಶ್ ಅವರಿಗೆ ಗಾಳಿಪಟದ ಗೀಳು ಶುರುವಾಗಿದ್ದು ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ. ಯಾವುದೇ ಉದ್ದೇಶವಿಲ್ಲದೆ ಗಾಳಿಪಟದ ಕಾರ್ಯಕ್ರಮಗಳನ್ನು ಅವರು ಹಮ್ಮಿಕೊಂಡಾಗ ನಕ್ಕವರೇ ಹೆಚ್ಚು. ಆದರೆ ದಿನೇಶ್‌ ಗಾಳಿಪಟದಲ್ಲಿ ಹಲವಾರು ವಿನ್ಯಾಸಗಳನ್ನು ತರಲು ಪ್ರಯತ್ನಿಸುತ್ತ ಸಾಗಿದಂತೆ, ಅವರ ‘ಗಾಳಿಪಟ ವ್ಯಸನ’ ಜನರ ಗಮನಸೆಳೆಯತೊಡಗಿತು.

2006ರಲ್ಲಿ ದಿನೇಶ್‌ ಮತ್ತು ಅವರ ತಂಡ ‘ಟೀಂ ಮಂಗಳೂರು’ ಮೊತ್ತ ಮೊದಲ ಬಾರಿ ಅಹಮದಾಬಾದ್‌ನಲ್ಲಿ ನಡೆದ ‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವ’ದಲ್ಲಿ ಭಾಗವಹಿಸಿತು. ಸರ್ವೇಶ್‌ ರಾವ್ ಈ ಟೀಂನ ರೂವಾರಿ. ಪ್ರಶಾಂತ್‌ ಉಪಾಧ್ಯಾಯ, ದಿನೇಶ್‌, ಗಿರಿಧರ್‌ ಕಾಮತ್‌, ಸತೀಶ್‌ ರಾವ್, ವಿ.ಕೆ. ಸನಿಲ್‌, ನಿತಿನ್‌ ಶೆಟ್ಟಿ ಈ ತಂಡದಲ್ಲಿ ಇರುವವರು.

36 ಅಡಿ ಎತ್ತರದ, ಕಥಕ್ಕಳಿ ವೇಷದ ಮುಖವರ್ಣಿಕೆ ಮಾದರಿಯ ಗಾಳಿಪಟದ ಹಾರಾಟ ಅಹಮದಾಬಾದ್‌ನಲ್ಲಿ ದೊಡ್ಡ ಸುದ್ದಿಯಾಗಿತ್ತು. ದೇಶ ವಿದೇಶದ ಜನರು ಪಟದಲ್ಲಿನ ಅದ್ಭುತ ಬಣ್ಣಗಳ ಸಂಯೋಜನೆಗೆ ಮಾರುಹೋಗಿದ್ದರು. ಅದು ಪುಟ್ಟ ಬಣ್ಣದ ಬಟ್ಟೆಗಳನ್ನು ಹೊಲಿದು ಮಾಡಿದ ಬೃಹತ್‌ ಪಟವಾಗಿತ್ತು. ಈ ಕಥಕ್ಕಳಿ ಪಟ ‘ಭಾರತದ ಅತೀ ದೊಡ್ಡ ಗಾಳಿಪಟ’ ಎಂಬ ದಾಖಲೆಯನ್ನು ಲಿಮ್ಕಾ ದಾಖಲೆ ಪುಸ್ತಕದಲ್ಲಿ ಬರೆಯಿತು.

ಕಥಕ್ಕಳಿಯ ಆಕರ್ಷಕ ಮುಖವರ್ಣಿಕೆಯನ್ನು ನೋಡಿ ಬೆರಗಾದ ವಿದೇಶಿ ಗಾಳಿಪಟುಗಳು, ಅದರ ಹಿಂಭಾಗವನ್ನು ನೋಡಿ ಮತ್ತಷ್ಟು ವಿಸ್ಮಯಪಟ್ಟರು. ಯಾಕೆಂದರೆ ವಿದೇಶದಲ್ಲಿ ಬೃಹತ್‌ ಗಾಳಿಪಟವನ್ನು ಏರೋಫಾಯಿಲ್‌ನಿಂದ ಮಾಡುತ್ತಿದ್ದರು. ಅವೆಲ್ಲ ಅಚ್ಚಿನಲ್ಲಿ ಎರಕ ಹೊಯ್ದಂತೆ ಇರುತ್ತವೆ. ಆದರೆ ಕಥಕ್ಕಳಿ ಗಾಳಿಪಟಕ್ಕೆ ಎರಡು ತಿಂಗಳ ಕಾಲ ಐವರು ತಂಡದ ಸದಸ್ಯರು ಹಗಲು ರಾತ್ರಿಕುಳಿತು ಹೊಲಿಗೆ ಕೆಲಸ ಮಾಡಿದ್ದರು. ಆ ಸೃಜನಶೀಲತೆಯು ಪಟದಲ್ಲಿ ಎದ್ದುಕಾಣುವಂತಿತ್ತು.

‘ಟೀಂ ಮಂಗಳೂರು’ ಗಾಳಿಪಟ ಪರ್ಯಟನೆ ವಿದೇಶಗಳನ್ನೂ ಯಶಸ್ವಿಯಾಗಿ ನಡೆದಿದೆ. ಫ್ರಾನ್ಸ್‌, ಕೆನಡಾ, ಇಟಲಿ, ಸೌತ್‌ ಆಫ್ರಿಕಾ, ಥಾಯ್ಲೆಂಡ್‌, ಹಾಂಕಾಂಗ್‌, ಶ್ರೀಲಂಕಾ, ದುಬೈ, ಕತಾರ್‌, ಫ್ರಾನ್ಸ್‌ನಲ್ಲಿ ಭಾರತದ ಪಟ ಹಾರಿದೆ. ಕಳೆದ ಬಾರಿ, ಅಂದರೆ 2014ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಉತ್ಸವದಲ್ಲಿ ಇಡೀ ಗಾಳಿಪಟ ಉತ್ಸವದಲ್ಲಿ ಭಾರತ ತಂಡವನ್ನು ಅಂದರೆ ‘ಟೀಂ ಮಂಗಳೂರ್‌’ ಅನ್ನು ಆಹ್ವಾನಿತ ತಂಡವಾಗಿ ಗುರುತಿಸಲಾಗಿತ್ತು.

ಕಲಾ ಶ್ರೀಮಂತಿಕೆ
ಅಂತರರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಹಲವು ವಿಷಯಗಳನ್ನು ಕಲಿಯುವುದು ಸಾಧ್ಯವಾಗಿದೆ. ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಕಂಡು ಅವರು ಬೆರಗಾಗುತ್ತಾರೆ. ನಮ್ಮಲ್ಲಿ ಪ್ರತಿ ಊರಿನಲ್ಲಿಯೂ ಪ್ರತ್ಯೇಕ ಸಂಸ್ಕೃತಿ ಇದೆ. ಭಾರತದಲ್ಲಿ ಇರುವಷ್ಟು ವೈವಿಧ್ಯತೆ ಬೇರೆ ಯಾವುದೇ ದೇಶದಲ್ಲಿ ಇಲ್ಲ.  ಹಾಗಾಗಿ ವಿದೇಶಿಯರು ಕಲೆಯ ಕುರಿತು ವ್ಯಕ್ತಪಡಿಸುವ ನಡವಳಿಕೆಯೇ ನಮ್ಮನ್ನು ವಿಸ್ಮಿತರನ್ನಾಗಿ ಮಾಡಿದೆ ಎಂದು ದಿನೇಶ್‌ ಹೇಳುತ್ತಾರೆ.

ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಕೇವಲ 12 ಜನರ ತಂಡ ಈ ಉತ್ಸವ ಸಂಘಟಿಸುತ್ತದೆ. ಅಂದರೆ ಈ ಉತ್ಸವ ಮುಗಿದ ಮಾರನೇ ದಿನವೇ ಮುಂದಿನ ಬಾರಿಯ ಉತ್ಸವದ ಸಿದ್ಧತೆಗಳು ಆರಂಭವಾಗುತ್ತವೆ.

ಸರ್ಕಾರದ ನೆರವು ಬೇಕು
ಹಲವು ವರ್ಷಗಳಿಂದ ಭಾರತವನ್ನು ಪ್ರತಿನಿಧಿಸಿದರೂ ಸರ್ಕಾರ ನಮ್ಮ ತಂಡವನ್ನು ಗುರುತಿಸಿಲ್ಲ. ವರ್ಷಕ್ಕೆ ಹತ್ತಾರು ಆಹ್ವಾನಗಳು ನಮ್ಮ ತಂಡಕ್ಕೆ ಬರುತ್ತವೆ. ಆದರೆ ಪ್ರಯಾಣ ವೆಚ್ಚ ಭರಿಸುವುದು ನಮ್ಮಿಂದ ಸಾಧ್ಯವಿಲ್ಲ. ಸರ್ಕಾರ ಪ್ರಯಾಣದ ವೆಚ್ಚ ಭರಿಸಿದರೂ ನಾವು ಇನ್ನಷ್ಟು ಸಾಧನೆ ಮಾಡಬಹುದು.

ಸರ್ಕಾರ ನೆರವು ನೀಡಿದರೆ, ಆಸಕ್ತರಿಗೆ ತರಬೇತಿ ನೀಡುವ ಹಾಗೂ ಹೊಸ ತಂಡವನ್ನು ಸಿದ್ಧಪಡಿಸುವ ಕೆಲಸವನ್ನೂ ಮಾಡಬಹುದು. ಆದರೆ ಕಲೆಯ ಬಗ್ಗೆ ಸರ್ಕಾರದ ನಿರಾಸಕ್ತಿ ಕಂಡರೆ ಬೇಸರವಾಗುತ್ತದೆ ಎನ್ನುತ್ತಾರೆ ‘ಟೀಂ ಮಂಗಳೂರ್‌’ ತಂಡದಲ್ಲಿ ಒಬ್ಬರಾದ ರೂವಾರಿ ಸರ್ವೇಶ್‌ ರಾವ್‌.

ಭಾಷೆ–ಕಲೆಯ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡುವ ಸರ್ಕಾರ, ಗಾಳಿಪಟದ ಮೂಲಕ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ದಿನೇಶ್‌ ಹೊಳ್ಳ ಹಾಗೂ ‘ಟೀಂ ಮಂಗಳೂರು’ ತಂಡವನ್ನು ಗುರ್ತಿಸಬೇಕಾಗಿದೆ. ಗಾಳಿಪಟದ ನೆಪದಲ್ಲಿ ‘ಸಂಸ್ಕೃತಿ ಪಟ’ ಹಾರಿಸುವ ಸಾಹಸ ಗಾಳಿಪಾಲು ಆಗಬಾರದಲ್ಲವೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT